ಬೆಂಗಳೂರು: 'ರಾಜ್ಯದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ 2,000 ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಸಂಕಲ್ಪ ಮಾಡಲಾಗಿದೆ. ಸಿಎಸ್‌ಆರ್ ನಿಧಿಯ ಸದ್ಬಳಕೆಗೆ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪ್ರತ್ಯೇಕ ಕಣ್ಗಾವಲು ವ್ಯವಸ್ಥೆ ಜಾರಿಗೆ ತರುತ್ತೇವೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳು ಮತ್ತು ಕೈಗಾರಿಕೆಗಳ ಸಂಘವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ 'ವಿಷನ್ 2030- ಸಿಎಸ್‌ಆರ್ ಸಮಾ ವೇಶ'ವನ್ನು ಉದ್ದೇಶಿಸಿ ಅವರು ಮಾತನಾಡಿದರು.
'ರಾಜ್ಯದಲ್ಲಿ ಕಾರ್ಪೊರೇಟ್ ಕಂಪನಿಗಳು ನಡೆಸುವ ವಹಿವಾಟಿನ ಲೆಕ್ಕಾಚಾರದಲ್ಲಿ ವಾರ್ಷಿಕ ₹10,000 ಕೋಟಿಗೂ ಹೆಚ್ಚು ಮೊತ್ತವನ್ನು ಸಿಎಸ್‌ಆರ್ ನಿಧಿ ರೂಪದಲ್ಲಿ ವೆಚ್ಚ ಮಾಡಲು ಅವಕಾಶವಿದೆ. ಆದರೆ 2024-25ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ವಿನಿಯೋಗವಾದ ಸಿಎಸ್‌ಆರ್ ನಿಧಿ ₹3,394 ಕೋಟಿ ಮಾತ್ರ. ಈ ನಿಧಿ ಬಳಕೆಗೆ ಇರುವ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಈ ನಿಧಿಯ ಬಳಕೆಗೆ ಆದ್ಯತೆಯಾಗಬೇಕು' ಎಂದರು.
'ಕಾರ್ಪೊರೇಟ್ ಕಂಪನಿಗಳು ಶಾಲೆಗಳನ್ನು ಅಭಿ ವೃದ್ಧಿಪಡಿಸಬೇಕು. ಹಾಗೆಂದು ನಗರ ಮತ್ತು ಜಿಲ್ಲಾ ಕೇಂದ್ರದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ರಾಜ್ಯದ ಯಾವುದೇ ಗ್ರಾಮದ ಶಾಲೆಯನ್ನಾದರೂ ಆಯ್ಕೆ ಮಾಡಿಕೊಂಡು, ಅಭಿವೃದ್ಧಿಪಡಿಸಿ. ಗ್ರಾಮೀಣ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ನೆರವಾಗಿ' ಎಂದು ಕರೆ ನೀಡಿದರು.
'ಕಂಪನಿಗಳು ತಮ್ಮ ಹೆಸರಿನೊಂದಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಶಾಲೆಯ ಅಭಿವೃದ್ಧಿಯ ಜತೆಗೆ ಕಂಪನಿಯ ಬ್ರ್ಯಾಂಡಿಂಗ್‌ಗೆ ಅವಕಾಶವಿರಲಿದೆ. ಕಂಪ್ಯೂಟರ್, ಲ್ಯಾಬ್, ವಾಹನ, ಕಟ್ಟಡ ಸೇರಿದಂತೆ ಯಾವುದೇ ರೂಪದಲ್ಲಿ ನೆರವು ನೀಡಬಹುದು. ನೀವೇ ಗುತ್ತಿಗೆದಾರರನ್ನು ಆಯ್ಕೆ ಮಾಡಿಕೊಂಡು ಶಾಲೆ ನಿರ್ಮಿಸಿ. ಸರ್ಕಾರ ಸ್ಥಳ ಮತ್ತು ಅಗತ್ಯ ಸಹಕಾರ ನೀಡಲಿದೆ' ಎಂದು ವಿವರಿಸಿದರು.
'ಸಿಎಸ್‌ಆರ್ ಅಡಿಯಲ್ಲಿ ಕೆಲ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಇನ್ಫೊಸಿಸ್, ವಿಪ್ರೊ ಸೇರಿ ಹಲವು ಸಂಸ್ಥೆಗಳ ಕಾರ್ಯವೈಖರಿಯ ಮಾಹಿತಿ ಸರ್ಕಾರದ ಬಳಿ ಇದೆ' ಎಂದರು.
'ಶಾಲೆ ಪ್ರವೇಶಕ್ಕೆ ಅಲೆದಾಡಿದ್ದೆ'
'ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ, 8ನೇ ತರಗತಿಗೆ ನನ್ನಿಷ್ಟದ ಶಾಲೆಯಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಶಾಲಾ ಪ್ರವೇಶಕ್ಕಾಗಿ ಅಲೆದಾಡಿದ್ದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ನಮ್ಮ ತಂದೆ ತಾಲ್ಲೂಕು ಮಂಡಳಿ ಸದಸ್ಯರಾಗಿದ್ದರು. ನನ್ನನ್ನು ವಸತಿ ಶಾಲೆಗೆ ಸೇರಿಸಲು, ಕನಕಪುರದ ಅಂದಿನ ಶಾಸಕ ಡಿ.ಕರಿಯಪ್ಪಗೌಡ ಅವರ ಬಳಿ ಕರೆದೊಯ್ದಿದ್ದರು. ಮುಖ್ಯಮಂತ್ರಿ ದೇವರಾಜ ಅರಸು ಬಳಿಗೂ ತೆರಳಿದ್ದರು' ಎಂದರು.
'ಎನ್‌ಪಿಎಸ್ ಶಾಲೆಯ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಅವರು ಬಹಳ ನಿಷ್ಠುರ, ಅವರ ಬಳಿ ಶಿಫಾರಸು ನಡೆಯುವುದಿಲ್ಲ ಎಂದು ದೇವರಾಜ ಅರಸು ಅವರು ತಿಳಿಸಿದ್ದರು. ಆದರೆ ವಿದ್ಯಾವರ್ಧಕ ಸಂಘದ ಸರ್ದಾರ್ ಪಟೇಲ್ ಶಾಲೆಗಳ ಶಾಖೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಕೋರಿದ್ದ ಪತ್ರಕ್ಕೆ ಸಹಿ ಮಾಡಿ, ನನ್ನನ್ನೂ ಒಳಗೊಂಡಂತೆ ಮೂವರಿಗೆ ವಿದ್ಯಾ ವರ್ಧಕ ಶಾಲೆಯಲ್ಲಿ ಪ್ರವೇಶ ಕಲ್ಪಿಸುವಂತೆ ಶಿಫಾರಸು ಮಾಡಿದ್ದರು' ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-51-1028278726
