Friday, 24 Sep, 12.27 pm ಪ್ರಜಾವಾಣಿ

ಜಿಲ್ಲೆ
ಸೋರುತಿಹುದು 'ಜ್ಞಾನ ದೇಗುಲ'

ಕಲಬುರ್ಗಿ: ಸೀಳಿರುವ ಸಿಮೆಂಟ್ ಶೀಟ್‌ಗಳು. ಮಳೆಗೆ ಸೋರುವ ಕೋಣೆಗಳು. ಒಡೆದ ಕಿಟಕಿ, ಬಾಗಿಲುಗಳು. ತೇವದಿಂದ ಕೂಡಿದ ಗೋಡೆಗಳು. ಗಿಡ-ಗಂಟಿಗಳಿಂದ ಆವೃತ ಕ್ಯಾಂಪಸ್...

ಹೀಗೆ ಹಲವು ಅವ್ಯವಸ್ಥೆಯಿಂದ ಕೂಡಿದೆ ಸೂಪರ್ ಮಾರ್ಕೆಟ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು.

1933ಕ್ಕೂ ಮುನ್ನ ಬ್ರಿಟಿಷ್ ಆಡಳಿತದಲ್ಲಿ ಶಾಲೆ ಮತ್ತು ಕಾಲೇಜು ಶಿಕ್ಷಣ ಒಳಗೊಂಡು 'ವಿವಿಧೋದ್ದೇಶ ಮಾದರಿ ಶಾಲೆ'ಯ (ಮಲ್ಟಿಪರ್ಪಸ್ ಹೈಸ್ಕೂಲ್‌; ಎಂಪಿಎಚ್‌ಎಸ್) ಹೆಸರಿನಲ್ಲಿ ನಿರ್ಮಾಣವಾಗಿತ್ತು. ಅಲ್ಲಿಂದ ಇಲ್ಲಿಯ ತನಕ ಈ ಭಾಗಕ್ಕೆ ಅನೇಕ ಪ್ರತಿಭಾನ್ವಿತರನ್ನು, ಸಾಧಕರನ್ನು, ಅಪ್ರತಿಮ ರಾಜಕಾರಣಿಗಳನ್ನು ನೀಡಿದೆ.

ಶತಮಾನದ ಸಂಭ್ರಮಕ್ಕೆ ಸಿದ್ಧವಾಗಬೇಕಾದ ಶಾಲೆಯು ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳ ಅಲಕ್ಷ್ಯದ ಕಾರಣದಿಂದ ಬೀಳುವ ಹಂತ ತಲುಪಿದೆ ಎಂದು ಪಾಲಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಬಳಿಕ ದಾಖಲೆಯ ಪ್ರವೇಶಾತಿ: ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದ ಫಲವಾಗಿ ಕಾಲೇಜಿಗೆ ದಾಖಲೆ ಮಟ್ಟದ ಮಕ್ಕಳು ಸೇರ್ಪಡೆ ಆಗಿದ್ದಾರೆ. ಕಳೆದ ವರ್ಷ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ 48, 31 ಹಾಗೂ 30 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ ಅನುಕ್ರಮವಾಗಿ 145, 50 ಹಾಗೂ 30 ಮಕ್ಕಳು ಸೇರ್ಪಡೆ ಆಗಿದ್ದಾರೆ. ಕಾಲೇಜಿನಲ್ಲಿ ಪೂರ್ಣಪ್ರಮಾಣದ ಬೋಧಕ ಸಿಬ್ಬಂದಿ ಇದ್ದರೂ ಸೌಕರ್ಯಗಳ ಕೊರತೆ ಬಹುವಾಗಿ ಕಾಡುತ್ತಿದೆ.

'ಕಡಿಮೆ ದಾಖಲಾತಿ ಆಗುತ್ತಿದೆ ಎಂದು ಜನಪ್ರತಿನಿಧಿ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದ್ದರು. ಈ ವರ್ಷ ಅತ್ಯಧಿಕ 230 (ಸೆ.23ರ ವರೆಗೆ) ವಿದ್ಯಾರ್ಥಿಗಳು ಸೇರ್ಪಡೆ ಆಗಿದ್ದಾರೆ. ಸಾಕಷ್ಟು ಕೊಠಡಿಗಳು ಇದ್ದರೂ ಮಕ್ಕಳು ಕುಳಿತುಕೊಳ್ಳಲು ಬೆಂಚ್‌ಗಳಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ, ಶಾಸಕರು, ಸಂಸದರಿಗೆ ಹಲವು ವರ್ಷಗಳಿಂದ ಮನವಿ ಮಾಡಿಕೊಂಡು ಬರುತ್ತಿದ್ದೇವೆ. ಇದುವರೆಗೂ ಬೆಂಚ್‌ ನೀಡಿಲ್ಲ' ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲ ಮಲ್ಲೇಶ ನಾಟೇಕರ್.

ಕೋವಿಡ್ ಕಾರಣದಿಂದ ಒಂದೂವರೆ ವರ್ಷ ಭೌತಿಕ ತರಗತಿಗಳು ಸ್ಥಗಿತಗೊಂಡಿದ್ದವು. ಆ ಅವಧಿಯಲ್ಲಿ ಕ್ಯಾಂಪಸ್ ತುಂಬ ಗಿಡ-ಗಂಟಿಗಳು ಬೆಳೆದಿವೆ. ಇದುವರೆಗೂ ಸ್ವಚ್ಛಗೊಳಿಸಿಲ್ಲ. ಸರಿಯಾದ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಶರಣಪ್ರಕಾಶ ಪಾಟೀಲ ಅವರು ಜಿಲ್ಲಾಉಸ್ತುವಾರಿ ಸಚಿವರಾಗಿದ್ದಾಗ ನೀಡಿದ್ದ 'ಜಲ ಅಮೃತ' ಶುದ್ಧ ಕುಡಿಯುವ ನೀರಿನ ಘಟಕ ಸಹ ಕೆಟ್ಟಿದೆ. ಸಂಬಂಧಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಅಗತ್ಯ ಸೌಕರ್ಯಗಳು ಒದಗಿಸಬೇಕು ಎನ್ನುತ್ತಾರೆ ರಾಜ್ಯಶಾಸ್ತ್ರ ಉಪನ್ಯಾಸಕ ರಾಜೇಂದ್ರ ದೊಡ್ಡಮನಿ ಅವರು.

ಧರ್ಮಸಿಂಗ್ ಓದಿದ್ದ ಕಾಲೇಜು

ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್ ಅವರು 1956ರಲ್ಲಿ ಇದೇ ಕಾಲೇಜಿನ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು. ಅವರು ನೀಡಿದ್ದ ಕನ್ನಡಿ ಗೋಡೆ ಮೇಲಿದೆ. ಈಚೆಗೆ ಡಿಡಿಪಿಯು ಹಾಗೂ ಲೋಕಾಯುಕ್ತರು ಕಾಲೇಜಿಗೆ ಭೇಟಿ ನೀಡಿದ್ದರು. ಅವರೂ ಕೂಡ ಧರ್ಮಸಿಂಗ್ ಓದಿದ್ದ ಕಾಲೇಜು ಎಂದು ಸ್ಮರಿಸಿಕೊಂಡರು ಎಂದು ಕಾಲೇಜು ಪ್ರಾಂಶುಪಾಲ ಮಲ್ಲೇಶ ನಾಟೇಕರ್ ಹೇಳಿದರು.

*

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಲೇಜಿಗೆ 250 ಬೆಂಚ್‌ಗಳ ಅವಶ್ಯಕತೆ ಇದೆ. ಅಧಿಕಾರಿಗಳು ಇತ್ತ ಗಮನಹರಿಸಿ ಮಂಜೂರು ಮಾಡಿಕೊಡಬೇಕು

ಮಲ್ಲೇಶ ನಾಟೇಕರ್, ಕಾಲೇಜು ಪ್ರಾಂಶುಪಾಲ

*

ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಹೊಸ ನೀರಿನ ಘಟಕ, ಶೌಚಾಲಯ ನಿರ್ಮಾಣಕ್ಕೆ ಕ್ಯಾಂಪಸ್‌ನಲ್ಲಿ ಸ್ಥಳಾವಕಾಶ ಇದೆ

-ರಾಜೇಂದ್ರ ದೊಡ್ಡಮನಿ, ಉಪನ್ಯಾಸಕ

*

ಎಲ್ಲ ವಿಷಯಗಳ ಮೂರು ಪಾಠಗಳು ಮುಗಿದು ಕಿರು ಪರೀಕ್ಷೆ ನಡೆಯುತ್ತಿದೆ. ನಮಗೆ ಕುಳಿತುಕೊಳ್ಳಲು ಬೆಂಚ್ ಮತ್ತು ಕಟ್ಟಡ ದುರಸ್ತಿ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ

-ರೇವಣಸಿದ್ದಪ್ಪ, ಕಲಾ ವಿಭಾಗದ ವಿದ್ಯಾರ್ಥಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top