ವಾಷಿಂಗ್ಟನ್: 'ಹಮಾಸ್ ಬಂಡುಕೋರರು ತಮ್ಮ ಶಸ್ತಾಸ್ತ್ರಗಳನ್ನು ಒಪ್ಪಿಸುವ ಮತ್ತು ಇಸ್ರೇಲ್ ತನ್ನ ಪಡೆಗಳನ್ನು ಗಾಜಾದಿಂದ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಒಪ್ಪಂದ ಅಂತಿಮಗೊಂಡಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ.
ಇಸ್ರೇಲ್ ಜತೆಗಿನ ಯುದ್ಧ ಕೊನೆಗೊಳಿಸಲು ಟ್ರಂಪ್ ಅವರು ಘೋಷಿಸಿರುವ ಒಪ್ಪಂದಕ್ಕೆ ತಾವು ಬದ್ಧವಿರುವುದಾಗಿ ಹಮಾಸ್ ಶುಕ್ರವಾರ ಹೇಳಿದೆ. ಆದರೆ, ಟ್ರಂಪ್ ಘೋಷಣೆ ಬಗ್ಗೆ ಇಸ್ರೇಲ್ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಇಸ್ರೇಲ್-ಹಮಾಸ್ ಸಹಿ ಹಾಕಿದ ಒಂಬತ್ತು ತಿಂಗಳ ನಂತರ ಟ್ರಂಪ್ ಅವರು ಈ ಘೋಷಣೆ ಮಾಡಿದ್ದಾರೆ. ಹಮಾಸ್ ನಿಶ್ಯಸ್ತ್ರೀಕರಣ ಮತ್ತು ಗಾಜಾದ ಪುನರ್‌ನಿರ್ಮಾಣ ಸೇರಿದಂತೆ ಒಪ್ಪಂದದ ಎರಡನೇ ಹಂತದ ಅನುಷ್ಠಾನಕ್ಕೆ ಸಂಬಂಧಿಸಿದ ಮಾತುಕತೆ ಹಲವು ದಿನಗಳಿಂದ ಸ್ಥಗಿತಗೊಂಡಿತ್ತು.
'ಹಮಾಸ್ ಸಂಪೂರ್ಣ ನಿಶ್ಯಸ್ತ್ರೀಕರಣಕ್ಕೆ ಒಪ್ಪಿಕೊಂಡಿದೆ. ಗಾಜಾದಲ್ಲಿ ಹೊಸ ಪ್ಯಾಲೆಸ್ಟೀನಿಯನ್ ಸರ್ಕಾರ ರಚನೆಯತ್ತ ಇದೊಂದು ನಿರ್ಣಾಯಕ ಹೆಜ್ಜೆ' ಎಂದು ಟ್ರಂಪ್ ಬಣ್ಣಿಸಿದ್ದಾರೆ. 'ಹಮಾಸ್ ನಿಶ್ಯಸ್ತ್ರೀಕರಣ ಪೂರ್ಣಗೊಂಡ ನಂತರ ಇಸ್ರೇಲ್ ಪಡೆಗಳು ಗಾಜಾದಿಂದ ಹಿಂದೆ ಸರಿಯಲಿವೆ' ಎಂದು ಹೇಳಿದ್ದಾರೆ.
'ಒಪ್ಪಂದದ ಅಂಶಗಳನ್ನು ಎಚ್ಚರಿಕೆಯಿಂದ ಹಂತಹಂತವಾಗಿ ಜಾರಿಗೊಳಿಸಲಾಗುವುದು' ಎಂದು ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. 'ನಿಶ್ಯಸ್ತ್ರೀಕರಣ ಪೂರ್ಣಗೊಂಡಂತೆ, ಇಸ್ರೇಲಿ ಪಡೆಗಳು ಗಾಜಾದಿಂದ ಹಿಂದೆ ಸರಿಯುತ್ತವೆ. ಗಾಜಾದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಅಂತರರಾಷ್ಟ್ರೀಯ ಭದ್ರತಾ ಪಡೆಯು ಪ್ಯಾಲೆಸ್ಟೀನ್‌ನ ಹೊಸ ಪೊಲೀಸ್ ಪಡೆಗಳೊಂದಿಗೆ ಮಾಡಲಿದೆ' ಎಂದಿದ್ದಾರೆ.
ಗಾಜಾದಲ್ಲಿನ ತನ್ನ ಸರ್ಕಾರವನ್ನು ವಿಸರ್ಜಿಸಿರುವುದಾಗಿ ಮತ್ತು ವಿಶ್ವಸಂಸ್ಥೆಯ ಬೆಂಬಲವಿರುವ ತಾಂತ್ರಿಕ ಸಮಿತಿಯೊಂದಕ್ಕೆ ಅಧಿಕಾರ ಹಸ್ತಾಂತರಿಸಲು ಸಿದ್ಧತೆ ನಡೆಸುತ್ತಿರುವುದಾಗಿಯೂ ಹಮಾಸ್ ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು.

