ಸೇಂಟ್ ಲೂಯಿಸ್: ಭಾರತದ ಆರ್.ಪ್ರಜ್ಞಾನಂದ ಅವರು ಸಿಂಕ್‌ಫೀಲ್ಡ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಗುರುವಾರ ಡಚ್ ಗ್ರ್ಯಾಂಡ್‌ಮಾಸ್ಟರ್ ಜೋರ್ಡನ್ ವಾನ್ ಫೊರೇಸ್ಟ್ ಅವರನ್ನು 71 ನಡೆಗಳಲ್ಲಿ ಸೋಲಿಸಿದರು. ಆ ಮೂಲಕ ಮೂರನೇ ಸುತ್ತಿನ (ವಿನ್ಸೆಂಟ್ ಕೀಮರ್ ಎದುರು) ಹಿನ್ನಡೆಯಿಂದ ಪುಟಿದೆದ್ದರು.
ಇದೊಂದೇ ಪಂದ್ಯ ನಿರ್ಣಾಯಕ ಫಲಿತಾಂಶ ಕಂಡಿತು. ಉಳಿದ ನಾಲ್ಕು ಬೋರ್ಡ್‌ಗಳ ಪಂದ್ಯಗಳು ಡ್ರಾ ಆದವು. ಅಮೆರಿಕದ ವೆಸ್ಲಿ ಸೊ (3 ಪಾಯಿಂಟ್ಸ್) ಮುನ್ನಡೆ ಉಳಿಸಿಕೊಂಡಿದ್ದಾರೆ.
ಪೋರೇಸ್ಟ್‌ಗೆ (0.5 ಪಾಯಿಂಟ್) ಇದು ಮೂರನೇ ಸೋಲು. ಅಮೆರಿಕದ ಲೆವೊನ್ ಅರೋನಿಯನ್, ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮತ್ತು ಪ್ರಜ್ಞಾನಂದ ಅವರು ತಲಾ 2.5 ಪಾಯಿಂಟ್ಸ್ ಗಳಿಸಿದ್ದಾರೆ. ಜರ್ಮನಿಯ ವಿನ್ಸೆಂಟ್ ಕೀಮರ್, ಅಮೆರಿಕದ ಸಾಮ್ಯುಯೆಲ್ ಸೆವಿಯನ್ ಮತ್ತು ಫ್ಯಾಬಿಯಾನೊ ಕರುವಾನ ತಲಾ ಎರಡು ಪಾಯಿಂಟ್ಸ್ ಗಳಿಸಿದ್ದಾರೆ.
₹4.53 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ 10 ಆಟಗಾರರು ಕಣದಲ್ಲಿದ್ದಾರೆ.
ಈ ಗೆಲುವಿನಿಂದ ಪ್ರಜ್ಞಾನಂದ ಅವರಿಗೆ ಅಗ್ರ ಮೂರರಲ್ಲಿ ಸ್ಥಾನ ಗಳಿಸುವ ಅವಕಾಶ ಜೀವಂತವಾಗಿದೆ. ಆ ಮೂಲಕ ಗ್ರ್ಯಾಂಡ್ ಚೆಸ್ ಟೂರ್‌ನ (ಜಿಸಿಟಿ) ಫಿನಾಲೆಯಲ್ಲಿ ಸ್ಥಾನ ಪಡೆಯುವ ಅವಕಾಶವೂ ಉಜ್ವಲವಾಗಿದೆ. ಸೇಂಟ್ ಲೂಯಿಸ್‌ನಲ್ಲಿ ಇದೇ 22ರಿಂದ ಫಿನಾಲೆ ನಡೆಯಲಿದೆ.
ಲಗ್ರಾವ್ (2.5) ಅವರು ಕೀಮರ್ ಜೊತೆ, ನೆದರ್ಲೆಂಡ್ಸ್‌ನ ಅನಿಶ್ ಗಿರಿ (1.5) ಅವರು ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ (1.5) ಜೊತೆ; ಸೆವಿಯನ್ ಸಾಮ್ಯುಯೆಲ್ಸ್, ಕರುವಾನ ಜೊತೆ; ಅರೋನಿಯನ್, ವೆಸ್ಲಿ ಸೊ ಜೊತೆ ಡ್ರಾ ಮಾಡಿಕೊಂಡರು.

