ಬೇಲೂರು (ಹಾಸನ): 'ಕೆಪಿ ಕಾಲರ್' ಎಂದು ಗುರುತಿಸುತ್ತಿದ್ದ 20 ವರ್ಷದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಗುರುವಾರ ತಾಲ್ಲೂಕಿನ ಶಿರಗೂರ ಗ್ರಾಮದ ಕಾಫಿ ತೋಟದಲ್ಲಿ ಸೆರೆಹಿಡಿದಿದೆ.
ಕಾರ್ಯಾಚರಣೆ ಪರಿಶೀಲಿಸಲು ಬಂದಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಇದ್ದ ಸ್ಥಳದಲ್ಲಿಯೇ ರಸ್ತೆ ದಾಟಿದ ಕಾಡಾನೆ ಬಳಿಕ ಕಾಫಿ ತೋಟದೊಳಗೆ ನುಗ್ಗಿ, ಮತ್ತಿಹಳ್ಳಿ ಕಡೆಯಿಂದ ನಾಗೇನಹಳ್ಳಿ ಕಡೆಗೆ ಪರಾರಿಯಾಯಿತು.
ರಸ್ತೆ ದಾಟುವ ವೇಳೆ ಪಿಎಸ್‌ಐ ಶೋಭಾ ಜೀಪನ್ನು ಕಾಡಾನೆ ಬೆನ್ನಟ್ಟಿತು. ಕೂದಲೆಳೆ ಅಂತರದಲ್ಲಿ ಪಿಎಸ್‌ಐ ಪಾರಾದರು.
ಅರಿವಳಿಕೆ ಮದ್ದು ನೀಡಿ ಸೆರೆಹಿಡಿಯಲು ಸತತ ಎರಡು ತಾಸು ಪ್ರಯತ್ನಿಸಿದರೂ ಕಾರ್ಯಾಚರಣೆ ತಂಡದ ಕಣ್ಣು ತಪ್ಪಿಸಿ ಒಂಟಿ ಸಲಗ ಸುಮಾರು 20 ಕಿ.ಮೀ ಓಡಾಡಿತ್ತು.
ಬೆಳಗ್ಗೆ 7 ರಿಂದ ಇಟಿಎಫ್ ಸಿಬ್ಬಂದಿ ಕಾಡಾನೆಯ ಹುಡುಕಾಟ ಪ್ರಾರಂಭಿಸಿದರು. ಬೆಳಗ್ಗೆ 10ರ ಸುಮಾರಿಗೆ ಹಂಜಿಹಳ್ಳಿ, ಮತ್ತಿಹಳ್ಳಿ ಸಮೀಪ ಕಾಫಿ ತೋಟದಲ್ಲಿ ಕಾಡಾನೆ ಇರುವುದನ್ನು ಗುರುತಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಡ್ರೋನ್ ಮೂಲಕ ಅದರ ಚಲನವಲನದ ಮೇಲೆ ನಿಗಾ ಇರಿಸಿದ್ದರು.
ಕೊನೆಗೆ ಶಿರಗುರ ಗ್ರಾಮದಲ್ಲಿ ಡಾ. ವಸಿಮ್, ಡಾ.ಆದರ್ಶ, ಡಾ.ವಿನಾಯಕ ವೈದ್ಯರ ತಂಡ ಆನೆಗೆ ಅರಿವಳಿಕೆ ಮದ್ದು ನೀಡಿತು. ನಂತರ ಕಾಡಾನೆ ನೆಲಕ್ಕೆ ಉರುಳಿತು.
ನಂತರ ರಿವರ್ಸ್ ಚುಚ್ಚುಮದ್ದು ನೀಡಿ ಕಾಡಾನೆಯನ್ನು ಕುಮ್ಕಿ ಆನೆಗಳ ಸಹಾಯದಿಂದ ಎಳೆದು ತರಲು ಪ್ರಯತ್ನಿಸುತ್ತಿದ್ದು, ರಾತ್ರಿ ಎಂಟು ಗಂಟೆ ಆದರೂ ಎಳೆದು ತರಲು ಆಗಿರಲಿಲ್ಲ. ರಾತ್ರಿಯೂ ಕಾರ್ಯಾಚರಣೆ ಮುಂದುವರಿದಿತ್ತು.
ಸೆರೆ ಹಿಡಿದಿರುವ ಕಾಡಾನೆಯನ್ನು ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಕಾರ್ಯಾಚರಣೆಗೆ ಮಹೇಂದ್ರ, ಅಜ್ಜಯ್ಯ, ಪ್ರಶಾಂತ್, ಧನಂಜಯ, ಏಕಲವ್ಯ, ಈಶ್ವರ ಹಾಗೂ ಲಕ್ಷ್ಮಣ ಎಂಬ ಏಳು ಸಾಕಾನೆಗಳನ್ನು ಬಳಸಿಕೊಳ್ಳಲಾಯಿತು.
ಡಿಸಿಎಫ್ ಸೌರಬ್ ಕುಮಾರ್ ಹಾಗೂ ಸಿಸಿಎಫ್ ಏಡುಕೊಂಡಲು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ, ಎಸಿಎಪ್ ಮೋಹನ್, ಆರ್ ಎಪ್ ಒ ಬಿ.ಜಿ.ಯತೀಶ್ ದೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಸಂದರ್ಭ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-36-1198612890

