Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್

ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್

ಕೆಲವರು ಚಿರಸ್ಥಾಯಿಯಾಗಿಯೇ ಇರುತ್ತಾರೆ. ಶಂಕರ್ ನಾಗ್ ಅಂಥವರ ಸಾಲಿನಲ್ಲಿ ಮುಖ್ಯವಾಗಿ ಕಾಣುವ ಹೆಸರು. ಇವತ್ತಿಗೂ ಯಾವುದೋ ಒಂದು ಆಟೊ ಮೇಲೆ ಅವರ ಚಿತ್ರ ಅಥವಾ ಪೇಂಟಿಂಗ್ ನೋಡಲು ಸಿಕ್ಕಾಗ ಅವರ ಹಳೆಯ ದಿನಗಳು ತಂತಾವೇ ಕಣ್ಮುಂದೆ ಬರುತ್ತವೆ.

ಸಿನಿ ಸಿಪ್‌ ಪಾಡ್‌ಕಾಸ್ಟ್‌: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ಸಂಗತ | 'ದಿಟ್ಟ ಹೆಜ್ಜೆ, ಧೀರ ಕ್ರಮ'ದ ಎಲ್ಲರಂತಲ್ಲದ ಗುರು

ಶಂಕರ್ ನಾಗ್ ಯಃಕಶ್ಚಿತ್ ನಟ ಆಗಿರಲಿಲ್ಲ.

ಅವರು ನಿರ್ದೇಶಕ, ನಿರ್ಮಾಪಕ. ಅದಕ್ಕೂ ಮಿಗಿಲಾಗಿ ದೊಡ್ಡ ಕನಸುಗಾರ. ರಂಗಭೂಮಿಯ ನಂಟನ್ನು ಮುಂಬೈನಿಂದ ಹೊತ್ತು ತಂದಿದ್ದ ಅವರ ಕನ್ನಡ ಉಚ್ಚಾರಣೆಯಲ್ಲಿ ಒಂದು ಅನನ್ಯ ಶೈಲಿ ಇತ್ತು. ಅವರು ಕೈ ಆಡಿಸುತ್ತಿದ್ದ ರೀತಿ, ಆ ಕಾಲದಲ್ಲಿಯೇ ಗುರುತಾಗಿದ್ದ ಅವರ ಪೊಗದಸ್ತಾದ ಗಡ್ಡ, ಹೆಣ್ಣುಮಕ್ಕಳ ಹಿಡಿದಿಡುವ ಮೈಕಟ್ಟು, ಅಂತ್ಯವೇ ಇಲ್ಲದಂತೆ ಕಾಣುತ್ತಿದ್ದ ಕನಸುಗಳು ಅವರನ್ನು ಅಪರೂಪದಲ್ಲಿ ಅಪರೂಪ ಎನ್ನುವಂತೆ ಮಾಡಿದ್ದವು.

ಶಂಕರ್ 'ಕೆರೆಯ ನೀರನು ಕೆರೆಗೆ ಚೆಲ್ಲಿ' ಎನ್ನುವ ಜಾಯಮಾನದವರು. ಗಿರೀಶ ಕಾರ್ನಾಡರು ನಾಟಕವೊಂದರಲ್ಲಿ ಕಂಡು 'ಒಂದಾನೊಂದು ಕಾಲದಲ್ಲಿ' ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದೇ ಈ ನಟನ ಪ್ರವೇಶವಾಯಿತು. ಆ ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ಅಬ್ಬಾಯಿ ನಾಯ್ಡು ಅವರ ಕಣ್ಣು ಇತ್ತ ವಾಲಿತು. 'ಸೀತಾರಾಮು' ಸಿನಿಮಾ ಅಭಿನಯದ ಅವಕಾಶ ಒಲಿದುಬಂದದ್ದು ಹಾಗೆ.

'ಸೀತಾರಾಮು' ಚಿತ್ರದ ಮೊದಲ ದಿನದ ಚಿತ್ರೀಕರಣವೇ ಒಂದು ಹಾಡು. 'ಒಂದೇ ಒಂದು ಆಸೆಯು' ಹಾಡಿಗೆ ನಟಿ ಮಂಜುಳಾ ಜೊತೆ ಕುಣಿಯಬೇಕಿತ್ತು. ಖುದ್ದು ಶಂಕರ್ ಹೇಳಿಕೊಂಡಂತೆ ಕೈ ಒಂದು ಕಡೆ, ಕಾಲೊಂದು ಕಡೆ ಹೋಗುವ ಆಸಾಮಿಗೆ ನೃತ್ಯವಾದರೂ ಎಲ್ಲಿಂದ ಬರಬೇಕು? ನೃತ್ಯ ನಿರ್ದೇಶಕರಾದ ಉಡುಪಿ ಜಯರಾಮ್ ಸೈಕಲ್ ಹೊಡೆದರೂ ಸ್ಟೆಪ್ಪು ಪಕ್ಕಾ ಆಗಲಿಲ್ಲ. ಬೇಸರದಲ್ಲಿ ಮೂಲೆಗೆ ಹೋಗಿ ಸಿಗರೇಟಿಗೆ ಬೆಂಕಿ ಕೊಟ್ಟು ಶಂಕರ್ ನಿಂತುಬಿಟ್ಟರು. ಆಗ ಅವರಲ್ಲಿ ಧೈರ್ಯ ತುಂಬಿದವರು ಮಂಜುಳಾ. ಆ ಹಾಡು ಮುಂದೆ ದೊಡ್ಡ ಹಿಟ್ ಆಯಿತು. ಸಿನಿಮಾ ಕೂಡ ಜನಪ್ರಿಯವಾಯಿತು. ಮೇಲಿಂದ ಮೇಲೆ ಅವಕಾಶಗಳ ಮಹಾಪೂರ. ಶಂಕರ್ ಬದುಕು ಕೂಡ ಸಿನಿಮಾ ರೀಲ್ ಎಷ್ಟು ಚಲನಶೀಲವೋ ಹಾಗೆಯೇ. ನಟನಾಗಿ ಅಭಿನಯಿಸುವ ಅವಕಾಶ ಕೈಬೀಸಿ ಕರೆದ ಮೇಲೆ ಅವರು ಖುದ್ದು ನಿರ್ದೇಶನಕ್ಕೆ ಇಳಿಯಲು ಎರಡು ವರ್ಷ ಸಾಕಾಯಿತು.

'ಮಿಂಚಿನ ಓಟ' ಚಿತ್ರವನ್ನು ನಿರ್ದೇಶಿಸಿದ್ದೇ ಅಲ್ಲದೆ ಅದರ ನಿರ್ಮಾಣಕ್ಕೆ ಅವರು ಹಾಗೂ ಅವರಣ್ಣ ಅನಂತ ನಾಗ್ ಹಣವನ್ನೂ ತೊಡಗಿಸಿದರು. ಹಾಕಿದ್ದ ಬಂಡವಾಳಕ್ಕೆ ಆಗ ಮೋಸ ಅದದ್ದೇನೋ ನಿಜ. ಆದರೆ, ಕಸುಬುದಾರಿಕೆಯ ಹಾಗೂ ಚಿತ್ರಕಥೆಯ ವೇಗದ ದೃಷ್ಟಿಯಿಂದ ಅದು ಈಗಿನ ಬಹುತಾರಾಗಣದ ಯಾವ ಚಿತ್ರಕ್ಕೂ ಕಡಿಮೆ ಏನೂ ಇರಲಿಲ್ಲ. ಆಮೇಲೆ ಎನ್. ಭಕ್ತವತ್ಸಲನ್ ಹಾಗೂ ಎ.ಎನ್. ಮೂರ್ತಿ ಅವರು ನಿರ್ಮಾಣಕ್ಕೆ ಮುಂದೆ ಬಂದಾಗ 'ಗೀತಾ' ಚಿತ್ರದ ಚಿತ್ರಕಥಾ ಬರಹ, ನಿರ್ದೇಶನ, ಅಭಿನಯ ಎಲ್ಲವನ್ನೂ ನಿಭಾಯಿಸಿದರು. ಇಳಯರಾಜಾ ಅವರಲ್ಲಿಗೆ ಹೋಗಿ, ಮರೆಯಲಾಗದ ಗೀತೆಗಳನ್ನು ಸಂಯೋಜಿಸಿಕೊಂಡು ತಂದರು. ಇವತ್ತಿಗೂ 'ಜೊತೆಯಲಿ ಜೊತೆ ಜೊತೆಯಲಿ' ಹಾಡು ಅಸಂಖ್ಯಾತರ ನಾಲಗೆಯ ಮೇಲೆ ನಲಿಯಲು ಕಾರಣ ಶಂಕರ್ ಅವರಿಗಿದ್ದ ಪರಮ ಸಿನಿಮಾ ಪ್ರೀತಿ ಹಾಗೂ ಅಗಾಧವಾದ ಪ್ರಯೋಗಶೀಲತೆ.

ನಿರ್ಮಾಣಕ್ಕೆ ಕೈ ಹಾಕಿ ಸಾಲ ಹೊತ್ತುಕೊಂಡಾಗ ಮೂರು ಶಿಫ್ಟ್ ಗಳಲ್ಲಿ ಅವರು ಅಭಿನಯಿಸಲು ಮುಂದಾದರು. ಬೆಳಿಗ್ಗೆ ಒಂದು ಸಿನಿಮಾ, ಮಧ್ಯಾಹ್ನ ಇನ್ನೊಂದು, ಸಂಜೆಯ ನಂತರ ಮತ್ತೊಂದು ಹೀಗೆ. ಮನೆಗೆ ನಡುರಾತ್ರಿ ಬಂದು, ಮಾಡಿಟ್ಟ ಅಡುಗೆಯನ್ನು ಖುದ್ದು ಬಿಸಿ ಮಾಡಿಕೊಂಡು ಉಂಡು ಮಲಗಿದರೆ ಆ ದಿನ ಮುಗಿದಂತೆ. ನಾಲ್ಕು ತಾಸು ನಿದ್ದೆಯಾದದ್ದೇ ಮತ್ತೆ ಎದ್ದು, ಒಂದು ಚಹಾ ಕುಡಿದು ಬೆಳಗಿನ ಶಿಫ್ಟ್ ಚಿತ್ರೀಕರಣಕ್ಕೆ ಹೊರಡುವುದು ಒಂದಿಷ್ಟು ವರ್ಷ ಮಾಮೂಲಾಗಿಬಿಟ್ಟಿತ್ತು. 'ಅವನು ಹಾಗೆ ರಾಕ್ಷಸನಂತೆ ಕೆಲಸ ಮಾಡುವುದನ್ನು ಕಂಡು ಗಾಬರಿಯಾಗಿತ್ತು' ಎಂದು ಅನಂತನಾಗ್ ಒಮ್ಮೆ ಕಣ್ಣಲ್ಲಿ ನೀರು ತುಂಬಿಕೊಂಡು ನೆನಪಿಸಿಕೊಂಡಿದ್ದರು.

1980ರಿಂದ 84ರವರೆಗೆ ಶಂಕರ್ ಅಭಿನಯದ ಚಿತ್ರಗಳನ್ನು ಲೆಕ್ಕ ಹಾಕಿದರೆ ತಲೆ ಸುತ್ತು ಬರುತ್ತದೆ. ಎಂಟು, ಐದು, ಏಳು ಹೀಗೆ ಎಣಿಸುತ್ತಾ ಬಂದು, 1984ರಲ್ಲಿ 15 ಸಿನಿಮಾಗಳಲ್ಲಿ ಅವರು ನಟಿಸಿದ್ದು ಇವತ್ತಿನ ತಾರಾಮಣಿಗಳಿಗೆ ಗಾಬರಿ ಹುಟ್ಟಿಸೀತು.

ಹಾಡುಗಳ ಧ್ವನಿ ಮುದ್ರಿಸಲು ಮದ್ರಾಸಿಗೋ, ಬಾಂಬೆಗೋ ಹೋಗಿ ಸರತಿಯಲ್ಲಿ ಕಾಯಬೇಕಿತ್ತು. ಕರ್ನಾಟಕದಲ್ಲಿ ಅದಕ್ಕೊಂದು ಸ್ಟುಡಿಯೊ ಇರಲಿಲ್ಲ. ಆ ಕೊರತೆಯನ್ನು ನೀಗಿಸುವ ಸಲುವಾಗಿಯೇ ಸಮಾನಮನಸ್ಕರನ್ನು ಸೇರಿಸಿಕೊಂಡು ಅವರು 'ಸಂಕೇತ್' ಸ್ಟುಡಿಯೊ ಕಟ್ಟಿದರು. ತಮ್ಮ ಸಿನಿಮಾ ಗೀತೆಗಳು ಅಲ್ಲಿಯೇ ರೆಕಾರ್ಡ್ ಆಗುವುದನ್ನು ಕಂಡು ಮಗುವಿನಂತೆ ಸುಖಿಸಿದ್ದರು.

ಸಾಮಾನ್ಯವಾಗಿ ಮೊದಲು ನಿರ್ದೇಶಕ ಆಗಿ ಆಮೇಲೆ ನಟ ಆಗುವವರು ಎರಡನೇ ಮಾರ್ಗವನ್ನು ಹಿಡಿದು ವೃತ್ತಿಬದುಕು ರೂಪಿಸಿಕೊಳ್ಳುತ್ತಾರೆ. ಶಂಕರ್ ಮೊದಲು ನಟರಾಗಿ ಬಂದು, ಆಮೇಲೆ ಎಲ್ಲ ಪ್ರಯೋಗಗಳಿಗೂ ಕೈಹಾಕಿದ್ದು ಅವರೊಳಗೆ ಇದ್ದ 'ಜಾಕ್ ಆಫ್ ಆಲ್' ಗುಣಕ್ಕೆ ಹಿಡಿದ ಕನ್ನಡಿ. ಅಂಬರೀಶ್ ಅಭಿನಯದ 'ಹೊಸ ತೀರ್ಪು' ಚಿತ್ರವನ್ನು ಅವರು ನಿರ್ದೇಶಿಸಿದ್ದು ನಿಸ್ವಾರ್ಥ ಧೋರಣೆಗೆ ಒಂದು ಉದಾಹರಣೆ. ಸ್ನೇಹಿತ ರಮೇಶ್ ಭಟ್ ಹೂಡಿದ ಹಣಕ್ಕೆ ಮೋಸ ಆಗದೆ ಇರಲಿ ಎಂದೇ ಕಡಿಮೆ ಬಜೆಟ್ ನಲ್ಲಿ 'ನೋಡಿ ಸ್ವಾಮಿ ನಾವಿರೋದು ಹೀಗೆ' ಸಿನಿಮಾ ಮಾಡಿಕೊಟ್ಟಿದ್ದು ಅವರ ಕಸುಬುದಾರಿಕೆಗೆ ಸಾಕ್ಷಿ.

ಈ ಯುವ ಪ್ರತಿಭೆಯ ಚುರುಕುತನಕ್ಕೆ ಖುದ್ದು ರಾಜ್ ಕುಮಾರ್ ಕೂಡ ಫಿದಾ ಆದರು. ಅದರ ಪರಿಣಾಮವೇ 'ಒಂದು ಮುತ್ತಿನ ಕಥೆ' ಸಿನಿಮಾ ತಯಾರಾದದ್ದು.

ಆ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಸಮುದ್ರದ ನೀರಿನಾಳದಲ್ಲಿ ಚಿತ್ರಿಸಬೇಕಿತ್ತು. ಆ ಕಾಲದಲ್ಲಿ ಈಗಿನಂತೆ ಸಿಜಿಐ ತಂತ್ರಜ್ಞಾನ ಇರಲಿಲ್ಲ. ಆಮ್ಲಜನಕದ ಪೈಪ್ ಕೂಡ ಹಾಕಿಕೊಳ್ಳುವಂತೆ ಇರಲಿಲ್ಲ. ಕೆನಡಾದಿಂದ ಕ್ಯಾಮೆರಾ ತರಿಸಿದರು. ಇಂಗ್ಲೆಂಡ್ ನಿಂದ ಆಕ್ಟೋಪಸ್ ಒಂದನ್ನು ಮಾಡಿಸಿ ತಂದರು. ಅದರೊಳಗೆ ಕ್ಯಾಮೆರಾ ಇರಿಸಿ ಚಿತ್ರೀಕರಣ ಮಾಡಬೇಕು. ಅದಕ್ಕೆ ಬೇಕಿದ್ದ ನುರಿತ ಕ್ಯಾಮೆರಾಮನ್ ಬಂದದ್ದು ಜರ್ಮನಿಯಿಂದ. ಚಿತ್ರೀಕರಣ ನಡೆಸಿದ್ದು ಮಾಲ್ಡೀವ್ಸ್‌ನಲ್ಲಿ.

ಆರ್.ಕೆ. ನಾರಾಯಣ್ ಬರೆಹಗಳಿಂದ ಸ್ಫೂರ್ತಿ ಪಡೆದು, 'ಮಾಲ್ಗುಡಿ ಡೇಸ್' ಧಾರಾವಾಹಿ ನಿರ್ದೇಶಿಸಿದ್ದು ಇನ್ನೊಂದು ವಿಕ್ರಮ. ಆ ಯೋಜನೆ ಈಡೇರಿಸಿದ್ದೂ ಸಾಲದ ಹೊರೆ ಹೊರುವ ಮೂಲಕ. ಸಿನಿಮಾ ದೋಣಿ ಮೇಲೆ ಒಂದು ಕಾಲು, ಅದರಲ್ಲಿ ಇನ್ನೊಂದು ಕಾಲು ಇಟ್ಟೇ ಅವರು ಆ 'ಮಾಸ್ಟರ್ ಪೀಸ್' ಕೊಟ್ಟದ್ದು. ಚಿತ್ರದುರ್ಗಕ್ಕೂ ದಾವಣಗೆರೆಗೂ ನಡುವಿನ ಆನಗೋಡು ಬಳಿ ಬೆಳಿಗ್ಗೆ ಕಾರು ಅಪಘಾತದಲ್ಲಿ ನಿಧನರಾಗುವ ಹಿಂದಿನ ದಿನ ರಾತ್ರಿ ಇಡೀ ಅವರು ಸಂಕಲನದ ಕೆಲಸ ಮಾಡಿದ್ದರು. ಸ್ಟುಡಿಯೊದಿಂದ ಸೀದಾ ಅವರು ಸಾಗಿದ್ದು ಕಾಣದೂರಿಗೆ. ಅಷ್ಟು ಕಡಿಮೆ ಅವಧಿಯ ವೃತ್ತಿ ಬದುಕಿನಲ್ಲಿ ಅವರು 80ಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟು ಹೋದರು.

ಶಂಕರ್ ನಾಗ್ ಅವರು ಆಕಾಶವಾಣಿಗೆ ಒಂದು ಸಂದರ್ಶನ ನೀಡಿದ್ದರು. ಅದರಲ್ಲಿ ಕೊನೆಗೆ, 'ನನ್ನ ಸಿನಿಮಾ ನೋಡಿ ನನಗೆ ಒಂದು ಪತ್ರ ಬರೆಯಿರಿ. ಏನು ಇಷ್ಟ ಆಗಲಿಲ್ಲ ಎಂದು ಬರೆದರೆ ತಿದ್ದಿಕೊಳ್ಳುವೆ' ಎಂದು ನಮ್ರವಾಗಿ ಹೇಳಿದ್ದರು. ಈಗಲೂ ಅವರಿಗೆ ಪತ್ರ ಬರೆಯಬೇಕು ಅನಿಸುತ್ತದೆ - ಏನು ಹಿಡಿಸಲಿಲ್ಲ ಎಂದು ಹೇಳುವುದಕ್ಕೆ ಅಲ್ಲ, ಈಗಲೂ ಎದೆಯಲ್ಲಿ ಅಭಿಮಾನ ಹೊತ್ತು ಸಾಗುತ್ತಿರುವ ಆಟೊ ಚಾಲಕರ ಅದಮ್ಯ ಪ್ರೀತಿ ಅರುಹಲು.

Dailyhunt
Disclaimer: This content has not been generated, created or edited by Dailyhunt. Publisher: Prajavani