ಬೆಂಗಳೂರು: ಕೌಶಲಾಭಿವೃದ್ಧಿ, ವಲಸೆ ಕಾರ್ಮಿಕರ ಕಲ್ಯಾಣ, ನರ್ಸಿಂಗ್ ಶಿಕ್ಷಣ, ವಿದೇಶಿ ಬಂಡವಾಳ ಹೂಡಿಕೆಯ ಮೇಲ್ವಿಚಾರಣೆ ಸೇರಿದಂತೆ ವಿವಿಧ ವಿಷಯಗಳನ್ನು ನಿರ್ವಹಿಸಲು ಕರ್ನಾಟಕ ಸರ್ಕಾರದಲ್ಲಿ, ಅನಿವಾಸಿ ಕನ್ನಡಿಗರ ಹೊಸ ಸಚಿವಾಲಯ ರೂಪುಗೊಳ್ಳುತ್ತಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದರು.
ಅದು ಈಗ ಸಾಕಾರಗೊಳ್ಳುತ್ತಿದೆ.
ಅಮೆರಿಕ, ಬ್ರಿಟನ್, ಯೂರೋಪ್, ಕೆನಡಾ, ಆಫ್ರಿಕಾ, ಸಿಂಗಪುರ, ಮಲೇಷ್ಯಾ, ಸಂಯುಕ್ತ ಅರಬ್ ಸಂಸ್ಥಾನ (ಯುಎಇ), ಸೌದಿ ಅರೆಬಿಯಾ ಮತ್ತಿತರ ಗಲ್ಫ್ ರಾಷ್ಟ್ರಗಳಲೂ ಸೇರಿದಂತೆ ವಿದೇಶಗಳಲ್ಲಿ ಕನ್ನಡಿಗರು ನೆಲಸಿದ್ದಾರೆ. ಉದ್ಯಮಿಗಳು, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಉತ್ತಮ ಸ್ಥಾನಮಾನ ಪಡೆದ ಒಂದು ವರ್ಗ, ಚಾಲಕರು, ಮನೆ ಕೆಲಸದವರು, ಕೂಲಿ ಕಾರ್ಮಿಕರು, ಶುಶ್ರೂಷಕರು ಸೇರಿದಂತೆ ವಿವಿಧ ವೃತ್ತಿಯ ಮತ್ತೊಂದು ಶ್ರಮಿಕ ವರ್ಗ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿವೆ.
ಹೊಸ ಸಚಿವಾಲಯವು ಮೊದಲ ವರ್ಗದ ಸಹಕಾರ ಪಡೆದು ಆಯಾ ದೇಶಗಳ ಕಂಪನಿಗಳು, ಉದ್ಯಮಿಗಳಿಂದ ಕರ್ನಾಟಕಕ್ಕೆ ಅಗತ್ಯವಿರುವ ಬಂಡವಾಳ ಸೆಳೆಯುವುದು, ಹೂಡಿಕೆಗೆ ಮನವೊಲಿಸುವುದು. ಉದ್ಯಮದ ಬೆಳವಣಿಗೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಕೃಷಿ ಉದ್ಯಮದ ಉತ್ತೇಜನಕ್ಕೆ ಹಾಗೂ ಇತರ ಕನ್ನಡಿಗರ ಅಭಿವೃದ್ಧಿ ಕಾರ್ಯಗಳಿಗೆ, ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಪಡೆಯುವ ಕೆಲಸ ಮಾಡಲಿದೆ.
ಶ್ರಮಿಕ ವರ್ಗದ ಹಿತಾಸಕ್ತಿಯೇ ಪ್ರಧಾನ:
ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ ಅನಿವಾಸಿ ಕನ್ನಡಿಗರ ಸಚಿವಾಲಯದ ರೂಪುರೇಷೆಯಲ್ಲಿ ವಿದೇಶಗಳಲ್ಲಿ ನೆಲಸಿರುವ ಶ್ರಮಿಕ ವರ್ಗದ ಹಿತಾಸಕ್ತಿ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಆಯಾ ದೇಶಗಳ ಆಂತರಿಕ ಸಂಘರ್ಷ, ಆರ್ಥಿಕ ಏರಿಳಿತ, ಕೋವಿಡ್‌ನಂತಹ ಆರೋಗ್ಯ ಸಮಸ್ಯೆಗಳು, ರಾಜಕೀಯ ಬದಲಾವಣೆಗಳು, ಯುದ್ಧದಂತಹ ಸನ್ನಿವೇಶದಲ್ಲಿ ಕೆಲಸ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿವೆ. ಸಂಕಷ್ಟದ ಸಮಯಗಳಲ್ಲಿ ಕರ್ನಾಟಕಕ್ಕೆ ಮರಳುವ ಕಾರ್ಮಿಕರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಆರ್ಥಿಕ ನೆರವು, ಸಾಲ ಸೌಲಭ್ಯ ಒದಗಿಸುವುದು, ನಿವೇಶನ, ವಸತಿ, ವಿಮೆ ಮತ್ತಿತರ ಸೌಲಭ್ಯ ಒದಗಿಸುವ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ.
ಆರತಿ ಕೃಷ್ಣಗೆ ಹೊಣೆ:
ಎನ್‌ಆರ್‌ಐಗಳ ಮನವಿ ಅನಿವಾಸಿ ಕನ್ನಡಿಗರ ಸಚಿವಾಲಯದ ಸಚಿವರನ್ನಾಗಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆ ಸದಸ್ಯ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯೆ ಆರತಿ ಕೃಷ್ಣ ಅವರನ್ನು ನೇಮಕ ಮಾಡಬೇಕು ಎಂದು 30 ದೇಶಗಳ 43 ಅನಿವಾಸಿ ಕನ್ನಡಿಗರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದೆ. 'ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ ಭಾರತೀಯ ಸಾಗರೋತ್ತರ ಸಚಿವಾಲಯದ ಪ್ರಮುಖ ಹುದ್ದೆ ಅಲಂಕರಿಸಿದ್ದರು ಉತ್ತಮ ಕೆಲಸ ಮಾಡಿದ್ದಾರೆ. ಅನಿವಾಸಿಗಳ ನಾಡಿಮಿಡಿತ ಅರಿತಿರುವ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಕಷ್ಟಕ್ಕೆ ಸದಾ ಸ್ಪಂದಿಸುವ ಅಂತರರಾಷ್ಟ್ರೀಯ ಕಾನೂನು ಹಾಗೂ ಸಮನ್ವಯದಲ್ಲಿ ಜ್ಞಾನ ಹೊಂದಿರುವ ಅವರನ್ನು ಹೊಸ ಜವಾಬ್ದಾರಿಗೆ ಪರಿಗಣಿಸಬೇಕು. ಇದರಿಂದ ಕರ್ನಾಟಕಕ್ಕೆ ಸಾಕಷ್ಟು ನೆರವು ಸಿಗಲಿದೆ. ಸಚಿವಾಲಯ ಸ್ಥಾಪನೆಯ ಉದ್ದೇಶವೂ ಈಡೇರಲಿದೆ' ಎಂದು ಅನಿವಾಸಿ ಕನ್ನಡಿಗರಾದ ರೊನಾಲ್ಡ್ ಕೊಲಾಸೊ ಜೋಕಟ್ಟೆ ಪ್ರವೀಣ್ ಶೆಟ್ಟಿ ಹಿದಾಯತ್ ಅಡ್ಡೂರು ಅಜಿತ್ ಭಾಸ್ಕರ್ ಶಶಿಧರ ನಾಗರಾಜಪ್ಪ ಚಂದ್ರಶೇಖರ್ ರವಿ ಶೆಟ್ಟಿ ಪ್ರೀತಿ ಜಯಪ್ರಕಾಶ್ ಮತ್ತಿತರರು ಮನವಿ ಮಾಡಿದ್ದಾರೆ.
ಕೇರಳಂ ಮಾದರಿ; ₹500 ಕೋಟಿ ಅನುದಾನ
ಅನಿವಾಸಿ ಕನ್ನಡಿಗರ ಸಚಿವಾಲಯಕ್ಕೆ ಮೊದಲ ವರ್ಷ ₹400ರಿಂದ ₹500 ಕೋಟಿ ಅನುದಾನ ಒದಗಿಸುವ ಕುರಿತು ಚರ್ಚೆ ನಡೆದಿದೆ. ಕೇರಳಂ ಮಾದರಿಯಲ್ಲಿ ಪ್ರತ್ಯೇಕ ನಿಧಿ ಸ್ಥಾಪಿಸಿ ಸರ್ಕಾರಿ-ಖಾಸಗಿ ಸಹಯೋಗದಲ್ಲಿ ನಿರ್ವಹಣೆ ಮಾಡುವ ಕುರಿತು ಚರ್ಚೆ ನಡೆದಿದೆ. ಕೇರಳಂ ಸರ್ಕಾರ ಅನಿವಾಸಿ ಕೇರಳಿಗರ ಸಚಿವಾಲಯಕ್ಕೆ ಪ್ರತಿ ವರ್ಷ ₹200 ಕೋಟಿ ಅನುದಾನ ನೀಡುತ್ತಿದ್ದು ವಿದೇಶದಲ್ಲಿ ನೆಲೆಸಿರುವ ಕೇರಳದ ಉದ್ಯಮಿಗಳು ಶ್ರೀಮಂತರು ನೀಡುವ ಆರ್ಥಿಕ ಸಹಕಾರವನ್ನು ಬಳಸಿಕೊಳ್ಳುತ್ತಿದೆ. ವಿದೇಶಗಳಲ್ಲಿ ಕೇರಳಿಗರು ಸಂಕಷ್ಟಕ್ಕೆ ಸಿಲುಕಿದಾಗ ರಾಜ್ಯಕ್ಕೆ ಮರಳಿದಾಗ ಅವರ ಬದುಕಿಗೆ ನೆರವಾಗಲು ಇಂತಹ ಮೊತ್ತವನ್ನು ಬಳಸಿಕೊಳ್ಳಲಾಗುತ್ತಿದೆ. ತಮಿಳುನಾಡು ಸಹ ಇಂತಹದ್ದೇ ನೀತಿಯನ್ನು ಅಳವಡಿಸಿಕೊಂಡಿದ್ದು ಕರ್ನಾಟಕವೂ ಅದೇ ಮಾದರಿಯತ್ತ ಚಿತ್ತ ಹರಿಸಿದೆ.
ಆರತಿ ಕೃಷ್ಣ, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆ ವಿದೇಶದಲ್ಲಿ ಉದ್ಯೋಗ ಹುಡುಕುವವರಿಗೆ ಅಗತ್ಯ ಕೌಶಲ ತರಬೇತಿ ಮಧ್ಯವರ್ತಿಗಳ ಹಾವಳಿ ನಿಯಂತ್ರಣ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ರಕ್ಷಣೆ ಕರ್ನಾಟಕಕ್ಕೆ ಮರಳುವವರಿಗೆ ನೆರವಿನ ಕಾರ್ಯವನ್ನು ಹೊಸ ಸಚಿವಾಲಯ ನಿರ್ವಹಿಸಲಿದೆ.
