ಕೊಪ್ಪಳ: ಶಾಲಾ ಪೂರ್ವ ಶಿಕ್ಷಣವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಕ್ಕೆ ಎರಡು ವರ್ಷಗಳ ಹಿಂದೆ ಜಿಲ್ಲೆಗೆ ಲಭಿಸಿದ್ದ ರಾಷ್ಟ್ರೀಯ ಮಟ್ಟದ ನೆಕ್ಸಸ್ ವಾರ್ಷಿಕ ಪ್ರಶಸ್ತಿ ಈ ಬಾರಿಯೂ ಜಿಲ್ಲೆಗೆ ಬಂದಿದೆ. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
2024ರಲ್ಲಿಯೂ ಜಿಲ್ಲೆ ಇದೇ ಗೌರವಕ್ಕೆ ಭಾಜನವಾಗಿತ್ತು.
ಮಕ್ಕಳ ಸ್ನೇಹಿ ವಾತಾವರಣ ರೂಪಿಸುವಿಕೆ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಾಧನೆ ತೋರಿದ ಕಾರಣಕ್ಕೆ ಈ ಬಾರಿ ಪ್ರಶಸ್ತಿ ಬಂದಿದೆ. ಜಿಲ್ಲಾಧಿಕಾರಿ ಜೊತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಹಾಗೂ ಯುನಿಸೆಫ್ ಜಿಲ್ಲಾ ಮಕ್ಕಳ ಯೋಜನೆಯ ಸಂಯೋಜಕ ಹರೀಶ್ ಜೋಗಿ ಇತರರು ಸೇರಿ ಪ್ರಶಸ್ತಿ ಸ್ವೀಕರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಯೋಜನೆ ರೂಪಿಸಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಅವರಿಂದ ಬಂದ ಸಲಹೆ ಬಹುಪಾಲು ಅನುಷ್ಠಾನ ಮಾಡಿದ್ದಕ್ಕೆ ಪ್ರಶಸ್ತಿ ಸಿಕ್ಕಿದೆ.
'ಮಕ್ಕಳನ್ನು ಆಲಿಸಿದಾಗ ಮಾತ್ರ ಮಕ್ಕಳ ಸ್ನೇಹಿ ಆಡಳಿತ ಸಾಧ್ಯ' ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದ್ದು, ಈ ಕಾರ್ಯಕ್ರಮದ ಮೂಲಕ 15,000ಕ್ಕೂ ಹೆಚ್ಚು ಪೋಷಕರು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ತಲುಪಲಾಗಿದೆ. 3,000ಕ್ಕೂ ಹೆಚ್ಚು ಸಮಸ್ಯೆಗಳನ್ನು ಗುರುತಿಸಿ, ಅವುಗಳಲ್ಲಿ ಶೇ.70ರಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಬಾಲ್ಯವಿವಾಹ ತಡೆ, ಪ್ರಕರಣ ದಾಖಲು, ಪೋಕ್ಸೊ ಪ್ರಕರಣ ದಾಖಲಿಸುವಿಕೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲಾಗಿದೆ.

