Dailyhunt Logo
  • Light mode
    Follow system
    Dark mode
    • Play Story
    • App Story
ಶಿಕ್ಷಣ : ಪ್ರದರ್ಶಕ ಕಲೆ ಉದ್ಯೋಗದ ಅಲೆ, ಹೊಸ ಕೋರ್ಸ್‌ಗಳು ಜನಪ್ರಿಯ

ಶಿಕ್ಷಣ : ಪ್ರದರ್ಶಕ ಕಲೆ ಉದ್ಯೋಗದ ಅಲೆ, ಹೊಸ ಕೋರ್ಸ್‌ಗಳು ಜನಪ್ರಿಯ

ಎಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನ, ವಾಣಿಜ್ಯ ಪದವಿ ಎಂಬ ಸಾಂಪ್ರದಾಯಿಕ ಕೋರ್ಸ್‌ಗಳ ಆಯ್ಕೆಯ ಆಚೆಗೆ, ಡಿಸೈನ್, ಎಐ, ಅನಲಿಟಿಕ್ಸ್, ಪರ್ಫಾರ್ಮಿಂಗ್ ಆರ್ಟ್ಸ್, ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್, ಸಸ್ಟೇನಬಿಲಿಟಿ, ಕಂಟೆಂಟ್ ಕ್ರಿಯೇಷನ್, ಸೈಕಾಲಜಿ ಕೌನ್ಸೆಲಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಂತಹ 'ಹೊಸ ಅಲೆಯ' ಕೋರ್ಸ್‌ಗಳು ಈಗ ಜನಪ್ರಿಯವಾಗುತ್ತಿವೆ.

ಪ್ರತಿಯೊಂದು ಕ್ಷೇತ್ರವೂ ಏನನ್ನು ಕಲಿಸುತ್ತದೆ, ಏಕೆ ಮುಖ್ಯ ಎಂಬುದನ್ನು ತಿಳಿದುಕೊಂಡು ಮುಂದುವರಿದರೆ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುತ್ತದೆ.

ಡಿಸೈನ್: ಉತ್ಪನ್ನ ವಿನ್ಯಾಸ, ಗ್ರಾಫಿಕ್ ಡಿಸೈನ್, ಯೂಸರ್ ಎಕ್ಸ್‌ಪೀರಿಯನ್ಸ್ (ಯುಎಕ್ಸ್) ಡಿಸೈನ್‌ನಂತಹ ವಿಷಯಗಳನ್ನೊಳಗೊಂಡ ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಸೃಜನಶೀಲ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕೌಶಲ ಕಲಿಸುತ್ತವೆ. ಟೆಕ್, ಇ-ಕಾಮರ್ಸ್, ಜಾಹೀರಾತು ಕ್ಷೇತ್ರಗಳಲ್ಲಿ ಡಿಸೈನರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಡೇಟಾ ಅನಲಿಟಿಕ್ಸ್: ಇವು ಇಂದಿನ ಎಲ್ಲಾ ಉದ್ಯಮಗಳ ಬೆನ್ನೆಲುಬಾಗಿರುವ ತಂತ್ರಜ್ಞಾನ ಕೌಶಲಗಳು. ಮಷಿನ್ ಲರ್ನಿಂಗ್, ಡೇಟಾ ಸೈನ್ಸ್, ಬಿಸಿನೆಸ್ ಅನಲಿಟಿಕ್ಸ್ ಕಲಿತ ವಿದ್ಯಾರ್ಥಿಗಳಿಗೆ ಐಟಿ, ಬ್ಯಾಂಕಿಂಗ್, ಆರೋಗ್ಯ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸಿಗುತ್ತದೆ.

ಪರ್ಫಾರ್ಮಿಂಗ್ ಆರ್ಟ್ಸ್: ರಂಗಭೂಮಿ, ನೃತ್ಯ, ಸಂಗೀತ, ಚಲನಚಿತ್ರ ಮತ್ತು ಮಾಧ್ಯಮ ಅಧ್ಯಯನಗಳನ್ನೊಳಗೊಂಡ ಈ ಕೋರ್ಸ್‌ಗಳು ಸಾಂಪ್ರದಾಯಿಕವಾಗಿ 'ಪಠ್ಯೇತರ ಚಟುವಟಿಕೆ' ಎಂದು ಪರಿಗಣಿಸಲ್ಪಡುತ್ತಿದ್ದವು. ಆದರೆ ಈಗ ಒಟಿಟಿ, ಸಿನಿಮಾ, ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರಗಳ ಬೆಳವಣಿಗೆಯಿಂದಾಗಿ ಇವು ಗಂಭೀರ ವೃತ್ತಿಪಥವಾಗಿ ಮಾರ್ಪಟ್ಟಿವೆ. ಸಂಗೀತ ಕ್ಷೇತ್ರದಲ್ಲಿ 'ಸ್ವತಂತ್ರ ಸಂಗೀತ' (ಇಂಡೀ ಮ್ಯೂಸಿಕ್) ದಲ್ಲಿ ತೊಡಗಿಕೊಂಡರೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಯೂಟ್ಯೂಬ್‌ನಂತಹ ಮಾಧ್ಯಮದಲ್ಲಿ ಬೇಗನೆ ಯಶವನ್ನೂ ಸಾಧಿಸುವುದಲ್ಲದೆ ಆರ್ಥಿಕವಾಗಿಯೂ ಗಳಿಸಬಹುದು.

ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್: ಆಟಗಾರರ ನಿರ್ವಹಣೆ, ಕ್ರೀಡಾ ಮಾರುಕಟ್ಟೆ, ಈವೆಂಟ್ ಮ್ಯಾನೇಜ್‌ಮೆಂಟ್‌ ವಿಷಯಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಸ್ಪರ್ಧೆ ಇನ್ನೂ ಕಡಿಮೆ ಇರುವುದರಿಂದ, ಐಪಿಎಲ್‌ನಂತಹ ಲೀಗ್‌ಗಳ ಬೆಳವಣಿಗೆಯ ಜೊತೆಗೆ ಆರಂಭಿಕ ಹಂತದಲ್ಲೇ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆ ಹೆಚ್ಚು.

ಸಸ್ಟೇನಬಿಲಿಟಿ (ಸುಸ್ಥಿರತೆ): ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ, ಸುಸ್ಥಿರ ಕೃಷಿಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದ ಈ ಕೋರ್ಸ್‌ಗಳಿಗೆ ಸರ್ಕಾರಿ ನೀತಿ, ಕಾರ್ಪೊರೇಟ್ ಇಎಸ್‌ಜಿ (ESG) ಬಾಧ್ಯತೆಗಳಿಂದಾಗಿ ಬೇಡಿಕೆ ಹೆಚ್ಚುತ್ತಿದೆ.

ಡಿಜಿಟಲ್ ಮಾರ್ಕೆಟಿಂಗ್: ಸೋಷಿಯಲ್ ಮೀಡಿಯಾ, ಎಸ್‌ಇಒ, ಕಂಟೆಂಟ್ ಸ್ಟ್ರಾಟಜಿಯಂತಹ ಕೌಶಲ ಕಲಿಸುವ ಈ ಕೋರ್ಸ್‌ಗಳಿಗೆ, ಪ್ರತಿಯೊಂದು ವ್ಯಾಪಾರವೂ ಆನ್‌ಲೈನ್ ಆಗುತ್ತಿರುವ ಈ ಕಾಲದಲ್ಲಿ ಬೇಡಿಕೆ ಸ್ಥಿರವಾಗಿ ಏರುತ್ತಿದೆ.

ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕಿಂಗ್: ಡಿಜಿಟಲ್ ಫೋರೆನ್ಸಿಕ್ಸ್ ಸೇರಿದಂತೆ, ಬಿಸಿಎ-ಬಿಎಸ್ಸಿ ಮಟ್ಟದಲ್ಲೇ ಈಗ ಇಂತಹ ಕೋರ್ಸ್‌ಗಳು ಲಭ್ಯ. ಡೇಟಾ ಸೋರಿಕೆ, ಸೈಬರ್ ಅಪರಾಧ ಹೆಚ್ಚುತ್ತಿರುವುದರಿಂದ ಕಂಪನಿಗಳಲ್ಲಿ ಈ ಕೌಶಲಕ್ಕೆ ಬೇಡಿಕೆ ಜಾಸ್ತಿ.

ವಿಎಫ್‌ಎಕ್ಸ್, ಆನಿಮೇಷನ್ ಮತ್ತು ಗೇಮ್ ಡಿಸೈನ್: ಒಟಿಟಿ, ಸಿನಿಮಾ ಮತ್ತು ಗೇಮಿಂಗ್ ಉದ್ಯಮದ ವೇಗದ ಬೆಳವಣಿಗೆಯಿಂದಾಗಿ ಈ ಸೃಜನಶೀಲ-ತಾಂತ್ರಿಕ ಮಿಶ್ರಣದ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಸೈಕಾಲಜಿ ಮತ್ತು ಕೌನ್ಸೆಲಿಂಗ್: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಿದಂತೆ, ಈ ಕೋರ್ಸ್‌ಗಳಿಗೆ ಬೇಡಿಕೆ ಏರಿದ್ದು, ಕೌನ್ಸೆಲಿಂಗ್, ಎಚ್‌ಆರ್, ಎಡ್‌ಟೆಕ್ ಕ್ಷೇತ್ರಗಳಲ್ಲಿ ಅವಕಾಶ ಸಿಗುತ್ತದೆ.

ಫಿನ್‌ಟೆಕ್ ಮತ್ತು ಕಂಟೆಂಟ್ ಕ್ರಿಯೇಷನ್: ಬ್ಯಾಂಕಿಂಗ್-ಫೈನಾನ್ಸ್ ಮತ್ತು ಟೆಕ್ ಬೆಸೆಯುವ ಫಿನ್‌ಟೆಕ್‌ಗೆ ಕೆಲವು ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ವಿಶೇಷ ಕೋರ್ಸ್‌ಗಳಿದ್ದರೆ, ಸೋಷಿಯಲ್ ಮೀಡಿಯಾ ಮತ್ತು ಪಾಡ್‌ಕಾಸ್ಟಿಂಗ್ ಬೆಳೆದಂತೆ ಕಂಟೆಂಟ್ ಕ್ರಿಯೇಷನ್/ಡಿಜಿಟಲ್ ಜರ್ನಲಿಸಂ ಕೂಡ ಔಪಚಾರಿಕ ಕೋರ್ಸ್ ಆಗಿ ಬೆಳೆಯುತ್ತಿದೆ.

ಮಾರುಕಟ್ಟೆಯ ಬೇಡಿಕೆ: ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2026ರ ಪ್ರಕಾರ, ದೇಶದ ಉದ್ಯೋಗಾರ್ಹತೆ ಶೇ 56.35ಕ್ಕೆ ಏರಿದ್ದು, ಕರ್ನಾಟಕ ಅತ್ಯುತ್ತಮ ಉದ್ಯೋಗಾರ್ಹತೆ ಹೊಂದಿರುವ ರಾಜ್ಯಗಳ ಪೈಕಿ ಒಂದಾಗಿದೆ. ಶೇ 90ಕ್ಕೂ ಹೆಚ್ಚು ಉದ್ಯೋಗಿಗಳು ಈಗಾಗಲೇ ಜನರೇಟಿವ್ ಎಐ ಬಳಸುತ್ತಿದ್ದು, ಭಾರತ ಜಾಗತಿಕ ಎಐ ಪ್ರತಿಭಾ ಪೂಲ್‌ನ ಶೇ16ರಷ್ಟನ್ನು ಹೊಂದಿದೆ. ಗಿಗ್ ಆರ್ಥಿಕತೆಯೂ ವಿಸ್ತರಿಸುತ್ತಿದ್ದು, ಪ್ರಾಜೆಕ್ಟ್ ಆಧಾರಿತ ನೇಮಕಾತಿ ಕಳೆದ ವರ್ಷ ಶೇ 38ರಷ್ಟು ಹೆಚ್ಚಿದೆ.

ವಿದ್ಯಾರ್ಥಿಗಳಿಗೆ ಸಲಹೆ: ಮಾರುಕಟ್ಟೆ ಬೇಡಿಕೆಯ ಅಂಕಿ-ಅಂಶಗಳಷ್ಟನ್ನೇ ನೋಡಿ ಆಕರ್ಷಿತರಾಗದೆ, ಕೋರ್ಸ್ ಆಯ್ಕೆ ಮಾಡುವ ಮೊದಲು ಆ ಕಾಲೇಜಿನ ಪಠ್ಯಕ್ರಮ ಎಷ್ಟು ಆಳವಾಗಿದೆ, ಪ್ಲೇಸ್‌ಮೆಂಟ್ ಇತಿಹಾಸ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು.

ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಜಾಣ್ಮೆಯಿಂದ ಆಯ್ದುಕೊಂಡು ತಮಗೆ ಬೇಕಾದ ಕೋರ್ಸ್‌ ಮಾಡಿ ಉದ್ಯೋಗ ಗಳಿಸಬಹುದು.

ಈ ಕೋರ್ಸ್‌ಗಳು ಎಲ್ಲೆಲ್ಲಾ ಲಭ್ಯ?

lಬೆಂಗಳೂರಿನ ಆರ್.ವಿ .ವಿಶ್ವವಿದ್ಯಾಲಯದಲ್ಲಿ 'ಸ್ಕೂಲ್ ಆಫ್ ಡಿಸೈನ್ ಅಂಡ್ ಇನ್ನೋವೇಷನ್' ಮತ್ತು 'ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಅಂಡ್ ಕ್ರಿಯೇಟಿವ್ ಆರ್ಟ್ಸ್' ಇವೆ.

lಜೈನ್ ವಿಶ್ವವಿದ್ಯಾಲಯ ಪ್ರತ್ಯೇಕ 'ಸ್ಪೋರ್ಟ್ಸ್ ಎಜುಕೇಶನ್ ಅಂಡ್ ರಿಸರ್ಚ್' ಸ್ಕೂಲ್ ಹಾಗೂ ಡಿಸೈನ್ ಕೋರ್ಸ್‌ಗಳನ್ನು ನಡೆಸುತ್ತಿದೆ.

lಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಟೆಕ್ (ಎಐ ಅಂಡ್ ಎಂಎಲ್), ಬಿಸಿನೆಸ್ ಅನಲಿಟಿಕ್ಸ್ ಮತ್ತು ಡಿಜಿಟಲ್ ಮೀಡಿಯಾ ಅನಲಿಟಿಕ್ಸ್ ಕೋರ್ಸ್‌ಗಳಿವೆ.

lಚಾಣಕ್ಯ ವಿಶ್ವವಿದ್ಯಾಲಯ ಬಿಟೆಕ್ ಎಐ, ಡೇಟಾ ಸೈನ್ಸ್ ಮತ್ತು ರೊಬೋಟಿಕ್ಸ್ ಪದವಿಗಳನ್ನು ನೀಡುತ್ತಿದೆ. ಸಿಎಂಆರ್ ವಿಶ್ವವಿದ್ಯಾಲಯ ಬಿಸಿಎ (ಗೇಮ್ ಡೆವಲಪ್‌ಮೆಂಟ್) ಕೋರ್ಸ್ ನಡೆಸುತ್ತಿದೆ.

lಎಸ್‌.ವ್ಯಾಸ ವಿಶ್ವವಿದ್ಯಾಲಯ ಬಿಸಿಎ (ಸೈಬರ್ ಸೆಕ್ಯುರಿಟಿ ಅಂಡ್ ಎಥಿಕಲ್ ಹ್ಯಾಕಿಂಗ್, ಡಿಜಿಟಲ್ ಫೋರೆನ್ಸಿಕ್ಸ್) ಕೋರ್ಸ್ ನೀಡುತ್ತಿದೆ.

lರಾಷ್ಟ್ರಮಟ್ಟದಲ್ಲಿ ಫ್ಲೇಮ್ ವಿಶ್ವವಿದ್ಯಾಲಯ ಡಿಸೈನ್, ಥಿಯೇಟರ್, ನೃತ್ಯ, ಸಂಗೀತ ಕೋರ್ಸ್‌ಗಳಿಗೆ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಸಸ್ಟೇನಬಲ್ ಡೆವಲಪ್‌ಮೆಂಟ್ ಕೋರ್ಸ್‌ಗಳಿಗೆ, ಮತ್ತು ಅಶೋಕ ವಿಶ್ವವಿದ್ಯಾಲಯ ಬಹುಶಿಸ್ತೀಯ ಲಿಬರಲ್ ಆರ್ಟ್ಸ್ ಮಾದರಿಗೆ ಹೆಸರುವಾಸಿ.

lಬೆಂಗಳೂರಿನ ಹಲವು ಕಾಲೇಜುಗಳಲ್ಲಿ ಬಿ.ಎಸ್ಸಿ ವಿಎಫ್‌ಎಕ್ಸ್ ಮತ್ತು ಬಿಎ/ಬಿಎಸ್ಸಿ ಸೈಕಾಲಜಿ ಕೋರ್ಸ್‌ಗಳೂ ಈಗ ಜನಪ್ರಿಯ. ಇನ್ನೂ ಅನೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಈ ಹೊಸ ಅಲೆಯ ಕೋರ್ಸ್‌ಗಳನ್ನು ತಮ್ಮ ಪಠ್ಯದಲ್ಲಿ ಸೇರಿಸುತ್ತಿವೆ. ಮುಂದಿನ ದಶಕದ ಉದ್ಯೋಗ ಜಗತ್ತು ಒಂದೇ ವಿಷಯದ ಪರಿಣತಿಗಿಂತ, ತಂತ್ರಜ್ಞಾನ ಮತ್ತು ಸೃಜನಶೀಲತೆಯನ್ನು ಬೆಸೆಯುವ ಬಹುಶಿಸ್ತೀಯ ಕೌಶಲಗಳನ್ನೇ ಹೆಚ್ಚು ಬಯಸಲಿದೆ. ಈ ಹೊಸ ಅಲೆಯ ಕೋರ್ಸ್‌ಗಳನ್ನು ವಿವೇಚನೆಯಿಂದ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಸುಭದ್ರವಾಗಿರುತ್ತದೆ.

260928-51-878513426

Dailyhunt
Disclaimer: This content has not been generated, created or edited by Dailyhunt. Publisher: Prajavani