ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಮಂಗಳವಾರ ಆಚರಿಸಲಾಯಿತು.
ಈ ವೇಳೆ ಕನ್ನಡ ಉಪನ್ಯಾಸಕ ಬಿ.ಕೆ.ರಮೇಶ್, 'ಕನ್ನಡ ಭಾಷೆ ಅತ್ಯಂತ ಪ್ರಾಚೀನ ಪರಂಪರೆ, ಶಾಸ್ತ್ರೀಯ ಸ್ಥಾನಮಾನ ಹೊಂದಿದೆ.
ಸ್ವತಂತ್ರ ಲಿಪಿ, ಪ್ರತ್ಯೇಕ ಬಾವುಟ ಹೊಂದಿರುವ ಭಾಷೆ ಮತ್ತು ನಾಡು ನಮ್ಮದು. ಹಲ್ಮಿಡಿ, ಬಾದಾಮಿ ಶಾಸನ, ಕವಿರಾಜ ಮಾರ್ಗ ಕೃತಿ ಕನ್ನಡದ ಪ್ರಾಚೀನ ಗ್ರಂಥಗಳು. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಪ್ರತಿಷ್ಠಿತ ಭಾಷೆಯಾಗಿದೆ' ಎಂದು ತಿಳಿಸಿದರು.
ಕನ್ನಡ ರಾಜರು, ಹೋರಾಟಗಾರರು, ಕನ್ನಡ ಸಾಹಿತಿಗಳು, ಕನ್ನಡಿಗರು ನಾಡನ್ನು ಕಟ್ಟಿ ಬೆಳೆಸಿದ್ದಾರೆ. ಇದನ್ನು ಪರಭಾಷೆ ಮತ್ತು ಭಾಷಿಕರಿಂದ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಭಾಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಾಯಾ ಬಾಲಚಂದ್ರ, 'ಆಂಧ್ರದ ಗಡಿ ಭಾಗದಲ್ಲಿರುವ ನಮಗೆ ತೆಲುಗು ಪ್ರಭಾವ ಹೆಚ್ಚಾದರೂ ಕನ್ನಡಕ್ಕೇನು ಕೊರತೆಯಿಲ್ಲ. ಮನೆಯೇ ಮೊದಲ ಪಾಠಶಾಲೆ. ಇಲ್ಲಿಂದಲೇ ಮಕ್ಕಳಿಗೆ ಮಾತೃಭಾಷೆಯ ಕಲಿಕೆಯಾಗಬೇಕು. ಕರ್ನಾಟಕದಲ್ಲಿ ಕನ್ನಡಿಗರು ಅನ್ಯ ಭಾಷಿಕರ ನಡುವೆ ಅಲ್ಪಸಂಖ್ಯಾತರು ಬೇಡ. ಕನ್ನಡ ಪ್ರೀತಿ ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗದೆ ನಿತ್ಯ ನೂತನವಾಗಬೇಕು' ಎಂದು ಹೇಳಿದರು.
ಪ್ರಾಂಶುಪಾಲ ಎನ್.ಶಂಕರೇಗೌಡ, ಉಪನ್ಯಾಸಕರಾದ ಗೋಪಾಲನ್, ಶ್ರೀನಾಥ್, ಗೋಪಿನಾಥ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
261104-18-386234797

