Dailyhunt Logo
  • Light mode
    Follow system
    Dark mode
    • Play Story
    • App Story
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೆಟ್ರೊ ಮತ್ತು ರೈಲು ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬಾರದು ಎಂಬ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಅಧಿಕಾರಿಗಳು ಉಲ್ಲಂಘಿಸಿದ್ದು, ಕ್ರಮ ತೆಗೆದುಕೊಳ್ಳುವಂತೆ ಕೋರಿ ಶನಿವಾರ ಅರ್ಜಿ ಸಲ್ಲಿಸಲಾಗಿದೆ.

ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಇತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅಕ್ಟೋಬರ್ 9ರಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದಾಗ್ಯೂ, ಅಧಿಕಾರಿಗಳು ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೊ ನಿಲ್ದಾಣಗಳ ಮುಚ್ಚುವಿಕೆಯನ್ನು ಮುಂದುವರಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ 57 ಮೆಟ್ರೊ ನಿಲ್ದಾಣಗಳನ್ನು ಮುಚ್ಚಿರುವುದು ಮತ್ತು ದೆಹಲಿಗೆ ಬರುವ ರೈಲುಗಳನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿ ಅ.9ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ದೆಹಲಿಯಾದ್ಯಂತ ಪ್ರತಿಭಟನೆ ನಡೆಸಲು ಸಿಜೆಪಿ ಕರೆ ನೀಡಿದೆ.

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಶನಿವಾರ ಸಂಜೆ 6 ಗಂಟೆಯವರೆಗೆ 45 ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೊ ಪ್ರಕಟಣೆ ತಿಳಿಸಿದೆ.

'ನೊಣ ಕೊಲ್ಲಲು ಸುತ್ತಿಗೆ ಬಳಸಲ್ಲ'

ಸಿಜೆಪಿ ಪ್ರತಿಭಟನೆ ಕಾರಣದಿಂದ ಮೆಟ್ರೊ ನಿಲ್ದಾಣಗಳನ್ನು ಮುಚ್ಚುವುದು ಮತ್ತು ರೈಲು ಸಂಚಾರ ರದ್ದುಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, 'ನೊಣವನ್ನು ಕೊಲ್ಲಲು ಸುತ್ತಿಗೆ ಬಳಸುವುದಿಲ್ಲ' ಎಂದು ಮಾರ್ಮಿಕವಾಗಿ ಹೇಳಿತ್ತು.

'ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಎಲ್ಲವೂ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಿ. ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ' ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani