Wednesday, 19 Jun, 9.56 am ಪ್ರಜಾವಾಣಿ

ಜಿಲ್ಲೆ
ಸೂಕ್ತ ಚಿಕಿತ್ಸೆ ನೀಡಿದರೆ ಶ್ರವಣ ದೋಷ ನಿವಾರಣೆ

ತುಮಕೂರು: ನವಜಾತ ಶಿಶುವಿಗೆ ಆರು ತಿಂಗಳ ಒಳಗಾಗಿ ಶ್ರವಣ ದೋಷವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ, ಆರೋಗ್ಯವಾಗಿ ಸಾಮಾನ್ಯರಂತೆ ಇರಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವಾಣಿ ಡೆಫ್ ಚಿಲ್ಡ್ರನ್ಸ್ ಫೌಂಡೇಷನ್ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ, ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ನಡೆದ 'ಸೋಹಮ್' ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಸಾಧನ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇನ್ನು ಮುಂದೆ ಈ ಸಾಧನವನ್ನು ಬಳಸಿಕೊಂಡು ಮಗು ಜನಿಸಿದ ದಿನವೇ ಶಬ್ದ ಕೇಳಿಸುತ್ತಿದ್ದೆಯೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿರುವುದರಿಂದ, ಭವಿಷ್ಯದಲ್ಲಿ ಮಕ್ಕಳು ತೊಂದರೆಪಡುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಮಾತನಾಡಿ, 'ಜಿಲ್ಲೆಯಲ್ಲಿ ಒಟ್ಟು 957 ಮಕ್ಕಳು ಶ್ರವಣ ದೋಷ ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಿವುಡುತನ ಮುಕ್ತ ಜಿಲ್ಲೆ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಸೌಲಭ್ಯವನ್ನು ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುವುದು' ಎಂದು ಭರವಸೆ ನೀಡಿದರು.

ವಾಣಿ ಡೆಫ್ ಚಿಲ್ಡ್ರನ್ಸ್ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕಿ ಸುಮೇಧ ವಿಜಯಲಕ್ಷ್ಮಿ ಜೋಗಲೇಕರ್ ₹7.75 ಲಕ್ಷ ಮೌಲ್ಯದ 'ಸೋಹಮ್' ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಸಾಧನವನ್ನು ಜಿಲ್ಲಾ ಆಸ್ಪತ್ರೆಗೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಎಸ್‌.ನಾಗಣ್ಣ, ಪ್ರೊ ಚಂದ್ರಣ್ಣ ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top