ನವದೆಹಲಿ: ಆಧುನಿಕ 'ಪ್ಯಾನ್-ಇಂಡಿಯಾ' ಚಿತ್ರಗಳು ಭಾರಿ ಹಿಂಸಾಚಾರ, ಮಹಿಳಾ ವಿರೋಧಿ ಧೋರಣೆಯನ್ನು ವೈಭವೀಕರಿಸುತ್ತಿವೆ ಎಂದು 'ವಿ ದಿ ಲೀಡರ್ಸ್ ಫೌಂಡೇಶನ್' ಸಂಸ್ಥಾಪಕ ಅಣ್ಣಾ ಮಲೈ ಟೀಕಿಸಿದ್ದಾರೆ.
ಇಂತಹ ಚಿತ್ರಗಳಿಗೆ ಪ್ರಮಾಣಪತ್ರ ನೀಡುವಾಗ ಎಚ್ಚರಿಕೆ ವಹಿಸುತ್ತಿಲ್ಲ ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ವಿರುದ್ಧ ಕಿಡಿಕಾರಿದ್ದಾರೆ.
ಆಗಸ್ಟ್ 26ರಂದು ಬಿಡುಗಡೆಗೊಂಡಿರುವ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಅವರು, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೆನ್ಸಾರ್ ಪ್ರಕ್ರಿಯೆ ಕಠಿಣವಾಗಿಲ್ಲ ಎಂದು ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಪ್ರೇಕ್ಷಕರು, ಭಾರಿ ಹಿಂಸಾಚಾರ ಮತ್ತು ಮಹಿಳಾ ವಿರೋಧಿ ಧೋರಣೆಯ ಚಿತ್ರಗಳನ್ನು ನೋಡುವಂತಾಗಿದೆ. ಇದರ ಜೊತೆಗೆ, ಹಲವು ವಯೋಮಿತಿ ಸಂಬಂಧಿತ ಚಿತ್ರಗಳಲ್ಲಿ ವೀಕ್ಷಿಸಲು ಅಸಾಧ್ಯವಾದ ದೃಶ್ಯಗಳು ಕಂಡುಬರುತ್ತಿವೆ. ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಅದನ್ನು ಲೆಕ್ಕಿಸದೇ ಸೆನ್ಸಾರ್ ಮಂಡಳಿಯು ತನ್ನ ಕೆಲಸ ಮಾಡಬೇಕು ಎಂದಿದ್ದಾರೆ.
ಮಕ್ಕಳಿಗೆ ಇಂತಹ ಸಿನಿಮಾ ನೋಡಲು ಅವಕಾಶ ನೀಡದಂತೆ ಏಕಪರದೆಯ ಚಿತ್ರಮಂದಿರಗಳ ಮಾಲೀಕರನ್ನು ಅವರು ಒತ್ತಾಯಿಸಿದ್ದಾರೆ.
ಆಕ್ಷೇಪಾರ್ಹ ರೀತಿಯಲ್ಲಿ ಮಹಿಳೆಯರನ್ನು ತೋರಿಸುತ್ತಿರುವ ಬಗ್ಗೆ ಬಹಿರಂಗವಾಗಿ ಟೀಕಿಸಿದ ಅಣ್ಣಾಮಲೈ, ಸ್ತ್ರೀದ್ವೇಷದ ಚಿತ್ರಗಳು ಸಾಮಾನ್ಯವಾಗುತ್ತಿರುವುದು ಅತ್ಯಂತ ವಿಚಲಿತಗೊಳಿಸುವ ವಿಚಾರ ಎಂದಿದ್ದಾರೆ.
ಸಿನಿಮಾವು ಸಂಸ್ಕೃತಿ ರೂಪಿಸುವ ಅಪಾರ ಶಕ್ತಿ ಹೊಂದಿದೆ. ಚಿತ್ರ ನಿರ್ಮಾಪಕರು ಈ ಶಕ್ತಿಯನ್ನು ಟಾಕ್ಸಿಕ್ ಮತ್ತು ಕೆಟ್ಟ ಆಲೋಚನೆಗಳನ್ನು ಉತ್ತೇಜಿಸಲು ಬಳಸುವ ಬದಲು ಜನರನ್ನು ಜಾಗೃತಗೊಳಿಸಲು ಬಳಸಬೇಕು ಎಂದಿದ್ದಾರೆ.
ಅಣ್ಣಾಮಲೈ ವಿಡಿಯೊವನ್ನು ನೆಟ್ಟಿಗರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಪಠಾಣ್, ಅನಿಮಲ್,ಆದಿಪುರುಷ್ ದಾಖಲೆ ಮುರಿದ ಟಾಕ್ಸಿಕ್: ಮೊದಲ ದಿನ ಗಳಿಸಿದ್ದೆಷ್ಟು?ಟಾಕ್ಸಿಕ್‌ನಲ್ಲಿ ಪ್ರೇಕ್ಷಕರ ಮನ ಗೆದ್ದ 9 ವರ್ಷದ ಯಂಗ್ 'ಟಿಕೆಟ್': ಯಾರು ಈ ಬಾಲನಟ?
