Dailyhunt Logo
  • Light mode
    Follow system
    Dark mode
    • Play Story
    • App Story
ಸ್ಟಾರ್ಟ್‌-ಅಪ್‌: ಮೂವರು ಯುವಕರು ಆರಂಭಿಸಿದ ಕಂಪನಿ ಹಾರಿಸಿತು ಕಾಮಿಕೇಜ್ ಡ್ರೋನ್‌

ಸ್ಟಾರ್ಟ್‌-ಅಪ್‌: ಮೂವರು ಯುವಕರು ಆರಂಭಿಸಿದ ಕಂಪನಿ ಹಾರಿಸಿತು ಕಾಮಿಕೇಜ್ ಡ್ರೋನ್‌

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಒಂದು ಪ್ರಯೋಗ ನಡೆಯಿತು. ಜೀಪ್‌ ಮೇಲೆ ವಿಮಾನದ ಆಕೃತಿಯನ್ನು ಇಡಲಾಗಿತ್ತು. ಜೀಪು ಜೋರಾಗಿ ಹೊರಟ ಕೆಲವೇ ಕ್ಷಣಗಳಲ್ಲಿ ಅದರ ಮೇಲಿದ್ದ ವಿಮಾನ ಮೇಲಕ್ಕೆ ಚಿಮ್ಮಿ ಮೋಡಗಳತ್ತ ನುಗ್ಗಿತು. ಭಾರತದ ಮೂವರು ಯುವಕರ ಈ ಸಾಹಸವನ್ನು ಸಾಮಾಜಿಕ ಜಾಲತಾಣದ ಮೂಲಕ ಇಡೀ ಜಗತ್ತೇ ನೋಡಿ ನೆಬ್ಬೆರಗಾಯಿತು.

ಅಸಲಿಗೆ ಇದು ವಿಮಾನವಲ್ಲ, ಕಾಮಿಕೇಜ್‌ ಡ್ರೋನ್‌. ಆಧುನಿಕ ಜಗದ ಯುದ್ಧದಲ್ಲಿ ಸೈನಿಕರ ಮುಖಾಮುಖಿ ಹೋರಾಟಕ್ಕಿಂತ, ಮಾನವ ರಹಿತ ಡ್ರೋನ್‌ಗಳ ಸಮರವೇ ಪ್ರಮುಖವಾಗಿದೆ. ಭಾರತ-ಪಾಕ್ ನಡುವಿನ ಆಪರೇಷನ್‌ ಸಿಂಧೂರ, ಇಸ್ರೇಲ್‌-ಹಮಾಸ್‌ ಸಂಘರ್ಷ, ಪಶ್ಚಿಮ ಏಷ್ಯಾ ಸಂಘರ್ಷದಲ್ಲೂ ಇದು ತೀರಾ ಸಾಮಾನ್ಯ ಎಂಬಂತಾಗಿದೆ. ಇದೇ ಹೊತ್ತಿನಲ್ಲಿ ಭಾರತದ ಯುವಕರು ಆರಂಭಿಸಿದ ಸ್ಟಾರ್ಟ್‌ಅಪ್‌ ಕಾವಾ ಯುಎವಿ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯು ದಿವ್ಯಾಸ್ತ್ರ ಎಂಕೆ3 ಎಂಬ ಡ್ರೋನ್‌ ಶಸ್ತ್ರಾಸ್ತ್ರಗಳ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದಿದೆ.

ಹಾರಾಡುವ ಯುದ್ಧಸಾಮಗ್ರಿ ವರ್ಗಕ್ಕೆ ಸೇರುವ ಭಾರತದ ಹೊಸ ಪ್ರಯೋಗ ದಿವ್ಯಾಸ್ತ್ರ ಎಂಕೆ3 ಎಂಬ ಸಾಧನವು ಆ. 11ರಂದು ಉತ್ತರ ಪ್ರದೇಶ ಡ್ರೋನ್ ಪರೀಕ್ಷಾ ವಾಯುನೆಲೆಯಲ್ಲಿ ಯಶಸ್ವಿ ಹಾರಾಟ ನಡೆಸಿದೆ.

ಪ್ರೊಪೆಲ್ಲರ್ ಬದಲು ಜೆಟ್ ಎಂಜಿನ್

ಸಾಮಾನ್ಯವಾಗಿ ಇಂಥ ಹಾರಾಡುವ ಯುದ್ಧಸಾಮಗ್ರಿಗಳಲ್ಲಿ ಪ್ರೊಪೆಲ್ಲರ್ ಆಧಾರಿತ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಆದರೆ ಎಂಕೆ3 ಒಳಗೆ ಡಿಜಿ ಪ್ರೊಪಲ್ಶನ್‌ ಅಳವಡಿಸಲಾಗಿದೆ. ಇದು ಹೆಚ್ಚಿನ ವೇಗ ಮತ್ತು ವೇಗವಾಗಿ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇದು ಅತ್ಯಂತ ಹೊಸ ತಂತ್ರಜ್ಞಾನ ಎಂದು ಕಂಪನಿ ಹೇಳಿದೆ.

ಎಂಕೆ3 ಕಾರ್ಯಕ್ಷಮತೆಯ ಪೂರ್ಣ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ ಮಾಧ್ಯಮಗಳ ವರದಿ ಪ್ರಕಾರ ಇದು ಗಂಟೆಗೆ 300ರಿಂದ 400 ಕಿ.ಮೀ. ವೇಗದಲ್ಲಿ ಸಾಗಬಹುದು. ಜತೆಗೆ 15ರಿಂದ 20 ಕೆ.ಜಿ. ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.

ಹಾಗಿದ್ದರೆ 'ಕಾಮಿಕೇಜ್ ಡ್ರೋನ್' ಎಂದರೆ ಏನು?

ದಿವ್ಯಾಸ್ತ್ರ ಎಂಕೆ3 ಅನ್ನು ಸಾಮಾನ್ಯವಾಗಿ 'ಕಾಮಿಕೇಜ್ ಡ್ರೋನ್' ಎಂದೆನ್ನಲಾಗುತ್ತದೆ. ಸೇನೆಯಲ್ಲಿ ಇದನ್ನು ಆಗಸದಲ್ಲಿ ಹಾರಾಡುವ ಸಶಸ್ತ್ರ ವಾಹನ ಎಂದೇ ಕರೆಯಲಾಗುತ್ತದೆ.

ಸಾಮಾನ್ಯ ಕ್ಷಿಪಣಿಯಂತೆ ಉಡಾಯಿಸಿದ ತಕ್ಷಣ ನೇರವಾಗಿ ಗುರಿಯತ್ತ ಸಾಗುವುದಕ್ಕಿಂತ, ನಿರ್ದಿಷ್ಟ ಗುರಿ ಪ್ರದೇಶದ ಮೇಲೆ ಸ್ವಲ್ಪ ಸಮಯ ಹಾರಾಡುತ್ತಾ ಗುರಿಯನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುತ್ತದೆ. ತನ್ನ ಗುರಿ ನಿಖರವಾದ ಬಳಿಕ ಅದರತ್ತ ಸಾಗಿಕೊಂಡು ಅಪ್ಪಳಿಸುವುದು ಇದರ ಮೂಲ ಕಾರ್ಯವಿಧಾನ.

ಅಂದರೆ, ಇದು ಒಂದರ್ಥದಲ್ಲಿ ಡ್ರೋನ್‌ನ ಕಣ್ಗಾವಲು ಸಾಮರ್ಥ್ಯ ಮತ್ತು ಕ್ಷಿಪಣಿಯ ದಾಳಿ ಸಾಮರ್ಥ್ಯವನ್ನು ಒಂದೇ ವ್ಯವಸ್ಥೆಯಡಿಯಲ್ಲಿ ಸೇರಿಸುವ ಪ್ರಯತ್ನ ಇದಾಗಿದೆ.

ಕೃತಕ ಬುದ್ಧಿಮತ್ತೆಯ ಪಾತ್ರ

ಎಂಕೆ3ರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಕೃತಕ ಬುದ್ಧಿಮತ್ತೆ ಆಧಾರಿತ ಗುರಿಯನ್ನು ಭೇದಿಸುವ ವಿನ್ಯಾಸ. ಕಾವಾ ಯುಎವಿ ಕಂಪನಿಯ ಪ್ರಕಾರ, ಇದರಲ್ಲಿ ಸ್ವಯಂಚಾಲಿತ ಹಾರಾಟ ನಿಯಂತ್ರಣ ಮತ್ತು AI ಆಧಾರಿತ ಗುರಿಯನ್ನು ಅರ್ಥೈಸಿಕೊಳ್ಳುವ ವ್ಯವಸ್ಥೆ ಇದೆ. ಅಂದರೆ, ಡ್ರೋನ್‌ನ ಕಾರ್ಯ ಕೇವಲ ರಿಮೋಟ್ ಹಿಡಿದಿರುವ ವ್ಯಕ್ತಿಯ ಸೂಚನೆಗಳನ್ನು ಅನುಸರಿಸುವುದಕ್ಕೆ ಸೀಮಿತವಾಗಿರದೆ, ತನಗೆ ಲಭ್ಯವಾದ ಮಾಹಿತಿಯನ್ನು ಆಧರಿಸಿ, ಅದನ್ನು ಸಂಸ್ಕರಿಸಿ, ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಇದೆ.

ಆದರೆ ಕೃತಕ ಬುದ್ಧಿಮತ್ತೆ ಆಧಾರಿತ ಕಾರ್ಯತಂತ್ರ ಹೇಗಿರಲಿದೆ ಎಂಬ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ.

ಈ ದಿವ್ಯಾಸ್ತ್ರದ ಹಿಂದಿರುವ ಮೂವರು ಯುವಕರ ಕಥೆ

ದಿವ್ಯಾಸ್ತ್ರ ಎಂಕೆ3 ಕಥೆ ಇನ್ನಷ್ಟು ಆಸಕ್ತಿದಾಯಕ ಎಂದೆನಿಸುವುದು ಅದರ ಹಿಂದಿರುವ ಹೋವರ್ಲೆಟ್‌ ಸ್ಟಾರ್ಟ್‌ಅಪ್‌ನ ಕಥೆಯನ್ನು ಅರಿತಾಗ ಮಾತ್ರ.

ಕಾವಾ ಯುಎವಿ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋವರ್ಲೆಟ್‌ ಅನ್ನು ಎಂಬ ಕಂಪನಿಯು 2022ರಲ್ಲಿ ಲಖನೌನಲ್ಲಿ ಪ್ರಾರಂಭವಾಯಿತು. ರವೀಂದರ್ ಪಾಲ್ ಸಿಂಗ್, ಸೌರಭ್ ಸಿಂಗ್ ಭದೌರಿಯಾ ಮತ್ತು ಪವನ್ ಪಾಂಡೆ ಈ ಸಂಸ್ಥೆಯ ಸ್ಥಾಪಕ ತಂಡದಲ್ಲಿದ್ದಾರೆ. ರಕ್ಷಣಾ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಅನುಭವವನ್ನು ಹೊಂದಿರುವ ಈ ತಂಡದ ಗುರಿ ಸಾಮಾನ್ಯ ಡ್ರೋನ್ ತಯಾರಿಸುವುದಾಗಿರದೇ, ಸೇನೆ ಮತ್ತು ಭದ್ರತಾ ಸಂಸ್ಥೆಗಳಿಗೆ ಬೇಕಾಗುವ ನಿರ್ದಿಷ್ಟ ಉದ್ದೇಶದ ಮಾನವ ರಹಿತ ವೈಮಾನಿಕ ಸಾಧನಗಳ ಅಭಿವೃದ್ಧಿಯಾಗಿತ್ತು.

ಈವರೆಗೂ ಈ ಕಂಪನಿಯು ಕಣ್ಗಾವಲು ಮತ್ತು ಗುಪ್ತಚರ ಉದ್ದೇಶಗಳಿಗಾಗಿ 'ಆಂಕ್‌', ಬಹುದೂರ ಕಣ್ಗಾವಲಿಡಲು 'ರಫ್ತಾರ್‌', ಭಾರದ ವಸ್ತುಗಳ ಸಾಗಣೆ ಹಾಗೂ ಮತ್ತಿತರ ಕಾರ್ಯಗಳಿಗಾಗಿ 'ಬಾಝ್‌' ಸೇರಿದಂತೆ ಹಲವು ಬಗೆಯ ಮಾನವ ರಹಿತ ಸಾಧನಗಳನ್ನು ಅಭಿವೃದ್ಧಿಪಡಿಸಿದೆ.

ಇದಾದ ನಂತರ ನಿರ್ದಿಷ್ಟ ಗುರಿಯನ್ನು ಭೇದಿಸುವ ವ್ಯವಸ್ಥೆಯ ಅಭಿವೃದ್ಧಿಯತ್ತ ಕಂಪನಿ ತನ್ನ ಗಮನವನ್ನು ಕೇಂದ್ರೀಕರಿಸಿತು. ಅದುವೇ ದಿವ್ಯಾಸ್ತ್ರ.

ದಿವ್ಯಾಸ್ತ್ರದಲ್ಲಿ ಎಂಕೆ1, ಎಂಕೆ2 ಮತ್ತು ಇದೀಗ ಎಂಕೆ3ರವರೆಗೂ ಕಂಪನಿ ಸಾಧನ ಅಭಿವೃದ್ಧಿಪಡಿಸಿದೆ. ಮೊದಲ ಎರಡು ಸಾಧನಗಳಿಗಿಂತ ಮೂರನೆಯದ್ದು ಗಮನಾರ್ಹ ಸಾಧನೆ. ಪ್ರೊಪೆಲ್ಲರ್ ಆಧಾರಿತ ವ್ಯವಸ್ಥೆಯಿಂದ ಜೆಟ್‌ ಪ್ರೊಪಲ್ಶನ್‌ ಅಳವಡಿಸುವತ್ತ ಈ ತಂತ್ರಜ್ಞರ ಗಮನ ನೆಟ್ಟಿತು. ಇದರ ಮೂಲಕ ಭಾರತೀಯ ರಕ್ಷಣಾ ಸ್ಟಾರ್ಟ್‌ಅಪ್‌ಗಳು ಸಂಕೀರ್ಣವಾದ ವಾಯುಯಾನ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಬಲ್ಲವೇ? ಎಂಬ ದೊಡ್ಡ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೂ ಇದು ಹೌದು.

ಏಳು ತಿಂಗಳಲ್ಲೇ ಮೊದಲ ಹಾರಾಟ

ದಿವ್ಯಾಸ್ತ್ರ ಎಂಕೆ3 ಯೋಜನೆಯು 2026ರಲ್ಲಿ ಆರಂಭವಾಗಿ, ಆಗಸ್ಟ್‌ 11ರಂದು ಮೊದಲ ಹಾರಾಟ ನಡೆಸಿತು. ಕೇವಲ ಏಳು ತಿಂಗಳಿನಲ್ಲಿ ಇದು ಸಾಧ್ಯವಾಗಿದೆ ಎಂದು ಕಂಪನಿ ಹೇಳಿದೆ. ಹೀಗಾಗಿ ಇದೇನು ಸಣ್ಣ ಸಾಧನೆಯಲ್ಲ. ವಿಮಾನದ ಕವಚ, ಪ್ರೊಪಲ್ಶನ್, ಏವಿಯಾನಿಕ್ಸ್‌, ಫ್ಲೈಟ್‌ ಕಂಟ್ರೋಲ್, ಆಟೊನೊಮಿ ಮತ್ತು ಪೇಲೋಡ್ ವ್ಯವಸ್ಥೆಗಳನ್ನು ಪರಸ್ಪರ ಸಂಯೋಜಿಸಿ ಪರೀಕ್ಷಿಸುವಂತ ಕಾರ್ಯಗಳು ಅತ್ಯಗತ್ಯ. ಈ ಎಲ್ಲವನ್ನೂ ಏಳು ತಿಂಗಳಲ್ಲಿ ಪೂರ್ಣಗೊಳಿಸುವ ಮೂಲಕ ಭಾರತದಲ್ಲೇ ಅತ್ಯಂತ ವೇಗದ ರಕ್ಷಣಾ ಅನ್ವೇಷಣೆಯ ಉದಾಹರಣೆಯಾಗಿ ಎಂಕೆ3 ಹೊರಹೊಮ್ಮಿದೆ.

ಕಂಪನಿಯ ಕಾರ್ಯಕ್ಷೇತ್ರ ಲಖನೌ ಏಕೆ?

ಹೋವರ್ಲೆಟ್‌ನ ಮತ್ತೊಂದು ವಿಶೇಷವೆಂದರೆ ಅದು ಅದರ ಸ್ಥಳದ ಆಯ್ಕೆ. ಲಖನೌನಲ್ಲಿರುವ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ ಪ್ರದೇಶದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದೇ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕವೂ ಇದೆ. ಇದು ಖಾಸಗಿ ಸ್ಟಾರ್ಟ್‌ಅಪ್‌ಗಳಿಗೆ ಮೂಲಸೌಕರ್ಯದ ಜತೆಗೆ, ರಕ್ಷಣಾ ಸಾಧನಗಳ ಉತ್ಪಾದನಾ ಪರಿಸರವೂ ಪೂರಕವಾಗಿರುವುದು ಇಲ್ಲಿನ ವಿಶೇಷ.

ಶಹೀದ್‌ನಿಂದ ಸ್ಫೂರ್ತಿ ಪಡೆಯಿತೇ ಎಂಕೆ3..?

ಪಶ್ಚಿಮ ಏಷ್ಯಾದ ಯುದ್ಧದಲ್ಲಿ ವ್ಯಾಪಕವಾಗಿ ಚರ್ಚೆಯಾಗಿದ್ದು ಶಹೀದ್ ಸರಣಿಯ ಕ್ಷಿಪಣಿ. ಇದರ ಕಾರ್ಯವಿಧಾನ ಶತ್ರು ರಾಷ್ಟ್ರದ ಪ್ರಬಲ ರಕ್ಷಣಾ ಸಾಧನಗಳಿಗೂ ಸವಾಲಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಬೀತಾದ ಶಸ್ತ್ರಾಸ್ತ್ರಗಳ ಅಧ್ಯಯನ ನಡೆಸಿರುವುದಾಗಿ ಹೋವರ್ಲೆಟ್ ತಂಡವು ಟೈಮ್ಸ್ ಆಫ್‌ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿರುವುದು ಇದಕ್ಕೆ ಪುಷ್ಟಿ ನೀಡಲಿದೆ.‌

ಹೋವರ್ಲೆಟ್‌ ಕಂಪನಿಯ ಎಂಕೆ3 ತನ್ನ ಮೊದಲ ಪರೀಕ್ಷೆಯಲ್ಲಷ್ಟೇ ಪಾಸಾಗಿದೆ. ನಿಜವಾದ ಪರೀಕ್ಷೆಗಳು ಮುಂದಿವೆ. ಇವುಗಳಲ್ಲಿ ಫ್ಲೈಟ್ ಟೆಸ್ಟಿಂಗ್, ರಿಲಯಬಿಲಿಟಿ ವ್ಯಾಲಿಡೇಷನ್, ನ್ಯಾವಿಗೇಷನ್‌ ಮತ್ತು ಅಟಾನಮಿ ಪರೀಕ್ಷೆಗಳಲ್ಲಿ ಅದು ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕು. ಪೇಲೋಡ್ ಇಂಟಿಗ್ರೇಷನ್ ಹಾಗೂ ಸೇನಾ ಅಗತ್ಯಗಳಿಗೆ ಹೊಂದಾಣಿಕೆಯ ಪರೀಕ್ಷೆಗಳನ್ನೂ ಎದುರಿಸಬೇಕು.

ಹೀಗಾಗಿ ದಿವ್ಯಾಸ್ತ್ರ ಎಂಕೆ3 ಅನ್ನು ಈಗಲೇ ಸಂಪೂರ್ಣ ಕಾರ್ಯಾಚರಣೆಯ ಶಸ್ತ್ರಾಸ್ತ್ರ ಎಂದು ಭಾವಿಸುವುದಕ್ಕಿಂತ ಭಾರತೀಯ ಖಾಸಗಿ ರಕ್ಷಣಾ ಉದ್ಯಮದ ಒಂದು ಮಹತ್ವದ ವೈಮಾನಿಕ ಸಾಧನದ ಮಾದರಿ ಎಂದು ಪರಿಗಣಿಸುವುದು ಸದ್ಯಕ್ಕೆ ಸೂಕ್ತ.

ರಕ್ಷಣಾ ತಂತ್ರಗಳು ಬದಲಾಗಿವೆ. ಆಗಸದಲ್ಲಿ ಮಾನವ ಸಹಿತ ಯುದ್ಧ ಸಾಧನಗಳಿಗಿಂತ ಮಾನವ ರಹಿತ ರಕ್ಷಣಾ ತಂತ್ರಗಳಿಗೆ ಹೆಚ್ಚಿನ ಮಹತ್ವ ಲಭಿಸಿದೆ. ಇವುಗಳಲ್ಲಿ ವಿದೇಶಿ ತಂತ್ರಜ್ಞಾನ ಖರೀದಿಸುವ ದೇಶವಾಗಿರದೆ, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸ್ವಾಯತ್ತ ವ್ಯವಸ್ಥೆಯಾದ ಜೆಟ್‌ ಪ್ರೊಪಲ್ಶನ್ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ದಾಪುಗಾಲಿಡುತ್ತಿರುವುದು ಮತ್ತು ಅವುಗಳಲ್ಲಿ ಯುವ ಪಡೆಯ ಸ್ಟಾರ್ಟ್‌ಅಪ್‌ಗಳು ಹೆಚ್ಚಿನ ಕೆಲಸ ಮಾಡುತ್ತಿರುವುದು ಗಮನಾರ್ಹ.‌

ಈ ಹಿಂದೆ ರಕ್ಷಣಾ ತಂತ್ರಜ್ಞಾನ ಎಂದರೆ ಡಿಆರ್‌ಡಿಒ, ಇಸ್ರೊದಂತಹ ಸರ್ಕಾರಿ ಸಂಸ್ಥೆಗಳೆಂಬ ಕಲ್ಪನೆ ಇತ್ತು. ಈಗ ಸಣ್ಣ ಸ್ಟಾರ್ಟ್‌ಅಪ್‌ಗಳೂ, ಯುವ ಎಂಜಿನಿಯರ್‌ಗಳು ಇಂಥ ಕ್ಷೇತ್ರ ಭಾಗವಾಗಿದ್ದಾರೆ. ಆಂಧ್ರದ ಶ್ರೀಹರಿಕೋಟಾದಿಂದ ಇತ್ತೀಚೆಗೆ ನಭಕ್ಕೆ ಚಿಮ್ಮಿದ ವಿಕ್ರಂ ರಾಕೆಟ್‌ನ ರೂವಾರಿ ಸ್ಕೈರೂಟ್‌ ಎಂಬ ಸ್ಪೇಸ್ ಸ್ಟಾರ್ಟ್‌ ಅಪ್‌ ಇದಕ್ಕೊಂದು ಉತ್ತಮ ಉದಾಹರಣೆ.

Dailyhunt
Disclaimer: This content has not been generated, created or edited by Dailyhunt. Publisher: Prajavani