Dailyhunt Logo
  • Light mode
    Follow system
    Dark mode
    • Play Story
    • App Story
SIR: ಜಿಬಿಎ ವ್ಯಾಪ್ತಿಯ 9 ಕ್ಷೇತ್ರಗಳಲ್ಲಿ ಅರ್ಧದಷ್ಟು ಮತದಾರರು 'ಲಭ್ಯರಿಲ್ಲ'

SIR: ಜಿಬಿಎ ವ್ಯಾಪ್ತಿಯ 9 ಕ್ಷೇತ್ರಗಳಲ್ಲಿ ಅರ್ಧದಷ್ಟು ಮತದಾರರು 'ಲಭ್ಯರಿಲ್ಲ'

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯದಲ್ಲಿ ಗಣತಿ ನಮೂನೆಗಳ (ಇಎಫ್‌) ಶೇ 50ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದ್ದು, ಒಂಬತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರು 'ಲಭ್ಯ'ವಾಗಿಲ್ಲ.

ಈ ವಿಧಾನಸಭೆ ಕ್ಷೇತ್ರಗಳಲ್ಲೇ 2023ರ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿತ್ತು.

ಬೊಮ್ಮನಹಳ್ಳಿ, ಬಿಟಿಎಂ ಲೇಔಟ್‌, ವಿಜಯನಗರ, ರಾಜರಾಜೇಶ್ವರಿನಗರ, ಬಸವನಗುಡಿ, ಗೋವಿಂದರಾಜನಗರ, ಶಾಂತಿನಗರ, ದಾಸರಹಳ್ಳಿ ಹಾಗೂ ಸಿ.ವಿ.ರಾಮನ್‌ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಹಿಂದಿನ ಮತದಾರ ಪಟ್ಟಿಯಲ್ಲಿದ್ದ ಶೇ 50ಕ್ಕೂ ಹೆಚ್ಚು ಮತದಾರರು 'ಪತ್ತೆ'ಯಾಗಿಲ್ಲ. 'ಮತದಾರರು ಸ್ಥಳದಲ್ಲಿ ಇರಲಿಲ್ಲ, ಶಾಶ್ವತವಾಗಿ ಸ್ಥಳ ಬದಲಾಯಿಸಿದ್ದಾರೆ, ಮರಣ ಹೊಂದಿದ್ದಾರೆ, ಮತದಾರರ ಹೆಸರು ಒಂದಿಕ್ಕಿಂತ ಹೆಚ್ಚಿನ ಕಡೆ ಇದೆ' ಎಂಬ ವರ್ಗಗಳು ಸೇರಿದಂತೆ 'ಎಎಸ್‌ಡಿಡಿಒ'ನಲ್ಲಿ ಈ ಮತದಾರರನ್ನು ವರ್ಗೀಕರಿಸಲಾಗಿದೆ.

ನಾಲ್ಕು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಜೂನ್‌ 30ರಿಂದ ಇಎಫ್‌ ವಿತರಣೆ ಕಾರ್ಯ ಆರಂಭವಾಗಿತ್ತು. 2026ರ ಜೂನ್‌ 16ರಂತೆ ಒಟ್ಟು 1,03,88,363 ಮತದಾರರಿದ್ದು, ಅವರೆಲ್ಲರಿಗೂ ಜುಲೈ 23ರ ವೇಳೆಗೆ ಗಣತಿ ನಮೂನೆ ವಿತರಿಸಲಾಗಿದೆ. ಆಗಸ್ಟ್‌ 1ರ ವೇಳೆಗೆ ಶೇ 50.74ರಷ್ಟು ಇಎಫ್‌ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಶೇ 47.17ರಷ್ಟು ಮತದಾರರು ಎಎಸ್‌ಡಿಡಿಒ ವರ್ಗದಲ್ಲಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದ ಸಿ.ವಿ. ರಾಮನ್‌ ನಗರ, ಬೊಮ್ಮನಹಳ್ಳಿ, ವಿಜಯನಗರ, ಬಿಟಿಎಂ ಲೇಔಟ್‌, ದಾಸರಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲೇ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಎಒ ವರ್ಗದಲ್ಲಿರುವ ಮತದಾರರು ಹೆಚ್ಚಿದ್ದಾರೆ.

2023ರ ವಿಧಾನಸಭೆಯಲ್ಲಿ ನಗರದ 28 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ ಶೇ 54.53ರಷ್ಟು ಮತದಾನವಾಗಿತ್ತು. 2018ಕ್ಕೆ ಹೋಲಿಸಿದರೆ ಶೇ 0.59ರಷ್ಟು ಕಡಿಮೆಯಾಗಿತ್ತು. 2018ರಲ್ಲಿ ಶೇ 55.12ರಷ್ಟು ಮತದಾನವಾಗಿತ್ತು. 90.36 ಲಕ್ಷ ಮತದಾರರಲ್ಲಿ 49.80 ಲಕ್ಷ ಮಂದಿ ಮತ ಚಲಾಯಿಸಿದ್ದರು.

ಬೊಮ್ಮನಹಳ್ಳಿಯಲ್ಲಿ 2023ರಲ್ಲಿ 4,52,808 ಮತದಾರರಿದ್ದರೂ, 2,15,037 ಮತದಾರರು ಹಕ್ಕು (ಶೇ47.49) ಚಲಾಯಿಸಿದ್ದರು. 2026ರ ಪ್ರಕಾರ ಈ ಕ್ಷೇತ್ರದಲ್ಲಿ 4,84,973 ಮತದಾರರಿದ್ದಾರೆ. ಇದರಲ್ಲಿ 2,00,784 (ಶೇ 41.40) ಮತದಾರರ ಗಣತಿ ನಮೂನೆ ಡಿಜಿಟಲೀಕರಣಗೊಂಡಿದೆ, 2,.81,178 ಮತದಾರರು ಪತ್ತೆಯಾಗಿಲ್ಲ.

ಇದೇ ರೀತಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಸಿ.ವಿ.ರಾಮನ್‌ ನಗರ ಕ್ಷೇತ್ರದಲ್ಲಿ ಶೇ 47.66ರಷ್ಟು, ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಶೇ 49.16, ದಾಸರಹಳ್ಳಿಯಲ್ಲಿ ಶೇ 50.23, ವಿಜಯನಗರದಲ್ಲಿ ಶೇ 51.89, , ರಾಜರಾಜೇಶ್ವರಿನಗರದಲ್ಲಿ ಶೇ 54.07, ಬಸವನಗುಡಿಯಲ್ಲಿ ಶೇ 54.92, ಗೋವಿಂದರಾಜನಗರದಲ್ಲಿ ಶೇ 54.47, ಶಾಂತಿನಗರದಲ್ಲಿ ಶೇ 56.94ರಷ್ಟು ಮತದಾನವಾಗಿತ್ತು. ಈ ಕ್ಷೇತ್ರಗಳಲ್ಲೇ ಇದೀಗ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ ವರ್ಗದ ಮತದಾರರ ಸಂಖ್ಯೆ ಹೆಚ್ಚಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani