ಬೆಂಗಳೂರು: ಶಾಲೆಗಳಲ್ಲಿ ಪ್ರತಿ ದಿನ 10 ನಿಮಿಷ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಕನ್ನಡ ಪತ್ರಿಕೆಗಳನ್ನು ಓದಬೇಕು.
ಶಾಲೆಗಳಲ್ಲಿ ಪ್ರತಿದಿನ ಕನಿಷ್ಠ 10ರಿಂದ 15 ನಿಮಿಷ ಪತ್ರಿಕೆಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಸಹಾಯವಾಗುತ್ತದೆ. ಪ್ರಸ್ತುತ ಘಟನೆಗಳ ಕುರಿತು ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಪದಸಂಪತ್ತು, ಭಾಷೆ ಹಾಗೂ ಬರವಣಿಗೆ ಕೌಶಲಗಳೂ ಉತ್ತಮವಾಗುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ತಿಳಿಸಿದ್ದಾರೆ.

