'ಹಾರಿ ಹೋಗುವ ಹಕ್ಕಿ ತಾನು ಕುಳಿತಿದ್ದ ಜಾಗದಲ್ಲಿ ಯಾವುದೇ ಕೊಳಕನ್ನು ಬಿಟ್ಟು ಹೋಗುವುದಿಲ್ಲ' (Tatsu tori ato wo nigosazu) ಇದು ಜಪಾನ್‌ನ ಪ್ರಸಿದ್ಧ ಗಾದೆ. ಇದರರ್ಥ 'ನಾವು ಯಾವುದೇ ಒಂದು ಸ್ಥಳಕ್ಕೆ ಹೋದಾಗ, ಅಲ್ಲಿಂದ ಹೊರಡುವ ಮುನ್ನ ಆ ಜಾಗವನ್ನು ಸ್ವಚ್ಛವಾಗಿಟ್ಟು ಹೋಗಬೇಕು' ಎನ್ನುವುದು.
ಇದಕ್ಕೆ ಅನ್ವರ್ಥದಂತೆ ಜಪಾನಿಗರ ನಡುವಳಿಕೆಯೂ ಇದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಫುಟ್‌ಬಾಲ್ ವಿಶ್ವಕಪ್ ಪಂದ್ಯದ ಬಳಿಕ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಓಡಾಡಿ ಕಸ ಎತ್ತಿ ಸ್ವಚ್ಛಗೊಳಿಸಿರುವುದು.
ಅಮೆರಿಕದ ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ನೆದರ್‌ಲೆಂಡ್ಸ್-ಜಪಾನ್ 'ಎಫ್' ಗುಂಪಿನ ಪಂದ್ಯ 2- 2 ಗೋಲು ಅಂತರದ ರೋಚಕ ಡ್ರಾನಲ್ಲಿ ಮುಕ್ತಾಯವಾಯಿತು.
ಪಂದ್ಯ ನಡೆಯುವ ವೇಳೆ 'ಸಮುರಾಯ್ ಬ್ಲೂ' ಎನ್ನುವ ಗುಂಪೊಂದು ಜಪಾನ್ ತಂಡವನ್ನು ತಮ್ಮ ಕೈಯಲ್ಲಿರುವ ನೀಲಿ ಬಣ್ಣದ ಬ್ಲಾಸ್ಟಿಕ್ ಬ್ಯಾಗ್‌ನ್ನು ಮೇಲೆತ್ತಿ ಹಾರಿಸುತ್ತಾ, ಶಿಳ್ಳೆ ಹೊಡೆಯುತ್ತಾ ಹುರಿದುಂಬಿಸಿತ್ತು.
ಪಂದ್ಯ ಮುಗಿಯುತ್ತಿದ್ದಂತೆ ಎಲ್ಲ ದೇಶಗಳ ಅಭಿಮಾನಿಗಳು ಸಂಭ್ರಮಿಸುತ್ತಾ ಕ್ರೀಡಾಂಗಣದಿಂದ ಹೊರಡುತ್ತಿದ್ದರೆ, ಜಪಾನ್ ಅಭಿಮಾನಿಗಳು ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದರು. ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಎಸೆದಿದ್ದ ಪ್ಲಾಸ್ಟಿಕ್ ಕಪ್‌ಗಳು, ತಿನಿಸುಗಳ ಪೊಟ್ಟಣಗಳು ಮತ್ತು ಕಸದ ಕಾಗದಗಳನ್ನು ಅದೇ ನೀಲಿ ಬ್ಯಾಗ್‌ಗಳಲ್ಲಿ ತುಂಬಿಸಿದ್ದಾರೆ. ಜಪಾನ್ ಜನರ ಈ ನಡೆ ಸದ್ಯ ವಿಶ್ವದ ಗಮನ ಸೆಳೆದಿದೆ.
ಹರಿದಾಡಿದ ವಿಡಿಯೊ
ಫಿಫಾ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಜಪಾನ್ ಅಭಿಮಾನಿಗಳು ಕಸ ಎತ್ತುತ್ತಿರುವ ವಿಡಿಯೊವನ್ನು ಹಂಚಿಕೊಂಡು, 'ಹೆಮ್ಮೆ' ಎಂದು ಶ್ಲಾಘಿಸಿದೆ. ಜಗತ್ತಿನಾದ್ಯಂತ ಲಕ್ಷಾಂತರ ಕ್ರೀಡಾಭಿಮಾನಿಗಳು ಈ ವಿಡಿಯೊ ನೋಡಿ, 'ಜಪಾನ್ ದೇಶದ ಶಿಸ್ತಿಗೆ ಯಾರೂ ಸಾಟಿಯಿಲ್ಲ' ಎಂದು ಕೊಂಡಾಡುತ್ತಿದ್ದಾರೆ.
ಹೊಸ ಅಭ್ಯಾಸವಲ್ಲ
1998 ರಲ್ಲಿ ಫ್ರಾನ್ಸ್‌ನಲ್ಲಿ ಜಪಾನ್ ತನ್ನ ಚೊಚ್ಚಲ ವಿಶ್ವಕಪ್ ಆಡಿತ್ತು. ಆಗಲೂ ತಂಡವನ್ನು ಹುರಿದುಂಬಿಸಲು ಬಂದಿದ್ದ ಅಭಿಮಾನಿಗಳು ಪಂದ್ಯ ಮುಗಿದ ಬಳಿಕ ಸ್ವಚ್ಛತಾ ಕಾರ್ಯ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.
2018ರ ರಷ್ಯಾ ವಿಶ್ವಕಪ್ ಮತ್ತು 2022ರ ಕತಾರ್ ವಿಶ್ವಕಪ್‌ನಲ್ಲೂ ಅವರು ಇದೇ ರೀತಿ ಕ್ರೀಡಾಂಗಣ ಸ್ವಚ್ಛಗೊಳಿಸಿ ಗಮನ ಸೆಳೆದಿದ್ದರು.
ಬಾಲ್ಯದಿಂದಲೇ ಸ್ವಚ್ಛತೆಯ ಬಗ್ಗೆ ಅರಿವು
ಜಪಾನ್‌ನ ಪ್ರಮುಖ ಧರ್ಮಗಳಾದ ಶಿಂಟೋ ಮತ್ತು ಬೌದ್ಧ ಧರ್ಮಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ಜಪಾನ್ ಮಕ್ಕಳಿಗೆ ಬಾಲ್ಯದಿಂದಲೇ ಸ್ಚಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.
'ನಾವು ಒಂದು ನಿರ್ದಿಷ್ಟ ಸ್ಥಳವನ್ನು ಬಳಸುವಾಗ, ಬಂದಾಗ ಇದ್ದ ಸ್ಥಳಕ್ಕಿಂತ ಹೊರಡುವಾಗ ಆ ಸ್ಥಳವು ಹೆಚ್ಚು ಅಚ್ಚುಕಟ್ಟಾಗಿ ಕಾಣುವಂತೆ ಮಾಡಬೇಕೆಂದು ಜಪಾನಿನ ಜನರು ಭಾವಿಸುತ್ತಾರೆ. ಅದನ್ನೇ ಶಾಲೆಗಳಲ್ಲೂ ಕಲಿಸುತ್ತಾರೆ' ಎಂದು ಯುವಕನೊಬ್ಬ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೇಳಿದ್ದಾನೆ.
'ಮಕ್ಕಳು ಪ್ರತಿದಿನ ಶಾಲೆಗಳಲ್ಲಿ ನೆಲ ಮತ್ತು ಮೇಜುಗಳನ್ನು ಸ್ವಚ್ಛಗೊಳಿಸುವುದನ್ನು ಕಾಣಬಹುದು. ದೇಶದಲ್ಲಿ ಸಾರ್ವಜನಿಕ ಕಸದ ತೊಟ್ಟಿಗಳು ವಿರಳವಾಗಿದ್ದು, ಜನರು ತಮ್ಮ ಕಸವನ್ನು ಮನೆಗೆ ತೆಗೆದುಕೊಂಡು ಹೋಗಬೇಕು. ಮನೆಯ ತ್ಯಾಜ್ಯವನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ ವಿಲೇವಾರಿ ಮಾಡುತ್ತಾರೆ. ನೆರೆಹೊರೆಯ ಜನರು ಒಟ್ಟಾಗಿ ಸೇರಿ ವರ್ಷಕ್ಕೆ ಎರಡು ಬಾರಿ ಕಳೆ ಗಿಡಗಳನ್ನು ಕತ್ತರಿಸಿ ಸ್ವಚ್ಛ ನಗರವನ್ನು ರೂಪಿಸಲು ಕೈಜೋಡಿಸುತ್ತಾರೆ' ಎಂದು ಒಸಾಕಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೊಬ್ಬರು 'ಎಎಫ್‌ಪಿ' ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
'ಜಪಾನ್‌ನಲ್ಲಿ, ಒಬ್ಬ ವ್ಯಕ್ತಿ ಕಸವನ್ನು ಎತ್ತಲು ಪ್ರಾರಂಭಿಸಿದರೆ ಅವರ ಸುತ್ತಮುತ್ತಲಿನವರು ಕೈಜೋಡಿಸುತ್ತಾರೆ. ಒಂದು ವೇಳೆ ಹಾಗೆ ಮಾಡದಿದ್ದರೆ, ಆ ವ್ಯಕ್ತಿಯನ್ನು ಕೆಟ್ಟ ವ್ಯಕ್ತಿ ಎಂದೇ ನೋಡುತ್ತಾರೆ' ಎನ್ನುತ್ತಾರೆ ಜಪಾನ್‌ನ ಸಮಾಜಶಾಸ್ತ್ರಜ್ಞ ಒಸ್ವಾವಾ.
ಮಾಹಿತಿ: ಎಎಫ್‌ಪಿ, ಫಿಫಾ ವಿಶ್ವಕಪ್, ಇಎಸ್‌ಪಿಎನ್

