ನವದೆಹಲಿ: ಯಾವುದೇ ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ ಅಥವಾ ಅಲ್ಲವೋ ಎಂಬುದನ್ನು ಪರಿಗಣಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿಯನ್ನು ತಾನು ಹೊಂದಿರುವುದಾಗಿ ಹೇಳಿದ ಸುಪ್ರೀಂ ಕೋರ್ಟ್, 'ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರಲ್ಲದ ವ್ಯಕ್ತಿಗಳು ದೇಗುಲದ ಪದ್ಧತಿಯನ್ನು ಪ್ರಶ್ನಿಸಿ ಹೇಗೆ ಪಿಐಎಲ್ ಸಲ್ಲಿಸಬಹುದು' ಎಂದು ಬುಧವಾರ ಪ್ರಶ್ನಿಸಿದೆ.
ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ಧರ್ಮೀಯರು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಹೇಳಿಕೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಲೆ, ಆರ್. ಮಹದೇವನ್ ಮತ್ತು ಜಾಯ್‌ಮಾಲ್ಯಾ ಬಾಗ್ಚಿ ಅವರು ಈ ಪೀಠದಲ್ಲಿದ್ದಾರೆ.
ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ನ್ಯಾಯಮೂರ್ತಿಗಳು ಕಾನೂನು ಕ್ಷೇತ್ರದಲ್ಲಿ ಪರಿಣತರೇ ಹೊರತು ಧಾರ್ಮಿಕ ಕ್ಷೇತ್ರದಲ್ಲಿ ಅಲ್ಲ. ಹೀಗಾಗಿ ಜಾತ್ಯತೀತ ನ್ಯಾಯಾಲಯವು ಈ ವಿಷಯವನ್ನು ನಿರ್ಧರಿಸಲು ಸಾಧ್ಯವಿಲ್ಲ' ಎಂದರು.
'ಯಾವುದೇ ಆಚರಣೆಯನ್ನು ಮೂಢನಂಬಿಕೆ ಎಂದು ಊಹಿಸಿದರೂ, ಅದು ಮೂಢನಂಬಿಕೆ ಎಂದು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ಅದು ಶಾಸಕಾಂಗದ ಕೆಲಸ. ಶಾಸಕಾಂಗವು ಮಧ್ಯಪ್ರವೇಶಿಸಿ ಸುಧಾರಣಾ ಕಾನೂನು ಜಾರಿಗೊಳಿಸುತ್ತದೆ' ಎಂದು ಪ್ರತಿಪಾದಿಸಿದರು.
ನಿರ್ಧರಿಸುವ ಹಕ್ಕು ನ್ಯಾಯಾಲಯಕ್ಕಿದೆ:
ಸರ್ಕಾರದ ಈ ವಾದವನ್ನು ಒಪ್ಪದ ಪೀಠವು, ಮೂಢನಂಬಿಕೆಯನ್ನು ನಿರ್ಧರಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿಯನ್ನು ನ್ಯಾಯಾಲಯ ಹೊಂದಿದೆ. ಆನಂತರ ಏನು ಮಾಡಬೇಕು ಎಂಬುದನ್ನು ಶಾಸಕಾಂಗ ತೀರ್ಮಾನಿಸಬೇಕು. ಆದರೆ, ಶಾಸಕಾಂಗದ ನಿರ್ಧಾರವೇ ಕೊನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
ತತ್ತ್ವಶಾಸ್ತ್ರದ ಮಸೂರದಿಂದ ಗಮನಿಸಬೇಕು:
'ಅಗತ್ಯ ಧಾರ್ಮಿಕ ಆಚರಣೆ ಯಾವುದು ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ಆ ನಿರ್ದಿಷ್ಟ ಧರ್ಮದ ತತ್ತ್ವಶಾಸ್ತ್ರದ ಮಸೂರದ ಮೂಲಕ ನೋಡಬೇಕು' ಎಂದು ನ್ಯಾ. ನಾಗರತ್ನ ಅವರು ಅಭಿಪ್ರಾಯಪಟ್ಟರು.
'ಯಾವುದೇ ಧರ್ಮದ ಆಚರಣೆಯು ಅಗತ್ಯವೋ ಅಥವಾ ಅಲ್ಲವೋ ಎಂಬುದನ್ನು ಇತರ ಧರ್ಮದ ಅಭಿಪ್ರಾಯಗಳನ್ನು ಅನ್ವಯಿಸಿ ನಿರ್ಧರಿಸಲು ಆಗದು. ಆರೋಗ್ಯ, ನೈತಿಕತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟಂತೆ ಆ ಧರ್ಮದ ತತ್ವಶಾಸ್ತ್ರವನ್ನು ಅನ್ವಯಿಸಬೇಕು' ಎಂದು ಅವರು ವಿವರಿಸಿದರು.
'ಭಕ್ತರಲ್ಲದವರು ಪಿಐಎಲ್ ಸಲ್ಲಿಸಬಹುದೇ?'
ನಿರ್ದಿಷ್ಟ ಧಾರ್ಮಿಕ ಪಂಗಡ ಅಥವಾ ಧಾರ್ಮಿಕ ಗುಂಪಿಗೆ ಸೇರದ ವ್ಯಕ್ತಿಯು ಆ ಧಾರ್ಮಿಕ ಪಂಗಡ ಅಥವಾ ಗುಂಪಿನ ಆಚರಣೆಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಮೂಲಕ ಪ್ರಶ್ನಿಸಬಹುದೇ ಎಂದು ಸಂವಿಧಾನ ಪೀಠ ಇದೇ ವೇಳೆ ಪ್ರಶ್ನಿಸಿತು.
ವಿಚಾರಣೆಯ ಆರಂಭದಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು 'ಶಬರಿಮಲೆ ಪ್ರಕರಣದಲ್ಲಿ ಮೂಲ ಅರ್ಜಿದಾರರು ಭಕ್ತರಲ್ಲ ಎಂಬುದು ತಿಳಿದುಬರುತ್ತದೆ. ಅಂದರೆ ಯಾವುದೇ ಭಕ್ತರು ಈ ವಿಷಯದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ. ಹಾಗಾದರೆ ಈ ದೇಗುಲದ ಆಚರಣೆಯನ್ನು ಪ್ರಶ್ನಿಸುತ್ತಿರುವ ರಿಟ್ ಅರ್ಜಿದಾರರು ಯಾರು?' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದರು. ಇದರ ಮೂಲ ಅರ್ಜಿದಾರರು 'ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್' ಎಂದು ಮೆಹ್ತಾ ಉತ್ತರಿಸಿದರು.
'ಹಾಗಾದರೆ ಅವರು ಭಕ್ತರಲ್ಲ. ಈ ವಿಷಯದಲ್ಲಿ ನಾವು ಸ್ಪಷ್ಟವಾಗಿರಬೇಕು. ಅಯ್ಯಪ್ಪ ಸ್ವಾಮಿಯ ಭಕ್ತರಲ್ಲದವರು ಈ ದೇಗುಲದ ಬಗ್ಗೆ ಕಾಳಜಿಯಿಲ್ಲದವರು ಅಲ್ಲಿನ ಆಚರಣೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದರೆ ನ್ಯಾಯಾಲಯ ಅದನ್ನು ಸ್ವೀಕರಿಸಬಹುದೇ?' ಎಂದು ನ್ಯಾಯಮೂರ್ತಿ ನಾಗರತ್ನ ಅವರು ಕೇಳಿದರು.
ಇದೇ ಪ್ರಶ್ನೆಯನ್ನು ಒಂಬತ್ತು ನ್ಯಾಯಮೂರ್ತಿಗಳ ಪೀಠದ ಮುಂದೆ ಉಲ್ಲೇಖಿಸಲಾಗಿದೆ ಎಂದ ಮೆಹ್ತಾ ಅವರು 'ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶವನ್ನು ಕೋರಿ ಇತರ ಧರ್ಮೀಯರು ರಿಟ್ ಅರ್ಜಿ ಸಲ್ಲಿಸಬಹುದೇ' ಎಂದು ಅವರು ಪೀಠವನ್ನು ಕೇಳಿದರು.
ಹಿರಿಯ ವಕೀಲ ರಾಜೀವ್ ಧವನ್ 'ನ್ಯಾಯಾಲಯವನ್ನು ಸಂಪರ್ಕಿಸಲು ಹಿಂಜರಿಯುತ್ತಿರುವ ಹಿಂದೂ ಮಹಿಳೆಯರ ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ' ಎಂದು ಹೇಳಿದರು.

