ಶಿರಸಿ: ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ 15ನೇ ಹಣಕಾಸು ಆಯೋಗದ ಅನುದಾನ ಸ್ಥಗಿತಗೊಂಡು 15 ತಿಂಗಳು ಕಳೆದಿವೆ. ಜೊತೆಗೆ, 16ನೇ ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಕಳೆದರೂ ಇನ್ನೂ ಪಂಚಾಯಿತಿಗಳಿಗೆ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿಲ್ಲ.
ಇದರಿಂದ ತುರ್ತು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗದೆ ಪಂಚಾಯಿತಿ ಆಡಳಿತ ವ್ಯವಸ್ಥೆ ಪೇಚಿಗೆ ಸಿಲುಕಿದೆ.
ಗ್ರಾಮೀಣ ಭಾಗದ ಸಮಗ್ರ ಪ್ರಗತಿಗೆ ಮೂಲಾಧಾರವಾಗಿರುವ ಕೇಂದ್ರ ಸರ್ಕಾರದ ಹಣಕಾಸು ಆಯೋಗದ ಅನುದಾನವೇ ಸುದೀರ್ಘ ಕಾಲದಿಂದ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ತಾಲ್ಲೂಕಿನಲ್ಲಿ ಒಟ್ಟು 32 ಗ್ರಾಮ ಪಂಚಾಯಿತಿಗಳಿದ್ದು, ಕಳೆದ ಒಂದು ವರ್ಷದಿಂದ ಇವುಗಳಿಗೆ ಯಾವುದೇ ರೀತಿಯ ಹೊಸ ಅಭಿವೃದ್ಧಿ ಅನುದಾನ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಬಿಡುಗಡೆಯಾಗುವ ಒಟ್ಟು ಮೊತ್ತದಲ್ಲಿ ಶೇ 30ರಷ್ಟು ಕುಡಿಯುವ ನೀರಿನ ವ್ಯವಸ್ಥೆಗೆ ಹಾಗೂ ಶೇ 30ರಷ್ಟು ಸ್ವಚ್ಛತೆ ಮತ್ತು ನೈರ್ಮಲ್ಯ ಕಾಮಗಾರಿಗಳಿಗೆ ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಉಳಿದ ಶೇ 40ರಷ್ಟು ಮೊತ್ತವನ್ನು ಗ್ರಾಮಗಳ ಆಂತರಿಕ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಸಾರ್ವಜನಿಕ ಶೌಚಾಲಯಗಳ ಪೈಪ್‌ಲೈನ್ ಅಳವಡಿಕೆ ಹಾಗೂ ಬೀದಿದೀಪಗಳ ನಿರ್ವಹಣೆ ಸೇರಿದಂತೆ ವಿವಿಧ ತುರ್ತು ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬುದು 15ನೇ ಹಣಕಾಸಿನ ನಿಯಮಾವಳಿಯಾಗಿದೆ.
'ರಾಜ್ಯದಿಂದ ಪಂಚಾಯಿತಿಗಳಿಗೆ ಸಮಯಕ್ಕೆ ಸಂಪೂರ್ಣವಾಗಿ ಹಣ ವರ್ಗಾವಣೆಯಾಗಿದ್ದರ ದಾಖಲೆಗಳಲ್ಲಿ ವ್ಯತ್ಯಾಸಗಳು ಮತ್ತು ತಡವಾದ ವರ್ಗಾವಣೆಯ ದಂಡದ ಬಡ್ಡಿಯ ಕಾರಣದಿಂದಾಗಿ 15ನೇ ಹಣಕಾಸಿನ ಅನುದಾನ ತಡೆಹಿಡಿಯಲಾಗಿದೆ ಎಂದು ಕೇಂದ್ರ ವಿವರಿಸಿ, 15 ತಿಂಗಳುಗಳಿಂದ ಅನುದಾನವನ್ನೇ ನೀಡಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ರಸ್ತೆಗಳ ದುರಸ್ತಿಯಂಥ ಅಗತ್ಯ ಸೇವೆಗಳೂ ಕೂಡ ನಿಂತ ನೀರಾಗಿವೆ' ಎಂದು ಗ್ರಾಮ ಸ್ವರಾಜ ಕರ್ನಾಟಕದ ಪದಾಧಿಕಾರಿ ನವೀನ ಶೆಟ್ಟಿ ದೂರಿದರು.
'ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಸರಾಸರಿ ₹25-₹30 ಲಕ್ಷದಷ್ಟು ಅನುದಾನ ಬರಬೇಕಿತ್ತು. ಆದರೆ ಈ ಪ್ರಮುಖ ಆರ್ಥಿಕ ಮೂಲವೇ ಸ್ಥಗಿತ ಆಗಿರುವುದರಿಂದ, ಗ್ರಾಮಗಳ ಅಭಿವೃದ್ಧಿ ಪ್ರಕ್ರಿಯೆ ಶೂನ್ಯ ಹಂತ ತಲುಪಿದೆ. ಸಣ್ಣಪುಟ್ಟ ಅಭಿವೃದ್ಧಿ ಕೆಲಸಗಳಿಗೂ ಹಣವಿಲ್ಲದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂಬುದು ಹೆಸರು ಹೇಳಲಿಚ್ಛಿಸದ ಪಿಡಿಒ ಒಬ್ಬರ ಮಾತು. 'ಬಾಕಿ ಇರುವ ಮೊತ್ತದ ಅನುದಾನವನ್ನು ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ತನ್ನ ನಿಲುವು ಪ್ರದರ್ಶಿಸಬೇಕು. ಆ ಮೂಲಕ ಅನುದಾನ ಬಿಡುಗಡೆಗೊಳಿಸಿದರೆ ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಕ್ಕೆ ಜೀವ ತುಂಬಲು ಸಾಧ್ಯ' ಎನ್ನುತ್ತಾರೆ ಅವರು.
'16ನೇ ಹಣಕಾಸು ಆಯೋಗದ ಅನುದಾನವೂ ಬಂದಿಲ್ಲ'
ಸಾಮಾನ್ಯವಾಗಿ ಹಳೆಯ ಆಯೋಗದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಹೊಸ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ತಕ್ಷಣವೇ ಅನುದಾನದ ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಆದರೆ, 16ನೇ ಹಣಕಾಸು ವರ್ಷ ಅಧಿಕೃತವಾಗಿ ಆರಂಭವಾಗಿ ಈಗಾಗಲೇ 3 ತಿಂಗಳು ಕಳೆದಿದೆ. ಆದರೂ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ನೂತನ ಆಯೋಗದ ಅಡಿಯಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ಇದರಿಂದ ಹಳ್ಳಿಗಳ ಪಾಲಿಗೆ ಹೊಸ ಆಶಾವಾದ ಮೂಡಿಸಬೇಕಿದ್ದ 16ನೇ ಹಣಕಾಸು ಯೋಜನೆಯು ಕೇವಲ ಕಾಗದದ ಮೇಲಷ್ಟೇ ಉಳಿದುಕೊಂಡಿದೆ' ಎಂಬುದು ಬಹುತೇಕ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಅಭಿಪ್ರಾಯವಾಗಿದೆ.
-ನವೀನ ಶೆಟ್ಟಿ, ಗ್ರಾಮ ಸ್ವರಾಜ ಕರ್ನಾಟಕದ ಪದಾಧಿಕಾರಿಕೇಂದ್ರ ಸರ್ಕಾರದ ತಾಂತ್ರಿಕ ಮತ್ತು ಆಡಳಿತಾತ್ಮಕ ಬಿಕ್ಕಟ್ಟಿನ ನೇರ ಪರಿಣಾಮವಾಗಿ ಹಳ್ಳಿಗಳ ಪ್ರಗತಿ ಕುಂಠಿತಗೊಂಡಿದ್ದು, ನಿತ್ಯದ ಸಾರ್ವಜನಿಕ ಕಾಮಗಾರಿಗಳು ಸಂಪೂರ್ಣವಾಗಿ ನಿಂತಂತಾಗಿವೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-20-1550805125

