Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿಮಾ ವಿಮರ್ಶೆ: ಸೇಡಿನ ಸುಳಿಯಲ್ಲೇ ಸಿಲುಕಿದ 'ಕರಾವಳಿ'

ಸಿನಿಮಾ ವಿಮರ್ಶೆ: ಸೇಡಿನ ಸುಳಿಯಲ್ಲೇ ಸಿಲುಕಿದ 'ಕರಾವಳಿ'

ರಾವಳಿ ಭಾಗದ ಸಂಸ್ಕೃತಿ-ಆಚರಣೆಯನ್ನು ಕಥಾವಸ್ತುವನ್ನಾಗಿ ಆಯ್ದುಕೊಂಡು ಸಿನಿಮಾ ಮಾಡುವ ಪ್ರಕ್ರಿಯೆ ಇತ್ತೀಚೆಗೆ 'ಕಾಂತಾರ'ದಿಂದ ಆರಂಭವಾಗಿ 'ಮಾರ್ನಮಿ', 'ಗತವೈಭವ' ದಾಟಿ 'ಕರಾವಳಿ'ಯವರೆಗೆ ಬಂದು ನಿಂತಿದೆ. ಕಂಬಳವನ್ನು ಕಥಾವಸ್ತುವನ್ನಾಗಿ ಇಟ್ಟುಕೊಂಡ 'ಕರಾವಳಿ'ಯು ಹೆಚ್ಚಾಗಿ ದ್ವೇಷ-ಸೇಡಿನ ಅಲೆಗಳನ್ನೇ ತೆರೆಗೆ ಬಡಿದಿದೆ.

ಈ ಅಬ್ಬರದಲ್ಲೇ ನಿರ್ದೇಶಕರು ಹಲವು ಅವಕಾಶಗಳನ್ನು ಕಳೆದುಕೊಂಡಂತೆ ಭಾಸವಾಗುತ್ತಾರೆ.

ಕಥೆ ರಿವರ್ಸ್‌ ಸ್ಕ್ರೀನ್‌ಪ್ಲೇಯಲ್ಲಿ ತೆರೆದುಕೊಳ್ಳುತ್ತೆ. ರಕ್ತಸಿಕ್ತ ಅಧ್ಯಾಯವೊಂದು ಆರಂಭವಾಗಿ ಕಥೆ ವರ್ತಮಾನಕ್ಕೆ ಹೊರಳುತ್ತದೆ. ಕಲ್ಕುಂದ ಎಂಬ ಊರಿನಲ್ಲಿರುವ ಕಥಾನಾಯಕ ಧನಂಜಯ (ಪ್ರಜ್ವಲ್‌ ದೇವರಾಜ್‌) ಮನೆಯ ಹಸುವೊಂದನ್ನು ಹುಡುಕಿ ಕರಾವಳಿಯತ್ತ ಹೊರಡುತ್ತಾನೆ. ಆತ 'ಮಹಾಬಲ'ನ (ಮಿತ್ರ) ಮೂಲಕ ಕಂಬಳ ಪ್ರಪಂಚಕ್ಕೂ ಹೆಜ್ಜೆ ಇಡುತ್ತಾನೆ. ಈ ಪ್ರಪಂಚದ 'ದೊಡ್ಡವರು' ಎಂದೇ ಗುರುತಿಸಿಕೊಂಡ ಆದಿಶೇಷ (ರಮೇಶ್‌ ಇಂದಿರಾ) ಮೈಸೂರು ಮಹಾರಾಜರು ಕುಳಿತು ಕಂಬಳ ವೀಕ್ಷಿಸಿದ ಕುರ್ಚಿಯ ಯಜಮಾನ. ಅದುವೇ ಆತನ ಪ್ರತಿಷ್ಠೆ. ಸ್ಪರ್ಧೆಯಲ್ಲಿ ಸೋತು ಆ ಕುರ್ಚಿ ಕೈತಪ್ಪಿ ಹೋಗಬಾರದು ಎಂದು ಹಪಹಪಿಸುವಾತ. ಈ ಹಂತದಲ್ಲಿ ಭೂತಕಾಲದ 'ಮಹಾವೀರ'ನ ಜೀವನ ತೆರೆದುಕೊಂಡಾಗ ಕಥೆ ಮುಂದುವರಿಯುತ್ತದೆ.

ಸುಮಾರು ಮೂರು ವರ್ಷಗಳ ಹಿಂದೆಯೇ ಘೋಷಿಸಿದ ಈ ಸಿನಿಮಾವನ್ನು ಸೂಕ್ತವಾಗಿ ತೆರೆಗೆ ತರುವಲ್ಲಿ ನಿರ್ದೇಶಕರು ಸಫಲವಾಗಿಲ್ಲ. ಕಂಬಳ ಆಚರಣೆಯನ್ನು ಆಯ್ದುಕೊಂಡು ಅದನ್ನು, ಅದರ ಸುತ್ತಲಿನ ಪ್ರಪಂಚವನ್ನು ಸೂಕ್ಷ್ಮವಾಗಿ, ವಿಸ್ತೃತವಾಗಿ ತೆರೆಗೆ ತರುವುದರ ಬದಲು ಕಥೆಯನ್ನು ಸೇಡಿನ ಆಯಾಮದಲ್ಲೇ ಕೊಂಡೊಯ್ದಿದ್ದಾರೆ. ಕರಾವಳಿಯ ಜನ-ಜೀವನ ಸೆರೆ ಹಿಡಿಯುವ ಅವಕಾಶವನ್ನೂ ಕೈಚೆಲ್ಲಿದ್ದಾರೆ. ಇದಕ್ಕೆ ಹೋಲಿಸಿದರೆ ಕಳೆದ ವರ್ಷ ತೆರೆಕಂಡ 'ಗತವೈಭವ'ದಲ್ಲಿ ಕಂಬಳದ ದೃಶ್ಯವನ್ನು ಸುಂದರವಾಗಿ ಕಟ್ಟಿಕೊಡಲಾಗಿತ್ತು. ದುಷ್ಯಂತ್‌ ಕರೆಯಲ್ಲಿ ಓಡಿದ ರೀತಿಯೂ ಅದ್ಭುತವಾಗಿತ್ತು.

ಪಾತ್ರಗಳಿಗೆ ಕಲಾವಿದರ ಆಯ್ಕೆಯಲ್ಲೇ ನಿರ್ದೇಶಕರು ಎಡವಿರುವುದು ಸ್ಪಷ್ಟವಾಗಿ ತೆರೆ ಮೇಲೆ ಕಾಣಿಸುತ್ತದೆ. ಆಯ್ಕೆ ಮಾಡಿದ ನಾಯಕನನ್ನು ಕಥೆಯ ವಸ್ತುವಿಗೆ ಸೂಕ್ತವಾಗಿ ತಯಾರು ಮಾಡದೇ ಇರುವುದು ದೃಶ್ಯಗಳಲ್ಲಿ ಕಾಣಿಸುತ್ತದೆ. ಕರೆಯಲ್ಲಿ ನಾಯಕನ ಒಂದೂ ಸಂಪೂರ್ಣ ಓಟವಿಲ್ಲ. ಬಿಡುಗಡೆ ಮಾಡಿದ ಪೋಸ್ಟರ್‌ಗಳಿಗೂ ಕಥೆಯ ದೃಶ್ಯಗಳಿಗೂ ಸಂಬಂಧವೇ ಇಲ್ಲ. ಹಲವು ದೃಶ್ಯಗಳು ಕಥೆಯ ಬಗ್ಗೆ ಪ್ರಶ್ನೆ ಹುಟ್ಟಿಸುವಂತೆ ಮಾಡುತ್ತವೆ. ಸಂಕಲನದ ಸಂದರ್ಭದಲ್ಲಿ ಬದಲಾವಣೆಗಳಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಕೊನೆ ಕೊನೆಯಲ್ಲಿ ಕಲ್ಕುಂದ-ಕರಾವಳಿಗೂ ಅಂತರವಿರುವುದೇ ಇಲ್ಲ.

ಯಕ್ಷಗಾನ ವೇಷ ಹಾಕಿಸಿದ ಬಳಿಕ ನಾಯಕನ ನಟನೆಯ ಸಾಮರ್ಥ್ಯವನ್ನು ವೇದಿಕೆಯಲ್ಲಿ ತೋರಿಸಬಹುದಾಗಿದ್ದ ಅವಕಾಶವಿತ್ತು. ಇದನ್ನು ಬಿಟ್ಟು ಸಿದ್ಧಸೂತ್ರಕ್ಕೆ ಜೋತುಬಿದ್ದು ಆತನ ಕೈಯಿಂದ ಸಾಹಸ ದೃಶ್ಯವನ್ನು ಮಾಡಿಸಿದ್ದಾರೆ. ಆ ಸಾಹಸ ದೃಶ್ಯಕ್ಕೆ ಗಟ್ಟಿಯಾದ ಹಿನ್ನೆಲೆ ಏನಾದರೂ ಇದೆಯೇ ಎಂದು ಹುಡುಕಿದರೆ ಅದೂ ಇಲ್ಲ. ಆ ಯಕ್ಷಗಾನದ ಅಂಶಗಳು ಮುಂದುವರಿಯುತ್ತವೆಯೇ? ಅದೂ ಇಲ್ಲ. ಕಥೆಯಲ್ಲಿ ಧನಂಜಯನ ಪ್ರೀತಿಯ ಅಧ್ಯಾಯವನ್ನು ತುರುಕಿದಂತಿದೆ. 'ಮಹಾವೀರ'ನಾಗಿ ರಾಜ್‌ ಬಿ.ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೋಣಗಳನ್ನು ಓಡಿಸುವ ಮೂಲಕ ಪ್ರಯತ್ನಪಟ್ಟರೆ ಕಲಾವಿದ ಏನನ್ನಾದರೂ ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ. ಕಂಬಳದ ಕೋಣಗಳು ಹಾಗೂ ಅದರ ಜೊತೆ ಅದನ್ನು ನೋಡಿಕೊಳ್ಳುವವರ ಸಂಬಂಧವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ಪ್ರಜ್ವಲ್‌ ದೇವರಾಜ್‌, ಮಿತ್ರ, ರಮೇಶ್‌ ಇಂದಿರಾ ನಟನೆ ಚೆನ್ನಾಗಿದೆ. ಸಂಪದಾ ಹಾಗೂ ಸುಷ್ಮಿತಾ ಭಟ್‌ ನಿಭಾಯಿಸಿದ ಪಾತ್ರಗಳ ಬರವಣಿಗೆಯಲ್ಲಿ ಗಟ್ಟಿತನವೇ ಇಲ್ಲ. ಗಟ್ಟಿಗಿತ್ತಿಯಂತೆ ಕಾಣುವ 'ಭೂಮಿ' ಪಾತ್ರವನ್ನು ಮದುವೆಗೆ, ಹೆರಿಗೆಗೆ ಸೀಮಿತವಾಗಿಸಿದ್ದಾರೆ.

ಇಷ್ಟಾಗಿಯೂ ಸಿನಿಮಾವನ್ನು ಉಳಿಸುವುದು ಅಭಿಮನ್ಯು ಸದಾನಂದನ್‌ ಛಾಯಾಚಿತ್ರಗ್ರಹಣ ಹಾಗೂ ಸಚಿನ್‌ ಬಸ್ರೂರು ಸಂಗೀತ. ಬಿ.ಜಯಶ್ರೀ ಅವರ ದನಿಯಲ್ಲಿ ಮೂಡಿದ ಹಾಡು ಚೆನ್ನಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani