ಬೆಂಗಳೂರು: ವಿದ್ಯಾರ್ಥಿವೇತನ ವಿಳಂಬದ ಕಾರಣಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ದಂಡನಾ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಪದವಿ ಕಾಲೇಜುಗಳಿಗೆ ಸೂಚನೆ ನೀಡಿದೆ.
ವಿದ್ಯಾರ್ಥಿವೇತನದ ಹಣ ಬಿಡುಗಡೆಯಾಗಲು ವಿಳಂಬವಾದ ಕಾರಣ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುತ್ತಿದೆ ಹಾಗೂ ಮೂಲ ಪ್ರಮಾಣಪತ್ರಗಳನ್ನು ತಡೆಹಿಡಿಯಲಾಗುತ್ತಿದೆ ಎಂದು ಹಲವು ಪೋಷಕರು, ವಿದ್ಯಾರ್ಥಿಗಳು ಇಲಾಖೆಗೆ ದೂರು ಸಲ್ಲಿಸಿದ್ದರು.
ರಾಜ್ಯ ಅಥವಾ ಕೇಂದ್ರದ ವಿದ್ಯಾರ್ಥಿವೇತನ ಮಂಜೂರು ಅಥವಾ ವಿತರಣೆಯಲ್ಲಿ ಆಗುವ ವಿಳಂಬ ಆಡಳಿತಾತ್ಮಕ ವಿಚಾರವಾಗಿದ್ದು, ಅದಕ್ಕೆ ವಿದ್ಯಾರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ತರಗತಿಗಳು ಆಂತರಿಕ ವಿಷಯವಾಗಿದ್ದು, ಮಂಡಳಿ ಹಾಗೂ ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ಹಾಜರಾಗುವುದನ್ನು ತಡೆಯಬಾರದು. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ಎಲ್ಲ ಕಾಲೇಜುಗಳು ನಿರ್ದೇಶನಗಳನ್ನು ಪಾಲಿಸಬೇಕು. ನಿರ್ದೇಶನ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
'ಕೆಲ ವಿದ್ಯಾರ್ಥಿಗಳು ತಮ್ಮ ಖಾತೆಗೆ ವಿದ್ಯಾರ್ಥಿವೇತನದ ಹಣ ಜಮೆಯಾಗಿದ್ದರೂ ಶುಲ್ಕ ಪಾವತಿಸುತ್ತಿಲ್ಲ. ಪದವಿ ಮುಗಿಸಿ ಕಾಲೇಜಿನಿಂದ ಹೊರಹೋಗುವವರಿಗೆ ಪ್ರಮಾಣಪತ್ರಗಳನ್ನು ನೀಡಿದ ನಂತರ ಶುಲ್ಕ ವಸೂಲಿ ಮಾಡುವುದು ಕಷ್ಟವಾಗುತ್ತದೆ' ಎಂದು ಕಾಲೇಜು ಆಡಳಿತ ಮಂಡಳಿಗಳ ಪ್ರತಿನಿಧಿಗಳು ಹೇಳಿದ್ದಾರೆ.

