ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಭಾರತದ 14 ರಾಜ್ಯಗಳಲ್ಲಿರುವ ಶ್ರೀಗಂಧ ಬೆಳೆಗಾರರ ಮೇಲಿನ ಶೋಷಣೆ ತಡೆಗೆ ಅಖಿಲ ಭಾರತ ಶ್ರೀಗಂಧ ರೈತರ, ಸಂಸ್ಕರಣೆದಾರರ ಮತ್ತು ಮಾರುಕಟ್ಟೆದಾರರ ಒಕ್ಕೂಟವನ್ನು ರಚನೆ ಮಾಡಲಾಗಿದೆ.
ಕರ್ನಾಟಕದವರಾದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಲವು ವರ್ಷದಿಂದ ಶ್ರೀಗಂಧ ಬೆಳೆಗಾರರ ಪರವಾಗಿ ಹೋರಾಟ ಮಾಡುತ್ತಿರುವ ಕೆ.ಅಮರನಾರಾಯಣ ಅವರನ್ನು ಒಕ್ಕೂಟದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಶ್ರೀಗಂಧ ಬೆಳೆಗಾರರು, ಸಂಸ್ಕರಣಾಕಾರರು ಮತ್ತು ಮಾರುಕಟ್ಟೆದಾರರ ದುಂಡುಮೇಜಿನ ಸಭೆಯನ್ನೂ ಆಯೋಜಿಸಲಾಗಿದೆ. ತಮಿಳುನಾಡು, ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳ ಪ್ರತಿನಿಧಿಗಳೂ ಭಾಗಿಯಾಗಿದ್ದರು.
ಶ್ರೀಗಂಧ ಬೆಳೆಗಾರರು, ಸಂಸ್ಕರಣೆದಾರರು ಹಾಗೂ ಮಾರುಕಟ್ಟೆದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದಲೇ ಒಕ್ಕೂಟ ರಚಿಸಲಾಗಿದೆ. ಸಭೆಯಲ್ಲಿ ಗಂಧ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳು, ಮೌಲ್ಯವರ್ಧನೆ, ಸಂಸ್ಕರಣಾ ತಂತ್ರಜ್ಞಾನ, ಮಾರುಕಟ್ಟೆ ಅವಕಾಶಗಳು ಹಾಗೂ ರಫ್ತು ಸಾಮರ್ಥ್ಯದ ಹಾಗೂ ಆಮದಿನಿಂದ ಆಗುವ ಪರಿಣಾಮಗಳ ಕುರಿತು ಸಮಗ್ರ ಚರ್ಚೆ ನಡೆಯಿತು ಎಂದು ಒಕ್ಕೂಟದ ಅಧ್ಯಕ್ಷ ಕೆ.ಅಮರನಾರಾಯಣ ತಿಳಿಸಿದ್ದಾರೆ.
ದೇಶಾದ್ಯಂತ ಏಕರೂಪದ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರವು ಹೊರಡಿಸಿರುವ ಶ್ರೀಗಂಧ ಅಭಿವೃದ್ಧಿ ವರದಿಯನ್ನು ಜಾರಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿತು.
ಸಭೆಯಲ್ಲಿ ಭಾಗವಹಿಸಿದ ರೈತರು, ತಜ್ಞರು ಶ್ರೀಗಂಧ ಕ್ಷೇತ್ರದ ಸುಸ್ಥಿರ ಬೆಳವಣಿಗೆಗಾಗಿ ರೈತರು, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.
ಗುಣಮಟ್ಟದ ಉತ್ಪಾದನೆ, ಆಧುನಿಕ ಸಂಸ್ಕರಣಾ ವಿಧಾನಗಳ ಅಳವಡಿಕೆ, ಕಳ್ಳತನಗಳ ತಡೆಗಟ್ಟುವಿಕೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸುವ ಮೂಲಕ ಶ್ರೀಗಂಧ ಬೆಳೆಗಾರರ ಆದಾಯವನ್ನು ಹೆಚ್ಚಿಸಬಹುದೆಂದು ಅಭಿಪ್ರಾಯಪಟ್ಟರು.
ಸಭೆಯ ಅಂತ್ಯದಲ್ಲಿ ಶ್ರೀಗಂಧ ಮೌಲ್ಯ ಸರಪಳಿಯನ್ನು ಬಲಪಡಿಸಲು, ರೈತರಿಗೆ ತಾಂತ್ರಿಕ ಹಾಗೂ ಮಾರುಕಟ್ಟೆ ಬೆಂಬಲವನ್ನು ವೃದ್ಧಿಸಲು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಒಮ್ಮತ ವ್ಯಕ್ತವಾಯಿತು.
ಶ್ರೀಗಂಧ ಅಭಿವೃದ್ಧಿ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜೇಶ್ವರ್ ರಾವ್ ಪ್ರಧಾನ ಭಾಷಣ ಮಾಡಿ ಒಕ್ಕೂಟದ ಮುಂದಿನ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

