ಕೋಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಪಟ್ಟು ಹಿಡಿದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮೇಲೆ ಗಂಭೀರ ಆರೋಪ ಮಾಡಿರುವ ಅವರು, ಚುನಾವಣೆಯಲ್ಲಿ ಟಿಎಂಸಿ ಸೋಲಿಗೆ ಅವರೇ ಕಾರಣ ಎಂದಿದ್ದಾರೆ.
ಚುನಾವಣಾ ಆಯೋಗ ಮತ್ತು ಬಿಜೆಪಿ ಒಪ್ಪಂದ ಮಾಡಿಕೊಂಡಿದ್ದು, ನಮ್ಮನ್ನು ಸೋಲಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ನಾವು ಜನಾದೇಶದಿಂದ ಸೋತಿಲ್ಲ, ಬದಲಾಗಿ ಪಿತೂರಿಯಿಂದ ಸೋತಿದ್ದೇವೆ. ನಾನು ಸೋತಿಲ್ಲ... ಆದ್ದರಿಂದ ಲೋಕಭವನಕ್ಕೆ ಹೋಗುವುದಿಲ್ಲ. ಸಾಂವಿಧಾನಿಕ ನಿಯಮಗಳ ಪ್ರಕಾರ ಅವರು ಕ್ರಮ ಕೈಗೊಳ್ಳಬಹುದು' ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಹೇಳಿಕೆ ಬೆನ್ನಲ್ಲೇ, ಬಹುಮತ ಪಡೆಯದೆಯೂ ಮುಖ್ಯಮಂತ್ರಿಯೊಬ್ಬರು ಆ ಸ್ಥಾನದಲ್ಲಿ ಉಳಿಯಲು ಸಾಧ್ಯವೇ ಎಂಬ ಪ್ರಶ್ನೆಗಳು ಉದ್ಭವಿಸಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಏನು ಹೇಳುತ್ತದೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ಸಂವಿಧಾನ ಹೇಳುವುದೇನು?
ಮುಖ್ಯಮಂತ್ರಿಯೊಬ್ಬ ವಿಧಾನಸಭೆಯಲ್ಲಿ ಬಹುಮತವನ್ನು ಹೊಂದಿರಲೇಬೇಕು.
ಒಂದು ವೇಳೆ ಬಹುಮತ ಕಳೆದುಕೊಂಡರೆ, ಸಾಂಪ್ರದಾಯದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಚುನಾವಣಾ ಅಕ್ರಮದ ಆರೋಪಗಳು ಸಾಂವಿಧಾನಿಕ ನಿಯಮಗಳನ್ನು ಮುರಿಯಲು ಸಾಧ್ಯವಿಲ್ಲ.
ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸುತ್ತದೆ. ಆದರೆ ಬಹುಮತವು ಅಧಿಕಾರವನ್ನು ನಿರ್ಧರಿಸುತ್ತದೆ.
ರಾಜೀನಾಮೆ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬಹುದಾಗಿದೆ.
ಆರ್ಟಿಕಲ್ 164ರ ಅಡಿಯಲ್ಲಿ, ಬಹುಮತ ಕಳೆದುಕೊಂಡರೆ ಮುಖ್ಯಮಂತ್ರಿಯನ್ನು ವಜಾಗೊಳಿಸಬಹುದಾಗಿದೆ.

