ದೇವರಹಳ್ಳಿ (ಚನ್ನಗಿರಿ): ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸುವ ಸಮಯದಲ್ಲಿ ಶುಶ್ರೂಷಕಿಯ ಕೈಯಿಂದ ನವಜಾತ ಶಿಶು ಕೈಯಿಂದ ಜಾರಿ ಬಿದ್ದು ಮೃತಪಟ್ಟಿದೆ ಎಂದು ನವಜಾತ ಶಿಶುವಿನ ಕಡೆಯವರು ಬುಧವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ತಿಮ್ಮೇಶ್ ಅವರ ಪತ್ನಿ ಲಕ್ಷ್ಮೀ ಅವರು ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಶುಶ್ರೂಷಕಿ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ತಿಮ್ಮೇಶ್ ಕುಟುಂಬದವರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.
'ವೈದ್ಯರು ಇಲ್ಲದಿದ್ದರೂ ಶುಶ್ರೂಷಕಿ ಹೇಗೆ ಹೆರಿಗೆ ಮಾಡಿಸಿದರು. ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಆಗುವುದಿಲ್ಲ ಎಂದು ಹೇಳಿದ್ದರೆ ದಾವಣಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆವು.
ಶುಶ್ರೂಷಕಿ 'ನನ್ನಿಂದ ಲೋಪವಾಗಿಲ್ಲ' ಎಂದು ಹೇಳಿದರೂ ಪೋಷಕರು ಹಾಗೂ ಕುಟುಂಬದವರು ಪ್ರತಿಭಟಿಸಿದರು.
'ಶುಶ್ರೂಷಕಿಯ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಮಗು ಹೊಟ್ಟೆಯೊಳಗೇ ಮೃತಪಟ್ಟಿತ್ತು. ಅದನ್ನು ಹೊರತೆಗೆಯಲು ಶುಶ್ರೂಷಕಿ ಹರಸಾಹಸಪಟ್ಟಿದ್ದಾರೆ. ಮಗುವನ್ನು ಸಮಯಕ್ಕೆ ಸರಿಯಾಗಿ ಹೊರಗೆ ತೆಗೆಯದಿದ್ದರೆ ತಾಯಿಯ ಜೀವವೂ ಹೋಗುವ ಸಂಭವ ಇತ್ತು. ಅಗತ್ಯವಿದ್ದರೆ ಮಗುವಿನ ಶವದ ಮರಣೋತ್ತರ ಪರೀಕ್ಷೆ ಮಾಡಿಸಿ. ಇದರಿಂದ ಸತ್ಯಾಂಶ ತಿಳಿಯಲಿದೆ. ತುರ್ತಾಗಿ ಹೆರಿಗೆ ಮಾಡಿಸಲೇಬೇಕಾದ ಸಂದರ್ಭ ಬಂದಿದ್ದರಿಂದ ಶುಶ್ರೂಷಕಿ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ' ಎಂದು ಡಾ. ಮಂಜುನಾಥ್ ಗ್ರಾಮಸ್ಥರಿಗೆ ಹಾಗೂ ಕುಟುಂಬದವರಿಗೆ ಮನವರಿಕೆ ಮಾಡಿಸಿದರು.
ನಂತರ ಗ್ರಾಮಸ್ಥರು ಹಾಗೂ ಕುಟುಂಬದವರು ವಾಪಸಾದರು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
