ನ್ಯೂಯಾರ್ಕ್: ಅಮೆರಿಕ ಒಡೆತನದ ತೈಲ ಟ್ಯಾಂಕರ್ ಹಡಗಿನ ಮೇಲೆ ಇರಾಕ್‌ನ ಬಸ್ರಾ ಸಮೀಪ ಇರಾನ್ ದಾಳಿ ನಡೆಸಿದ್ದು, ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಅಲ್ಲದೆ ಹಡಗಿನಲ್ಲಿದ್ದ ಇತರ 15 ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅದು ತಿಳಿಸಿದೆ.
ಹಡಗಿನ 27 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರ್ಷಿಯನ್ ಕೊಲ್ಲಿಯಾದ್ಯಂತ ಕೆಲ ದಿನಗಳಿಂದ ಇರಾನ್ ಸೇನೆಯು ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದರಿಂದ ನೌಕಾ ಸಿಬ್ಬಂದಿಯ ಸಾವು ನೋವು ಹೆಚ್ಚಾಗುತ್ತಿದೆ.
ಮಾರ್ಷಲ್ ದ್ವೀಪಗಳ ಧ್ವಜದ ಅಡಿಯಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕದ ಕಚ್ಚಾ ತೈಲ ಟ್ಯಾಂಕರ್ 'ಸೇಫ್‌ಸೀ ವಿಷ್ಣು' ಹಡಗಿನ ಮೇಲೆ ಇರಾಕ್‌ನ ಬಸ್ರಾ ಬಳಿ ದಾಳಿ ನಡೆದಿದೆ. ಈ ಘಟನೆಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ' ಎಂದು ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಭಾರತಕ್ಕೆ ಸರಕು ಸಾಮಗ್ರಿಗಳನ್ನು ಹೊತ್ತು ತರುತ್ತಿದ್ದ ಥಾಯ್ಲೆಂಡ್‌ನ 'ಮಯೂರಿ ನಾರಿ' ಹೆಸರಿನ ಹಡಗಿನ ಮೇಲೆ ಇರಾನ್ ಬುಧವಾರ ನಡೆಸಿದ್ದ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರ ಮೃತಪಟ್ಟಿದ್ದರು. ಇದೀಗ ಇನ್ನೊಂದು ದಾಳಿಯಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ.
ವಿಶ್ವದಾದ್ಯಂತ ಹಡಗುಗಳಲ್ಲಿ ಶೇ 15ಕ್ಕಿಂತ ಹೆಚ್ಚು ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಇರಾನ್ ಯಾವುದೇ ಹಡಗನ್ನು ಗುರಿಯಾಗಿಸಿ ದಾಳಿ ನಡೆಸಿದರೂ, ಅದು ಭಾರತೀಯ ಪ್ರಜೆಗಳನ್ನು ಹಾನಿಗೊಳಿಸುತ್ತದೆ ಎಂದು ಮೂಲಗಳು ಕಳವಳ ವ್ಯಕ್ತಪಡಿಸಿವೆ.

