ಶಿಕಾರಿಪುರ: 'ಪಟ್ಟಣದಲ್ಲಿ ಸೆ. 30ರಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಭಾರತ್ ಜೋಡೊ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅದಕ್ಕೆ ತಾಲ್ಲೂಕಿನ ಜನರಿಂದ ಅಪೂರ್ವ ಬೆಂಬಲ ದೊರೆತಿದೆ' ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಯೋಗೇಶ್ ತಿಳಿಸಿದರು.
ಪಟ್ಟಣದ ಬ್ರಾಂತೇಶ ಭವನದಲ್ಲಿ ಈಚೆಗೆ ನಡೆದ ಭಾರತ್ ಜೋಡೊ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
'ಎಲ್ಲ ಪಕ್ಷಗಳಲ್ಲಿಯೂ ಭಿನ್ನಾಭಿಪ್ರಾಯ ಇರುತ್ತವೆ. ಅವೆಲ್ಲವನ್ನು ಮರೆತು ಪಕ್ಷ ಸಂಘಟನೆಗೆ ಕೈಜೋಡಿಸಿ' ಎಂದು ಸ್ಥಳೀಯ ಮುಖಂಡರಿಗೆ ಕಿವಿಮಾತು ಹೇಳಿದ ಅವರು, '2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಬಡವರ ಪರ ಕೆಲಸ ಮಾಡುವುದೇ ನಮ್ಮ ಗುರಿಯಾಗಬೇಕು' ಎಂದರು.
'ಪಾದಯಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಪಕ್ಷದ ಕಾರ್ಯಕರ್ತರು, ಮುಖಂಡರು, ಸಚಿವರು ಹಾಗೂ ಶಾಸಕರು ಬರಲಿದ್ದಾರೆ. ವಿಶೇಷವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಮಾಜಿ ಸಚಿವ ಬಳ್ಳಾರಿಯ ನಾಗೇಂದ್ರ ಅವರೂ ಭಾಗವಹಿಸಲಿದ್ದಾರೆ' ಎಂದು ಹೇಳಿದರು.
'ಶಿಕಾರಿಪುರದಿಂದ ಆರಂಭವಾಗುವ ಪಾದಯಾತ್ರೆಯಲ್ಲಿ 15,000ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ' ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ ತಿಳಿಸಿದರು.
ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್, ಪಾರಿವಾಳೇಶ್ವರ ಮಾತನಾಡಿದರು.
ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮಾರವಳ್ಳಿ ಉಮೇಶ್, ಸುರೇಶ್ ಧಾರವಾಡ ಹಾಜರಿದ್ದರು.
260928-42-939512997

