ಶಿವಮೊಗ್ಗ: 'ತಿಂಗಳಾಯ್ತು ನಾವು ಮಳೆಯ ಮುಖ ಕಂಡು. ಹೊಲದಲ್ಲಿ ಒಣಗಿ ನಿಂತ ಮೆಕ್ಕೆಜೋಳದ ಬೆಳೆ ನೋಡಿದರೆ ರೈತರಾಗಿ ಹುಟ್ಟಬಾರದು ಅನಿಸುತ್ತಿದೆ. ಬೇಸರವಾಗಿ ಅತ್ತ ತಲೆಹಾಕುವುದೇ ಬಿಟ್ಟಿದ್ದೇನೆ...' ಹೀಗೆಂದು ನೊಂದುಕೊಂಡವರು ಕುಂಸಿಯ ರಾಗೇರ ಕೇರಿಯ ರೈತ ಓಂಕಾರಪ್ಪ.
ಮಳೆರಾಯನ ಮುನಿಸಿನಿಂದ ಶಿವಮೊಗ್ಗ ತಾಲ್ಲೂಕು ಸೇರಿ ಜಿಲ್ಲೆಯ ಬಯಲು ಪ್ರದೇಶ, ಅರೆ ಮಲೆನಾಡಿನಲ್ಲಿ ಬರದ ಛಾಯೆ ಆವರಿಸುತ್ತಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಕಟಾವಿಗೆ ಬರಬೇಕಿದ್ದ ಮುಂಗಾರು ಹಂಗಾಮಿನ ಬೆಳೆ ಒಣಗುತ್ತಿದೆ. ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತ ಓಂಕಾರಪ್ಪ ಅವರ ರೀತಿಯೇ ಉಳಿದವರು ಆಕಾಶ ನೋಡುತ್ತಾ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಪ್ರಮುಖವಾಗಿ ಮೆಕ್ಕೆಜೋಳ, ರಾಗಿ, ಶುಂಠಿ, ಭತ್ತದ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಮಲೆನಾಡು ಭಾಗ ಸೇರಿ ಜಿಲ್ಲೆಯ ಬಹುತೇಕ ರೈತರು ಜೂನ್‌ನಿಂದ-ಅಕ್ಟೋಬರ್‌ವರೆಗೆ ಸುರಿಯುವ ಸಮೃದ್ಧ ಮಳೆಯನ್ನು ನಂಬಿ ಬಿತ್ತನೆ ಮಾಡುತ್ತಾರೆ. ಮುಖ್ಯವಾಗಿ ಮೆಕ್ಕೆಜೋಳ ಹಾಗೂ ಭತ್ತ ಈ ಹೊತ್ತಿನ ಆಹಾರದ ಬೆಳೆಗಳಾಗಿವೆ. ಆದರೆ, ಈ ಬಾರಿ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲೇ ಮಳೆ ಕೈ ಕೊಟ್ಟಿದೆ.
ಮೆಕ್ಕೆಜೋಳ ತೆನೆ ಕಟ್ಟಲಿಲ್ಲ: 'ಶಿವಮೊಗ್ಗ ಜಿಲ್ಲೆ ಮೆಕ್ಕೆಜೋಳದ ಕಣಜವೂ ಹೌದು. ಆದರೆ ಈ ಬಾರಿ ಗಿಡ ಬೆಳೆದು ನಿಂತಿದ್ದರೂ ನೀರಿನ ಕೊರತೆಯಿಂದ ತೆನೆ ಕಟ್ಟಿಲ್ಲ. ನಿಧಾನವಾಗಿ ಬುಡದಿಂದ ಒಣಗುತ್ತಿವೆ. ಹೀಗಾಗಿ ರೈತರು ಮೆಕ್ಕೆಜೋಳದ ಗಿಡಗಳನ್ನು ಕಡಿದು ಪಶು ಆಹಾರದ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕುಂಸಿಯ ಕರಡಿ ಹಾಲೇಶಪ್ಪ ಅವರ ಒಂದೂವರೆ ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಒಣಗಿದೆ. ಬೇಸರದಿಂದ ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಹೀಗಾದರೆ ರೈತರು ಏನು ಮಾಡುವುದು' ಎಂದು ಓಂಕಾರಪ್ಪ ಪ್ರಶ್ನಿಸುತ್ತಾರೆ.
'ಮೆಕ್ಕೆಜೋಳ ಬೆಳೆಯಲು ಹೊಲ ಹದಗೊಳಿಸಿದ್ದು, ಬೀಜ, ಗೊಬ್ಬರ ಸೇರಿ ಎಕರೆಗೆ ₹20,000 ಖರ್ಚು ಮಾಡಿದ್ದೇವೆ. ಈಗ ಹಸಿ ಗಿಡ ಕತ್ತರಿಸಿ ಮಾರಾಟ ಮಾಡುವುದರಿಂದ ಟನ್‌ಗೆ ₹1,700 ಸಿಗುತ್ತಿದೆ' ಎನ್ನುತ್ತಾರೆ ಅವರು.
ಕುಂಸಿಯ ಶುಂಠಿ ಹಾಲಪ್ಪ ಅವರ ಮೂರು ಎಕರೆ ಹೊಲದಲ್ಲಿ ಬೆಳೆದ ರಾಗಿಯೂ ಒಣಗಿದೆ. ಅದು ಇಷ್ಟು ಹೊತ್ತಿಗೆ ಕಟಾವು ಆಗಿ ಮಾರಾಟವಾಗಬೇಕಿತ್ತು. ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹3,000 ದರ ಇದೆ. ಬೆಲೆ ಚೆನ್ನಾಗಿದ್ದರೂ ಬೆಳೆಯೇ ಇಲ್ಲ. ಈ ಬಾರಿ ಮನೆಗೆ ಊಟಕ್ಕೂ ರಾಗಿ ಇಲ್ಲದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ. ಅಲ್ಲಿಯೇ ಪಕ್ಕದ ಪಂಚೆ ಸಿದ್ದಪ್ಪ ಅವರ ಒಂದೂವರೆ ಎಕರೆಯಲ್ಲಿ ಬೆಳೆದ ಶುಂಠಿ ಒಣಗಿ ಸುಟ್ಟುಹೋದ ರೀತಿ ಕಾಣುತ್ತಿದೆ.
ಕೊಳವೆ ಬಾವಿಗೆ ಭರ್ಜರಿ ಬೇಡಿಕೆ: ಮಳೆ ನಂಬಿ ಒಣಗುತ್ತಿರುವ ಬೆಳೆ ಉಳಿಸಲು ರೈತರು ಕೊಳವೆಬಾವಿಗಳ (ಬೋರ್‌ವೆಲ್) ಮೊರೆ ಹೋಗಿದ್ದಾರೆ. ಹೀಗಾಗಿ ಕೊಳವೆಬಾವಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಬೋರ್ ಇಲ್ಲದವರು ಅಕ್ಕಪಕ್ಕದವರಿಂದ ದಿನಕ್ಕೆ ₹1,000 ಬಾಡಿಗೆ ಕೊಟ್ಟು ನೀರು ಪಡೆಯುತ್ತಿದ್ದಾರೆ.
ನೀರು ಸಾಲದೇ ಓಂಕಾರಪ್ಪ ತಮ್ಮ ಮತ್ತೊಂದು ಎಕರೆ ಜಮೀನನ್ನು ಬೀಳು ಬಿಟ್ಟಿದ್ದಾರೆ. ಒಂದೂವರೆ ಎಕರೆಯಲ್ಲಿ ನಾಟಿ ಮಾಡಲು ₹18,000 ಖರ್ಚು ಮಾಡಿ ಭತ್ತದ ಸಸಿಯ ಹಗೆ ಮಾಡಿದ್ದ ಕುಂಸಿಯ ರವಿ ನೀರು ಸಿಗದೇ ಗದ್ದೆ ಬೀಳು ಬಿಟ್ಟಿದ್ದಾರೆ. ಪಕ್ಕದ ಯೋಗೇಶಪ್ಪ ಅವರ ಜಮೀನಿನಲ್ಲಿ ಭತ್ತ ಹಸಿರಾಗಿದ್ದರೂ ಅದಕ್ಕೆ ಇನ್ನೂ ಎರಡು ತಿಂಗಳು ನೀರು ಬೇಕಿದೆ. ಮುಂದೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ. 'ಹೀಗಾದರೆ ರೈತರು ಮುಂದೆ ಬರುತ್ತಾರೆಯೇ? ಊರಿನ ಸಣ್ಣ ಪುಟ್ಟ ರೈತರು ಸಾಲಕ್ಕೆ ಹೊಲ ಮಾರಿ ಪ್ಯಾಟೆ ಸೇರಿಕೊಳ್ಳುವುದೇ ಆಗಿದೆ' ಎಂದು ರವಿ ಬೇಸರ ಹೊರಹಾಕುತ್ತಾರೆ.
'ಕುಂಸಿ ಮಾತ್ರವಲ್ಲ ಸುತ್ತಲಿನ ಹಾರನಹಳ್ಳಿ, ಮರಸ, ಬಾಳೆಕೊಪ್ಪ, ಹುಗ್ಗನಹಳ್ಳಿ, ಮಳ್ಳೂರು, ಆಯನೂರು, ಚಾಮೇನಹಳ್ಳಿ, ಹಿಟ್ಟಿನಕೊಪ್ಪ, ತ್ಯಾವರೆಕೊಪ್ಪ, ಕೋಟೆ ಗಂಗೂರು ಭಾಗದಲ್ಲೂ ಬೆಳೆಗಳು ಒಣಗಿ ನೆಲಕಚ್ಚುತ್ತಿವೆ. ಈಗ ಆಹಾರದ ಬೆಳೆಗಳ ಪರಿಸ್ಥಿತಿ ಹದಗೆಟ್ಟಿದೆ. ಬಿಸಿಲು ತೀವ್ರಗೊಂಡರೆ ಮುಂದೆ ಅಡಿಕೆ ತೋಟಗಳನ್ನೂ ಉಳಿಸಿಕೊಳ್ಳುವುದು ಕಷ್ಟವಾಗಲಿದೆ' ಎನ್ನುತ್ತಾರೆ ಆಯನೂರಿನ ರೈತ ವೀರಣ್ಣ.
ಜಿಲ್ಲೆಯಲ್ಲಿ ಶೇ 84ರಷ್ಟು ಮಳೆ ಕೊರತೆ
ಶಿವಮೊಗ್ಗ ಜಿಲ್ಲೆಯಲ್ಲಿ ಸೆ. 1ರಿಂದ 25ರವರೆಗೆ ವಾಡಿಕೆಯಂತೆ ಸರಾಸರಿ 16.41 ಸೆಂ.ಮೀ ಮಳೆ ಸುರಿಯಬೇಕಿತ್ತು. ಆದರೆ, ಈ ವರ್ಷ ಕೇವಲ 4.48 ಸೆಂ.ಮೀ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಶೇ 84ರಷ್ಟು ಕಡಿಮೆ ಮಳೆ ಸುರಿದಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್.
ಇದು ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತಿದೆ. ಈ ಅವಧಿಯಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆ ಆಗಿದೆ.
ಬರ ಘೋಷಣೆ; ಜಂಟಿ ಸಮೀಕ್ಷೆಗೆ ಆದೇಶ
ಶಿವಮೊಗ್ಗ, ಸೊರಬ, ಭದ್ರಾವತಿ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಸೇರಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಭತ್ತ, ಮೆಕ್ಕೆಜೋಳ, ರಾಗಿ ಬೆಳೆ ಹಾನಿಗೀಡಾಗಿದೆ. ಈ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಘೋಷಣೆಗೆ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ವಾಸ್ತವ ಸಮೀಕ್ಷೆ ಕೈಗೊಳ್ಳಬೇಕೆಂದು ಸೆ. 13ರಂದು ಸರ್ಕಾರ ಆದೇಶ ಮಾಡಿದೆ.
'ಈಗಾಗಲೇ ಸಮೀಕ್ಷೆ ಆರಂಭವಾಗಿದ್ದು, ಸೆ. 28ಕ್ಕೆ ಪೂರ್ಣಗೊಳ್ಳಲಿದೆ. ಶೇ 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್ ಹೇಳುತ್ತಾರೆ.
ಓಂಕಾರಪ್ಪ, ರೈತ, ಕುಂಸಿಮಳೆ ಇಲ್ಲದೇ ಬರಗಾಲ ಬಂದು ರೈತರು ಕಷ್ಟದಲ್ಲಿದ್ದೇವೆ. ನಮ್ಮನ್ನು ಕೇಳಲು ಯಾರೂ ಬಂದಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ಅವಧಿ ಮುಗಿದಿದೆ. ಹೀಗಾಗಿ ಇಲ್ಲಿ ಕೇಳುವವರೇ ದಿಕ್ಕಿಲ್ಲ.ಡಾ.ಕಿರಣ್‌ಕುಮಾರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಶಿವಮೊಗ್ಗತೆನೆ ಕಟ್ಟಿಲ್ಲ ಎಂಬ ಕಾರಣಕ್ಕೆ ರೈತರು ಮೆಕ್ಕೆಜೋಳದ ಗಿಡಗಳನ್ನು ಕತ್ತರಿಸಿ ಪಶು ಆಹಾರ ಸಂಸ್ಥೆಗಳಿಗೆ ಕೊಡುವ ಮೊದಲು ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು.



260928-42-937147421

