Dailyhunt Logo
  • Light mode
    Follow system
    Dark mode
    • Play Story
    • App Story
ಮಂಡ್ಯ| ಶಿಕ್ಷಣ ಮೊಟಕುಗೊಳಿಸಿದ ಮಕ್ಕಳನ್ನು ಶಾಲೆಗೆ ಕರೆತನ್ನಿ: ಜಿಲ್ಲಾಧಿಕಾರಿ

ಮಂಡ್ಯ| ಶಿಕ್ಷಣ ಮೊಟಕುಗೊಳಿಸಿದ ಮಕ್ಕಳನ್ನು ಶಾಲೆಗೆ ಕರೆತನ್ನಿ: ಜಿಲ್ಲಾಧಿಕಾರಿ

ಮಂಡ್ಯ: ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಂದ ಶಿಕ್ಷಣ ಮೊಟಕುಗೊಳಿಸಿ ಗ್ಯಾರೇಜ್‌ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಗುರುತಿಸಿ, ಪುನಃ ಶಾಲೆಗೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ನಡೆದ 2026-27ನೇ ಸಾಲಿನ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಗಳಿಗೆ ನಿರಂತರ ಗೈರು ಹಾಜರಾಗುವ ಮಕ್ಕಳನ್ನು ಗುರುತಿಸಿ, ಅದಕ್ಕೆ ಕಾರಣ ಪತ್ತೆ ಹಚ್ಚಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ ಹಾಗೂ ಪೂರಕ ಬೋಧನೆ ನೀಡಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಮಕ್ಕಳ ಜತೆಗೆ ಪೋಷಕರಿಗೂ ಸಮಾಲೋಚನೆ ನಡೆಸಿ, ಶಿಕ್ಷಣದ ಮಹತ್ವ ಮತ್ತು ಉನ್ನತ ಶಿಕ್ಷಣದಿಂದ ದೊರೆಯುವ ಅವಕಾಶಗಳ ಕುರಿತು ಅರಿವು ಮೂಡಿಸಬೇಕು. ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ಕೋಶದ ಅಧಿಕಾರಿ ಧನುಷ್‌, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಧುಶ್ರೀ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಜಿ.ಎಸ್. ಬೆಟ್ಟಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಎಸ್. ಜಯಸ್ವಾಮಿ ಭಾಗವಹಿಸಿದ್ದರು.

ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ಒದಗಿಸಿ

ಅಲ್ಪಸಂಖ್ಯಾತರ ಆರ್ಥಿಕ ಸ್ವಾವಲಂಬನೆಗೆ ಅರ್ಹರಿಗೆ ಮನೆ ಸಾಲ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಲ ಸೌಲಭ್ಯ ಒದಗಿಸಬೇಕು. ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಮಂಜೂರು ಮಾಡುವುದರ ಜತೆಗೆ ಆಸಕ್ತಿಗೆ ಅನುಗುಣವಾಗಿ ಕೌಶಲ ತರಬೇತಿ ನೀಡಿ ಸ್ವಂತ ಉದ್ಯೋಗ ಆರಂಭಿಸಲು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಅವರು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿನಿಲಯಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸರ್ಕಾರಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.

261104-40-280871527

Dailyhunt
Disclaimer: This content has not been generated, created or edited by Dailyhunt. Publisher: Prajavani