ಮಾರ್ಚ್ 15, 2026ರ ಭಾನುವಾರದಂದು ಬೆಳಗಿನ ಜಾವ ನಡೆದ ಘಟನೆಯನ್ನು ಒಂದು ಬಾರಿ ಕಲ್ಪಿಸಿಕೊಳ್ಳಿ. ಭಾನುವಾರದ ಬೆಳಗಿನ ವೇಳೆಯಲ್ಲಿ ಮಧ್ಯ ಪೂರ್ವದ ಆಗಸ ಇದ್ದಕ್ಕಿದ್ದಂತೆ ಉದ್ವಿಗ್ನತೆಯಿಂದ ಕೆಂಪಾಗಿತ್ತು. ಹಿಂದೆಂದೂ ಯುದ್ಧದಲ್ಲಿ ಯಾರೂ ನೋಡಿರದ 'ಸೆಜ್ಜಿಲ್' ಎನ್ನುವ ಕ್ಷಿಪಣಿಯನ್ನು ಇರಾನ್ ಇದ್ದಕ್ಕಿದ್ದಂತೆ ಪ್ರಯೋಗಿಸಿತ್ತು.
ಈ ಸೆಜ್ಜಿಲ್ ಕ್ಷಿಪಣಿಯನ್ನು 'ನರ್ತಿಸುವ ಕ್ಷಿಪಣಿ' (ಡ್ಯಾನ್ಸಿಂಗ್ ಮಿಸೈಲ್) ಎಂದೂ ಕರೆಯಲಾಗುತ್ತದೆ. ಯಾಕೆಂದರೆ, ನುರಿತ ನೃತ್ಯಪಟು ಕುಶಲವಾಗಿ ನರ್ತಿಸುವ ರೀತಿಯಲ್ಲಿ ಈ ಕ್ಷಿಪಣಿಯೂ ಗಾಳಿಯಲ್ಲಿ ಬೇಕಾದಂತೆ ಬಾಗಿ, ಬಳುಕಿ ಸಾಗುತ್ತದೆ. ಇದನ್ನು ಯಾವುದೇ ರೇಡಾರ್‌ಗೂ ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಯಾವುದೇ ರಕ್ಷಣಾ ವ್ಯವಸ್ಥೆಗೂ ಇದನ್ನು ಸುಲಭವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಈಗಾಗಲೇ ಜೋರಾಗಿ ಉರಿಯುತ್ತಿರುವ ಯುದ್ಧದ ಬೆಂಕಿಗೆ ಸೆಜ್ಜಿಲ್ ಕ್ಷಿಪಣಿ ಪ್ರಯೋಗ ಹೊಸದಾಗಿ ತುಪ್ಪ ಸುರಿದಂತಾಗಿದ್ದು, ಪರಿಸ್ಥಿತಿ ಈಗ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.
ನಾವು ಈಗ ಸ್ವಲ್ಪ ಹಿಂದಕ್ಕೆ ತೆರಳಿ, ಯುದ್ಧದ ಪರಿಸ್ಥಿತಿ ಹೇಗೆ ಸಾಗಿ ಬಂತು ಎನ್ನುವುದನ್ನು ಗಮನಿಸೋಣ. ಇರಾನ್ ಮತ್ತು ಅಮೆರಿಕದ ಬೆಂಬಲ ಹೊಂದಿರುವ ಇಸ್ರೇಲ್ ನಡುವಿನ ಯುದ್ಧ ಫೆಬ್ರವರಿ 28, 2026ರಂದು ಆರಂಭಗೊಂಡಿತು. ತನ್ನ ಮೇಲೆ ಯಾವುದೇ ಕಾರಣವಿಲ್ಲದೆ ದಾಳಿ ನಡೆಸಲಾಯಿತು ಎಂದು ಇರಾನ್ ಆರೋಪಿಸಿದೆ. ಕೇವಲ 16 ದಿನಗಳ ಈ ಯುದ್ಧದ ಅವಧಿಯಲ್ಲಿ, ಇರಾನ್ ಆಪರೇಷನ್ ಟ್ರೂ ಪ್ರಾಮಿಸ್ 4 ಎನ್ನುವ ಕಾರ್ಯಾಚರಣೆಯಲ್ಲಿ 54 ಅಲೆಯ ದಾಳಿಗಳನ್ನು ಇಸ್ರೇಲ್ ವಿರುದ್ಧ ಕೈಗೊಂಡಿದೆ. ಸೆಜ್ಜಿಲ್ ಕ್ಷಿಪಣಿಯನ್ನು ದಾಳಿಯ 54ನೇ ಅಲೆಯಲ್ಲಿ ಪ್ರಯೋಗಿಸಲಾಗಿದ್ದು, ಅದು ಟೆಲ್ ಅವೀವ್, ಬೀರ್ ಶೆರಾದಂತಹ ನಗರಗಳಲ್ಲಿನ ಇಸ್ರೇಲಿ ಗುಪ್ತಚರ ಮತ್ತು ಮಿಲಿಟರಿ ಕಮಾಂಡ್ ಕೇಂದ್ರದ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿತ್ತು. ಈ ಕ್ಷಿಪಣಿ ದಾಳಿಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ವಾಹನಗಳು ಧ್ವಂಸಗೊಂಡಿದ್ದವು. ಓರ್ವ ಅಮೆರಿಕನ್ ಅಧಿಕಾರಿಯ ಮನೆಯ ಬಳಿ ಅವಶೇಷಗಳು ಪತನಗೊಂಡು, ಇದರಲ್ಲಿ ಕನಿಷ್ಠ ಮೂವರು ಗಾಯಗೊಂಡರು. ಉಭಯ ಪಕ್ಷಗಳೂ ಈಗ ಪರಸ್ಪರರ ವಿರುದ್ಧ ಆರೋಪ ಹೊರಿಸುತ್ತಿವೆ. ಆದರೆ ಈ ಆರೋಪ ಪ್ರತ್ಯಾರೋಪ, ದಾಳಿ ಪ್ರತಿದಾಳಿಗಳಲ್ಲಿ ಅಮಾಯಕ ಜನರು ಸಿಲುಕಿ ನರಳುತ್ತಿರುವುದು ಮಾತ್ರ ನೈಜ ವಿಪರ್ಯಾಸ.
ಈಗ, ನಿಜಕ್ಕೂ ಸೆಜ್ಜಿಲ್ ಕ್ಷಿಪಣಿ ಎಂದರೇನು? ಇದನ್ನು ಒಂದು ದೈತ್ಯ, ಮನೆಯಲ್ಲೇ ಅಪಾರ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ನಿರ್ಮಿಸಿರುವ ರಾಕೆಟ್ ಎಂದುಕೊಳ್ಳಿ. ಇರಾನ್ ಕ್ಷಿಪಣಿಯನ್ನು 1990ರ ದಶಕದ ಕೊನೆಯ ಭಾಗದಲ್ಲಿ ಅಭಿವೃದ್ಧಿ ಪಡಿಸಿ, ಮೊದಲ ಬಾರಿಗೆ 2008ರಲ್ಲಿ ಪರೀಕ್ಷೆಗೆ ಒಳಪಡಿಸಿತು. ಅಂದಿನಿಂದ ಇರಾನ್ ಮೌನವಾಗಿಯೇ ಈ ಕ್ಷಿಪಣಿಯನ್ನು ನಿರಂತರವಾಗಿ ಅಭಿವೃದ್ಧಿ ಪಡಿಸುತ್ತಲೇ ಬಂದಿದೆ. ಸೆಜ್ಜಿಲ್ ಒಂದು 18 ಮೀಟರ್ ಎತ್ತರದ ಕ್ಷಿಪಣಿಯಾಗಿದ್ದು, ನಾಲ್ಕು ಮಹಡಿಗಳ ಕಟ್ಟಡಕ್ಕಿಂತಲೂ ಎತ್ತರವಾಗಿದೆ. ಇದು 23,000 ಕೆಜಿಗೂ ಹೆಚ್ಚಿನ ತೂಕ ಹೊಂದಿದ್ದು, 700 ಕೆಜಿಗೂ ಹೆಚ್ಚಿನ ಸಿಡಿತಲೆಗಳನ್ನು ಹೊತ್ತು, 2,000 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಬಲ್ಲದು. ಇದು ಟೆಹರಾನಿನಿಂದ ಕೆಲವೇ ನಿಮಿಷಗಳಲ್ಲಿ ಟೆಲ್ ಅವೀವ್ ತಲುಪಬಲ್ಲದು. ಅಂದರೆ, ಒಂದು ಕಪ್ ಚಹಾ ಮಾಡಿಕೊಂಡು, ಅದನ್ನು ಕುಡಿಯುವುದಕ್ಕಿಂತಲೂ ಕಡಿಮೆ ಸಮಯದಲ್ಲಿ ಸೆಜ್ಜಿಲ್ ಕ್ಷಿಪಣಿ ತನ್ನ ಗುರಿಯನ್ನು ತಲುಪಬಲ್ಲದು. ಇದನ್ನು ನಿಜಕ್ಕೂ ಆಘಾತಕಾರಿಯಾಗಿಸುವ ವಿಚಾರವೆಂದರೆ, ಇದರ ಘನ ಇಂಧನ ಕಾರ್ಯಾಚರಣೆ. ಇದರಿಂದಾಗಿ, ಕ್ಷಿಪಣಿಯನ್ನು ಸಜ್ಜುಗೊಳಿಸಿ ಉಡಾವಣೆಗೊಳಿಸಲು ಹಿಂದಿನ ಕ್ಷಿಪಣಿಗಳಂತೆ ಗಂಟೆಗಟ್ಟಲೆ ಸಮಯ ಬೇಕಾಗುವುದಿಲ್ಲ. ಇದನ್ನು ಕೆಲವೇ ನಿಮಿಷಗಳಲ್ಲಿ ಸಜ್ಜುಗೊಳಿಸಿ ಉಡಾಯಿಸಬಹುದಾಗಿದ್ದು, ಶತ್ರುಗಳಿಗೆ ಬಹುತೇಕ ಸಿದ್ಧತೆಗೆ ಶೂನ್ಯ ಸಮಯವನ್ನು ಒದಗಿಸುತ್ತದೆ.
ಇದು ಹಾರಾಟದ ಮಧ್ಯದಲ್ಲೇ ಪಥ ಬದಲಿಸುವ ಸಾಮರ್ಥ್ಯ ಹೊಂದಿರುವುದರಿಂದ, ಇದಕ್ಕೆ ಡ್ಯಾನ್ಸಿಂಗ್ ಕ್ಷಿಪಣಿ ಎನ್ನುವ ಹೆಸರು ಬಂದಿದೆ. ಇಸ್ರೇಲಿನ ಐರನ್ ಡೋಮ್ ಸೇರಿದಂತೆ, ಬಹುತೇಕ ರಕ್ಷಣಾ ವ್ಯವಸ್ಥೆಗಳು ಒಂದು ಕ್ಷಿಪಣಿ ಎಲ್ಲಿಗೆ ಸಾಗುತ್ತಿದೆ ಎನ್ನುವುದನ್ನು ಊಹಿಸಿ, ಅದನ್ನು ಹೊಡೆದುರುಳಿಸುವ ರೀತಿಯಲ್ಲಿ ವಿನ್ಯಾಸಗೊಂಡಿವೆ. ಆದರೆ, ಯಾವಾಗ ಕ್ಷಿಪಣಿ ತಡವಾಗಿ ಸ್ವಿಂಗ್ ಆಗುವ ಕ್ರಿಕೆಟ್ ಚೆಂಡಿನಂತೆ ಇದ್ದಕ್ಕಿದ್ದಂತೆ ತನ್ನ ಪಥ ಬದಲಾಯಿಸುತ್ತದೋ, ಆಗ ರಕ್ಷಣಾ ವ್ಯವಸ್ಥೆಗಳು ಗೊಂದಲಕ್ಕೆ ಒಳಗಾಗುತ್ತವೆ. ಇದರೊಡನೆ, ಕ್ಷಿಪಣಿ ಹೆಚ್ಚುವರಿ ಆಯಂಟಿ ರೇಡಾರ್ ಕೋಟಿಂಗ್ ಹೊಂದಿದ್ದು, ಇದು ಕ್ಷಿಪಣಿಯನ್ನು ಬಹುತೇಕ ಸೆನ್ಸರ್‌ಗಳ ಕಣ್ಣಿಗೆ ಬೀಳದಂತೆ ಮಾಡುತ್ತದೆ. ಇಂತಹ ವಿಶೇಷ ಸಾಮರ್ಥ್ಯ ಶತ್ರು ಜನರಲ್‌ಗಳು ಕ್ಷಿಪಣಿಯ ಭಯದಲ್ಲಿ ನಿದ್ದೆಗೆಡುವಂತೆ ಮಾಡುತ್ತದೆ.
ಯುದ್ಧ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಸಾಮಾನ್ಯ ಕುಟುಂಬಗಳಿಗೆ ಇದು ತಂತ್ರಜ್ಞಾನದ ವಿಚಾರವಲ್ಲ. ಅವುಗಳಿಗೆ ಇದು ಮಧ್ಯರಾತ್ರಿ ಮೊಳಗುವ ಎಚ್ಚರಿಕೆಯ ಕರೆಗಂಟೆ. ಅವರು ತಮ್ಮ ಮಕ್ಕಳನ್ನು ಕರೆದುಕೊಂಡು, ತಕ್ಷಣವೇ ಒಂದು ಆಶ್ರಯತಾಣಕ್ಕೆ ಧಾವಿಸಬೇಕಾಗುತ್ತದೆ. ಅವರಿಗೆ ತಾವು ಮಿಲಿಟರಿ ನೆಲೆಗಳ ಬಳಿ ಇಲ್ಲದಿದ್ದರೂ, ತಮ್ಮ ಮನೆಗಳ ಬಳಿ ಬೀಳುವ ಕ್ಷಿಪಣಿಯ ಶಾರ್ಪ್‌ನೆಲ್‌ಗಳಿಂದ (ಮೊನಚಾದ ಸಿಡಿದ ಚೂರುಗಳು) ಆತಂಕ ಸೃಷ್ಟಿಯಾಗುತ್ತದೆ. ಯುದ್ಧಗಳು ಎಂದಿಗೂ ಒಂದು ಗಡಿಯನ್ನು ಹಾಕಿಕೊಂಡು, ಅದರೊಳಗೇ ನಡೆಯುವುದಿಲ್ಲ. ಅವುಗಳು ಶಾಲೆಗಳ ಮೇಲೆ, ಆಸ್ಪತ್ರೆಗಳ ಮೇಲೆ, ಜನವಸತಿ ಪ್ರದೇಶಗಳ ಮೇಲೂ ದಾಳಿ ನಡೆಸುತ್ತವೆ. ಇದು ಯುದ್ಧಗಳ ಕಹಿ ಸತ್ಯವೂ ಹೌದು.
ಇನ್ನು ದೊಡ್ಡ ಚಿತ್ರಣವಂತೂ ಇನ್ನಷ್ಟು ಆತಂಕಕಾರಿಯಾಗಿದೆ. ಈ ಕದನದಲ್ಲಿ ಈಗಾಗಲೇ 2,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್ ಕದನ ವಿರಾಮವನ್ನು ತಿರಸ್ಕರಿಸಿದೆ. ಸೆಜ್ಜಿಲ್ ಕ್ಷಿಪಣಿ ಅಮೆರಿಕನ್ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳಾದ್ಯಂತ ತನ್ನ ವ್ಯಾಪ್ತಿಯನ್ನು ಹೊಂದಿದೆ. ಒಂದು ವೇಳೆ ಯುದ್ಧ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡರೆ, ತೈಲ ಬೆಲೆಗಳು ಇನ್ನಷ್ಟು ಹೆಚ್ಚಳ ಕಾಣಲಿವೆ. ಇದರ ದುಷ್ಪರಿಣಾಮ ನಮ್ಮ ಪೆಟ್ರೋಲ್ ಬಿಲ್, ಅಡುಗೆ ಅನಿಲ, ಮತ್ತು ದೈನಂದಿನ ಸಾಗಾಣಿಕಾ ವೆಚ್ಚದ ಮೇಲೆ ನೇರವಾಗಿ ಬೀಳಲಿದೆ. ಇಂತಹ ಕ್ಷಿಪಣಿಯೊಡನೆ, ಅಣ್ವಸ್ತ್ರಗಳನ್ನೂ ಅಳವಡಿಸಿ ಪ್ರಯೋಗಿಸುವ ಭೀತಿಯಂತೂ ಜಾಗತಿಕ ನಾಯಕರನ್ನು ಆತಂಕಕ್ಕೆ ದೂಡಿದೆ.
ಆದರೆ, ಇತಿಹಾಸ ನಮಗೆ ಒಂದು ವಿಚಾರವನ್ನು ಸ್ಪಷ್ಟವಾಗಿ ಕಲಿಸಿದೆ. ಅದೇನೆಂದರೆ, ಕೇವಲ ತಂತ್ರಜ್ಞಾನ ಒಂದರಿಂದಲೇ ಯುದ್ಧವನ್ನು ಮುಕ್ತಾಯಗೊಳಿಸಲು ಸಾಧ್ಯವಿಲ್ಲ. ಆದರೆ, ಮಾತುಕತೆಗಳಿಂದ ಯುದ್ಧವನ್ನು ನಿಲುಗಡೆಗೆ ತರಬಹುದು, ಪರಸ್ಪರ ಚರ್ಚೆ ನಡೆಸುವುದರಿಂದ ಯುದ್ಧ ನಿಲ್ಲಿಸಬಹುದು. ಶತ್ರು ಪಾಳಯಗಳು ಒಂದೆಡೆ ಕುಳಿತು ಮಾತನಾಡುವ ಧೈರ್ಯ ತೋರಿದರೆ ಯುದ್ಧವನ್ನು ನಿಲ್ಲಿಸಬಹುದು. ಸೆಜ್ಜಿಲ್ ಕ್ಷಿಪಣಿ ಕೇವಲ ಒಂದು ಆಯುಧವಲ್ಲ. ಬದಲಿಗೆ, ಜಗತ್ತಿಗೆ ತಕ್ಷಣವೇ ರಾಜತಾಂತ್ರಿಕ ಮಾತುಕತೆ ಬೇಕೇ ಹೊರತು ಇನ್ನೂ ಹೆಚ್ಚಿನ ವಿಧ್ವಂಸವಲ್ಲ ಎನ್ನುವ ಬಹುದೊಡ್ಡ ಸಂದೇಶವೂ ಹೌದು.
ನರ್ತಿಸುವ ಕ್ಷಿಪಣಿ ಜಾಗತಿಕ ವೇದಿಕೆಯಲ್ಲಿ ಈಗಾಗಲೇ ಮೊದಲ ಪ್ರದರ್ಶನವನ್ನು ನೀಡಿದೆ. ಇನ್ನು ಮುಂದಿನ ಹೆಜ್ಜೆ ಶಾಂತಿಯತ್ತ ಇಡುವಂತಾಗಲಿ ಎಂದು ನಾವು ಆಶಿಸೋಣ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

