Dailyhunt Logo
  • Light mode
    Follow system
    Dark mode
    • Play Story
    • App Story
ಶ್ರೀಲಂಕಾದ ಆರ್ಥಿಕತೆ ಚೇತರಿಸಿಕೊಂಡಿದ್ದು ಹೇಗೆ? ಭಾರತದ ಸ್ಥಿತಿ ಏನು?

ಶ್ರೀಲಂಕಾದ ಆರ್ಥಿಕತೆ ಚೇತರಿಸಿಕೊಂಡಿದ್ದು ಹೇಗೆ? ಭಾರತದ ಸ್ಥಿತಿ ಏನು?

2022ರಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾ ತನ್ನ ಇತಿಹಾಸದಲ್ಲೇ ಅತಿದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತ್ತು. ದೇಶದ ವಿದೇಶಿ ವಿನಿಮಯ ಸಂಗ್ರಹ ಬರಿದಾಗಿತ್ತು. ಇಂಧನ ಮತ್ತು ಔಷಧಿಗಳ ಕೊರತೆ ಉಂಟಾಗಿತ್ತು. ಹಣದುಬ್ಬರ ಗಗನಕ್ಕೇರಿ, ಸಾಲ ತೀರಿಸಲಾಗದೆ ದಿವಾಳಿತನದ ಅಂಚಿಗೆ ತಲುಪಿತ್ತು.

ಆದರೆ, ಕೇವಲ ಮೂರು ವರ್ಷಗಳಲ್ಲಿ ತನ್ನೆಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿದ ಶ್ರೀಲಂಕಾ, ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.

ವಿಶ್ವಬ್ಯಾಂಕ್ ಪ್ರಕಾರ, ಶ್ರೀಲಂಕಾದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯ 4,496 ಡಾಲರ್‌ ಮುಟ್ಟಿದ್ದು, ಇದು ಮೇಲ್ಮಧ್ಯಮ ವರ್ಗದ ಆದಾಯದ ಸ್ಥಾನಮಾನಕ್ಕೆ ಅಗತ್ಯವಿರುವ ಮಿತಿಯನ್ನು ದಾಟಿದೆ. ಒಂದು ದೇಶವನ್ನು ಮೇಲ್ಮಧ್ಯಮ ಎಂದು ವರ್ಗೀಕರಿಸಬೇಕಾದರೆ ಆ ದೇಶದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯ ಕನಿಷ್ಠ 4,636 ಡಾಲರ್‌ ಇರಬೇಕಾಗುತ್ತದೆ.

2022ರ ಆರ್ಥಿಕ ಕುಸಿತಕ್ಕೆ ಕಾರಣಗಳೇನು:

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಕೇವಲ ಒಂದು ಕಾರಣದಿಂದ ಆಗಿಲ್ಲ. ಸರ್ಕಾರ ತೆಗೆದುಕೊಂಡ ತಪ್ಪು ನೀತಿಗಳು, ಕೋವಿಡ್‌ನಿಂದ ಪ್ರವಾಸದೋದ್ಯಮ ಕುಂಠಿತ, ವಿದೇಶಿ ಸಾಲದ ಹೊರೆ ಮತ್ತು ವಿದೇಶಿ ವಿನಿಮಯದ ಕೊರತೆ ಹೀಗೆ ಹಲವು ಅಂಶಗಳು ದೇಶವನ್ನು ದಿವಾಳಿತನದ ಅಂಚಿಗೆ ತಳ್ಳಿದ್ದವು.

ವಿದೇಶಿ ಸಾಲ ಹೆಚ್ಚಳ: ಶ್ರೀಲಂಕಾ ಹಲವು ವರ್ಷಗಳಿಂದ ವಿದೇಶಗಳಿಂದ ಸಾಲ ಪಡೆದು ಅಭಿವೃದ್ಧಿ ಯೋಜನೆಗಳನ್ನು ನಡೆಸುತ್ತಿತ್ತು. ಆದರೆ, ಆ ಸಾಲಗಳನ್ನು ಮರುಪಾವತಿಸಲು ಬೇಕಾದಷ್ಟು ಆದಾಯ ಇರಲಿಲ್ಲ. 2022ಕ್ಕೆ ಬಂದಾಗ ಸಾಲದ ಹೊರೆ ಅಸಹನೀಯ ಮಟ್ಟ ತಲುಪಿತ್ತು.

ತೆರಿಗೆ ಕಡಿತ: ಆಗ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸೆ ಅವರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ತೆರಿಗೆಗಳನ್ನು ಕಡಿತಗೊಳಿಸಿತ್ತು. ಇದರಿಂದ ಸರ್ಕಾರದ ಆದಾಯ ತೀವ್ರವಾಗಿ ಕುಸಿಯಿತು. ಈಗಾಗಲೇ ಸಾಲದ ಒತ್ತಡದಲ್ಲಿದ್ದ ಸರ್ಕಾರಕ್ಕೆ ಇದು ಮತ್ತಷ್ಟು ಹೊರೆ ಆಯಿತು.

ಪ್ರವಾಸೋದ್ಯಮ ಕುಂಠಿತ: ಶ್ರೀಲಂಕಾ ಆರ್ಥಿಕತೆಯ ಪ್ರಮುಖ ಆದಾಯ ಮೂಲಗಳಲ್ಲಿ ಪ್ರವಾಸೋದ್ಯಮವೂ ಒಂದು. ಕೋವಿಡ್ ಸಮಯದಲ್ಲಿ ಪ್ರವಾಸಿಗರ ಆಗಮನ ಬಹುತೇಕ ನಿಂತುಹೋಯಿತು. ಇದರ ಪರಿಣಾಮವಾಗಿ ವಿದೇಶಿ ವಿನಿಮಯ ಕುಸಿದಿತ್ತು.

ಖಾಲಿಯಾದ ವಿದೇಶಿ ವಿನಿಯಮ ಸಂಗ್ರಹ: ಪ್ರವಾಸೋದ್ಯಮ, ರಫ್ತು ಮತ್ತು ಇತರೆ ಮೂಲಗಳಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದ್ದರೂ, ಶ್ರೀಲಂಕಾ ಸಾಲದ ಕಂತುಗಳನ್ನು ಪಾವತಿಸುತ್ತಲೇ ಇತ್ತು. ಇದರ ಪರಿಣಾಮವಾಗಿ ವಿದೇಶಿ ವಿನಿಮಯ ಸಂಗ್ರಹ ಅಪಾಯಕರ ಮಟ್ಟಕ್ಕೆ ಇಳಿಯಿತು. 2021ರ ಅಂತ್ಯದ ವೇಳೆಗೆ ಇದು ಅಸಹನೀಯ ಪರಿಸ್ಥಿತಿಯನ್ನು ಮುಟ್ಟಿತ್ತು.

ರಾಸಾಯನಿಕ ಗೊಬ್ಬರ ನಿಷೇಧ: 2021ರಲ್ಲಿ ಸರ್ಕಾರ ರಾಸಾಯನಿಕ ಗೊಬ್ಬರಗಳ ಆಮದು ಮೇಲೆ ಹಠಾತ್ ನಿಷೇಧ ಹೇರಿತು ಮತ್ತು ಸಂಪೂರ್ಣ ಸಾವಯವ ಕೃಷಿಗೆ ತಿರುಗಲು ಪ್ರಯತ್ನಿಸಿತು. ಇದರಿಂದ ಅಕ್ಕಿ, ಚಹಾ ಸೇರಿದಂತೆ ಕೃಷಿ ಉತ್ಪಾದನೆ ಕುಸಿಯಿತು. ಆಹಾರ ಕೊರತೆ ಹೆಚ್ಚಿತು ಮತ್ತು ಆಮದುಗಳ ಅವಲಂಬನೆ ಮತ್ತಷ್ಟು ಹೆಚ್ಚಾಯಿತು.

ರಷ್ಯಾ-ಉಕ್ರೇನ್‌ ಯುದ್ಧ: 2022ರಲ್ಲಿ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಆರಂಭವಾಗಿತ್ತು. ಇದರ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಆಹಾರ ಬೆಲೆಗಳು ಏರಿದವು. ಈಗಾಗಲೇ ಸಂಕಷ್ಟದಲ್ಲಿದ್ದ ಶ್ರೀಲಂಕಾಗೆ ಇದು ಮತ್ತೊಂದು ದೊಡ್ಡ ಹೊಡೆತವಾಯಿತು.

ಭ್ರಷ್ಟಾಚಾರ: ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳಲ್ಲಿ ಭ್ರಷ್ಟಾಚಾರವೂ ಒಂದಾಗಿದೆ. ಒಂದೇ ಕುಟುಂಬದ ಕೈಯಲ್ಲಿ ಹಲವಾರು ವರ್ಷಗಳಿಂದ ಅಧಿಕಾರ ಇರುವುದರಿಂದ ಭ್ರಷ್ಟಾಚಾರ ಬೆಳೆಯಲು ಕಾರಣವಾಗಿತ್ತು. ಸರ್ಕಾರದ ಪ್ರಮುಖ ಹುದ್ದೆಗಳೆಲ್ಲಿ ರಾಜಪಕ್ಸೆ ಕುಟುಂಬದ ಸದಸ್ಯರೇ ಇದ್ದುದ್ದರಿಂದ, ತೆರಿಗೆ ದುರ್ಬಳಕೆ ಆಗುತ್ತಿರುವ ಬಗ್ಗೆ ಜನರಿಗೆ ತಿಳಿಯುತ್ತಿರಲಿಲ್ಲ.

ಶ್ರೀಲಂಕಾ ಚೇತರಿಸಿಕೊಂಡಿದ್ದು ಹೇಗೆ?

ಕಠಿಣ ಆರ್ಥಿಕ ಸುಧಾರಣೆ: ಹೊಸ ಸರ್ಕಾರವು ತೆರಿಗೆಗಳನ್ನು ಹೆಚ್ಚಿಸಿ, ಅನುದಾನಗಳನ್ನು ಕಡಿತಗೊಳಿಸಿತು. ಆ ಮೂಲಕ ಸರ್ಕಾರಿ ವೆಚ್ಚವನ್ನು ನಿಯಂತ್ರಿಸಿತು. ಇವು ಜನರಿಗೆ ಆರಂಭದಲ್ಲಿ ಕಷ್ಟಕರವಾಗಿದ್ದರೂ, ಸರ್ಕಾರದ ಆದಾಯವನ್ನು ಹೆಚ್ಚಿಸಿ ಆರ್ಥಿಕ ಸ್ಥಿರತೆಯನ್ನು ತರಲು ನೆರವಾಯಿತು.

ಐಎಮ್‌ಎಫ್‌ ನೆರವು: ಶ್ರೀಲಂಕಾವು ಐಎಮ್‌ಎಫ್‌ನಿಂದ 2.9 ಬಿಲಿಯನ್ ಡಾಲರ್ ಮೌಲ್ಯದ ನೆರವು ಯೋಜನೆಯನ್ನು ಪಡೆದುಕೊಂಡಿತು. ಇದು ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಲು ಕಾರಣವಾಗಿದೆ. ಅದರ ಮೂಲಕ ಆರ್ಥಿಕ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿತು.

ಪ್ರವಾಸೋದ್ಯಮ ಪುನಶ್ಚೇತನ: ಹೊಸ ಸರ್ಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಆದಾಯ ಸಂಗ್ರಹಕ್ಕೆ ಮುಂದಾಯಿತು. ಸರ್ಕಾರದ ಈ ಕ್ರಮವು ಯಶಸ್ವಿಯಾಗಿದ್ದು, ಲಕ್ಷಾಂತರ ಪ್ರವಾಸಿಗರು ದೇಶಕ್ಕೆ ಭೇಟಿ ನೀಡಿದ ಪರಿಣಾಮ ಹೆಚ್ಚಿನ ವಿದೇಶಿ ವಿನಿಮಯ ಹರಿದುಬಂತು. ಅಲ್ಲದೇ ವಿದೇಶಗಳಲ್ಲಿ ಕೆಲಸ ಮಾಡುವ ಶ್ರೀಲಂಕನ್ನರು ಕಳುಹಿಸಿದ ಹಣವೂ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಬಲಪಡಿಸಿದೆ.

ಸಾಲ ಪುನರ್‌ರಚನೆ: ದೇಶವು ತನ್ನ ವಿದೇಶಿ ಸಾಲದಾತರೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಂಡು ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಿತು. ಇದರಿಂದ ತಕ್ಷಣದ ಆರ್ಥಿಕ ಒತ್ತಡ ಕಡಿಮೆಯಾಯಿತು.

ಆರ್ಥಿಕ ಬೆಳವಣಿಗೆ: 2025ರಲ್ಲಿ ಶ್ರೀಲಂಕಾದ ಜಿಡಿಪಿ ಶೇ 5ರಷ್ಟು ಬೆಳವಣಿಗೆಯನ್ನು ದಾಖಲಿಸಿತು. ಇದರ ಪರಿಣಾಮವಾಗಿ ತಲಾವಾರು ಒಟ್ಟು ರಾಷ್ಟ್ರೀಯ ಆದಾಯ ವಿಶ್ವ ಬ್ಯಾಂಕ್ ನಿಗದಿಪಡಿಸಿದ 4,496 ಡಾಲರ್‌ ಗಡಿ ದಾಟಿ, ದೇಶ ಮತ್ತೆ ಮೇಲ್ಮಧ್ಯಮ ಆದಾಯದ ವರ್ಗಕ್ಕೆ ಸೇರಿತು.

ಮುಗಿಯದ ಸಮಸ್ಯೆಗಳು:

  • ಬಡತನವು 2019ರ ಮಟ್ಟಕ್ಕಿಂತ ಹೆಚ್ಚಾಗಿದೆ.

  • ಜೀವನ ವೆಚ್ಚ ಹೆಚ್ಚಾಗಿದೆ.

  • ಅನೇಕ ಕುಟುಂಬಗಳು ಇನ್ನೂ ಆರ್ಥಿಕ ಸಂಕಷ್ಟದಲ್ಲಿವೆ.

  • 2027ರಿಂದ ಮತ್ತೆ ದೊಡ್ಡ ಪ್ರಮಾಣದ ವಿದೇಶಿ ಸಾಲ ಮರುಪಾವತಿ ಆರಂಭವಾಗಲಿದೆ.

  • ರಫ್ತು ಮತ್ತು ಖಾಸಗಿ ಹೂಡಿಕೆಗಳನ್ನು ಹೆಚ್ಚಿಸದಿದ್ದರೆ ಬೆಳವಣಿಗೆ ನಿಧಾನವಾಗಬಹುದು.

ಭಾರತದ ಸ್ಥಿತಿ ಏನು?

ಭಾರತದ ಆರ್ಥಿಕತೆ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ, ಭಾರತವನ್ನು ಇನ್ನೂ ಕೆಳಮಧ್ಯಮ ಆದಾಯದ ದೇಶ ಆಗಿಯೇ ವರ್ಗೀಕರಿಸಲಾಗಿದೆ. ಮೇಲ್ಮಧ್ಯಮ ಆದಾಯ ದೇಶವಾಗಬೇಕಾದರೆ ಜಿಡಿಪಿ ದೊಡ್ಡದಾಗಿದ್ದರೇ ಸಾಲುವುದಿಲ್ಲ, ದೇಶದ ತಲಾ ಆದಾಯವೂ ನಿರ್ದಿಷ್ಟ ಮಟ್ಟ ದಾಟಬೇಕು. ವಿಶ್ವಬ್ಯಾಂಕ್‌ ಪ್ರಕಾರ ಅದು ಕನಿಷ್ಠ 4,636 ಡಾಲರ್‌ (ಅಂದಾಜು 4 ಲಕ್ಷ) ಇರಬೇಕಾಗುತ್ತದೆ.

ಶ್ರೀಲಂಕಾದ ಜನಸಂಖ್ಯೆ ಸುಮಾರು 2.2 ಕೋಟಿ. ಅದರ ಒಟ್ಟು ಆರ್ಥಿಕತೆ ಭಾರತಗಿಂತ ಬಹಳ ಕಡಿಮೆಯಿದ್ದರೂ, ತಲಾ ಆದಾಯ ಮಿತಿಯನ್ನು ದಾಟುವುದು ಅದಕ್ಕೆ ಸುಲಭವೇ. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಆ ಗುರಿ ಮಟ್ಟುವುದು ಅಷ್ಟು ಸುಲಭವಲ್ಲ.

ಭಾರತವು ಹಲವು ದೇಶಗಳನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆದರೆ ಪ್ರತಿ ವ್ಯಕ್ತಿಯ ಸರಾಸರಿ ಆದಾಯ ಇನ್ನೂ ಸುಧಾರಿಸಿಲ್ಲ. ದೇಶದ ಸಂಪತ್ತು ಕೆಲವು ವರ್ಗಗಳ ಕೈಯಲ್ಲಿ ಕೇಂದ್ರೀಕೃತವಾಗಿರುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ ಭಾರತ ಕೆಳ ಮಧ್ಯಮ ಆದಾಯ ವರ್ಗದಲ್ಲೇ ಉಳಿದಿದೆ.

ಕೆಳಮಧ್ಯಮ, ಮೇಲ್ಮಧ್ಯಮ ಆದಾಯ ಎಂದರೇನು?

ತಲಾವಾರು ಒಟ್ಟು ರಾಷ್ಟ್ರೀಯ ಆದಾಯವನ್ನು ಅಮೆರಿಕದ ಡಾಲರ್‌ ಲೆಕ್ಕದಲ್ಲಿ ಅಂದಾಜಿಸಿ ದೇಶಗಳನ್ನು ಕಡಿಮೆ ಆದಾಯ, ಕೆಳ ಮಧ್ಯಮ ಆದಾಯ, ಮೇಲ್ಮಧ್ಯಮ ಆದಾಯ, ಹೆಚ್ಚಿನ ಆದಾಯದ ರಾಷ್ಟ್ರಗಳು ಎಂದು ವಿಶ್ವ ಬ್ಯಾಂಕ್‌ ವರ್ಗೀಕರಿಸಿದೆ.

1990ರಲ್ಲಿ ವಿಶ್ವ ಬ್ಯಾಂಕ್‌ ಒಟ್ಟು 218 ದೇಶಗಳನ್ನು ಹೀಗೆ ವರ್ಗೀಕರಿಸಿತ್ತು. 51 ದೇಶಗಳು ಕಡಿಮೆ ಆದಾಯದ ವರ್ಗದಲ್ಲಿ ಇದ್ದವು. 56 ದೇಶಗಳು ಕೆಳ ಮಧ್ಯಮ ಆದಾಯದ ವರ್ಗದಲ್ಲಿ, 29 ದೇಶಗಳು ಮೇಲ್ಮಧ್ಯಮ ಆದಾಯದ ವರ್ಗದಲ್ಲಿ ಹಾಗೂ 39 ದೇಶಗಳು ಹೆಚ್ಚಿನ ಆದಾಯದ ವರ್ಗದಲ್ಲಿ ಇದ್ದವು.

2024ರಲ್ಲಿ ಪ್ರಕಟವಾಗಿರುವ ಅಂಕಿ-ಅಂಶಗಳ ಪ್ರಕಾರ 26 ದೇಶಗಳು ಮಾತ್ರವೇ ಕಡಿಮೆ ಆದಾಯದ ವರ್ಗದಲ್ಲಿವೆ. 87 ದೇಶಗಳು ಹೆಚ್ಚಿನ ಆದಾಯದ ವರ್ಗಕ್ಕೆ ಬಂದಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani