Dailyhunt Logo
  • Light mode
    Follow system
    Dark mode
    • Play Story
    • App Story
ಶಿಕ್ಷಣ: ಅಕ್ಷರದ ಅಕ್ಕ ತಂದ ಅರಿವು

ಶಿಕ್ಷಣ: ಅಕ್ಷರದ ಅಕ್ಕ ತಂದ ಅರಿವು

'ಮನೆ ಮನಗಳಲ್ಲಿ ಅಂಬೇಡ್ಕರ್ ವಿಚಾರ' ಕಾರ್ಯಕ್ರಮದಡಿ ಕಳೆದ ಐದಾರು ವರ್ಷಗಳಿಂದ ಹಲವು ಮನೆಗಳಿಗೆ ಭೇಟಿ ನೀಡುತ್ತಿದ್ದೆ. ಅಂಬೇಡ್ಕರ್ ಅವರ ವಿಚಾರ, ಸಂವಿಧಾನ ಮತ್ತು ಶಿಕ್ಷಣದ ಕುರಿತು ಮಾತನಾಡುವಾಗ ಆ ಮನೆಯಲ್ಲಿನ ಮಕ್ಕಳ ಓದಿನ ಬಗ್ಗೆಯೂ ವಿಚಾರಿಸುತ್ತಿದ್ದೆ. ಒಂದರಿಂದ ಏಳನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳಲ್ಲಿ ಒಂದೆರಡು ಮಕ್ಕಳನ್ನು ಹೊರತುಪಡಿಸಿ, 18ರಿಂದ 20 ಮಕ್ಕಳಿಗೆ ಅಕ್ಷರಗಳನ್ನು ಗುರುತಿಸಲೂ, ಓದಲೂ ಬರುತ್ತಿರಲಿಲ್ಲ.

ಅವರಲ್ಲಿ ಕೆಲವರು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರು. ಟ್ಯೂಷನ್‌ಗೂ ಹೋಗುತ್ತಿದ್ದರು. ಆದರೂ ಅಕ್ಷರಗಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಮಕ್ಕಳ ಕಲಿಕೆಯ ಈ ಸ್ಥಿತಿ ಕಂಡು ನನಗೆ ಕಳವಳವಾಯಿತು. 'ನಮ್ಮ ಮಕ್ಕಳು ವಿದ್ಯಾವಂತರಾದರೆ ಸಾಕು' ಎಂಬುದು ಪಾಲಕರ ಆಶಯವಾಗಿತ್ತು. ಆದರೆ ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಓದಲು ಕಲಿಯುತ್ತಿಲ್ಲ ಎನ್ನುವ ಸಂಗತಿ ನನ್ನನ್ನು ಯೋಚಿಸುವಂತೆ ಮಾಡಿತು.

ಮಕ್ಕಳಿಗೆ ಶಾಲೆಯ ಹೊರತಾಗಿಯೂ ಕಲಿಕೆಗೆ ನೆರವಾಗುವ ವ್ಯವಸ್ಥೆ ಬೇಕು ಎನಿಸಿತು. ಈ ಯೋಚನೆಯಿಂದಲೇ 2021ರ ಜುಲೈನಲ್ಲಿ ರಾಯಚೂರಿನ ಮಂಗಳವಾರಪೇಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ 'ಅಂಬೇಡ್ಕರ್ ಅಕ್ಷರದ ಅರಿವು ಉಚಿತ ಪಾಠಶಾಲೆ' ಆರಂಭವಾಯಿತು.

ಮೊದಲ ದಿನಗಳಲ್ಲಿ 30-35 ಮಕ್ಕಳು ಬರುತ್ತಿದ್ದರು. ಸಂಜೆ ಆರು ಗಂಟೆಗೆ ತರಗತಿ ಆರಂಭಿಸಿ 7.30ರವರೆಗೆ ಕಲಿಸುತ್ತಿದ್ದೆವು. ವಾರದಲ್ಲಿ ಆರು ದಿನ ತರಗತಿ ನಡೆಯುತ್ತದೆ. ಈಗ 20-25 ಮಕ್ಕಳು ನಿಯಮಿತವಾಗಿ ಬರುತ್ತಿದ್ದಾರೆ.

ಮೊದಲಿಗೆ ಅಕ್ಷರಗಳಿಂದಲೇ ಆರಂಭಿಸಬೇಕಾಯಿತು. ಬೋರ್ಡ್ ಮೇಲೆ 'ಅ' ಬರೆದು ಅದು ಯಾವ ಅಕ್ಷರ ಎಂದು ಕೇಳಿದರೆ ಕೆಲ ಮಕ್ಕಳು ಸುಮ್ಮನೆ ನೋಡುತ್ತಿದ್ದರು. ಪುಸ್ತಕದಲ್ಲಿರುವ ಪಾಠವನ್ನು ಬೋರ್ಡ್ ಮೇಲೆ ಬರೆದು, ಅದರಲ್ಲಿರುವ ಅಕ್ಷರಗಳನ್ನು ಗುರುತಿಸುವಂತೆ ಮಾಡುತ್ತಿದ್ದೆವು. ನಂತರ ಶಬ್ದಗಳನ್ನು ಓದಲು ಹೇಳುತ್ತಿದ್ದೆವು. ಇನ್ನೂ ಅಕ್ಷರ ಗುರುತಿಸುವಲ್ಲಿ ಕಷ್ಟಪಡುವ ಮಕ್ಕಳಿಗೆ ಕಾರ್ಡ್‌ಗಳಲ್ಲಿ ಅಕ್ಷರಗಳನ್ನು ಬರೆದು ಮತ್ತೆ ಮತ್ತೆ ತೋರಿಸಿ ಕಲಿಸುತ್ತಿದ್ದೆವು.

ಮಕ್ಕಳ ಕಲಿಕೆಯ ಮಟ್ಟ ಒಂದೇ ರೀತಿ ಇರಲಿಲ್ಲ. ಕೆಲವರು ಬೇಗ ಕಲಿತರೆ, ಇನ್ನು ಕೆಲವರಿಗೆ ಒಂದೇ ಅಕ್ಷರವನ್ನು ಹಲವು ಬಾರಿ ತೋರಿಸಬೇಕಾಗುತ್ತಿತ್ತು. ಅಕ್ಷರದಿಂದ ಶಬ್ದಕ್ಕೆ, ಶಬ್ದದಿಂದ ಪದಕ್ಕೆ, ಪದದಿಂದ ವಾಕ್ಯಕ್ಕೆ ನಿಧಾನವಾಗಿ ಕರೆದೊಯ್ಯಬೇಕಾಯಿತು.

ಈಗ 15ರಿಂದ 18 ಮಕ್ಕಳು ಸರಾಗವಾಗಿ ಓದುತ್ತಿದ್ದಾರೆ. ನೇತ್ರಾ ಮತ್ತು ನಿಶ್ಚಿತ್‌ಗೆ ಹಿಂದೆ ಓದಲು ಬರುತ್ತಿರಲಿಲ್ಲ. ಈಗ ಕನ್ನಡ ಪಾಠವನ್ನು ಸರಾಗವಾಗಿ ಓದುತ್ತಾರೆ. ಪುಸ್ತಕವನ್ನು ಕೈಗೆತ್ತಿಕೊಂಡು ತಾವೇ ಓದುವಷ್ಟು ಕಲಿತಿರುವುದು ಅವರಲ್ಲಿನ ಬದಲಾವಣೆಯನ್ನು ತೋರಿಸುತ್ತದೆ.

ಪವಿತ್ರಾ ಮತ್ತು ಸಂಧ್ಯಾ ಅವರ ಕಲಿಕೆಯ ಪಯಣವೂ ಗಮನಾರ್ಹ. ಹಿಂದೆ ಅಕ್ಷರಗಳನ್ನು ಗುರುತಿಸುವ ಹಂತದಲ್ಲಿದ್ದ ಇವರಿಗೆ ಪ್ರಶ್ನೆಗಳನ್ನು ಓದಿ, ಅದಕ್ಕೆ ಹೇಗೆ ಉತ್ತರಿಸಬೇಕು ಎನ್ನುವುದನ್ನೂ ಅಭ್ಯಾಸ ಮಾಡಿಸಲಾಯಿತು. ಈಗ ಇಬ್ಬರೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಆಯ್ಕೆಯಾಗಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.

ಇನ್ನೂ 6ರಿಂದ 8 ಮಕ್ಕಳು ಅಕ್ಷರ ಗುರುತಿಸುವಿಕೆ ಮತ್ತು ಓದಿನಲ್ಲಿ ಕಷ್ಟಪಡುತ್ತಿದ್ದಾರೆ. ಅವರ ಕಲಿಕೆಗೆ ಹೆಚ್ಚು ಸಮಯ ಬೇಕಾಗಿದೆ. ಅವರಿಗಾಗಿ ಕಾರ್ಡ್‌, ಬೋರ್ಡ್ ಮತ್ತು ಪುಸ್ತಕಗಳ ಮೂಲಕ ಬೇರೆ ಬೇರೆ ರೀತಿಯಲ್ಲಿ ಅಭ್ಯಾಸ ಮಾಡಿಸುತ್ತಿದ್ದೇವೆ.

ಮಕ್ಕಳಿಗೆ ಓದು-ಬರಹದ ಜೊತೆಗೆ ತ್ರಿಸರಣ, ಪಂಚಶೀಲ ಮತ್ತು ಬುದ್ಧ ವಂದನೆಯನ್ನೂ ಕಲಿಸುತ್ತೇವೆ. ನಾಟಕ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸುತ್ತೇವೆ. ತಂದೆ-ತಾಯಿಯ ಅನುಮತಿ ಪಡೆದು ಉದ್ಯಾನಕ್ಕೆ ಕರೆದುಕೊಂಡು ಹೋಗಿ, ನಿಸರ್ಗದ ನಡುವೆ ಆಟದ ಜೊತೆಗೆ ಪಾಠವನ್ನೂ ಮಾಡಿಸುತ್ತೇವೆ.

ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಪಾಲಕರೂ ಗಮನಿಸಿದ್ದಾರೆ. 'ಮೊದಲು ನಮ್ಮ ಮಕ್ಕಳು ಸಂಜೆ ಆಟವಾಡುತ್ತಿದ್ದರು. ಈಗ ತಾವೇ ರಾತ್ರಿ ಪಾಠಶಾಲೆಗೆ ಹೋಗಬೇಕು ಎಂದು ಕೇಳುತ್ತಾರೆ. ಕಲಿಕೆಯಲ್ಲಿ ಮುಂದುವರಿಯುತ್ತಿರುವುದನ್ನುನೋಡುತ್ತಿದ್ದೇವೆ' ಎಂದು ಕೆಲ ಪಾಲಕರು ಹೇಳುತ್ತಾರೆ. ಈಗ ಮಕ್ಕಳನ್ನು ಅವರೇ ಪಾಠಶಾಲೆಗೆ ಕರೆತಂದು ಬಿಡುತ್ತಿದ್ದಾರೆ.

ಈ ಕೆಲಸದ ಹಿಂದೆ ನನ್ನ ಬಾಲ್ಯದ ಅನುಭವವೂ ಇದೆ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿಯೇ ನನಗೆ ಅವರು ಪಾಠ ಮಾಡುತ್ತಿದ್ದರು. ಟ್ಯೂಷನ್‌ ಫೀ ಕಟ್ಟುವಷ್ಟು ನಮ್ಮ ಆರ್ಥಿಕ ಸ್ಥಿತಿ ಇರಲಿಲ್ಲ. ಶಿಕ್ಷಣದ ಅವಕಾಶ ನನಗೆ ಸಿಕ್ಕಿದ್ದರಿಂದ ಅದರ ಬೆಲೆ ಅರ್ಥವಾಗಿದೆ. ವಿದ್ಯಾರ್ಥಿವೇತನದ ಹಣ ಕೈಗೆ ಬಂದಾಗ, ಅದನ್ನು ನನಗಾಗಿ ಬಳಸುವುದಕ್ಕಿಂತ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಏನಾದರೂ ಮಾಡಬೇಕು ಎನ್ನಿಸಿತು. ಹಾಗಾಗಿ ವಿದ್ಯಾರ್ಥಿವೇತನ ಹಣದ ಒಂದು ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತಿದ್ದೇನೆ.

ಮನೆಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಅಂಬೇಡ್ಕರ್ ಅವರ ವಿಚಾರ, ಸಂವಿಧಾನ ಮತ್ತು ಶಿಕ್ಷಣದ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳು, ಆರೋಗ್ಯ ಮತ್ತು ಜೀವ ವಿಮೆ, ಉಳಿತಾಯ, ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳ ಬಗ್ಗೆಯೂ ಚರ್ಚಿಸುತ್ತಿದ್ದೆ. ಕೆಲವು ಮನೆಗಳಿಗೆ ನನ್ನ ಸ್ವಂತ ಖರ್ಚಿನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತಲುಪಿಸಿದ್ದೇನೆ. ಅಗತ್ಯವಿರುವ ಮಕ್ಕಳಿಗೆ ಕೈಲಾದಷ್ಟು ಆರ್ಥಿಕ ನೆರವನ್ನೂ ನೀಡಿದ್ದೇನೆ.

2024ರ ಜನವರಿಯಲ್ಲಿ ರಾಯಚೂರಿನ ಸರ್ತಿಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲೂ ಇದೇ ರೀತಿಯ ಪಾಠಶಾಲೆ ಆರಂಭಿಸಿದ್ದೇವೆ. ಇಲ್ಲಿ ಸುಮಾರು 20 ಮಕ್ಕಳು ಬರುತ್ತಿದ್ದಾರೆ. ಅವರಲ್ಲಿ 10-12 ಮಕ್ಕಳು ಅಕ್ಷರಗಳನ್ನು ಗುರುತಿಸುತ್ತಿದ್ದಾರೆ. 8-10 ಮಕ್ಕಳು ಇನ್ನೂ ಅಕ್ಷರ ಗುರುತಿಸುವಿಕೆ ಮತ್ತು ಓದಿನಲ್ಲಿ ಹಿಂದೆ ಇದ್ದಾರೆ. ಅವರೊಂದಿಗೂ ಇದೇ ಪ್ರಯತ್ನ ಮುಂದುವರಿದಿದೆ.

ಎರಡೂ ಪಾಠಶಾಲೆಗಳಿಗೆ ತಿಂಗಳಿಗೆ ತಲಾ ₹500ರಂತೆ ಒಟ್ಟು ₹1,000 ಖರ್ಚಾಗುತ್ತದೆ. ಈ ಹಣವನ್ನು ನನ್ನ ವಿದ್ಯಾರ್ಥಿವೇತನದಿಂದಲೇ ಭರಿಸುತ್ತಿದ್ದೇನೆ. 12ನೇ ಪುಟಕ್ಕೆ...

ಇದುವರೆಗೆ ಯಾವುದೇ ಸ್ಥಳೀಯ ವ್ಯಕ್ತಿ, ಸಂಘಟನೆ ಅಥವಾ ಸಂಸ್ಥೆಯಿಂದ ನೆರವು ಪಡೆದಿಲ್ಲ. ಈ ಪಾಠಶಾಲೆಯ ಗುರಿ ಅಕ್ಷರ ಕಲಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳು ಶಿಕ್ಷಣದ ಮೂಲಕ ತಮ್ಮ ಬದುಕಿನ ಸವಾಲುಗಳನ್ನು ಎದುರಿಸುವಂತಾಗಬೇಕು. ಅಂಬೇಡ್ಕರ್ ಅವರು ತೋರಿಸಿದ ಶಿಕ್ಷಣದ ಮಾರ್ಗದಲ್ಲಿ ಮುಂದೆ ಸಾಗಬೇಕು. ಲಿಯುವುದನ್ನು ಮುಂದುವರಿಸುವ ಆಸಕ್ತಿ ಅವರಲ್ಲಿ ಮೂಡಬೇಕು. ಇನ್ನೂ ಹೆಚ್ಚಿನ ಮಕ್ಕಳಿಗೆ ಇಂತಹ ಅವಕಾಶ ಸಿಗಬೇಕು ಎನ್ನುವುದು ನನ್ನ ಆಶಯ.

ಪ್ರತಿ ಸಂಜೆ ತರಗತಿ ಮುಗಿದಾಗ ಮಕ್ಕಳು ಪುಸ್ತಕಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೊರಡುತ್ತಾರೆ. ಕೆಲ ವರ್ಷಗಳ ಹಿಂದೆ ಅಕ್ಷರ ಗುರುತಿಸಲು ಕಷ್ಟಪಡುತ್ತಿದ್ದ ಮಕ್ಕಳು ಈಗ ಪುಸ್ತಕದ ಸಾಲುಗಳನ್ನು ಓದುತ್ತಿರುವುದನ್ನು ನೋಡಿದಾಗ, ನಾವು ಆರಂಭಿಸಿದ ಸಣ್ಣ ಪ್ರಯತ್ನದ ಅರ್ಥ ಗೊತ್ತಾಗುತ್ತದೆ.

ಅಕ್ಷರವನ್ನು ಗುರುತಿಸುವುದರಿಂದ ಆರಂಭವಾದ ಈ ಪಯಣ ಇನ್ನೂ ಮುಗಿದಿಲ್ಲ. ಮಕ್ಕಳು ಇನ್ನೂ ಮುಂದೆ ಓದಬೇಕು. ಕಲಿಯಬೇಕು. ತಮ್ಮದೇ ದಾರಿ ಕಂಡುಕೊಳ್ಳಬೇಕು. ಅದಕ್ಕಾಗಿ ಮರುದಿನ ಸಂಜೆ ಆರು ಗಂಟೆಯ ತರಗತಿಗಾಗಿ ಮತ್ತೆ ಬೋರ್ಡ್ ಸಿದ್ಧವಾಗಿರುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani