ಯಳಂದೂರು: ಬೇಸಿಗೆ ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಸಮೃದ್ಧವಾಗಿ ಬಂದಿದ್ದು, ಕಟಾವಿನ ಹಂತದಲ್ಲಿ ಇವೆ. ಈ ನಡುವೆ ಶ್ರಮಿಕರ ಕೊರತೆ ಹಾಗೂ ಸಂಭಾವನೆ ಹೆಚ್ಚಳ ರೈತರ ಬವಣೆಯನ್ನು ಹೆಚ್ಚಿಸಿದೆ.
ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಕೃಷಿಕರಿಗೆ ವರವಾಗಿ ಸುರಿದ ವರ್ಷಧಾರೆ ಕೃಷಿ ಚಟುವಟಿಕೆಗಳಿಗೆ ಜೀವದಾಯಿ ಆಗಿದೆ.
ಇದೆ ವೇಳೆ , ತಾಲ್ಲೂಕಿನಲ್ಲಿ ಬರದ ಬೆಳೆ ಎಂದು ಪರಿಚಿತವಾದ ರಾಗಿಯನ್ನು 300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ಸಮಯದಲ್ಲಿ ಸುರಿದ ಒಂದೆರಡು ಮಳೆಗೆ ರಾಗಿ ಉತ್ತಮವಾಗಿ ಬೆಳೆದಿದ್ದು, ಇಳುವರಿ ಹೆಚ್ಚಳವಾಗಿದೆ. ಜಾನುವಾರುಗಳಿಗೆ ಮೇವಿನ ಅಭಾವವನ್ನು ನೀಗಿಸಿದೆ.
ಅಗರ ಮತ್ತು ಕಸಬ ಹೋಬಳಿಗಳಲ್ಲಿ ರಾಗಿ ಕಟಾವು ನಡೆಯುತ್ತಿದ್ದು, ಕೂಲಿ ಕಾರ್ಮಿಕರ ಕೊರತೆಯಿಂದ, ಕುಟುಂಬದ ಸದಸ್ಯರೇ ಬೆಳೆ ಕಟಾವಿಗೆ ಮುಂದಾಗಿದ್ದಾರೆ.
'ಒಂದು ಎಕರೆ ಪ್ರದೇಶದಲ್ಲಿ ರಾಗಿ ಫಸಲಿನ ತೆನೆ ಸಂಗ್ರಹ ಮಾಡಲು ₹6 ಸಾವಿರ ಖರ್ಚು ತಗಲುತ್ತದೆ. ಪುರುಷರಿಗೆ ಮಧ್ಯಾಹ್ನದ ತನಕ ₹300 ಹಾಗೂ ಮಹಿಳಾ ಶ್ರಮಿಕರಿಗೆ ₹200 ಕೂಲಿ ನೀಡಬೇಕು. ಜೊತೆಗೆ ರಾಗಿ ತೆನೆಯನ್ನೂ ನೀಡಬೇಕು. ಊಟ, ಉಪಾಹಾರದ ಖರ್ಚು ಭರಿಸಬೇಕು. ಆದರೆ, ಹಗಲಿನಲ್ಲಿ ಮೋಡ ಕವಿದ ವಾತಾವರಣ ಇದ್ದು ರಾತ್ರಿ ಮಳೆಯಲ್ಲಿ ಹೆಚ್ಚಳ ಆಗುತ್ತಿರುವುದರಿಂದ ಬಹುತೇಕ ಕೃಷಿಕರು ಶ್ರಮಿಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಕೂಲಿ ಹೆಚ್ಚಳದ ನಡುವೆಯೂ ಕುಟುಂಬದ ಮಂದಿಯೂ ಸೇರಿ ಫಸಲು ಸಂಗ್ರಹಿಸುತ್ತಿದ್ದಾರೆ' ಎಂದು ಸಾಗುವಳಿದಾರರ ಮದ್ದೂರು ಸೋಮಣ್ಣ ಹೇಳಿದರು.'ಬಹುತೇಕ ಬೇಸಾಯಗಾರರು ರಾಗಿ ಕೊಯ್ಲಿಗೆ ಯಂತ್ರಗಳನ್ನು ಬಳಸುವುದಿಲ್ಲ. ರಾಗಿ ನಡುವೆ ಉದ್ದು ಹೆಸರು ಅಲಸಂದೆ, ಹುರುಳಿ ಮತ್ತಿತರ ಮನೆ ಬಳಕೆ ಪದಾರ್ಥಗಳನ್ನು ಬೆಳೆಯುವುದರಿಂದ ಕೊಯ್ಲಿಗೆ ಯಂತ್ರ ಬಳಕೆ ಮಾಡಲಾಗದು. ಜೊತೆಗೆ ರಾಗಿ ಸಸಿಯನ್ನು ಅರ್ಧ ಅಡಿ ಎತ್ತರಕ್ಕೆ ಯಂತ್ರ ಕಟಾವು ಮಾಡುವುದರಿಂದ ಧಾನ್ಯ ಕಾಳು ತುಂಡಾಗಿ ಉದುರಿ ಹೋಗುವ ಆತಂಕ ಇದೆ. ಹಾಗಾಗಿ, ಕೃಷಿಕರು ಕಾರ್ಮಿಕರ ಮೂಲಕವೇ ತೆನೆ ಸಂಗ್ರಹಿಸಲು ಒತ್ತು ನೀಡುತ್ತಾರೆ' ಎಂದು ವೈ.ಕೆ. ಮೋಳೆ ಗ್ರಾಮದ ರಾಗಿ ಕೃಷಿಕ ಮಹದೇವ ಶೆಟ್ಟಿ ತಿಳಿಸಿದರು.
ಮಳೆಯಲ್ಲೇ ತೆನೆ ಕೊಯಿಲು: ಮುಂಗಾರು ಮಳೆ ಸುರಿಯುವ ಲಕ್ಷಣಗಳು ಕಾಣಿಸಿಕೊಂಡಿದೆ. ಹಗಲಿನಲ್ಲಿ ಬಿಸಿಲು ಮೋಡಗಳ ಚೆಲ್ಲಾಟ ಕಾಣಿಸಿದರೆ, ಸಂಜೆ ತುಂತುರು ಮಳೆಯಿಂದ ರಾತ್ರಿ ಉತ್ತಮ ಮಳೆ ಸುರಿಯುತ್ತದೆ. ಇದರಿಂದ ರಾಗಿ ಕೃಷಿಕರು ಬಹುಬೇಗ ರಾಗಿ ಒಕ್ಕಣೆ ಮಾಡಲು ಮುಂದಾಗಿದ್ದಾರೆ.
'ರಾಗಿ ಒಣಗಿದ್ದು ಮಳೆಗೆ ಸಿಲುಕಿದರೆ ಉದುರಿ ಹೋಗುತ್ತದೆ. ಹಾಗಾಗಿ, ರೈತರು ಸುತ್ತಲಿನ ಗ್ರಾಮಗಳಿಂದ ಕಾರ್ಮಿಕರನ್ನು ಕರೆ ತಂದು ಗುತ್ತಿಗೆ ಆಧಾರದಲ್ಲಿ ಕಟಾವು ಮಾಡಿಸುತ್ತಾರೆ' ಎಂದು ಕಂದಳ್ಳಿ ರೈತ ನಂದೀಶ್ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-37-224216762

