ಶೃಂಗೇರಿ: ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ತಾಲ್ಲೂಕಿನ ಕಿಗ್ಗಾದ ಶಾಂತ ಸಮೇತ ಋಷ್ಯಶೃಂಗೇಶ್ವರ ಸ್ವಾಮಿಗೆ ಸರ್ಕಾರದ ಪರವಾಗಿ ಶಾಸಕ ಟಿ.ಡಿ. ರಾಜೇಗೌಡ ಶುಕ್ರವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಏಕರುದ್ರಾಭಿಷೇಕ, ವಿವಿಧ ಧಾರ್ಮಿಕ ವಿಧಿವಿಧಾನಗಳು 6 ಋತ್ವಿಜರ ಸಮ್ಮಖದಲ್ಲಿ ನೆರವೇರಿದವು.
ಸೋಮವಾರದಿಂದ ಒಂದು ವಾರ ಪರ್ಜನ್ಯ ಜಪ ನಡೆಯಲಿದೆ.
ಬಳಿಕ ಮಾತನಾಡಿದ ಶಾಸಕ ಟಿ.ಡಿ. ರಾಜೇಗೌಡ, 'ರಾಜ್ಯದ್ಯಾಂತ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದೆ. ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿಗ್ಗಾಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದಾಗ ಉತ್ತಮ ಮಳೆ ಬಂದು ಅಣೆಕಟ್ಟೆಗಳಲ್ಲಿ ನೀರು ತುಂಬಿತ್ತು. ಮಳೆ ದೇವರು ಎಂದು ಖ್ಯಾತಿ ಪಡೆದ ಶಾಂತ ಸಮೇತ ಋಷ್ಯಶೃಂಗೇಶ್ವರ ಸ್ವಾಮಿಗೆ ಸೋಮವಾರದಿಂದ ಪರ್ಜನ್ಯ ಜಪ ಹಮ್ಮಿಕೊಳ್ಳಲಾಗಿದೆ' ಎಂದರು.
'ಮಳೆ ಬಾರದೆ ರೈತರು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಕಿಗ್ಗಾ ದೇವಾಲಯದಲ್ಲಿ ನಡೆಸಿದ ಪೂಜೆಯಿಂದ ಮಳೆ ಸುರಿದು ನಾಡು ಸುಭಿಕ್ಷೆಯಾಗಲಿ ಎಂದು ಪ್ರಾರ್ಥನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದೇವೆ' ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ. ರಮೇಶ್ ಭಟ್, ಕುಕ್ಕುಡಿಗೆ ರವಿಂದ್ರ, ಕಾಂಗ್ರೆಸ್ ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ, ಅನಿಲ್ ಹೊಸಕೊಪ್ಪ, ಸದಾಶಿವ, ಪುಟ್ಟಪ್ಪ ಹೆಗ್ಡೆ, ನಟರಾಜ್, ದಿನೇಶ್ ಹೆಗ್ಡೆ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತ್ರಿವೇಣಿ, ಸೌಭಾಗ್ಯ ಗೋಪಾಲ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಗುತ್ತಳಿಕೆ ಕೇಶವ್, ವಿಠಲ ಶೆಟ್ಟಿ, ಪ್ರಜ್ವಲ್, ಹೇಮಾವತಿ, ರಾಮಪ್ಪ ಗೌಡ, ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ದರ್ಶನ್, ಶಾನುಭೋಗ್ ಅರುಣಾಚಲ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-126-631578835

