Dailyhunt Logo
  • Light mode
    Follow system
    Dark mode
    • Play Story
    • App Story
ಶಿಕಾರಿಪುರ | ಅಂಜನಾಪುರ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

ಶಿಕಾರಿಪುರ | ಅಂಜನಾಪುರ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

ಶಿಕಾರಿಪುರ: ಈ ಬಾರಿ ತಡವಾಗಿಯಾದರೂ ತಾಲ್ಲೂಕಿನಲ್ಲಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಕೋಡಿ ತುಂಬಿ ಹರಿದಿದ್ದರಿಂದ ಅಚ್ಚುಕಟ್ಟು ರೈತರ ಮೊಗದಲ್ಲಿ ನಗು ಮೂಡಿದೆ.

ಪ್ರತಿವರ್ಷ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಈ ಜಲಾಶಯ ತುಂಬುತ್ತಿತ್ತು. ಈ ವರ್ಷ ಮಳೆಯ ಕೊರತೆಯಿಂದ ತಡವಾಗಿದ್ದು, ವರುಣ ಕೃಪೆತೋರಿದ ಕಾರಣಕ್ಕೆ ಆಗಸ್ಟ್‌ 2ರಂದು ಜಲಾಶಯ ತುಂಬಿದೆ.

ತಾಲ್ಲೂಕಿನಲ್ಲಿ ಜುಲೈ 30ರಿಂದ ಆಗಸ್ಟ್ 5ರವರೆಗಿನ ವಾಡಿಕೆ ಮಳೆಗಿಂತ ಶೇ 33ರಷ್ಟು ಅಧಿಕ ಮಳೆಯಾಗಿದ್ದು, ಭತ್ತ ನಾಟಿಗೆ ಅನುಕೂಲ ಕಲ್ಪಿಸಿದೆ. ಅಚ್ಚುಕಟ್ಟು ರೈತರು ಭತ್ತ ನಾಟಿ ಮಾಡುವುದಕ್ಕೆ ಅಗಿ ಮಡಿ ಹಾಕಿದ್ದರೂ, 'ಜಲಾಶಯ ತುಂಬದಿದ್ದರೆ ನಾಟಿ ಮಾಡುವುದು ಹೇಗೆ?' ಎಂಬ ಚಿಂತೆಯಲ್ಲಿದ್ದರು. ನೀರಿನ ಲಭ್ಯತೆಯ ಖಾತರಿ ಲಭಿಸಿದ್ದರಿಂದ ನಾಟಿ ಕಾರ್ಯಕ್ಕೆ ಜಮೀನು ಸಿದ್ಧ ಮಾಡಿಕೊಳ್ಳುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.

ಅಂಜನಾಪುರ ಅಚ್ಚುಕಟ್ಟು: ಅಂಜನಾಪುರ ಜಲಾಶಯಕ್ಕೆ 6,736 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಬಲದಂಡೆ ನಾಲೆ 14 ಕಿ.ಮೀ, ಎಡದಂಡೆ ನಾಲೆ 45 ಕಿ.ಮೀ. ಇವೆ.

ಅಂಜನಾಪುರ, ಕಲ್ಮನೆ, ಹಿತ್ತಲ, ಈಸೂರು, ಭದ್ರಾಪುರ, ಚನ್ನಳ್ಳಿ, ಕಾಳೇನಹಳ್ಳಿ, ನೆಲವಾಗಿಲು, ನಿಂಬೆಗೊಂದಿವರೆಗೆ 28 ಗ್ರಾಮಗಳ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆಗೊಂಡಿದೆ. ಅಚ್ಚುಕಟ್ಟು ವ್ಯಾಪ್ತಿಯ ಶೇ 50ರಷ್ಟು ಪ್ರದೇಶದಲ್ಲಿ ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆ ಇದ್ದು, ಅಂದಾಜು 7,700 ಎಕರೆಯಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ.

1.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯ ಒಮ್ಮೆ ತುಂಬಿದರೆ 10 ದಿನಗಳಿಗೆ ಒಮ್ಮೆಯಂತೆ 3 ಬಾರಿ ಬೆಳೆಗೆ ನೀರು ಹರಿಸಬಹುದು. ಭತ್ತದ ಬೆಳೆಗೆ 5ರಿಂದ 6 ಬಾರಿ ನೀರು ಹರಿಸುವ ಅಗತ್ಯವಿದೆ. ಮಳೆಗೆ ಜಲಾಶಯ ಪುನಃ ತುಂಬುವ ಕಾರಣಕ್ಕೆ ರೈತರಿಗೆ ಸಮರ್ಪಕವಾಗಿ ನೀರು ನೀಡಬಹುದು. ಕಳೆದ ವರ್ಷದಿಂದ ತುಂಗಾ ನೀರು ಹೊಸಳ್ಳಿ ಏತ ನೀರಾವರಿ ಯೋಜನೆ ಮೂಲಕ 0.40 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿಯುವ ಕಾರಣಕ್ಕೆ ಬೇಸಿಗೆಯಲ್ಲೂ ಅಚ್ಚುಕಟ್ಟು ವ್ಯಾಪ್ತಿಯ 54 ಕೆರೆಗಳಿಗೆ ನೀರು ಹರಿಸುವುದಕ್ಕೆ ಅನುಕೂಲ ಆಗಿದೆ.

ಕುಡಿಯಲೂ ಬಳಕೆ: ಅಂಜನಾಪುರ ಜಲಾಶಯದ ನೀರನ್ನು ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣದ ಕುಡಿಯುವ ನೀರಿಗೂ ಬಳಕೆ ಮಾಡಲಾಗುತ್ತಿದೆ. ಜಲಾಶಯವನ್ನೇ ಆಶ್ರಯಿಸಿ ತಾಲ್ಲೂಕಿನ ಬಹುತೇಕ ದೊಡ್ಡ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.

ಹೂಳೆತ್ತುವುದು ಅಗತ್ಯ: 'ಅಂಜನಾಪುರ ಜಲಾಶಯ ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣ ವ್ಯಾಪ್ತಿಗೆ ಬರುತ್ತದೆ. ಅದರ ಪ್ರಕಾರ 2.5 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅವಕಾಶ ಇದೆ. ಜಲಾಶಯದಲ್ಲಿ ಶೇ 25ರಷ್ಟು ಪ್ರಮಾಣದ ಹೂಳು ತುಂಬಿದೆ ಎಂದು ಜಲಸಂಪನ್ಮೂಲ ಇಲಾಖೆಯ ವರದಿ ಹೇಳುತ್ತದೆ. ಹೂಳು ತೆಗೆಯಲು ದೊಡ್ಡ ಮೊತ್ತದ ಅನುದಾನ, ಹೂಳು ನಿರ್ವಹಣೆಗೆ ಸೂಕ್ತ ಯೋಜನೆ ಅಗತ್ಯವಿದೆ. ಜಾರಿಯಾದಲ್ಲಿ ತಾಲ್ಲೂಕಿಗೆ ಇನ್ನಷ್ಟು ನೀರು ದೊರೆಯಲಿದೆ' ಎಂದು ರೈತ ಮಂಜುನಾಥ ನೆಲವಾಗಿಲು ಅಭಿಪ್ರಾಯಪಡುತ್ತಾರೆ.

ಬಿ.ವೈ.ರಾಘವೇಂದ್ರ, ಸಂಸದವರುಣನ ಕೃಪೆಯಿಂದ ಅಂಜನಾಪುರ ಜಲಾಶಯ ತುಂಬಿದೆ. ತುಂಗಾ ನದಿ ನೀರು ಹರಿಯುವ ಕಾರಣಕ್ಕೆ ರೈತರ ಭತ್ತದ ಬೆಳೆಗೆ ಸಮರ್ಪಕ ನೀರು ಕೊಡಬಹುದು. ಹೂಳೆತ್ತುವಿಕೆಗೆ ಸರ್ಕಾರ ಅನುದಾನ ನೀಡಲು ಒತ್ತಾಯಿಸಲಾಗುವುದು.ಕಿರಣ್‌ಕುಮಾರ್ ಹರ್ತಿ, ಸಹಾಯಕ ಕೃಷಿ ನಿರ್ದೇಶಕಅಂಜನಾಪುರ, ಅಂಬ್ಲಿಗೊಳ್ಳ ಜಲಾಶಯ ವ್ಯಾಪ್ತಿಯಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 14,500 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆದಿದ್ದು ಕಳೆದ ವಾರ ಸುರಿದ ಮಳೆ ಬೆಳೆಗಳಿಗೆ ಅನುಕೂಲವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260806-42-1930389288

Dailyhunt
Disclaimer: This content has not been generated, created or edited by Dailyhunt. Publisher: Prajavani