ಶಿರಸಿ: 'ಶಿಕ್ಷಕರನ್ನು ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವುದನ್ನು ತಡೆಯಲು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆ ರೂಪಿಸಲು ಮಸೂದೆ ಮಂಡಿಸಲಾಗುವುದು' ಎಂದು ಶಾಲಾ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
'ರಾಜ್ಯದಲ್ಲಿ 17 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದಿನ 2ರಿಂದ 3 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ರಾಜ್ಯದಲ್ಲಿ 6 ಸಾವಿರ ಹೊಸ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಶಾಲೆಗಳನ್ನು ಆರಂಭಿಸುವ ಚಿಂತನೆ ಇದ್ದು, ನವೆಂಬರ್ ಅಂತ್ಯದೊಳಗೆ ಪ್ರತಿ ಕ್ಷೇತ್ರದಲ್ಲಿ ಕೆಪಿಎಸ್‌ಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು' ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
'ಕಡಿಮೆ ದಾಖಲಾತಿ ಇರುವ ಶಾಲೆಗಳ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಗಳಿಗೆ ವರ್ಗಾಯಿಸಿ, ಮುಂದಿನ ಜೂನ್‌ನಿಂದ ಅವರಿಗೆ ಉಚಿತ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಶಾಲೆಗಳಿಗೆ ಕಂಪ್ಯೂಟರ್, ಸಂಗೀತ, ದ್ವಿಭಾಷಾ ಶಿಕ್ಷಕರು, ಲ್ಯಾಬ್ ಹಾಗೂ ಫಿಟ್ನೆಸ್ ಲ್ಯಾಬ್ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು' ಎಂದರು.
'ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಒಟ್ಟು 45 ಲಕ್ಷ ಶೂಗಳನ್ನು ವಿತರಿಸಲಾಗುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಿದ್ದು, ಪ್ರಸ್ತುತ ಎಲ್ಲ ಶಾಲೆಗಳಿಗೂ ಶೂಗಳು ತಲುಪಿವೆ. ಶೂಗಳ ಗುಣಮಟ್ಟದಲ್ಲಿ ದೋಷ ಕಂಡುಬಂದರೆ ಅದರ ಸಂಪೂರ್ಣ ಜವಾಬ್ದಾರಿ ನನ್ನದೇ ಆಗಿರುತ್ತದೆ' ಎಂದರು.
'ಕೆಲ ವಿದ್ಯಾರ್ಥಿಗಳಿಗೆ ಸೈಜ್‌ನಲ್ಲಿ ವ್ಯತ್ಯಾಸವಾಗಿದ್ದು, ಅದನ್ನು ಬಗೆಹರಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೆ, ಈವರೆಗೆ ಶೂ ತಯಾರಿಕಾ ಕಂಪನಿಗೆ ಯಾವುದೇ ಹಣ ಪಾವತಿಸಿಲ್ಲ' ಎಂದರು.

