ನವದೆಹಲಿ: 'ಶಿಕ್ಷಣವು ಎಲ್ಲ ಅಂಶಗಳನ್ನು ಒಳಗೊಂಡಿರಬೇಕು ಮತ್ತು ಸುಲಭವಾಗಿ ಕೈಗೆಟುಕುವಂತಾಗಬೇಕು' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಗುರುವಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, 'ಎನ್‌ಇಪಿ-2020 ಒಂದು ವರ್ಷ ಪೂರೈಸಿದೆ. ಭಾರತವನ್ನು ಜ್ಞಾನದ ಆರ್ಥಿಕತೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕಾಗಿದೆ. 21ನೇ ಶತಮಾನದ ಆತ್ಮನಿರ್ಭರ್ ಭಾರತದ ಆಶೋತ್ತರಗಳನ್ನು ಈಡೇರಿಸಲು ನಾವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು' ಎಂದು ಹೇಳಿದ್ದಾರೆ.
'ಒಂದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಹೊಂದಿರುವ ಶಿಕ್ಷಣ ನೀತಿ (ಎನ್‌ಇಪಿ 2020) ಜಾರಿಗೊಳಿಸಲು ಚಾಲನೆ ನೀಡಿದ್ದರು.
1986ರಲ್ಲಿ ರೂಪಿಸಲಾಗಿದ್ದ ಶಿಕ್ಷಣ ನೀತಿಯ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಜಾರಿಗೊಳಿಸಲಾಗಿತ್ತು. ಶಾಲೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆ ಮತ್ತು ಸುಧಾರಣೆಗಳನ್ನು ತರುವ ಮೂಲಕ ಭಾರತವನ್ನು ಜಾಗತಿಕ ಜ್ಞಾನದ ಸೂಪರ್‌ಪವರ್ ಮಾಡುವ ಆಶಯವನ್ನು ನೀತಿಯು ಹೊಂದಿದೆ.

