ಅಮೆರಿಕ ಮತ್ತು ಇರಾನ್‌ನ ನಾಯಕರು ಎರಡು ವಾರಗಳ ಹಿಂದೆ ಯುದ್ಧವನ್ನು ಕೊನೆಗೊಳಿಸಲು ಮತ್ತು ದೀರ್ಘಕಾಲೀನ ಪರಮಾಣು ಮಾತುಕತೆಗಳಿಗೆ ಅಡಿಪಾಯ ಹಾಕಲು 60 ದಿನಗಳ ಕದನ ವಿರಾಮದ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದರಷ್ಟೇ. 14 ಅಂಶಗಳನ್ನು ಒಳಗೊಂಡಿದ್ದ, 'ಇಸ್ಲಾಮಾಬಾದ್ ಮೆಮೊರಂಡಮ್' ಎಂದು ಕರೆಯಲಾದ ಆ ಒಪ್ಪಂದದಿಂದ ತೈಲ ಬಿಕ್ಕಟ್ಟು ಕೊನೆಗೊಳ್ಳಬಹುದು ಎಂದು ಜಗತ್ತು ನಿಟ್ಟುಸಿರುಬಿಟ್ಟಿತು. ಆದರೆ, ಇದೀಗ ಮತ್ತೆ ಉದ್ವಿಗ್ನ ಸ್ಥಿತಿ!
ಹೊರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದ ಅಮೆರಿಕದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಪ್ರತಿದಾಳಿಯನ್ನು ನಡೆಸಿದೆ. ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮುಂದಿನ ದಿನಗಳಲ್ಲಿ 'ನರಕ ಸದೃಶ ಪರಿಸ್ಥಿತಿಯನ್ನು ಎದುರಿಸಲಿವೆ' ಎಂದು ಇರಾನ್ ಎಚ್ಚರಿಸಿದೆ. 'ಅಮೆರಿಕವನ್ನು ಕೆಣಕಿದರೆ ಇರಾನ್ ಅಸ್ತಿತ್ವವನ್ನು ಇಲ್ಲವಾಗಿಸುತ್ತೇವೆ' ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. 60 ದಿನಗಳಲ್ಲಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಇರಾನ್ ಮತ್ತು ಅಮೆರಿಕ ನಡುವಿನ ತಿಳಿವಳಿಕೆ ಪತ್ರದಲ್ಲಿನ (ಎಂಒಯು) ಪ್ರಮುಖ ಅಂಶಗಳು ಹೀಗಿವೆ: ಇರಾನ್ ಹಾಗೂ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಲೆಬನಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಮೆರಿಕ ಮತ್ತು ಇರಾನ್ ಪರಸ್ಪರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಅಮೆರಿಕ ತೆರವುಗೊಳಿಸಬೇಕು. ಅದಕ್ಕೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸುರಕ್ಷಿತ, ಶುಲ್ಕರಹಿತ ಸಾಗಣೆಗೆ ಇರಾನ್ ವ್ಯವಸ್ಥೆ ಮಾಡಬೇಕು. ಅಮೆರಿಕ ಮತ್ತು ಇರಾನ್ ಗರಿಷ್ಠ 60 ದಿನಗಳ ಅವಧಿಯಲ್ಲಿ ಮಾತುಕತೆ ನಡೆಸಿ ಅಂತಿಮ ಒಪ್ಪಂದಕ್ಕೆ ಬದ್ಧವಾಗಬೇಕು. ಅಂತಿಮ ಒಪ್ಪಂದದ ಬಳಿಕ ಇರಾನ್‌ನ ಪುನರ್ ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಕನಿಷ್ಠ 300 ಬಿಲಿಯನ್ ಡಾಲರ್ ಮೌಲ್ಯದ ನಿರ್ಣಾಯಕ, ಪರಸ್ಪರ ಒಪ್ಪಿಗೆಯ ಯೋಜನೆಗಳನ್ನು ಅಮೆರಿಕ ಮತ್ತು ಪ್ರಾದೇಶಿಕ ಪಾಲುದಾರರು ಅಭಿವೃದ್ಧಿಪಡಿಸಬೇಕು.
ಇದರ ಜೊತೆಗೆ ಇರಾನ್ ಮೇಲೆ ಅಮೆರಿಕ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಧಿಸಿರುವ ಎಲ್ಲ ಬಗೆಯ ದಿಗ್ಬಂಧನ, ಆಸ್ತಿ ಮುಟ್ಟುಗೋಲುಗಳನ್ನು ತೆರವುಗೊಳಿಸಬೇಕು. ಉಭಯ ರಾಷ್ಟ್ರಗಳೂ ಪರಸ್ಪರ ಸಮ್ಮತಿಯೊಂದಿಗೆ ಇರಾನ್ ಹೊಂದಿರುವ ಪುಷ್ಟೀಕರಿಸಿದ ಯುರೇನಿಯಂ ನಿರ್ವಹಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂಬ ಅಂಶಗಳು ಸೇರಿವೆ.
ಫ್ರಾನ್ಸ್‌ನಲ್ಲಿ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಮತ್ತು ಇತರ ನಾಯಕರ ಸಮ್ಮುಖದಲ್ಲಿಯೇ ಈ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಅಮೆರಿಕ ಯಾವುದೇ ಮಾತುಕತೆಗೆ ಸಿದ್ಧವಿದೆ ಎಂಬ ಸಂದೇಶವನ್ನು ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ರವಾನಿಸುವುದು ಅವರ ಉದ್ದೇಶವಿದ್ದಿರಬಹುದು.
ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಒಪ್ಪಂದ ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಈ ತಿಳಿವಳಿಕೆ ಪತ್ರಕ್ಕೆ ಸಹಿಹಾಕುವ ಮೂಲಕ ಅಮೆರಿಕ ತನ್ನ ಮಿತ್ರರಾಷ್ಟ್ರಗಳಾದ ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳನ್ನು ಸಂಕಷ್ಟಕ್ಕೆ ದೂಡಿದೆಯೇ ಎಂಬ ಪ್ರಶ್ನೆ ಅದರಲ್ಲಿ ಪ್ರಮುಖವಾದುದು. ಏಕೆಂದರೆ, ಇಸ್ರೇಲ್ ಮೇಲೆ ದಾಳಿ ನಡೆಸಲು ಲೆಬನಾನ್ ಮೂಲದ ಹೆಜ್ಬುಲ್ಲಾ ಬಂಡುಕೋರರನ್ನು ಇರಾನ್ ಬಳಸುತ್ತಿದೆ. ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಇದುವರೆಗೆ ಇಸ್ರೇಲ್ ಅನೇಕ ದಾಳಿಗಳನ್ನು ನಡೆಸಿದೆ. ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷಕ್ಕೆ ಮೂಲ ಕಾರಣ ಇದು. ಜೊತೆಗೆ ಅಮೆರಿಕ ಮತ್ತು ಇಸ್ರೇಲ್ ಕಳೆದ ಫೆಬ್ರುವರಿಯಲ್ಲಿ ಇರಾನ್ ಮೇಲೆ ಆಕ್ರಮಣಕ್ಕೆ ಇಳಿದಾಗ, ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿತ್ತು. ಆ ದಾಳಿ ಕೊಲ್ಲಿ ರಾಷ್ಟ್ರಗಳಲ್ಲಿದ್ದ ಅಮೆರಿಕದ ಸೇನಾನೆಲೆಗಳಿಗೆ ಸೀಮಿತವಾಗಿರಲಿಲ್ಲ. ಕೊಲ್ಲಿ ರಾಷ್ಟ್ರಗಳಿಗೆ ಆರ್ಥಿಕ ಆಘಾತ ನೀಡುವ ಉದ್ದೇಶವನ್ನು ಇರಾನ್ ಹೊಂದಿತ್ತು. ಆದರೆ, ಈ ತಿಳಿವಳಿಕೆ ಪತ್ರದಲ್ಲಿ ಹೆಜ್ಬುಲ್ಲಾ ಮತ್ತು ಇತರ ಉಗ್ರ ಸಂಘಟನೆಗಳನ್ನು ಇರಾನ್ ನಿಗ್ರಹಿಸಬೇಕು ಎಂಬ ಅಂಶ ಇಲ್ಲ. ಕೊಲ್ಲಿ ರಾಷ್ಟ್ರಗಳು ಅಥವಾ ಇಸ್ರೇಲ್ ಮೇಲೆ ಇರಾನ್ ಬೆಂಬಲಿತ ಉಗ್ರ ಸಂಘಟನೆಗಳು ದಾಳಿ ನಡೆಸಿದರೆ ಅದಕ್ಕೆ ಇರಾನ್ ಉತ್ತರದಾಯಿ ಎಂಬ ಉಲ್ಲೇಖ ಇಲ್ಲ!
ಈ ಹಿಂದೆ ಇರಾನ್ ನಾಗರಿಕರು ಖಮೇನಿ ಆಡಳಿತದ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದಾಗ ಅದನ್ನು ಅಮೆರಿಕ ಬೆಂಬಲಿಸಿತ್ತು. ಟ್ರಂಪ್ ಬಹಿರಂಗ ವಾಗಿಯೇ ಪ್ರತಿಭಟನಾಕಾರರ ಪರ ಅಮೆರಿಕ ಇರಲಿದೆ ಎಂದು ಹೇಳಿದ್ದರು. ಹಾಗಾಗಿ, ಪರಸ್ಪರ ಸಾರ್ವಭೌಮತೆಯನ್ನು ಗೌರವಿಸಬೇಕು ಮತ್ತು ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸಬಾರದು ಎಂಬ ಅಂಶ ಇರಾನ್‌ನಲ್ಲಿ ಆಡಳಿತವನ್ನು ಬದಲಿಸುವ ಪ್ರಯತ್ನಕ್ಕೆ ಅಮೆರಿಕ ಕೈ ಹಾಕಬಾರದು ಎಂಬುದನ್ನು ಹೇಳುತ್ತದೆ. ಹೊರ್ಮುಜ್ ಜಲಸಂಧಿಯಲ್ಲಿ ಸುಂಕ ರಹಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಅಂಶವನ್ನು ಅಮೆರಿಕ ಮುಂದು ಮಾಡಿದೆ. ಆದರೆ, ಸುಂಕರಹಿತ ಸಂಚಾರ ಮುಂದಿನ 60 ದಿನ ಗಳಿಗೆ ಮಾತ್ರ ಸೀಮಿತವಾದದ್ದೇ ಅಥವಾ ನಂತರವೂ ಮುಂದುವರಿಯುತ್ತದೆಯೇ ಎಂಬ ಗೊಂದಲ ಇದೆ.
ಇರಾನ್‌ನ ಪುನರ್ ನಿರ್ಮಾಣಕ್ಕೆ ಯೋಜನೆ ರೂಪಿಸುವ ಮತ್ತು ಹಣವನ್ನು ಒದಗಿಸುವ ಬಾಧ್ಯತೆ ಯಾರದ್ದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅಮೆರಿಕ- ತಾನು ಒಂದು ಬಿಡಿಗಾಸನ್ನೂ ನೀಡುವ ಅಗತ್ಯವಿಲ್ಲ, ಬದಲಿಗೆ ಪ್ರಾದೇಶಿಕ ಶಕ್ತಿಗಳಾದ ಕೊಲ್ಲಿ ರಾಷ್ಟ್ರಗಳು ವಿದ್ಯುತ್ ಸ್ಥಾವರ ಮತ್ತು ಇತರ ಯೋಜನೆಗಳ ಮೂಲಕ ಇರಾನ್ ಪುನರ್ ನಿರ್ಮಾಣಕ್ಕೆ ಸಹಕರಿಸುತ್ತವೆ ಎಂದಿದೆ. ಆದರೆ, ಸೌದಿ ಸೇರಿದಂತೆ ಇತರ ರಾಷ್ಟ್ರಗಳು ಈ ಮಾತನ್ನು ಪೂರ್ಣವಾಗಿ ಅನುಮೋದಿಸಿಲ್ಲ. ಈ ಹಿಂದೆ ಒಬಾಮ ಅವರ ಅವಧಿಯಲ್ಲಿ ಪರಮಾಣು ಒಪ್ಪಂದದ ಮಾತುಕತೆಗೆ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ಹಿಡಿದಿತ್ತು. ಹಾಗಾಗಿ, 60 ದಿನಗಳಲ್ಲಿ ಈ ಸಂಕೀರ್ಣ ಸಂಘರ್ಷಕ್ಕೆ ಉತ್ತರ ಹುಡುಕಲು ಸಾಧ್ಯವೇ ಎಂಬುದು ಮತ್ತೊಂದು ಪ್ರಶ್ನೆ. ಮೇಲಾಗಿ ಅಣ್ವಸ್ತ್ರ ಹೊಂದುವ ಪ್ರಯತ್ನವನ್ನು ಇರಾನ್ ಕೈಬಿಡಬೇಕು ಎಂಬ ಸ್ಪಷ್ಟ ನಿಬಂಧನೆ ವಿಧಿಸದೇ, ವಿದೇಶಗಳಲ್ಲಿ ಇರಾನ್ ಹೊಂದಿರುವ ಆಸ್ತಿಗಳ ಮೇಲಿನ ಮುಟ್ಟುಗೋಲು ಮತ್ತು ಆರ್ಥಿಕ ದಿಗ್ಬಂಧನವನ್ನು ತೆರವುಗೊಳಿಸುವ ಅಂಶವನ್ನು ಮಾತ್ರ ಈ ತಿಳಿವಳಿಕೆ ಪತ್ರ ಒಳಗೊಂಡಿದೆ. ಈ ಮಧ್ಯಂತರ ಒಪ್ಪಂದದ ಕುರಿತು ಈಗಾಗಲೇ ಅಮೆರಿಕ ಮತ್ತು ಇಸ್ರೇಲ್‌ನಲ್ಲಿ ತೀವ್ರವಾದ ಟೀಕೆಗಳು ಕೇಳಿಬರುತ್ತಿವೆ. ಈ ತಿಳಿವಳಿಕೆ ಪತ್ರವನ್ನು ಅಮೆರಿಕದ ಶರಣಾಗತಿಯ ಪತ್ರ ಎಂದು ಬಣ್ಣಿಸಲಾಗುತ್ತಿದೆ.
ಅಮೆರಿಕದಲ್ಲಿ ಇದು ಮಧ್ಯಂತರ ಚುನಾವಣೆಯ ಕಾಲ. ಇಂಧನ ಬೆಲೆಯ ಏರಿಕೆ ಮತ್ತು ಹಣದುಬ್ಬರ ಅಮೆರಿಕದಲ್ಲಿ ಟ್ರಂಪ್ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ. ಹಾಗಾಗಿ, ಇಂಧನ ಬೆಲೆಯನ್ನು ತಗ್ಗಿಸಲು, ಆ ಮೂಲಕ ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳನ್ನು ಗೆಲ್ಲಲು ಟ್ರಂಪ್ ಈ ಒಪ್ಪಂದಕ್ಕೆ ಮುಂದಾಗಿದ್ದಾರೆಯೆ ಎನ್ನುವ ಪ್ರಶ್ನೆಯಿದೆ. ಅಮೆರಿಕದ ಮಿಶಿಗನ್, ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾ ಸಂಸ್ಥಾನಗಳ ಮೇಲೆ ರಿಪಬ್ಲಿಕನ್ನರು ಹಿಡಿತ ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದರೆ, ಟ್ರಂಪ್ ವಿರುದ್ಧದ ಆಸ್ತಿ ಹೆಚ್ಚಳದ ಆರೋಪವನ್ನು ಬಳಸಿ, ಅವರನ್ನು ದೋಷಾರೋಪಣೆ ಪ್ರಕ್ರಿಯೆಗೆ ಗುರಿ ಮಾಡಬಹುದು. ಹಾಗಾಗಿ, ಈ ಒಪ್ಪಂದದ ಹಿಂದೆ ಚುನಾವಣಾ ಲೆಕ್ಕಾಚಾರವೂ ಇದೆ.
ಈ ಸಂಘರ್ಷ ಇರಾನ್ ಮತ್ತು ಅಮೆರಿಕಕ್ಕೆ ಸೀಮಿತವಾದುದಲ್ಲ. ಇಸ್ರೇಲ್ ಈ ಸಂಘರ್ಷದ ಪ್ರಮುಖ ಪಾತ್ರಧಾರಿ. ಲೆಬನಾನ್ ಸಹ ಭೂಮಿಕೆ. ಉದ್ವಿಗ್ನತೆಯ ನಡುವೆ ಒಂದು ಆಶಾದಾಯಕ ಬೆಳವಣಿಗೆ ಎಂದರೆ, ಲೆಬನಾನ್ ಮತ್ತು ಇಸ್ರೇಲ್ ನಡುವೆ ಹಗೆತನವನ್ನು ಕೊನೆಗೊಳಿಸಿಕೊಳ್ಳುವ ಒಪ್ಪಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದೆ. ಇಸ್ರೇಲ್ ಸೇನೆಯನ್ನು ಲೆಬನಾನ್‌ನಿಂದ ಹಿಂದಕ್ಕೆ ಕರೆಸಿಕೊಳ್ಳಬೇಕಾದರೆ ಹೆಜ್ಬುಲ್ಲಾವನ್ನು ನಿಗ್ರಹಿಸಬೇಕು ಎಂಬ ಷರತ್ತನ್ನು ಇಸ್ರೇಲ್ ವಿಧಿಸಿದೆ.
ಹೆಜ್ಬುಲ್ಲಾವನ್ನು ನಾಶ ಮಾಡಲು ಇಸ್ರೇಲ್ ಪ್ರಯತ್ನಿಸಿದರೆ ಹೊರ್ಮುಜ್ ಬಿಕ್ಕಟ್ಟು ಬಗೆಹರಿಯಲಾರದು ಎಂದು ಇರಾನ್ ಹೇಳಿದೆ. ಹೀಗೆ ಒಂದಕ್ಕೆ ಮತ್ತೊಂದು ತಳಕು ಹಾಕಿಕೊಂಡಿರುವುದು ಬಿಕ್ಕಟ್ಟನ್ನು ಸಂಕೀರ್ಣಗೊಳಿಸಿದೆ.
ಅಮೆರಿಕ ಹಾಗೂ ಇರಾನ್ ನಡುವಿನ ಈ ಮಧ್ಯಂತರ ಒಪ್ಪಂದದ ಯಶಸ್ಸು ಇಸ್ರೇಲ್, ಹೆಜ್ಬುಲ್ಲಾ ಮತ್ತು ಕೊಲ್ಲಿ ರಾಷ್ಟ್ರಗಳ ಮುಂದಿನ ಹೆಜ್ಜೆ ಏನು ಎಂಬುದನ್ನು ಅವಲಂಬಿಸಿದೆ. ಯಾವುದೇ ಒಪ್ಪಂದ ಯಶಸ್ವಿಯಾಗಬೇಕಾದರೆ ಉಭಯ ಕಕ್ಷಿಗಾರರ ನಡುವೆ ಅಪನಂಬಿಕೆಗೆ ಜಾಗ ಇರಬಾರದು. ಆದರೆ, ಇರಾನ್ ಮತ್ತು ಅಮೆರಿಕದ ನಡುವೆ ಗಾಢ ಅಪನಂಬಿಕೆ ಇದೆ. ಇಸ್ರೇಲ್ ಮತ್ತು ಇರಾನ್ ಎಂದಿಗೂ ಕೂಡದ ಬಿಂದುಗಳು. ಆತುರದ ಒಂದು ಸಣ್ಣ ಕ್ರಿಯೆ, ಸೇನಾ ಚಕಮಕಿ ಮೂರ್ನಾಲ್ಕು ತಿಂಗಳ ಸುದೀರ್ಘ ಶಾಂತಿ ಪ್ರಕ್ರಿಯೆಯನ್ನು ಸುಲಭವಾಗಿ ಹಳ್ಳ ಹಿಡಿಸಬಹುದು. ಹಾಗಾಗದಂತೆ ಎಚ್ಚರ ವಹಿಸಿದರೆ ಮಾತ್ರ ಶಾಂತಿ ಫಲಿಸಬಹುದು!

