2011ರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ಇದೀಗ ಸುದ್ದಿಯಾಗಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಬಗ್ಗೆ ಚರ್ಚೆಯಾಗುತ್ತಿದೆ.
ಶೋಯಬ್ ಅಣ್ಣ ಶಾಹಿದ್ ಅಖ್ತರ್ ಅವರು ಜೂನ್ 24ರಂದು ನಿಧನರಾದರು.
ಇಸ್ಲಾಮಾಬಾದ್‌ನ ಎಚ್-8 ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ, ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಸೇರಿದಂತೆ ಹಲವು ಉಗ್ರರು ಭಾಗಿಯಾಗಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮತ್ತು ಭಯೋತ್ಪಾದನೆಯ ನಂಟಿನ ಬಗ್ಗೆ ಅನುಮಾನಗಳು ಮೂಡಿವೆ ಎಂಬ ಬಗ್ಗೆ 'DNA' ವರದಿ ಮಾಡಿದೆ.
ಲಾಹೋರ್‌ನಲ್ಲಿ 2009ರ ಮಾರ್ಚ್ 3ರಂದು ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ, ಆರು ಮಂದಿ ಪೊಲೀಸರು, ಇಬ್ಬರು ನಾಗರಿಕರು ಹತರಾಗಿ, ಲಂಕಾದ ಕೆಲ ಆಟಗಾರರೂ ಗಾಯಗೊಂಡಿದ್ದರು. ಅದಾದ ನಂತರ, ಪಾಕ್ ಕ್ರಿಕೆಟ್‌ಗೆ ಭಾರಿ ಪೆಟ್ಟು ಬಿದ್ದಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ದಶಕಕ್ಕೂ ಹೆಚ್ಚು ಸಮಯ ಒಂಟಿಯಾಗಿತ್ತು.
ಶಾಹಿದ್‌ಗೂ ಎಲ್‌ಇಟಿಗೂ ನಂಟು?
ಎಲ್‌ಇಟಿಯ ರಾಜಕೀಯ ವೇದಿಕೆಯಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಇಸ್ಲಾಮಾಬಾದ್ ಘಟಕದ ಮುಖ್ಯಸ್ಥ ಇನಾಮ್ ಉರ್ ರೆಹಮಾನ್ ಕಾಂಬೋಹ್, ಉಪ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ತೂರ್, ನಾಯಕರಾದ ಹಫೀಜ್ ಉಮರ್, ಅಮ್ಜಾದ್ ಭಟ್ಟಿ ಮತ್ತಿತರರು ಶಾಹಿದ್ ಅಖ್ತರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಹೀಗಾಗಿ, ಶಾಹಿದ್‌ಗೆ ಎಲ್‌ಇಟಿಯೊಂದಿಗೆ ಅಥವಾ ಪಿಎಂಎಂಎಲ್ ಜೊತೆ ಸಂಬಂಧವಿದೆಯೇ? 2008ರಲ್ಲಿ ಮುಂಬೈನಲ್ಲಿ ನಡೆದ ಸರಣಿ ದಾಳಿ (26/11) ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳ ಮಾಸ್ಟರ್‌ಮೈಂಡ್ ಯಾರೆಂಬುದು ಆತನಿಗೆ ಗೊತ್ತಿತ್ತೇ? ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬರುತ್ತಿವೆ.
ಶೋಯಬ್ ಅಖ್ತರ್ ಅಣ್ಣನ ಅಂತ್ಯಕ್ರಿಯೆಗೆ ಬಂದ ಲಷ್ಕರ್ ಉಗ್ರ ಕಸೂರಿ: ವಿವರ ಇಲ್ಲಿದೆವಿಶ್ವಸಂಸ್ಥೆಯೇ 'ಭಯೋತ್ಪಾದಕ' ಎಂದು ಹೆಸರಿಸಿರುವ ಹಫೀಜ್ ಸಯೀದ್, ಜಮಾತ್-ಉದ್-ದವಾ (ಜೆಯುಡಿ) ಮತ್ತು ಮಿಲ್ಲಿ ಮುಸ್ಲಿಂ ಲೀಗ್‌ನಂತಹ (ಎಂಎಂಎಲ್) ತನ್ನ ಸಂಘಟನೆಗಳ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ದೇಶೀಯವಾಗಿ ಇರುವ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪಿಎಂಎಂಎಲ್ ಅನ್ನು ಸ್ಥಾಪಿಸಿದ್ದ. ಇದರ ನೇತೃತ್ವವನ್ನು ಖಾಲಿದ್ ಮಸೂದ್ ಸಿಂಧು ವಹಿಸಿಕೊಂಡಿದ್ದಾನೆ.
2022ರಲ್ಲಿ ಸ್ಥಾಪನೆಯಾಗಿರುವ ಪಿಎಂಎಂಎಲ್‌ನಲ್ಲಿರುವ ಹೆಚ್ಚಿನವರು 2008ರ ಮುಂಬೈ ದಾಳಿ, 2025ರ ಪಹಲ್ಗಾಮ್ ದಾಳಿ ಮತ್ತಿತರ ಉಗ್ರ ಕೃತ್ಯಗಳಲ್ಲಿ ಭಾಗಿಯಾದವರೇ ಎಂದು ಹೇಳಲಾಗಿದೆ.
ಜಮಾತ್-ಉದ್-ದವಾ ಸಂಘಟನೆಯು ಪಿಎಂಎಂಎಲ್ ಸ್ಥಾಪಿಸುವುದಾಗಿ 2017ರ ಮಾರ್ಚ್‌ನಲ್ಲಿ ಘೋಷಿಸಿತ್ತು. ಅದರ ಮುಖ್ಯಸ್ಥನಾಗಿದ್ದ ಸೈಫುಲ್ಲಾ ಕಸೂರಿ, 'ಪಾಕಿಸ್ತಾನವನ್ನು ನಿಜವಾದ ಇಸ್ಲಾಮಿಕ್ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿದ್ದೇವೆ' ಎಂದು ಹೇಳಿಕೆ ನೀಡಿದ್ದ.
ಇಂತಹ ಹಿನ್ನೆಲೆಯುಳ್ಳ ಸಂಘಟನೆಯ ಮುಖಂಡರು ಶಾಹಿದ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರುವುದು ಕಳವಳ ಮೂಡಿಸಿದೆ. ಶೋಯಬ್ ಅಖ್ತರ್ ಅಥವಾ ಅವರ ಸಹೋದರ ಪಿಎಂಎಂಎಲ್ ಸದಸ್ಯತ್ವರಾಗಿದ್ದಾರೆಯೇ? ರಾಜಕೀಯ ಪಕ್ಷದೊಂದಿಗೆ ಯಾವ ರೀತಿಯ ನಂಟು ಹೊಂದಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
2024ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಪ್ರಾಂತೀಯ ಚುನಾವಣೆಗಳಲ್ಲಿ ಪಿಎಂಎಂಎಲ್ ಸ್ಪರ್ಧಿಸಿತ್ತು. ಅಭ್ಯರ್ಥಿಗಳಾಗಿ ನಾಮನಿರ್ದೇಶನಗೊಂಡಿದ್ದ ಹೆಚ್ಚಿನವರು ಹಫೀಜ್ ಸಯೀದ್‌ನ ಆಪ್ತರು, ಸಂಬಂಧಿಕರೇ ಆಗಿದ್ದರು ಎಂದು 'ಬಿಬಿಸಿ ಉರ್ದು' ವರದಿ ಮಾಡಿತ್ತು. ಚುನಾವಣೆಗಳಲ್ಲಿ ಸುಮಾರು 5.25 ಲಕ್ಷಕ್ಕೂ ಹೆಚ್ಚು ಮತಗಳು ಪಿಎಂಎಂಎಲ್ ಅಭ್ಯರ್ಥಿಗಳಿಗೆ ಲಭಿಸಿದ್ದವು ಎಂಬುದು ಗಮನಿಸಬೇಕಾದ ಸಂಗತಿ.

