ಸೊರಬ: ರಾಜ್ಯದಲ್ಲಿ 1,200 ಕೆಪಿಎಸ್ ಶಾಲೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, 1,000 ಶಾಲೆಗಳು ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.
ಮಧು ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಹಿರೇಕಲಗೋಡು, ಹರೀಶಿ ಹಾಗೂ ಈಡೂರು ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿ, ಡಾಂಬರೀಕರಣ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
'ರಾಜ್ಯದಲ್ಲಿ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಕಂಡುಬಂದಿದ್ದು, ಇನ್ನಷ್ಟು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಹೆಚ್ಚುವರಿ ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಉದ್ದೇಶದಿಂದ ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ' ಎಂದರು.
'ಪ್ರತಿ ಕೆಪಿಎಸ್ ಶಾಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ₹ 3 ಕೋಟಿಯಿಂದ ₹ 7 ಕೋಟಿವರೆಗೆ ವೆಚ್ಚ ಮಾಡಲಾಗುವುದು. ಪಠ್ಯ ಶಿಕ್ಷಣದ ಜತೆಗೆ ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸಲಾಗುವುದು. ಈಗಾಗಲೇ ತಾಲ್ಲೂಕಿಗೆ 7 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಶೀಘ್ರದಲ್ಲೇ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
'ಸರ್ಕಾರ ನನಗೆ ನೀಡಿದ ಜವಾಬ್ದಾರಿಯುತ ಹುದ್ದೆಯನ್ನು ನಿಭಾಯಿಸಿದ ತೃಪ್ತಿಯಿದ್ದು, ರಾಜ್ಯ ವ್ಯಾಪಿ 44 ಲಕ್ಷ ವಿದ್ಯಾರ್ಥಿಗಳಿದ್ದು, 2.50 ಲಕ್ಷ ಶಿಕ್ಷಕರಿದ್ದಾರೆ. ಈಗಾಗಲೇ 13 ಸಾವಿರ ಶಿಕ್ಷಕರ ನೇಮಕವಾಗಿದ್ದು, ಇನ್ನು 17 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯಲಿದೆ. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ರೂಪಿಸಬೇಕು' ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಮುಖಂಡ ತಬಲಿ ಬಂಗಾರಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುನೀಲ್ ಗೌಡ, ತಹಶೀಲ್ದಾರ್ ಕೆ. ಪುರಂದರ್, ತಾಲ್ಲೂಕು ಪಂಚಾಯಿತಿ ಇಒ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಆರ್, ಬೂತ್ ಅಧ್ಯಕ್ಷ ಯುವರಾಜ್, ಟಿ. ಶಿವಾನಂದ, ಶಂಕರ್ ನಾಯ್ಕ, ದಯಾನಂದ್ ಗೌಡ, ನಾಗರಾಜ್, ಪ್ರಭು ಶಿಗ್ಗಾ, ಕೇಶವಣ್ಣ, ರವಿಕುಮಾರ್, ಗಿರಿಗೌಡ, ರೇಖಾ ಸೇರಿದಂತೆ ಇತರರಿದ್ದರು.

