ಹಾಸನ: ಶಿಕ್ಷಣವು ವ್ಯಕ್ತಿಯ ಜೀವನದ ಯಶಸ್ಸಿಗೆ ಭದ್ರ ಅಡಿಪಾಯವಾಗಿದ್ದು, ಜ್ಞಾನಾರ್ಜನೆಗೆ ಆಸಕ್ತಿ ಮತ್ತು ಛಲ ಇದ್ದರೆ ಉನ್ನತ ಸಾಧನೆ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಹಾಸನ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 8ನೇ ವರ್ಷದ ಸದಸ್ಯರ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರ ಜವಾಬ್ದಾರಿ ಕೇವಲ ಕಚೇರಿ ವೇಳೆಗೆ ಸೀಮಿತವಾಗಿರುವುದಿಲ್ಲ. ಸಾರ್ವಜನಿಕರ ಸೇವೆಯೇ ಅವರ ಪ್ರಮುಖ ಧ್ಯೇಯವಾಗಿರಲಿ. ಜನಹಿತಕ್ಕಾಗಿ ಸದಾ ಕಾರ್ಯನಿರ್ವಹಿಸುವ ಹೊಣೆಗಾರಿಕೆ ಅವರ ಮೇಲಿದೆ. ಇಂತಹ ಸಂದರ್ಭದಲ್ಲೂ ರಜಾದಿನದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸಂತಸದ ಸಂಗತಿ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಸಮಾಜದಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸಬಹುದು. ಪ್ರತಿಭಾ ಪುರಸ್ಕಾರ ಇತರ ಮಕ್ಕಳಿಗೂ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಕ್ಷರತಾ ಪರೀಕ್ಷೆಗಳ ಕುರಿತು ಉಲ್ಲೇಖಿಸಿದ ಅವರು, 'ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದ ವಯಸ್ಕರಿಗೆ ಮತ್ತೊಮ್ಮೆ ಕಲಿಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿಯೇ 300ಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆಯುತ್ತಿರುವುದು ಶಿಕ್ಷಣದ ಮಹತ್ವವನ್ನು ತೋರಿಸುತ್ತದೆ' ಎಂದರು.
ಪುಸ್ತಕಗಳೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ. ನಿರಂತರ ಅಧ್ಯಯನ ಮತ್ತು ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರನ್ನೂ ಸನ್ಮಾನಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಸಂಘದ ಕಳೆದ ಸಾಲಿನ ಕಾರ್ಯಚಟುವಟಿಕೆಗಳು,ಅಭಿವೃದ್ಧಿ ಯೋಜನೆಗಳು ಹಾಗೂ ಸದಸ್ಯರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀನಾರಾಯಣ್ ನಿರೂಪಿಸಿದರು.
ಡಾ. ರಾಹುಲ್ ದೇವರಾಜು, ಮಂಜುನಾಥ್ ಕಾಳಿಂಗಪ್ಪ, ಎ.ಎಂ. ಶಶಿಮೋಹನ್, ಎಸ್. ಮಧು, ಎಂ.ಎನ್. ಪರಮೇಶ್, ಜಿ.ಪಿ. ವಿಶ್ವನಾಥ್, ಬಿ.ಆರ್. ಧರ್ಮಾ, ಕೆ.ಜೆ. ಸಾವಿತ್ರಮ್ಮ, ಎನ್.ಎಸ್. ಲೋಕೇಶ್ ಕುಮಾರ್, ಸತೀಶ್ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-36-394713587

