ಶಿವಮೊಗ್ಗ: ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರ ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ಅದಾನಿ ಸಮೂಹ, ಜಿಎಂಆರ್ ಗ್ರೂಪ್ ಸೇರಿದಂತೆ ದೇಶದ ಐದು ಪ್ರಮುಖ ಕಂಪನಿಗಳು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ತೋರಿವೆ.
ಇಲ್ಲಿಯವರೆಗೂ ಸೋಗಾನೆ ವಿಮಾನ ನಿಲ್ದಾಣದವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC) ನಿರ್ವಹಣೆ ಮಾಡುತ್ತಿತ್ತು.
ರಾಜ್ಯ ಸರ್ಕಾರದ ಅಧೀನದ ಏಕೈಕ ವಿಮಾನ ನಿಲ್ದಾಣ ಎಂಬ ಶ್ರೇಯಕ್ಕೂ ಪಾತ್ರವಾಗಿತ್ತು.
ವಿಮಾನ ನಿಲ್ದಾಣವನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ವಹಣೆ ಮಾಡುವುದು. ನಿರ್ವಹಣೆಯ ವೆಚ್ಚವನ್ನು ಸರ್ಕಾರದಿಂದ ಭರಿಸುವುದು, ಇಲ್ಲವೇ ಪೂರ್ಣ ಪ್ರಮಾಣದಲ್ಲಿ ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧೀನಕ್ಕೆ ವಹಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಅದರ ಮೊದಲ ಹೆಜ್ಜೆಯಾಗಿ ಕೆಎಸ್‌ಐಐಡಿಸಿಯು ಆಸಕ್ತಿ ವ್ಯಕ್ತಪಡಿಸುವಿಕೆಗೆ ಜುಲೈ 29ರವರೆಗೆ ಅವಕಾಶ ಕಲ್ಪಿಸಿತ್ತು.
ಅದಾನಿ ಸಮೂಹ, ಜಿಎಂಆರ್ ಗ್ರೂಪ್, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್), ಸ್ಕೈ ಏವಿಯೇಶನ್ ಅಂಡ್ ಏರ್‌ಫೋರ್ಸ್ ಹಾಗೂ ಪಶ್ಚಿಮ ಬಂಗಾಳದ ಬೆಂಗಾಲ್ ಏರ್‌ಟ್ರೋಪ್ ಪೊಲೀಸ್ ಸಂಸ್ಥೆಗಳು ವಿಮಾನ ನಿಲ್ದಾಣದ ನಿರ್ವಹಣೆಗೆ ಆಸಕ್ತಿ ವಹಿಸಿ ಅರ್ಜಿ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ- ಭದ್ರಾವತಿ ನಗರಗಳ ಮಧ್ಯೆ ಸೋಗಾನೆ ಬಳಿ ರಾಜ್ಯ ಸರ್ಕಾರ 778.62 ಎಕರೆ ಪ್ರದೇಶದಲ್ಲಿ ₹ 449.22 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದೆ. 2023ರ ಫೆ. 27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು. ಅದೇ ವರ್ಷ ಆಗಸ್ಟ್ 11ರಂದು ವಿಮಾನ ಹಾರಾಟ ಆರಂಭವಾಗಿತ್ತು. ಸದ್ಯ ವಿಮಾನ ನಿಲ್ದಾಣಕ್ಕೆ ₹ 6 ಕೋಟಿ ವೆಚ್ಚದಲ್ಲಿ ನೈಟ್‌ಲ್ಯಾಂಡಿಂಗ್ ವ್ಯವಸ್ಥೆ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಡಿಸೆಂಬರ್ ಕೊನೆಯ ವೇಳೆಗೆ ಅದು ಪೂರ್ಣಗೊಳ್ಳಲಿದೆ.
ಅಕ್ಟೋಬರ್ 15ರಿಂದ ಬೆಂಗಳೂರಿಗೆ ಮತ್ತೆ ವಿಮಾನ
ಶಿವಮೊಗ್ಗ- ಬೆಂಗಳೂರು ನಡುವೆ ಅಕ್ಟೋಬರ್ 15ರಿಂದ ವಿಮಾನ ಹಾರಾಟ ಆರಂಭಿಸಲು ಸ್ಟಾರ್ ಏರ್ ಸಂಸ್ಥೆ ಮುಂದಾಗಿದೆ.
ಈ ಹಿಂದೆ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಇಂಡಿಗೋ ಸಂಸ್ಥೆ ಪೈಲಟ್ ಹಾಗೂ ವಿಮಾನಗಳ ಕೊರತೆಯ ಕಾರಣಕ್ಕೆ ಮೇ 1ರಿಂದ ವಿಮಾನ ಸೇವೆ ಸ್ಥಗಿತಗೊಳಿಸಿತ್ತು. ಹೆಚ್ಚು ಬೇಡಿಕೆಯ ಮಾರ್ಗದಲ್ಲಿ ವಿಮಾನ ಸಂಚಾರ ರದ್ದು ಆಗಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗಿದ್ದರು.
ಹೀಗಾಗಿ ವಿಮಾನ ಸಂಚಾರವನ್ನು ಪುನರಾರಂಭಿಸಲು ಕೆಎಸ್‌ಐಐಡಿಸಿ ಸತತ ಪ್ರಯತ್ನ ನಡೆಸಿತ್ತು. ಬೇರೆ ಬೇರೆ ವಿಮಾನ ಸಂಸ್ಥೆಗಳ ನಡುವೆ ಮಾತುಕತೆ ನಡೆಸಿತ್ತು. ಇದಕ್ಕೆ ಸ್ಟಾರ್ ಏರ್ ಸಂಸ್ಥೆ ಸ್ಪಂದಿಸಿದೆ ಎಂದು ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಚೆನ್ನೈ, ಹೈದರಾಬಾದ್‌ಗೆ ಮತ್ತೆ ಹಾರಾಟ:
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಚನ್ನೈ ಹಾಗೂ ಹೈದರಾಬಾದ್‌ಗೆ ನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದ ಸ್ಪೈಸ್ ಜೆಟ್ ಸಂಸ್ಥೆಯು ಜೂನ್ 9ರಂದು ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಸೇವೆ ನಿಲ್ಲಿಸಿತ್ತು. ಸೆಪ್ಟೆಂಬರ್‌ನಿಂದ ಮತ್ತೆ ವಿಮಾನ ಹಾರಾಟ ನಡೆಸಲು ಸ್ಪೈಸ್‌ಜೆಟ್ ಮುಂದಾಗಿದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಕಳೆದ ಮೇ 1ಕ್ಕೆ ಮುನ್ನ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಿತ್ಯ 12 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಸ್ಟಾರ್ ಏರ್ ಹಾಗೂ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳ ಸೇವೆ ಪುನರಾರಂಭಗೊಂಡರೆ ಶಿವಮೊಗ್ಗ ವಿಮಾನ ನಿಲ್ದಾಣದ ವೈಭವ ಮತ್ತೆ ಮರುಕಳಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಎಸ್.ಜಿ.ನಂಜಯ್ಯನಮಠ, ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷಕೆಎಸ್‌ಐಐಡಿಸಿಗೆ ವಿಜಯಪುರ, ರಾಯಚೂರು ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ವಹಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿ, ಸ್ವಚ್ಛತೆ ಸೇರಿ ಕೆಲ ಜವಾಬ್ದಾರಿ ಮಾತ್ರ ಖಾಸಗಿ ಕಂಪನಿಗಳಿಗೆ ವಹಿಸಲಾಗುತ್ತಿದೆಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-43-1084170474

