'ಹದ್ನೈದಿನಾತು ಸಿಗಕೊಲ್ರುʼ
'ಈ ಕಳ್ಸೂಳೆಗಂಡ್ರು ಕಾಲಾಗೆ ನಿದ್ದಿಲ್ಲ ನೀರಡಿಕಿಲ್ಲಾ…ʼ
'ಕಯ್ಯಿಗ್ ಸಿಗ್ಲಿ ಕಾಲಾಗಾಕಂದು ಕಚಪಿಚಿ ತುಳಿತೀನಿ…ʼ
ಮಾತುಗಳು ಉರಿಯುರಿ ಆಗುತ್ತಿದ್ದವು. ಎಂತೆಂಥ ತಲೆಮಾಸಿದವರನ್ನೆ ಹೆಡೆಮುರಿ ಕಟ್ಟಿದ್ದ ಕೇಟಿಪುರದ ಪೊಲೀಸ್ಸಿನವರಿಗೇ ಗಂಟೂರಿನವರು ದೊಡ್ಡ ತಲೆನೋವಾಗಿದ್ದರು.
ಪುಟಗೋಸಿ ನನ್ಮಕ್ಕಳ್ನಾ ಹಿಂಗೋಗಿ ಹಂಗೆತ್ತಾಕಂದು ಬರ್ತೀವಿ ಅಂತ ಗಂಟೂರಿಗೋದ ಪೊಲೀಸ್ಸಿನವರನ್ನೆ ಪುಟಗೋಸಿಮಾಡಿ ಎರಡುವಾರದಿಂದ ಅಂಡಲೆಸುತ್ತಿದ್ದರು.
'ಜುಜುಬಿ ಇಸ್ಪೀಟು ಆಡೋರ್ನಾ ಹಿಡಿಯಕ್ಕಾಗಲ್ಲಂದ್ರೆ ನೀವ್ಯಾವ್ ಸೀಮೆ ಪೋಲಿಸ್ಸಪ್ಪೋರುʼ ಅಂತ ಗಂಟೂರು ಹೆಂಗಸರು ನಿಲ್ಲಿಸಿ ಕೇಳುವಂತಾಗಿದ್ದರು.
ಮೊನ್ನೆ ಅಲ್ಲಾಡಿದ್ದರು, ನಿನ್ನೆ ಇಲ್ಲಾಡಿದ್ದರು ಅಂತ ಅಲ್ಲಿಗೋಡೋದರೆ ಇವತ್ತಿನ್ನೆಲ್ಲೋ ಆಡಿ ಇಸ್ಪೀಟೆಲೆ ಬಾಟಲಿ ಸಿಗರೇಟು ತುಂಡು ಎಸೆದೋಗಿರುತ್ತಿದ್ದರು. ದಿನಾ ಹನ್ನೆರಡು ಕಿಲೊಮೀಟರು ಕೇಟಿಪುರದಿಂದ ಬೈಕಲ್ಲಿಬಂದು ಸಾಕಾಗಿತ್ತು ಪೊಲೀಸು ಕುಮಾರ, ಸತೀಶರಿಗೆ.
'ಆ ಪ್ರಕಾಶುಗೆ ಗೊತ್ತಿರುತ್ತಣ್ಣ ಯಾವ್ಯಾವ್ನು ಆಡ್ತಾನಂತ. ಅವ್ರು ಮನಿಗ್ನುಗ್ಗಿ ಎಳಕಂದ್ಬಂದು ಎಲ್ಡು ಬಿಗಿದ್ರೆ ಆಟ ಬಂದ್ ಮಾಡ್ತಾರೆ ನೋಡಣ್ಣʼ ಅಂದ ಸತೀಶ.
'ಅಲ್ಲಪಾ ಮೊದ್ಲೇಯಿದು ರಾಜಕೀಯದೂರು. ಹಂಗೆ ಅನ್ಮಾನದ್ಮೇಲೆ ಎಳಕಂಡು ಬಂದ್ರೆ ಆ ಪಕ್ಷ ಈ ಪಕ್ಷದವರಂತ ಗಲಭೆನೆ ಎದ್ದಳ್ತತಿ. ನೋಡಿಯಲ್ಲಾ ಮೊನ್ನೆ ಎಮ್ಮೆಲ್ಲೆ ಎಲೆಕ್ಷನ್ನಾಗೆ ಏನಾತಂತʼ ಅಂದ ಕುಮಾರ.
'ಹೌದು ಬಿಡಣ್ಣ, ಕಾನೂನು ಮಾತಾಡ್ತಾರೆ ಈವೂರ್ನವ್ರು. ಆ ಪ್ರಕಾಶನೊ ಹೆದ್ರುಪುಕ್ಲ. ಧೈರ್ಯಮಾಡಿ ಮನೆ ತೋರಿಸೋ ಆಸಾಮೀನು ಅಲ್ಲ…ʼ.
'ಒಂದೂರೋರಲ್ಲಂತಪಾ, ನಾಕೈದೂರೋರು ಸೇರ್ಕಂತರಂತೆʼ.
ಒಳ್ಳೆ ನಿದ್ದೆಹೊತ್ತು.
'ಲೇ ಹೆಣ ಎದ್ದೇಳೊ ಟೈಮಾಗೇತಿʼ ರಾಜಪ್ಪ ಎಷ್ಟೆಬ್ಬಿಸಿದರೂ 'ಆಂ ಹ್ಞುಂʼ ಅನ್ನುತ್ತಾ ದುಪ್ಪಡಿ ಎಳಎಳಕಂದು ಮಗ್ಗಲು ಬದಲಾಯಿಸುತ್ತಿದ್ದ ಹೆಣ. ಯೆಸ್ಸೆಟ್ಟಿಗೆ ಇನ್ನೊಂದೀಟೊತ್ತು ಮಲಗ್ಲಿ ಅಂದುಕೊಳ್ಳುತ್ತ ಬಸ್ಸಿಳಿದೋದ ರಾಜಪ್ಪ. ಉದ್ದ ಸೀಟಲ್ಲಿ ಕೊರಡಂತೆ ಬಿದ್ದುಕೊಂಡಿದ್ದ ಹೆಣಗೆ ಶಿವಮೊಗ್ಗೆಯ ಬಸ್ಸ್ಟ್ಯಾಂಡು ವಲ್ಲೂಕೆ ಕತ್ತಲನ್ನು ತೊಳೆದುಕೊಳ್ಳುತ್ತಿದ್ದರ ಯಾವುದೇ ಪರಿವಿರಲಿಲ್ಲ . ಹೀಗೆ ಹೆಣದಂತೆ ಮಲಗುತ್ತಿದ್ದರಿಂದಲೇ ಓಬಳೇಶ ಎಲ್ಲರ ಬಾಯಲ್ಲಿ 'ಹೆಣʼವಾಗಿದ್ದ!
ಬೆಂಗಳೂರೋ ಮತ್ಯಾವುದೂರಿಂದ ಅಪರಾತ್ರಿಯಲ್ಲಿ ಬಂದಿಳಿದ ಜನಕ್ಕೆ ಯಾವಾಗೀ ತಿಪ್ಪೇಸ್ವಾಮಿ ಬಸ್ಸಿನ ಡೋರ್ ತೆಗೀತಾರೊ, ತಮ್ಮೂರಿಗೆಂದು ಸೇರುತ್ತೇವೆಯೊ ಅಂತ ಬಸ್ಸು ಸುತ್ತಲೆ ಅಡ್ಡಾಡುತ್ತಿದ್ದರು. ಇನ್ನೇನು ಐದು ಆಗುತ್ತಿದ್ದಂತೆ ರಾಜಪ್ಪ ಡೋರ್ ತೆಗೆದ. ಜನ ಒಬ್ಬೊಬ್ಬರೆ ಬಸ್ಸಿನಲ್ಲಿ ಸೀಟಲ್ಲಿ ಚಳಿಗೆ ಮುದರಿ ಕೂರಲತ್ತಿದರು. ಆಗಲೂ ಹಾಗೆ ಮಲಗಿದ್ದ ಹೆಣಗೆ ರಾಜಪ್ಪ ಲೈಟ್ಹಾಕಿ 'ಲೇ ಎದ್ದೇಳೊ ಜನಬಂದು ಒಳಕುಂತ್ಕಂದಾರೆʼ ಅಂತ ಅಲ್ಲಾಡಿಸಿದಾಗ ಬುದುಗ್ಗನೆ ದುಪ್ಪಡಿ ಕೊಡವಿ ಎದ್ದುನಿಂತ. ಬರೀ ಚಡ್ಡಿಯಲ್ಲಿ ಕರ್ರಗೆ ಬೀಟೆ ತುಂಡಂತಿದ್ದ ಹೆಣ ಒಮ್ಮೆ ಮೈಮುರಿದ. ಬಸ್ಸೊಳಗೆ ಹೆಂಗಸರಿದ್ದಾರೆಂಬ ಅಳುಕೂ ಇಲ್ಲದೆ ಬರಬರನೆ ಪ್ಯಾಂಟು ಶರ್ಟು ಹಾಕ್ಕೊಂಡವನೆ ಕೆಳಗಿಳಿದೋಗಿ ಅಲ್ಲೆ ಒಂದಿಷ್ಟು ದೂರದಲ್ಲಿ ಅಕ್ಕಪಕ್ಕ ಜನರಿದ್ದರೂ ಬುಳುಬುಳು ಉಚ್ಚೆಹೊಯ್ದು ಗಸಗಸ ಹಲ್ಲುತಿಕ್ಕಿ ಅಲ್ಲೆ ನಲ್ಲಿಯಲ್ಲಿ ಮುಖ ತೊಳೆದುಕೊಂಡುಬಂದು ಗ್ಲಾಸೊರೆಸಿ ಡ್ರೈವರ್ ಸೀಟು ಕೊಡವಿ ದೇವರ ಹಾಡಾಕಿ ಗಣಪತಿ ಫೋಟೊಕ್ಕೆ ಊದುಬತ್ತಿಯಚ್ಚಿ ಡೋರಿಗೆ ನಿಂತು 'ಯಾರ್ರೀ ಕೇಟಿಪುರ ಯಾರ್ರಿ ಲಕ್ಕಪ್ಪಳ್ಳಿʼ ಒಂದೆರಡುಸಾರಿ ಕೂಗಿ ಆಕಳಿಸಿದ. ರಾಜಪ್ಪ ಗಾಡಿ ಸ್ಟಾರ್ಟ್ ಮಾಡಿದ.
ಸಬ್ಇನ್ಸ್ಪೆಕ್ಟರ್ 'ಇಬ್ರೂ ಒಂತಿಂಗಳಿಂದ ಕತ್ತೆ ಕಾಯಕೋಗ್ತೀರಾ… ಎಮ್ಮೆಲ್ಲೆ ಫೋನ್ಮಾಡಿ ಕ್ಯಕ್ಯಾಕ್ಕರಿಸಿ ಉಗೀತೈದಾರೆ… ಇಸ್ಪೀಟಾಡೋರ್ನಾ ಹಿಡಿಯಕ್ಕಾಗ್ಲಿಲ್ಲಾಂದ್ರೆ ಟ್ರಾನ್ಸ್ಫರ್ ಮಾಡಿಸ್ಕಂದೋಗ್ರಿ ಅಂತೈದಾರೆ…ಗಂಟೂರ್ ಹೆಂಗ್ಸ್ರು ದಿನಾ ಫೋನ್ಮಾಡಿ ಅವ್ರತಲೆ ತಿಂತಾಐದಾರಂತೆʼ ಅಂದರು.
'ಅಲ್ಲಾ ಸಾ…ʼ ಅಂತ ಬಾಯಿ ತೆಗೆಯುತ್ತಿದ್ದ ಕುಮಾರನಿಗೆ 'ಏನಲ್ಲ ಸಾ, ಮಾರ್ಯಾದೆಯಿಂದ ಇನ್ನೊಂದೆರಡು ದಿನದೊಳಗೆ ಅವರನ್ನ ಹಿಡ್ಕಂಡ್ ಬರ್ಬೇಕುʼ ಅಂತ ಗದರಿದರು.
ಗಂಟೂರು ಮಾರಿಜಾತ್ರೆಗೆ ಇನ್ನೊಂದು ವಾರ.
ಊರೆಲ್ಲಾ ಝಗಮಗ. ತಿನ್ನುಣ್ಣುವವರ ಕೇರಿಗಳಲ್ಲಿ ಕುರಿಗಳ ಮ್ಯಾ..ಬ್ಯಾ... ತಿನ್ನುಣ್ಣದವರ ಕೇರಿಗಳಲ್ಲಿ ಲಾಡು ಕಾರ ಹಚ್ಚಿದ ಮಂಡಕ್ಕಿಯ ಘಮಘಮ. ಅಗಸೆಬಾಗಿಲು ಬಸ್ಸ್ಟ್ಯಾಂಡಲ್ಲಿ ಸಿನಿಮಾನಟರ ಪ್ಯಾಂಟು ಕೋಟುಗಳಲ್ಲಿ ತಲೆಮುಖಗಳ ಸಿಕ್ಕಿಸಿಗೊಂಡ ಗಂಟೂರು ಹುಡುಗರ ಪ್ಲೆಕ್ಸೋಪ್ಲೆಕ್ಸು.
'ಗಂಟೂರು ಬಾಯ್ಸ್ʼ, 'ಜಾಲಿ ಬಾಯ್ಸ್ʼ, 'ಯಾರಪ್ಪುಂದೇನೈತಿ ನಮ್ಮೂರಿಂದು ಹವಾ ಐತಿʼ- ಹೀಗೆ ತರಹೇವಾರಿ ತಲೆಬರಹಗಳು. ಕೇರಿಕೇರಿಯೆ ಲೈಟಿನಸರಗಳಿಂದ ಮುಚ್ಚಿಹೋಗಿತ್ತು. ಗಂಟೂರೇನು ಸುತ್ತಮುತ್ತಲ ಹಳ್ಳಿಗಳು ಜಾತ್ರೆ ಅಮಲಲ್ಲಿ ತೇಲಿಮುಳುಗುತ್ತಿದ್ದವು.
ಹೆಣನೂ ಒಂದು ವಾರವಾಗಿತ್ತು ಬಸ್ಸಿಗೆ ರಜೆಮಾಡಿ. ತಾನಿದ್ದ ಲಕ್ಕಪ್ಪಳ್ಳಿಯಿಂದ ಏಳೆಂಟು ಕಿಲೊಮೀಟರಿನ ಗಂಟೂರಿಗೆ ಡೈಲೀ ಬಂದು ರಾತ್ರಿ ಎಷ್ಟೊತ್ತಿಗೋ ಮನೆಗೆ ಸೇರುತ್ತಿದ್ದ. ಮೊದಲೆ ವಾರಕ್ಕೊಂದು ರಜೆಸಿಕ್ಕರೆ ಗಂಟೂರಿಗೆ ಓಡಿಹೋಗುವ ಹೆಣ, ಈಗ ಜಾತ್ರೆ… ಸುಮ್ಮನಿದ್ದಾನೆಯೆ..? ಪೂರ್ಣಮ್ಮಗಂತೂ ಗಂಡನಿಗೆ ಬಸ್ಸಿನೋರು ಯಾಕಾದ್ರು ರಜೆ ಕೊಡ್ತಾರೊ ಅಂತ ರೇಜಿಗೆಯಾಗಿತ್ತು. 'ಇಲ್ಲೆ ಹತ್ ನಿಮಿಷದಾಗೇ ಬಂದೆʼ ಅಂತ ಬೇರೆಯವರ ಬೈಕು ಇಸಿದುಕೊಂಡೋದವನು ರಾತ್ರಿಯಾದರೂ ಬರುತ್ತಿರಲಿಲ್ಲ. ಕೊನೆಕೊನೆಗೆ ಯಾರೂ ಬೈಕು ಕೊಡದಂತಾದರು.
ಅವನ ಹಕೀಕತ್ತು ಪೂರ್ಣಮ್ಮಗೆ ತಿಳಿಯದ್ದೇನಲ್ಲ. ಅವನು ಗಂಟೂರಿಗೆ ಹೋಗುವುದು ಇಸ್ಪೀಟು ಆಡೋದಕ್ಕೆ ಮತ್ತು….
ಹೌದು ಅದರ ವಾಸನೆ ನಾರುತ್ತಿತ್ತು. ಗಂಟೂರಿನ ಎ.ಕೆ ಕಾಲೋನಿಯಾಚೆ ತಗಡುಶೆಡ್ಡಿನ ಕೂದಲುರಾಶಿಯ ಮುಗ್ಗಲುವಾಸನೆ ಹೆಣನ ತೆಲುಗುಕೇಕೆಯೊಂದಿಗೆ ಬೆರೆತು ಅಷ್ಟು ದೂರದ ಪೂರ್ಣಮ್ಮನ ಕಟ್ಟುನೆರೆಕೆ ಮನೆಯವರೆಗೂ ನುಗ್ಗಿ ಬರುತ್ತಿತ್ತು. ಆ ವಾಸನೆಗೆ ಇಡೀ ಕಟ್ಟುನೆರಕೆಮನೆ ಕುಸಿದು ತನ್ನ ಮತ್ತು ತನ್ನ ಮಗಳ ಮೇಲೆ ಕುಸಿದು ಬೀಳುತ್ತದೆಯೊ ಅನ್ನುವಷ್ಟು ಎದೆಯಲ್ಲಿ ನಡುಕ ಹುಟ್ಟುತ್ತಿತ್ತು.
ಕೇರಿ ಬಾಗಿಲಲ್ಲೋ 'ಯಾವನ್ನೋ ಬೇರೆ ಜಾತ್ಯನ್ನ ಕಟ್ಕಂದಾಳೆ ಅಡ್ನಾಡಿ… ಯಾವೂರೋ ಏನೊ ಆಕಡೆ ಚಳ್ಕೇರಿ ಕಡೇನಂತೆ… ಇಲ್ಯಾವನೂ ಸಿಗ್ತಿದ್ದಿಲ್ಲೇನೊ ಸುಂದ್ರಿಗೆ… ಕರ್ರುಗೆ ಕಿಟ್ಟಾಗೇನೆ… ಏನ್ಕಂಡು ಅವ್ನ ಕಟ್ಕಂದ್ಲೊʼ ಅಂತ ಮುಸುಮುಸು ಬೇರೆ.
ಎಲ್ಲಿ ತನ್ನನ್ನೂ ನಾಲ್ಕು ವರ್ಷದ ಮಗಳನ್ನೂ ಬಿಟ್ಟು ಅವನೂರು ಬೀಜಿಕೇರಿಗೆ ಓಡಿಹೋಗಿ ಬಿಡ್ತಾನೋ ಅಂತ ಬಾಯಲ್ಲಿ ಅಕ್ಕಿಕಾಳಾಕಂದರಂಗೆ ಸುಮ್ಮನಿರುತ್ತಿದ್ದಳು.
ಆದರೂ ಅವನ ಹರಳುರಿದಂತೆ ಆಡುವ ಮಾತುಗಳ ನೆನಸಿಕೊಂಡರೆ….
ದಿನಾ ಗುರುರಾಜ ಬಸ್ಸಲ್ಲಿ ಲಕ್ಕಪ್ಪಳ್ಳಿಯಿಂದ ಕೇಟಿಪುರದ ಮಹೇಶ್ವರಿ ಕ್ಲಾತ್ಸ್ಟೋರಿಗೆ ಬಟ್ಟೆ ಮಡಿಚಲು ಓಡಾಡುವಾಗಿನ ಚುರುಚುರುಕಾದ ಹೆಣನ ಮುಖ ಕಣ್ಮುಂದೆ ಬಂದಾಗೆಲ್ಲ ಸುಖವೆನಿಸುತ್ತದೆ. ಕೂದಲು ಎಗರಿಸ್ಕಂತ ಡೈಲಾಗು ಹೊಡೀತಿದ್ರೆ ಮನಸ್ಸು ಬಿಚ್ಚಿ ನಗಬೇಕೆನಿಸುತ್ತಿತ್ತು. ತನಗೋಸ್ಕರನೇ ಸೀಟಿಡಿದು ಕೂರಿಸುತ್ತಿದ್ದನಲ್ಲಾ ಅಷ್ಟು ರಶ್ಶಿದ್ರೂ. ಮೊದಮೊದಲು ಹೋಗಿ, ಬನ್ನಿ ಅನ್ನುತ್ತಿದ್ದವನು ಅದ್ಯಾವ ಗಳಿಗೆಯಲ್ಲಿ ಹೋಗು ಬಾ ಅನ್ನಲು ಶುರುಮಾಡಿದ್ದನೋ ಗೊತ್ತಿಲ್ಲ. ಕನ್ನಡದಷ್ಟೇ ಸಲೀಸಾಗಿ ತೆಲುಗು ಮಾತಾಡುವುದನ್ನ ನೋಡಿ ಪುಳಕವಾಗುತ್ತಿತ್ತು. ಬಸ್ಸಲ್ಲಿ ನನ್ನಿಷ್ಟದ ಸಿನಿಮಾ ಹಾಡನ್ನೇ ಹಾಕುತ್ತಿದ್ದನಲ್ಲ. ಗುಡ್ಡಪ್ಪಗೆ ಡೋರಲ್ಲಿ ಕೂಗಲಚ್ಚಿ ಅವನೂ ನನ್ನ ಪಕ್ಕಕ್ಕೆ ಕೂರುತ್ತಿದ್ದನಲ್ಲಾ. ನನ್ನ ಬ್ಯಾಗು ತೆರೆದು ನೋಡಿ ಏನೇನೊ ಕಿಲಾಡಿ ಮಾತಾಡುತ್ತಿದ್ದನಲ್ಲಾ. ಊಟದ ಡಬ್ಬಿನ್ನೆಲ್ಲ ಬಿಚ್ಚಿ ನೋಡಿ 'ನಮ್ಗೆಲ್ಲ ಇಂಥವ್ನೆಲ್ಲಾ ತಿನ್ನೋ ಅದೃಷ್ಟ ಎಲೈತಪ್ಪಾʼ ಅಂತಿದ್ದನಲ್ಲಾ. ನಾನೊ ಅವನಿಗಂತಲೇ ಚಿಕನ್ ಸಾರು ತಂದು ಕೊಟ್ಟಿದ್ದೆನಲ್ಲಾ. ಅವನೇಳಿದ್ದಕ್ಕಲ್ಲವೆ ಅತ್ತೆಯತ್ತಿರ ಸಣ್ಫೋನು ಬ್ಯಾಡ ದೊಡ್ಫೋನು ಕೊಡ್ಸು ಅಂತ ಜಗಳಕ್ಕೆಬಿದ್ದು ಊಟ ಬಿಟ್ಟಿದ್ದು. ಪಾಪ… ಎಲ್ಲಮ್ಮತ್ತೆ ಎರೆಡೆರಡು ಕೂಲಿ ಕೆಲ್ಸುಕ್ಕೋಗಿ ಸೆಕೆಂಡ್ ಹ್ಯಾಂಡ್ ಮೊಬೈಲು ಕೊಡಿಸಿತ್ತಲ್ಲಾ. ದಿನಕ್ಕೆ ಅದೆಷ್ಟು ಮೆಸ್ಸೇಜು.. ನಮ್ಮಿಬ್ಬರ ನಡುವೆ..
ಒಮ್ಮೆ ಹೆಣ ಬಸ್ಸಿಗೋದಾಗ ಮಗಳನ್ನು ರಂಗಕ್ಕನತ್ತಿರ ಬಿಟ್ಟು ಗಂಟೂರು ಮಾರಮ್ಮನ ಗುಡಿಗಂತ ಯಾರದ್ದೊ ಬೈಕತ್ತಿ ಬಂದಿದ್ದಳು ಪೂರ್ಣಮ್ಮ. ಆ ಶೆಡ್ಡಿನ ತಗಡುಬಾಗಿಲು ಸರಿಸಿದ್ದೇ ತಡ ಹೊಟ್ಟೆಯೆಲ್ಲ ತೊಳಸಿಬಂದಿತ್ತು. ಮೂಲೆಮೂಲೆಯಲ್ಲೊ ಕೂದಲರಾಶಿ… ಸೂರಲ್ಲೊ ಹೆರ್ಪಿನ್ ಬಾಚಣಿಕೆಗಳ ಸರಮಾಲೆ… ನೆಲದಲ್ಲಿ ಕುಡಿದುಬಿದ್ದಿರೋ ಮನುಷ್ಯ… ಪಕ್ಕದಲ್ಲೆ ಹೇಲುಚ್ಚೆಮಾಡಿಕೊಂಡು ಪಟಪಟ ಕೈಬಡಿಯುತ್ತಿರುವ ಕೂಸು… ಎಲ್ಲಿಬೇಕಲ್ಲೆ ಬಟ್ಟೆಬರೆ, ಪಾತ್ರೆ… ಅವನೊ ಜೊಲ್ಲು ಸುರಿಸುತ್ತಾ 'ಯ್ಹಾ …ಪುಸ್ಸೂ…ʼ ಅಂತ ಮುಲುಕಿದ್ದೇ ಪೂರ್ಣಮ್ಮ ಭಯಪಟ್ಟು ದಢಕ್ಕನೆ ಹಿಂದಕ್ಹಾರಿ ಮನೆಕಡೆಹೊಂಟಳು.
ಅವಳನ್ನು ಸಿಗಿದಾಗಬೇಕಂತ ಬಂದ ಪೂರ್ಣಮ್ಮಗೆ ಆ ಶೆಡ್ಡು ನೋಡಿದಮೇಲೆ ಮೈಯಾಗಿನ ಕಸುವೇ ಕಳೆದೋದಂತಾಗಿತ್ತು. ಅವಳ್ಹೆಸರೂ ಗೊತ್ತಿರಲಿಲ್ಲ. ದಾರಿಯಲ್ಯಾರೊ ಮೊಸಲಮ್ಮ… ಆಕಿ ಊರ್ಮ್ಯಾಲೆ ಯಾಪಾರಕ್ಕೊಗ್ಯಾಳೆ ಅಂದಿದ್ದರು. ಎಷ್ಟೊಸಾರಿ ಪೂರ್ಣಮ್ಮನೆ ಸೂರಿಗೆ ಸಿಕ್ಕಿಸಿದ ಕೂದಲನ್ನು ಮೊಸಲಮ್ಮಗೆ ಕೊಟ್ಟು ಕ್ಲಿಪ್ಪೊ ಪಿನ್ನೊ ಟೇಪೊ ಕಣ್ಣುಕಪ್ಪೊ ತೆಗೆದುಕೊಂಡಿದ್ದಿದೆ. ಆಕಿ ಬೆನ್ನಿಗೆ ಕಟ್ಟಿಕೊಂಡಿರೊ ಕೂಸು ನೋಡಿ ಕರುಳು ಚುರುಗುಟ್ಟಿದ್ದಿದೆ. ಆದರವಳ ಮುಖ… ಅಸ್ಪಷ್ಟ… ಈಗೀಗ ಲಕ್ಕಪ್ಪಳ್ಳಿ ಕಡೇನೆ ಆಕೆ ತಲೆಯಾಕುತ್ತಿರಲಿಲ್ಲ …
ಶೆಡ್ಡಿಂದ ಬಂದಮೇಲೆ ಮೈಯೆಲ್ಲಾ ಭಾರ… ಜ್ವರ… ಗಂಡನ್ನ ನೆನೆಸಿಕೊಂಡರೆ ವಾಕರಿಕೆ… ದುಪ್ಪಡಿಹೊದ್ದು ಮಲಗಿಬಿಟ್ಟಳು. ಹುಡುಗಿ ಕರಕೊಂಡುಬಂದ ರಂಗಕ್ಕ ಪೂರ್ಣಮ್ಮನ ಎಬ್ಬಿಸಿ ಜ್ವರದ ಗುಳಿಗೆ ತಂದು ನುಂಗಿಸಿ ಗಂಜಿ ಕುಡಿಸಿ ಹುಡುಗಿಯನ್ನು ಮತ್ತೆ ತನ್ನೊಂದಿಗೇ ಕರಕೊಂಡುಹೋದಳು.
ಎಲ್ಲಮ್ಮತ್ತೆ ಇದ್ದಿದ್ದರೆ… ಅವಳ ತೊಡೆಮೇಲೆ ಮಲಗಬಹುದಿತ್ತು… ಅವಳ ಹೆಗಲಿಗೆ ಮುಖವಿಟ್ಟು ಕಣ್ಣೀರು ಹಾಕಬಹುದಿತ್ತು…. ಅವಳೋ 'ಆ ಬಾಡ್ಯನಿಗೆ ಒಂದ್ಗತಿ ಕಾಣಸ್ತೀನಿ, ನೀನ್ ಕಣ್ಣಿರಾಕ್ ಬ್ಯಾಡವ್ವ ನಾನೈದೀನಿʼ ಅಂತಿದ್ದಳು. ಅತ್ತೆ ಇದ್ದಿದ್ದರೆ ಹುಡುಗಿನ ಕಂಡರೋ ಮನಿಗೆ ಮಲಗಾಕೆ ಬಿಡ್ತಿದ್ಲಾ…? ನನ್ನೊಬ್ಬಾಕಿನೆ ಬಿಟ್ಟು ಯಾಕೋದತ್ತೆ..? ಎಂಥ ಸುಕುದ್ದು ಸಾವತ್ತೆ ನಿಂದು… ಹಿತ್ಲಾಗೆ ಮುಸುರೆ ತಿಕ್ತಾನೆ ಜೀವಬಿಟ್ಯಲ್ಲ… ಒಂದ್ ಕಾಯಿಲಿಲ್ಲ, ಕಸಾಲಿಲ್ಲ. ಯಾರತ್ರನೂ ತೊಳಸ್ಕಂದು ಬಳಸ್ಕಳಿಲ್ದಂಗೆ ಹೊಂಟೋದೆ ನೋಡು… ಒಂದಿನನೂ ಜಡ್ಡಾಗೇತಂತ ಹಾಸಿಗಿಡಿಲಿಲ್ಲ. ಯಾವತ್ತರ ಒಂದಿನ ಕೂಲಿಗೋಗ್ಲಿಲ್ಲಂದ್ರೆ 'ಪೂರ್ಣಿ ಮೈಯೆಲ್ಲಾ ವಜೀ ಕಣೆ, ಕೆಲ್ಸಕೋದ್ರೆನೋಡು ಮಯ್ಯಿ ಹಗ್ರʼ ಅಂತಿದೆಲ್ಲತ್ತೆ. ಅವತ್ತೆ ಹೇಳಿದ್ದೆ ನೀನು 'ಅವ್ನು ಭಾರಿ ತಟ್ವಟೈದಾನೆ… ಮದ್ವೆಗಿಂತ ಮುಂಚೆ ಪಾಡಾಗೊಂದೀಟು ಯೋಚ್ನೆಮಾಡುʼ ಅಂತ. ನಾನೇ ಕೂಳ್ನೀರ್ಬಿಟ್ಟು ಬಿದ್ಕಂದೆ, ಕೊನಿಕೆ ನಿನ್ನತ್ರ ಮಾತೇ ಬಿಟ್ಟೆ. ಪಾಪ…ನಂಗೆಷ್ಟು ಮುದ್ದಿಸಿದೆ… ಮಾತ್ಕೇಳಲಿಲ್ಲ ನಾನು... ನಂಗೊ ಮಂಕುಕವಿದಿತ್ತು…ಅವನ್ದು…
ಹೆಣ ಬೆಳಗ್ಗಿಂದಲೆ ಪೂರ್ಣಮ್ಮನತ್ತಿರ ಕ್ಯಾತೆ ತೆಗೆದಿದ್ದ. ಗಂಟೂರು ಜಾತ್ರೆಗೆ ಹೋಗಲು ಮಚ್ಚುಕರಿಯಣ್ಣನ ಬೈಕ್ ಕೊಡಿಸು ಅಂತ. ಮಚ್ಚುಕರಿಯಣ್ಣನತ್ತಿರ ಎರಡು ಬೈಕಿದ್ದವು. 'ಯಾರ್ದರ ಬೈಕಿಗೆ ಕೈಯಂದು, ಅವರಿಂದೆ ಕುತ್ಕಂದೋಗು… ಇಲ್ಲ ಸೊಲ್ಪ ತಡ್ಕ ಮೈತೊಳ್ಕಂದು ನಾನೂ ನಿಂಜತಿಗೆ ಬರ್ತೀನಿʼ ಅಂದರೂ ನೆಲದ ಮೇಲೆ ನಿಲ್ಲಕ್ಕೊಲ್ಲ….
ಇವತ್ತು ಜಾತ್ರೆ, ಆಡೇ ಆಡ್ತಾರೆ, ಹಿಡಿಲೇಬೇಕು ಅಂತ ತಲೆಕೆಟ್ಟು ಪೊಲೀಸ್ಸಿನವರು ಮೂರು ಡ್ರೋನ್ ಗುಟ್ಟಾಗಿ ತರಿಸಿದ್ದರು. ಜನಗಳಿಗೆ 'ಸೃಷ್ಟಿ ಯೂಟ್ಯೂಬ್ಗೆ, ಜಾತ್ರೆ ವಿಡಿಯೋ ಮಾಡಲು ಬಂದಿದ್ದೇವೆʼ ಎಂದೇಳಲು ಡ್ರೋನ್ನವರಿಗೆ ಹೇಳಿಕೊಟ್ಟಿದ್ದರು. ಇಬ್ಬರು ಪೊಲೀಸರು ಜಾತ್ರೆ ಹದ್ದುಬಸ್ತು ಅಂತ ತಿರುಗುತ್ತಿದ್ದರೆ ಇನ್ನಾರು ಜನ ಪಾಳುಮಿಲ್ಲಿನತ್ತಿರ ಓಮಿನಿಯಲ್ಲಿ ಕುಳಿತಿದ್ದರು.
ಅವರಿಗೂ ಸಾಕಾಗಿ ಹೋಗಿತ್ತು ಒಂದು ತಿಂಗಳಿಂದ. ಈ ಗಂಟೂರೇ ಅಭೇದ್ಯ. ಇಸ್ಪೀಟಾಡಲು ಹೇಳಿಮಾಡಿಸಿದ ಜಾಗಗಳಿದ್ದವು. ಸುತ್ತಾ ಮಲ್ಕಿಮಟ್ಟಿ ದೊಡ್ಡಸರ ಮಂಡಿಮಟ್ಟಿ ಚೌಡಿಗುಡ್ಡ ಕಲ್ಬಿಗುಡ್ಡ ಹೀಗೆ…. ಪೊಲೀಸ್ಸಿನವರಿಗೊ ಕೇಟಿಪುರದಿಂದ ಬಂದು ಇಲ್ಲೇ ದಿನಾಗಟ್ಟಲೆ ಇರೋಕಾಗುತ್ತಿರಲಿಲ್ಲ. ಏನೋ ಒಂದೆರಡು ಗಂಟೆ ಒಬ್ಬರಿಬ್ಬರು ಪೊಲೀಸಿನವರು ಬಂದು ಈ ಗುಡ್ಡದಲ್ಲಿ ಹುಡುಕುತ್ತಿದ್ದರೆ ಅವರು ಇನ್ಯಾವುದೊ ಮಟ್ಟಿಯಲ್ಲಿರುತ್ತಿದ್ದರು, ಅಲ್ಲಿಗೆ ಹೋಗುವುದರೊಳಗೆ ವಿಷಯ ತಿಳಿದು ಟಣ್ಣಂತ ಮಾಯವಾಗುತ್ತಿದ್ದರು.
ಡ್ರೋನ್ ಹಾರುತ್ತಿದ್ದವು. ಜಾತ್ರೆಯಲ್ಲಿ ಹಾರುತ್ತಾ ಹಾರುತ್ತ ನಿಧಾನಕ್ಕೆ ಗುಡ್ಡಗಳಿಗೆ ಲಗ್ಗೆಯಿಟ್ಟವು…
ಪೊಲೀಸ್ ಕುಮಾರ ಡ್ರೋನ್ನವರ ಫೋನಿಗಾಗಿ ಓಮಿನಿಯಲ್ಲಿ ಕಾದುಕುಳಿತಿದ್ದ…..
ಒಂದು ಗಂಟೆಯಾದರೂ ಸುದ್ದಿಯಿಲ್ಲ…
'ಕಳ್ನನ್ಮಕ್ಳು.. ಎಲೈದಾರೇನೋ…ʼ ಅಂತ ಬಯ್ಯುತ್ತಿರುವಾಗಲೆ ಡ್ರೋನ್ ಪೈಲಟ್ಟಿಂದ ಫೋನ್ಬಂತು… 'ಸಾ ಇಲ್ಲಿ ಮಂಡಿಮಟ್ಯಾಗೈದಾರೆ… ಜಲ್ದಿ ಬರ್ರಿ ಸಾರ್…ʼ
'ಏನ್ರೀ… ನಿಮ್ಗೇಳೋರು ಕೇಳೋರು ಯಾರಿಲ್ಲೇನ್ರಿ… ನಮ್ಮ ಗಂಟೂರನೋರ್ನ್ಯಾಕೆ ಹಿಡ್ಕಂದೋಗೀರ್ರಿ…? ಅವ್ರು ಹೆಣ್ತಿ ಮಕ್ಳು ಈ ಕತ್ಲಾಗೇ ನಮ್ಮನಿಗೆ ಬಂದು ಅಳಕುಂತಾವೆ… ಜಾತ್ರಿ ಮಾಡೋದ್ಬಿಟ್ಟು…ʼ ಅಂತ ಎಮ್ಮೆಲ್ಲೆ ಫೋನ್ ಮಾಡಿ ಪಿಎಸ್ಐಗೆ ತರಾಟೆ ತೆಗೆದುಕೊಂಡರು.
'ಅಲ್ಲಾ ಸಾರ್ ಅವ್ರು ಇಸ್ಪೀಟಾಡೋರು….ನೀವೇ…ʼ ಎಸ್ಐ ಅನ್ನುತ್ತಿದ್ದಂತೆ 'ಅಲ್ಲಾರ್ರಿ… ಜಾತ್ರಿ ಖುಷಿಗಂತ ಆಡ್ತಾರ್ರಿ…. ಅವರೇನು ಕೊಲೆ ಮಾಡ್ಯರಾ… ಪಾಪ ಬೀಗ್ರು ಬಿಜ್ರೆಲ್ಲಾ ಬಂದಾರೆ ಜಾತ್ರಿಗಂತ… ಮೊದ್ಲು ಬಿಟ್ ಕಳಸ್ರಿʼ ಅಂದರು ಎಮ್ಮೆಲ್ಲೆ.
'ಹ್ಞುಂ.. ಆತ್ನಡೀರಿ ಎಸ್ಐಗೆ ಹೇಳೀನಿ, ಬಿಟ್ ಕಳ್ಸತಾರೆ… ಹೇ ರಾಮಣ್ಣ ಹುಷಾರೆಗೆ ಕರ್ಕಂದೋಗಪಾ … ಬಸ್ ಐತಾಲ್ಲಾ….ʼ
ಜನ 'ಆತ್ಬುದ್ದಿʼ ಅಂತ ಕೈಮುಗಿದು ಹೋದಮೇಲೆ ಎಂಎಲ್ಎ ಮತ್ತೆ ಪಿಎಸ್ಐಗೆ ಫೋನ್ ಮಾಡಿ 'ನೋಡ್ರಿ ಜನ್ಗುಳೆದುರಿಗೆ ಹಂಗೆ ಹೇಳ್ಬೇಕಾಕತಿ… ನಿಮ್ ಡ್ಯೂಟಿ ನೀವ್ ಮಾಡ್ರಿ…ʼ ಅಂತ ಸೂಕ್ಷ್ಮವಾಗಿ ಏನೋ ಹೇಳಿದರು.
ಇಸ್ಪೀಟು ಅಡ್ಡೆಯಿಂದ ಗೋಣಿಚೀಲದಲ್ಲಿ ಮುದುರಿ ತಂದಿದ್ದ ದುಡ್ಡನ್ನೆತ್ತಿಡಲೇಳಿ ಮತ್ತೇನೊ ಗುಟ್ಟಾಗಿ ಪೀಸಿಗಳಿಗೇಳಿ ಮನೆಗೊರಟರು ಎಸ್ಐ ಸಾಹೇಬ್ರು. ರಾತ್ರಿ ಹನ್ನೆರಡಾಗಿತ್ತು. ಸಾಕಿತ್ತಷ್ಟು ಪೊಲೀಸ್ಸಿನವರಿಗೆ. ಕುಮಾರ ಸತೀಶಗಂತೂ ರಕ್ತ ಕುದೀತಿತ್ತು. ಹದಿನೈದು ಜನನ್ನೂ ರೂಮಲ್ಲಿ ಕೂಡಾಕಿಕೊಂಡರು ಅಷ್ಟೆ. ಬೆಳಗ್ಗೆ ರೂಮಿಂದ ಹೊರಬಂದಾಗ ಕುಂಡಿ ಇಷ್ಟಿಷ್ಟು ದಪ್ಪ ಬಾತುಹೋಗಿದ್ದವು.
'ಹೊಡ್ದಿರೋದು ಯಾರತ್ರರಾ ಬಾಯಿ ಬಿಟ್ರೆ ಕೇಸ್ ಹಾಕಿ ಕೋರ್ಟಿಗೆ ಅಡ್ಡಾಡ್ಸಿತೀವೆ…. ಎಮ್ಮೆಲ್ಲೆ ಸಾಹೇಬ್ರು ಭಾರಿ ಒಳ್ಳೇರು…. ಕೇಸ್ ಹಾಕ್ದಂಗೆ ಬಿಟ್ ಬಿಡ್ರಿ ಅಂದಾರೆ… ಅವ್ರೇಳಿದ್ರಂತ ಬಿಟ್ ಕಳ್ಸತೈದೀವಿ…ʼ ಅಂದರು ದಫೇದಾರ್ರು.
ಕುಂಟುತ್ತಾ, ನರಳುತ್ತಾ 'ಇಲ್ಲಿಂದೋದ್ರೆ ಸಾಕಪ್ಪಾ ದೇವ್ರೇ…ʼ ಅಂತ ಸ್ಟೇಷನ್ನಿಂದ ಹೊರಬಂದು ತಮ್ಮ ಬೈಕುಗಳತ್ತಿರ ಹೋದರೆ 'ಬೈಕನ್ನ ಮರತ್ಕಣದೆ… ಅವ್ನೆಲ್ಲಾ ಸೀಜ್ ಮಾಡೀವಿ…ʼ ಅಂತ ದಫೇದಾರ್ರು ಹೇಳಿದಾಗ ಎಲ್ಲರ ಪ್ರಾಣ ಕೈಗೆ ಬಂದಿತು.
'ಅಣ್ಣಾ ಬೈಕು ನಂದಲ್ಲಾ ಕಣಣ್ಣ ಬೇರೇರ್ದು…ʼ, 'ಅಪ್ಪನ ನೆಪ್ಪಿಗಂತ ಬೈಕು ಹಿಡ್ಕಂದಿದ್ದೆ ಕಣಣ್ಣ….ʼ, 'ಕಾಲಿಗ್ಬೀಳ್ತೀನಿ ಕೊಟ್ಬಿಡಣ್ಣಾ….ʼ ಅಂತ ಒಬೊಬ್ಬರೂ ಗೋಗರೆಯಲತ್ತಿದರು.
'ಆತು ಇವತ್ತೇ ಹತ್ತತ್ಸಾವಿರ ಅಡ್ಜೆಸ್ಟ್ ಮಾಡ್ಕೊಡ್ರಿ… ಬಿಟ್ಕಳ್ಸಿತೀವಿ…ʼ ಅಂದರು ದಫೇದಾರ್ರು.
ಹನ್ನೊಂದು ಬೈಕಿನವರು ಅಲ್ಲಿಯಿಲ್ಲಿ ತರಾತಿಗಡಿ ಮಾಡಿ ಏನೇನೊ ಅಡ್ಜಸ್ಟ್ ಮಾಡಿ ಬಿಡಿಸಿಕೊಂಡು ಹೋದರು. ಒಂದು ಬೈಕುಮಾತ್ರ ಅನಾಥನಂತೆ ಸ್ಟೇಷನ್ನಿನಲ್ಲೇ ಉಳಿಯಿತು. ಅದು ಹೆಣ ಇಸಿದು ಕೊಂಡು ಬಂದ ಮಚ್ಚುಕರಿಯಣ್ಣನ ಬೈಕು. ಹೆಣಮಾತ್ರ ತನಗೂ ಆ ಬೈಕಿಗೂ ಸಂಬಂಧವೇ ಇಲ್ಲವೆಂಬಂತೆ ಸ್ಟೇಷನ್ ಕಡೆ ತಲೆಹಾಕದೆ ಜಾತ್ರೆಯಲ್ಲಿ ಅಡ್ಡಾಡತೊಡಗಿದ. ಜಾತ್ರೆಯಲ್ಲಿ ಜನ ಬೇಕಂತಲೆ ಈ ಇಸ್ಪೀಟಿನವರನ್ನ 'ನಿನ್ನೆಯೆಲ್ಲಿ ಕಾಣ್ಲಿಲ್ಲಣ್ಣಾʼ ಅಂತ ಕೆಣಕಿದರೆ 'ಆ ಪ್ರಸಾದದತ್ರ ಇದ್ವೆಲ್ಲಾ… ಹೂವಿನಮಂಟಪದತ್ರ ಇದ್ವೆಲ್ಲಾ…ʼ ಅಂದಾಗ 'ಒಳ್ಳೆ ಹೂವಿನ ಪ್ರಸಾದನೇ ಆಗೇತಿ…ʼ ಅಂತ ಗೊಳ್ಳನ್ನುತ್ತಿದ್ದರು.
ಎರಡು ದಿನದಿಂದ ಲಕ್ಕಪ್ಪಳ್ಳಿಗೆ ಬರದೆ ಎಲ್ಲೆಲ್ಲೊ ಅಡ್ಡಾಡುತ್ತಿದ್ದ ಹೆಣ ಅವತ್ತು ರಾತ್ರಿ ಮುಲುಕುತ್ತಾ ಮನೆಗೆಬಂದಾಗ ಪೂರ್ಣಮ್ಮ 'ಬೈಕು ಎಲೈತಿ… ಏನ್ಮಾಡಿದೆ … ಫೋನ್ಮಾಡಿದ್ರೂ ಎತ್ತಕೊಲ್ಲೆ… ಆ ಕರಿಯಣ್ಣ ಎಲ್ಡುದಿನದಿಂದ ರಂಪಮಾಡ್ತಾಐತಿ…ʼ ಅಂದಾಗ 'ಹೋಗೇ ಅವನ್ದೇನು ಸೀಮೆಗಿಲ್ಲುದ್ ಬೈಕಾ…. ಅಂತವ್ನ ಹತ್ತಂದು ನಿಲ್ಸಿತೀನಿ…. ಹೆಂಗ್ಸರತ್ರ ಹಾರಾಡಕೆ ಬರ್ತನಂತಾ…. ನನತ್ರ ಬರಕ್ಕೇಳು… ತೋರ್ಸಿತೀನಿ…ʼ ಅಂತ ಮನೆಬಾಗಿಲಿಗೆ ಬಂದುನಿಂತ. ಡೈರಿಗೆ ಹಾಲಾಕಿ ಬರುತ್ತಿದ್ದ ಕರಿಯಣ್ಣ ಇವನನ್ನು ನೋಡಿದ್ದೆ 'ಲೇ ಬೋಳೀಮಗನೆ ಎಲ್ಲೋ ನನ್ಬೈಕು?ʼ ಅಂದಾಗ 'ನಂಕೊಟ್ಟಿದ್ಯಾ ಬೈಕು… ಯಾವಳಿಗೆ ಕೊಟ್ಟಿದ್ಯೊ ಅವಳ್ನ ಕೇಳ್ಕಾ ಹೋಗುʼ ಅಂದ ಹೆಣ. ಅಷ್ಟು ಅಂದಿದ್ದೆ ಕರಿಯಣ್ಣ ಅವನನ್ನ ಕೆಡವುಕಂದು ಮೂಗುಮುಸುಡಿ ನೋಡದೆ ಗುದ್ದಲತ್ತಿದ. ಒಳಗಿಂದೋಡಿಬಂದ ಪೂರ್ಣಮ್ಮ ಕರಿಯಣ್ಣನ ಕಾಲ್ಕಾಲಿಡಿದು ಬೇಡಿಕೊಂಡಳು. ಅವನೇನು ಜುಪ್ಪೆನ್ನಲಿಲ್ಲ. ಅಕ್ಕಪಕ್ಕದವರೆಲ್ಲ ಓಡಿಬಂದು ಕರಿಯಣ್ಣನನ್ನು ದಮ್ಮುಕಟ್ಟಿ ಎಳಕಂದು ಆ ಕಡೆ ದಬ್ಬಿಕೊಂಡೋದರು. ಹೆಣದಂತೆ ಬಿದ್ದಿದ್ದ ಹೆಣನನ್ನು ಪೂರ್ಣಮ್ಮ ಎಬ್ಬಿಸಿಕೊಂಡು ಒಳಗೋಗಿ ಮಲಗಿಸಿದಳು. ಹೊರಬಂದು ಕದವಿಕ್ಕಿ ಇನ್ನೂ ಕೊಸರಾಡುತ್ತಿದ್ದ ಕರಿಯಣ್ಣನಿಗೆ 'ಅವ್ನಿಗೇನೂ ಮಾಡ್ಬೇಡಣ್ಣಾ ಕಾಲಿಗ್ಬೀಳ್ತೀನಿ…ʼ ಅಂದಳು. 'ಆ ಬೋಸುಡಿಮಗಾ…ಅವ್ನ ಇಸ್ಪೀಟು ತೀಟೆಗೆ ನನ್ಬೈಕ್ನಾ ಪೋಲಿಟೇಷನ್ನಿಗೆ ಅಡ ಇಟ್ಟಾನೆ… ಅದುನ್ ಬಿಡಿಸಿಕೊಡೋರ್ಯಾರು…ʼ ಅಂತ ಜೋರಾಗೊದರಿದ. 'ನಾನೇನಾರಮಾಡಿ ಬಿಡ್ಸಿಕೊಡ್ತಿನಣಾ…ʼ ಅಂತ ಗೋಗರೆದಳು
ಎಲ್ಲಮ್ಮತ್ತೆನ ಮಣ್ಣಲ್ಲಿಡುವಾಗ ಬಿಚ್ಚಿಕೊಂಡಿದ್ದ ಬೆಂಡೋಲೆ ತಗೆದುಕೊಂಡು ಕೇಟಿಪುರದಲ್ಲಿ ಮಾರಿ ಕರಿಯಣ್ಣನ್ನ ಕರೆದುಕೊಂಡು ಪೊಲೀಸ್ಸ್ಟೇಷನ್ನಿಗೆ ಹೋಗಿ ಹನ್ನೆರಡುಸಾವಿರ ಕೊಟ್ಟು ಬೈಕು ಬಿಡಿಸಿಕೊಟ್ಟು ಒಬ್ಬಳೆ ಊರಿಗೆ ಬಸ್ಹತ್ತಿದಳು.
ಮನೆಗೆ ಬಂದವಳೇ ಅಬ್ಬರಸಿ ಅತ್ತಳು. ಮಗಳು ಅಂಗನವಾಡಿಗೆ ಹೋಗಿದ್ದಳು. ಮೈಲಾರಲಿಂಗಪ್ಪ ಫೋಟೋದ್ಹಿಂದೆ ಹಳ್ಳುಹಾಕಿಸಲೆಂದಿಟ್ಟಿದ್ದ ಕಾರ್ಡುಸೈಜು ಎಲ್ಲಮ್ಮತ್ತೆ ಪೋಟೊ ಈಚೆಬಂದು ಇಣುಕುತ್ತಿತ್ತು. ಪೂರ್ಣಿಮ ಮೈನೆರೆತಾಗ ತೆಗೆಸಿದ್ದ ಫೋಟೊ….
ತಾನಗಂತೂ ಆ ಭಾಗ್ಯ ದೇವರು ನನ್ಹಣೆಯಲ್ಲಿ ಬರೆಯಲಿಲ್ಲ ಅಂತ ತುಂಬಾ ಜೋರಾಗಿಯೆ ಪೂರ್ಣಿಮಳ ಆರತಿ ಕಾರ್ಯ ಮಾಡಿತ್ತು ಎಲ್ಲಮ್ಮತ್ತೆ. ಮೈನೆರತಿಲ್ಲ ಅಂತ ಅವ್ವ-ಅಪ್ಪ ಮದುವೆ ಮಾಡದೆಯೆ ಎಲ್ಲಮ್ಮನನ್ನು ಮನೆಯಲ್ಲಿಟ್ಟುಕೊಂಡಿದ್ದರು. ಅವರು ಕಣ್ಮುಚ್ಚಿದಮೇಲೆ ಇದ್ದೊಬ್ಬ ಅಣ್ಣನಜತೆ ಅದೇಮನೆಯಲ್ಲಿ ಕೂಲಿನಾಲಿ ಮಾಡಿಕೊಂಡಿದ್ದಳು ಎಲ್ಲಮ್ಮ. ಅಣ್ಣನ ಮದುವೆಯೂ ಆಯಿತು. ಅತ್ತಿಗೆಯೊ ರೊಟ್ಟಿಸುಡಲಂತ ಕುಂತರೆ ಹಿಟ್ಟು ಕಲಿಸುತ್ತಾ ಕಲಿಸುತ್ತಾ ಗಂಟೆಗಟ್ಟಲೆ ಹಾಗೇ ಕೂತುಬಿಡುತ್ತಿದ್ದಳು. ಮುಸರೆ ತಿಕ್ಕು ಅಂತ ಹಿತ್ತಲಿಗೆ ಕಳಿಸಿದರೆ ಮಲ್ಲಿಗೆಬಳ್ಳಿ ನೋಡುತ್ತಾ ಅಲ್ಲೇ ಮೈಮರೆತುಬಿಡುತ್ತಿದ್ದಳು. ಗಂಡ ಕೂಲಿಗೆ ಹೊಂಟಿದ್ದಾನೆ ಬುತ್ತಿ ಕಟ್ಟಿಕೊಡಬೇಕೆಂಬ ಅರಿವೂ ಇರುತ್ತಿರಲಿಲ್ಲ. ಪಾಪ ಅಪ್ಪ-ಅವ್ವಿಲ್ದೆ ಬೆಳ್ದೇತಿ ಅಂತ ಎಲ್ಲಮ್ಮನೆ ಮನೆಕೆಲಸನೆಲ್ಲಾ ಪಟಪಟಂತ ಮಾಡಿಕೊಂಡು ಹೋಗುತ್ತಿದ್ದಳು. ಗಂಡನತ್ತಿರ ಹಿಂಗೀಗಿರಬೇಕು, ಮನೆಕೆಲಸನ್ನ ಹಿಂಗಿಂಗೆ ಮಾಡಬೇಕು ಅಂತಷ್ಟೆಲ್ಲ ಕುಂದರಿಸಿಕೊಂಡು ಹೇಳಿದರೂ ಅತ್ತಿಗೆ ತಲೆಯೊಳಕ್ಕೆ ಅವೆಲ್ಲ ಹೋಗತ್ತಿರಲಿಲ್ಲ. ಅವಳು ಎಲ್ಲೋ ನೋಡುತ್ತಾ ಕೂರುತ್ತಿದ್ದಳು… ಪೂರ್ಣಿಮ ಹುಟ್ಟಿದಮೇಲಂತೂ ಅತ್ತಿಗೆ ಇನ್ನಷ್ಟು ವಿಚಿತ್ರವಾದಳು. ಒಬ್ಬೊಬ್ಬಳೆ ನಗಲು ಶುರುಮಾಡಿದಳು. ಮಗುವನ್ನು ಬಿಟ್ಟು ಒಬ್ಬಳೆ ಮಲ್ಲಪ್ಪನಗುಡಿಗೆ ಹೋದವಳು ಎಷ್ಟೊತ್ತಾದ್ರೂ ಮನೆಗೆಬರುತ್ತಿರಲಿಲ್ಲ. 'ಎಲ್ಲ ಮುಚ್ಚಿಟ್ಟು ಇಂಥವಳನ್ನ ನಂಕಟ್ಟಿದ್ರಿʼ ಅಂತ ಬೀಗರಮನೆಗೋಗಿ ಅಣ್ಣ ಜಗಳವಾಡಿಬಂದ. ಅವರೆಲ್ಲ 'ಆಕಿ ಮೊದ್ಲು ಪಾಡಿದ್ಲು… ನೀನೇ ಅವಳ ಹೊಟ್ಟಿಗೇನೊ ಮಾಡ್ಸಿ ಹಾಕೀಯಾ… ಇನ್ನೊಂದ್ಪಟ ಇಲ್ಲಿಗೆಬಂದ್ರೆ ಪಾಡಿರಲ್ಲʼ ಅಂತ ಬೆದರಿಸಿ ಕಳಿಸಿದರು. ಅಣ್ಣನ ಕುಡಿತಲೆ ಜೋರಾಗಿ ಕೆಲಸಕ್ಕೋಗೋದನ್ನೇ ಬಿಟ್ಟುಬಿಟ್ಟ. ಊರಲೆಲ್ಲೋ ತಿರುಗುತ್ತಿದ್ದ ಅತ್ತಿಗೆಯನ್ನು ಕರೆತಂದು ಮಗುವಿಗೆ ಎದೆಹಾಲು ಕುಡಿಸುವಷ್ಟೊತ್ತಿಗೆ ಎಲ್ಲಮ್ಮನಿಗೆ ಸಾಕುಬೇಕಾಗುತ್ತಿತ್ತು. ಕೊನೆಕೊನೆಗೆ ಹೊಯ್ಹಾಲು ಕುಡಿಸಲತ್ತಿದಳು. ಹಸುಗೂಸು ಕಟ್ಟಿಕೊಂಡೇ ಕೂಲಿಗೋಗಿ ಕುಡಿತದ ಅಮಲಲ್ಲೇ ಇರುತ್ತಿದ್ದ ಅಣ್ಣನನ್ನ ಯಾವುದೋ ಮಾಯೆಯಲ್ಲಿರುತ್ತಿದ್ದ ಅತ್ತಿಗೆಯನ್ನು ಹುಡುಹುಡುಕಿತಂದು ಉಣ್ಣಕೆ ಇಡುತ್ತಿದ್ದಳು ಎಲ್ಲಮ್ಮ. ಅತ್ತಿಗೆಯನ್ನು ಕಂಡೊಡನೆ ಕೊಡಲಿಯೆತ್ತಿಕೊಂಡು ಹೋಗುತ್ತಿದ್ದ ಅಣ್ಣನ ಹಿಡಿದ್ಹಿಡಿದೆ ಹೈರಾಣಾಗುತ್ತಿದ್ದಳು. ಈಗೀಗ ಅವನನ್ನ ಕಂಡರೆ 'ಅಬ್ಬೊಬ್ಬೊʼ ಅಂತ ಹೊಯ್ಕಂತ ಸೀರೆಬಿಚ್ಚೊದ್ರು ಅರಿವಿಲ್ಲದೆ ರಸ್ತೆಗೋಡುತ್ತಿದ್ದಳು ಅತ್ತಿಗೆ.
ಎಲ್ಲಮತ್ತೆಯ ದೇಕರೇಕಿಯಲ್ಲೆ ಪೂರ್ಣಿಮಾಗೆ ಒಂದು ವರ್ಷವಾದಾಗ ಅಣ್ಣ ಕುಡುಕುಡಿದೇ ತೀರಿಹೋದ. ಈಗೀಗಂತೂ ಅತ್ತಿಗೆ ಮನೆಗೇ ಬರುತ್ತಿರಲಿಲ್ಲ. ಯಾರೋ ಒಂದಿಷ್ಟುಜನ ಅವಳಿಗೆ ಬ್ರಾಂದಿಯ ಚಟಹತ್ತಿಸಿದ್ದರು. ಹಾಗಾಗಿ ಅವಳು ಎಣ್ಣೆಯಂಗಡಿಯತ್ತಿರ ಕುಡಿಯೋಕೆ ಬರೋರ ಬಟ್ಟೆಯೆಳೆದು ಪೀಡಿಸುತ್ತಿದ್ದಳು. ಕೇಟಿಪುರದ ವೈನ್ಶಾಪಿಂದ ತಂದು ಪೆಟ್ಟಿಗೆಯಂಗಡಿಯಲ್ಲಿಟ್ಟುಕೊಂಡು ಮಾರುತ್ತಿದ್ದ ರವಿ ಕೋಲೆತ್ತಿ ಹೊಡೆಯಲೋದರೂ ಅಲುಗಾಡುತ್ತಿರಲಿಲ್ಲ…
ಕೊನೆಗೊಮ್ಮೆ… ಎಲ್ಲಿಯೂ ಕಾಣದಾದಳು…
ಎಲ್ಲಮ್ಮತ್ತೆಯ ಪೋಟೊ ಕಣ್ಣಿಗೆ ಬಿದ್ದಿದ್ದೆ ಪೂರ್ಣಮ್ಮ ಅದನ್ನೆಳೆದುಕೊಂಡು ಅದರಮೇಲೆ ಬಿದ್ದು ಬೋರಾಡಳಲತ್ತಿದಳು….
ಒದೆತಿಂದ ಮೇಲಂತೂ ಹೆಣ ಪೂರ್ಣಮ್ಮನ ಮೇಲೆ ಕೆಂಡಕಾರುತ್ತಿದ್ದ. 'ನೀನೇ ಹಚ್ಕೊಟ್ಟು ಆ ಕರಿಯನತ್ರ ಹೊಡ್ಸಿರೋದು…ʼ ಅಂತ ರಗಳೆ ತೆಗೆಯುತ್ತಿದ್ದ. ಮೊದಲೆಲ್ಲ ಮಗಳನ್ನು ಮುದ್ದುಮಾಡಿ ಆಡಿಸುತ್ತಿದ್ದ ಹೆಣ ಈಗ ಅದ್ನ ಮುಟ್ಟುತ್ತನೂ ಇರಲಿಲ್ಲ. 'ನಾನೆಷ್ಟಿದ್ರೂ ಬ್ಯಾರೆ ಜಾತೇನು… ಆ ಕರಿಯ, ನೀವೆಲ್ಲ ಒಂದೇ ಜಾತೇರುʼ ಅಂತ ಆಗಾಗ ಕುಟುಕುತ್ತಿದ್ದ. ಒಂದಿನರಾತ್ರಿ ಅದನ್ನೂ ಕಕ್ಕಿಬಿಟ್ಟ- 'ನಂಗೆಲ್ಲ ಗೊತ್ತು ಆ ಕರಿಯಂದು ನಿಂದು ಒಳೊಳಗೆ ಏನು ನಡೀತೈತಿಯಂತ…ʼ ಪೂರ್ಣಮ್ಮಗೆ ಎಲ್ಲಿತ್ತೊ ಸಿಟ್ಟು 'ಏನಂದ್ಯೋ ಬಾಡ್ಯಾ… ನಿನ್ನಂಗೆ ನಾನ್ ಮೂರೂ ಬಿಟ್ಟಿಲ್ಲೋ…. ಹೋಕಿಯೆಲ್ಲಾ ಆ ಕೂದ್ಲು ಪಿನ್ನಾ ಮಾರೋಳ್ತಕೆ…ನಂಗೇನು ಗೊತ್ತಿಲ್ಲ ಅನ್ಕಂದೀಯಾ…ʼ ಅಂತ ಅವನ ತಲೆಗೂದಲಿಡಿದು ಎಳೆದಾಡಿದಳು. ಅವನು ಅವಳನ್ನು ಮೂಲೆಗೆದಬ್ಬಿ ಬೆನ್ನಿಗೆ ಗುದ್ದನೇಗುದ್ದಿ ಬೈಯುತ್ತಾ ಮನೆಯಿಂದ ಹೊರಹೊರಟ.
ಪೂರ್ಣಮ್ಮ ಮುಸುಗುಟ್ಟುತ್ತಾ, ಅಷ್ಟರಲ್ಲಿ ಎಚ್ಚರಾದ ಮಗಳನ್ನು ತೊಡೆಮೇಲೆ ಹಾಕಿಕೊಂಡು ಕತ್ತಲಲ್ಲಿ ಗೋಳೇ ಅನ್ನುತ್ತಾ ಇಡೀ ರಾತ್ರಿ ಹಾಗೇಕೂತಳು. ಎಲ್ಲಮ್ಮತ್ತೆ ಗಿಣೀಗೇಳ್ದಂಗೇಳ್ತು ಒಂಬತ್ತು ಫೇಲಾದಾಗ…. 'ಇಸ್ಕೂಲು ಬಿಡ್ಬೇಡಕಣೆ.. ಎಸ್ಸೆಲ್ಸಿ ಮುಗಸ್ಕಂದ್ರೆ ಅಂಗ್ನವಾಡಿ ಗಿಂಗ್ನಾವಾಡಿಗಾದ್ರೂ ಹೋಗ್ಬೋದು…ʼ ಅಂತ. ನಾನೋ ಶಾಲೆಬಿಡಾಕೆ ಕುಣೀತಿದ್ದೆ. ಶಾಲೆಬಿಟ್ಮೇಲೆ ಎಲ್ಡುವರ್ಷ ತನ್ಜೊತಿಗೆ ಕೂಲಿಕರ್ಕಂದೋಗ್ತಾ ಇತ್ತು. ಸಮ್ಕಿಲ್ಲೇ ಮುಚ್ಕಂದು ಕೂಲಿಗೋಗ್ತಿದ್ರೆ ಈ ಬಾಡ್ಯಾ ಸಿಗ್ತಿರ್ಲಿಲ್ಲ. ಆಕಿಯಾವಳ್ದೊ ಮಾತಕಟ್ಕಂದು ಬಟ್ಟೆಯಂಗಡಿಗಂತ ಕೇಟಿಪುರಕ್ಕೆ ಬಸ್ಸಿಗೋಡಾಡಿದ್ದೆ ಬಂತ್ನೋಡು ಈ ಮುಳಾ ಗಂಟುಬಿದ್ದ…
ವಾರದ ನಂತರದ ಬೆಳಗ್ಗೆ ಗಂಗಜ್ಜಿಮನೆಯಿಂದ ಹಾ ಲುತಗಂದು ಮನೆಯೊಕ್ಕರೆ.. ಗಂಡ… ಅವನಪಕ್ಕದಲ್ಲಿ ಮೊಸಲಮ್ಮ ಮತ್ತವಳ ಕೂಸು… ಪೂರ್ಣಮ್ಮಗೆ ತಲೆ ಗಿರ್ರನೆತಿರುಗಿ ಸೊಂಟದಲ್ಲಿದ್ದ ಕೂಸಿನ ಸಮೇತ ಕುಸಿದುಬಿದ್ದಳು. ಹಾಲೆಲ್ಲಾ ಚೆಲ್ಲಾಪಿಲ್ಲಿ….
ಮೊಸಲಮ್ಮನ ಗಂಡ ವಾರದ್ಹಿಂದೆ ಫುಲ್ ಕುಡಿದು ಯಾವುದೋ ಕಲ್ಲಿಗೆ ಬಿದ್ದು ಪ್ರಾಣಬಿಟ್ಟಿದ್ದ. ಕೂದಲು ವ್ಯಾಪಾರ ಬಿಡಿಸಿ ತನ್ನೊಂದಿಗಿರಲೊಪ್ಪಿಸಿ ಮೊಸಲಮ್ಮನ ಕರೆತಂದಿದ್ದ ಹೆಣ. ತಾನೂ ಬಸ್ಸಿಗೋಗದನ್ನು ಬಿಡ್ತೀನಿ… ಲಕ್ಕಪ್ಪಳ್ಳಿಯಲ್ಲಿ ನಾಗಣ್ಣನ ತಗಡು ಶೆಡ್ಡಾ ಬಾಡಿಗೆ ತಕಂದು ಕ್ಯಾಂಟೀನು ಮಾಡೋಣ ಅಂತ ಕರೆತಂದಿದ್ದ.
ನಿಧಾನಕ್ಕೆ ಎಚ್ಚರವಾದ ಪೂರ್ಣಮ್ಮ ಒಮ್ಮೆಲೆ ಕಾಳಿಯಾಗಿ ಅವರಿಬ್ಬರನ್ನು ದರದರನೆಳೆದು ಹೊರದಬ್ಬಲೋದಳು. ಬಡಕಲಾಗಿದ್ದ ಅವಳಿಗೆ ಇವರು ಮೈಟುಮಾಡಲಿಲ್ಲ. 'ಭಂಡ ನನ್ಮಗನೇ ಇಲ್ಲಿತಂಕ ಬಂದ್ಬಿಟ್ಯಾ… ಆ ಹಾದ್ರಿಗಿತ್ತೀನ ಮನೆತಂಕ ಕರ್ಕಬರಂಗಾಗ್ಬಿಟ್ಯಾ… ಮರ್ಯಾದೆಯಿಂದ ನನ್ಮನೆ ಬಿಟೋಗ್ತೀರಿಲ್ಲೋ…ʼ ಅಂತ ಏನೇನೋ ಅಬ್ಬರಿಸಿದಳು.
'ಏನ್ ಇತ್ತೀ ಮನೆಗೆ… ಗೋಡ್ಯಲ್ಲಾ ಡಮ್ರುಬಿದ್ದೋಗಿದ್ವು… ಮಳೆ ಬಂದ್ರೆ ಸೂರೆಲ್ಲ ಸೋರಿ ಕೆರೆಯಾಗ್ತಿತ್ತು… ನಾನ್ ಹಗಲುರಾತ್ರಿ ಬಸ್ಸಿಗೋಗಿ ದುಡ್ಕಂದು ಬಂದು ರಿಪೇರಿ ಮಾಡ್ಸೀನಿ…. ಬೇಕಿದ್ರೆ ನೀನೆ ಹೋಗೇ…ʼ ಅಂತ ಅವನೂ ಕೇಕೆಹಾಕಿದ.
ನಿಧಾನಕ್ಕೆ ಪೂರ್ಣಮ್ಮನ ನೆಂಟರಿಷ್ಟರು ಅಕ್ಕಪಕ್ಕದೋರಿಗೆ ಗೊತ್ತಾಗಿ ಅವನನ್ನ ತರಾಟೆಗೆ ತಗೆದುಕೊಂಡರು. ಅವನು 'ನೀವ್ಯಾರಾರ ನನ್ ಮೈಮುಟ್ಟೋಕೆಬಂದ್ರೆ ನಿಮ್ಮೆಸ್ರು ಬರ್ದಿಟ್ಟು ವಿಷ ಕುಡಿತೀನಿ….ʼ ಅಂತ ಪ್ಯಾಂಟು ಬಕ್ಕಣದಿಂದ ವಿಷದ ಬಾಟಲಿ ತೆಗೆದು ಹೆದರಿಸಲತ್ತಿದ. 'ಈ ರಣಹೇಡಿ ಸವಾಸ ಬ್ಯಾಡಪ್ಪಾ..' ಅಂತ ಎಲ್ಲ ತಮ್ಮ ಮನೆಗೋದರು.
'ನೀನ್ಯಾಕೆ ಮನೆಬಿಟೋಕ್ತೀಯಾ… ಇವೆಲ್ಲಾ ಒಂದೆಲ್ಡದಿನ… ಆಕೀನೇ ಬಿಟ್ಟೋಗ್ತಾಳೆ ನೋಡ್ತೀರು…ಈ ಅಲಾಲಟೋಪಿಯತ್ರ ಯಾರ್ ಕಾಪ್ರಮಾಡ್ಕಂದಿದ್ದಾರು..? ಆ ಗಡೀಚೌಡವ್ವನತ್ರ ಬೇಡ್ಕಂದು ಬಾ… ಈಕೀನ ರಗ್ತಕಾರ್ಕಣಂಗೆಮಾಡಿ ಇಲ್ಲಿಂದೋಡ್ಸತತಿ…ʼ ಅಂದರು ಕರೆದುಕೆಲವರು.
ತಿಂಗಳಿಂದ ಚೆನ್ನಾಗಿ ನಡೆಯುತ್ತಿದ್ದ ಕ್ಯಾಂಟೀನು ಈಗೀಗ ಡಲ್ಲೊಡೆಯುತ್ತಿದ್ದಂತೆ ಮೊಸಲಮ್ಮನ ಕೂದಲುಪಿನ್ನಿನ ದುಡ್ಡೂ ಕರಗುತ್ತಿದ್ದಂತೆ 'ಈಕೀನೆ ಏನೋ ಮಾಟ ಮಾಡ್ಸಿದ್ದಾಳೆʼ ಅಂತ ಪೂರ್ಣಮ್ಮನ ಮೇಲೆ ಹಲ್ಹಲ್ಲು ಮಸೆಯಲತ್ತಿದ್ದ ಹೆಣ.
ಕ್ಯಾಂಟೀನಲ್ಲೆ ಉಂಡು ತಿಂದು ಬರುತ್ತಿದ್ದ ಅವರಿಬ್ಬರೂ ರಾತ್ರಿ ಅಡುಗೆಮನೆಯಲ್ಲಿ ಕೂಸು ಜತೆಗೆ ಮಲಗುತ್ತಿದ್ದರು. ಪೂರ್ಣಮ್ಮಗಂತೂ ಉಸಿರುಗಟ್ಟುತ್ತಿತ್ತು… ಆದರೂ….
ರಾತ್ರಿ ನಾಲ್ಕುಗಂಟೆ. ಹೆಣ ಎದ್ದು ಹಿತ್ತಲಿಗೋಗಿ ಉಚ್ಚೆ ಹೊಯ್ಯಲು ಕುಂತ. ಮೇಲೆ ತೆಂಗಿನಮರದಲ್ಲಿ ಏನೋ ಸದ್ದು…. ಒಳಗೋಗಿ ಬ್ಯಾಟರಿ ತಂದು ಮರದ ತಲೆಗೆ ಬಿಟ್ಟ. ಕಣ್ಣುಕುಕ್ಕಿದ್ದೆ ಸಿಟ್ಟಿಗೆದ್ದ ಕೋತಿ ದಬಕ್ಕನೆ ಇವನ ಮೇಲೆ ಗರಿ ಬಾಯ್ಹಾಕಿ ಮನಸ್ಸು ಬಂದಂತೆ ಎಲ್ಲಿಬೇಕಲ್ಲಿ ಕಡಿಕಡಿದು ಹಾಕಿತು….
'ಅಯ್ಯೋ ಸತ್ನೋಪ್ಪೋ… ಯಾರಾರ ಬಿಡಿಸ್ರೋ…ʼ ಅಂದಿದ್ದು ಗಡದ್ ನಿದ್ದೆಯಲ್ಲಿದ್ದ ಮೊಸಲಮ್ಮಗೆ ಕೇಳಿಸಲೇಯಿಲ್ಲ. ಯಾವುದೋ ಯೋಚನೆಯಲ್ಲಿದ್ದ ಪೂರ್ಣಮ್ಮ ಹೆಣನ ಧ್ವನಿ ಕೇಳಿದ್ದೇ ಓಡಿಬಂದು ನೋಡುತ್ತಾಳೆ…. ಕೋತಿ ಅವನನ್ನೇನು ಕೆಡವ್ಕಂದು ಹಣ್ಣುಗಾಯಿ ನೀರ್ಗಾಯಿ ಮಾಡ್ತಾಯಿದೆ. ಅಲ್ಲೆಯಿದ್ದ ಗಳತಕಂದಳೇ 'ವುಸ್ಸ್ ವುಸ್ಸುʼ ಅಂತ ಶಕ್ತಿಬಿಟ್ಟು ತಿವಿತಿವಿದಳು. ಕೋತಿಯೋ ತನ್ನ ಕೆಲಸ ಮುಗೀತೆನ್ನುವಂತೆ ಒಮ್ಮೆ ಗುರ್ರೆಂದೆಗುರಿ ಮಾಯವಾಯಿತು.
ತಕ್ಷಣ ಹೆಣನೆತ್ತಿ ಕೂರಿಸಿ ನೀರು ತಂದು ಕುಡಿಸಿ ಓಡೋಗಿ ಕರಿಯಣ್ಣನೆಬ್ಬಿಸಿ ಓಮಿನಿಯಲ್ಲಿ ಕೇಟಿಪುರದ ತಾಲೂಕಾಸ್ಪತ್ರೆಯಲ್ಲಿ ತಕ್ಷಣಕ್ಕೆ ಒಂದೆರಡು ನಂಜಿನ ಇಂಜೆಕ್ಷನ್ ಕೊಡಿಸಿಕೊಂಡು ಶಿಮೊಗ್ಗದ ಮೆಗ್ಗಾನ್ ಹಾಸ್ಪಿಟಲ್ಲಿಗೆ ಅಡ್ಮಿಟ್ ಮಾಡಿದಳು..
ಆಸ್ಪತ್ರೆಗೆ ಬಂದು ಒಂದು ವಾರವಾಗಿತ್ತು. ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ. ಹುಡುಗಿಕಟ್ಕಂದು ಬರುತ್ತಿದ್ದ ಮೊಸಲಮ್ಮನ ಕಂಡು ಪೂರ್ಣಮ್ಮಗೆ ಏನೇಳಬೇಕೆಂದು ತೋಚದೆ ಈ ಕಡೆ ಒಪ್ಪಿಕೊಳ್ಳಲೂ ಆಗದೆ ಆಕಡೆ ಸಿಟ್ಟು ಮಾಡಲೂ ಆಗದೆ ಕಸಿವಿಸಿಯಾಗುತ್ತಿತ್ತು. ಪಾಪ ಅಂತ ಅನಿಸಿದರೂ ಸಿಟ್ಟೂ ಬರುತ್ತಿತ್ತು. ಅವ್ವನನ್ನು ನೆನೆಸಿಕೊಂಡಾಗಲೂ ಹೀಗೆಯೇ ಆಗುತ್ತಿತ್ತು ಪೂರ್ಣಮ್ಮಗೆ.
ಹೆಣ ಮಾತ್ರ ಪೂರ್ಣಮ್ಮನ ಕಂಡರೆ ಈಗಲೂ ಸಿಡಿಮಿಡಿಗೊಳ್ಳುತ್ತಿದ್ದ. ಅವಳು ಇಡ್ಲಿ, ಗಂಜಿ ತಂದುಕೊಡುವುದು ತಡವಾದರೆ ರೇಗುತ್ತಿದ್ದ. ಪೂರ್ಣಮ್ಮ ಮಗಳನ್ನು ರಂಗಕ್ಕನಿಗೊಪ್ಪಿಸಿ ಇವನ ಸೇವೆಯಲ್ಲೆ ಮುಳಗಿದ್ದರೂ ಅವನಲ್ಲೇನೊ ಅಸಹನೆ. ಮೊಸಲಮ್ಮನೊಂದಿಗೆ ಮುಖಕೊಟ್ಟು ತೆಲುಗಲ್ಲಿ ಮಾತಾಡುವಂತೆ ಇವಳೊಂದಿಗೆ ಮಾತಾಡುತ್ತಿರಲಿಲ್ಲ.
ಇನ್ನೇನು ನಾಳೆ ಬೆಳಗ್ಗೆ ಡಿಸ್ಚಾರ್ಜು. ಪೂರ್ಣಮ್ಮ ಎಲ್ಲಾ ಮಾತ್ರೆ ಟಾನಿಕ್ಕುಗಳನ್ನು ಹಿಡಿದುಕೊಂಡು ವಾರ್ಡಿಗೆಬಂದಳು. ಮೊಸಲಮ್ಮಳೂ ಇದ್ದಳು. ಹೆಣ ಪೂರ್ಣಮ್ಮನನ್ನು ತಿನ್ನುವಂತೆ ನೋಡುತ್ತಾ 'ಎಲ್ಲೋಗಿ ಮಾಟ ಮಾಡಸ್ಕಂದು ಬಂದಿದ್ದೆ… ನನ್ ತಗೀಬೇಕಂತ… ನಂಗೆಲ್ಲಾ ಗೊತ್ತಿಲಂತ ಅನ್ಕಂದೀಯಾ ನಿನ್ ಹಕೀಕತ್ತು… ನನ್ಸಾಯ್ಸಿ ಆ ಕರಿಯಂಜತೆ ಇರ್ಬೇಕಂತ….. ನಿಮ್ ಮಂತ್ಯಾನನೇ ಹಿಂಗೆ… ನಿಮ್ಮವ್ವುಂದ್ ಇಡೀ ಊರೇ ಹೇಳ್ತತಿ ಕತೀನ….ʼ
ಪೂರ್ಣಮ್ಮಗೆ ಇಡೀ ಆಸ್ಪತ್ರೆಯ ನಾತನೇ ನರನರಗಳಿಗೂ ನುಗ್ಗಿಬಂದಂತಾಯಿತು. ಕಣ್ಣೀರು ಹಾಕೋಣವೆಂದರೂ ಅದೂ ಬರುತ್ತಿಲ್ಲ. ಮೊಸಲಮ್ಮನ ಕೂಸು ಇದ್ದಕ್ಕಿದ್ದಂತೆ ನಕ್ಕು ಸುಮ್ಮನಾಯಿತು. ಅವ್ವನೂ ಹಿಂಗೆ ಒಬ್ಬಾಕಿನೇ ನಗುತ್ತಿದ್ದಳಂತೆ… 'ಅವ್ವ ಎಲ್ಲಿಗೋದಳು? ʼ ಅಂತ ಕೇಳಿದ್ದಕ್ಕೆ ಅತ್ತೆ 'ಕಟ್ಟೆಕಲ್ಲು ಕಟ್ಟೆಗೆ ಸೇರ್ಕಂದಿರ್ತತವ್ವಾ…ʼ ಅಂದಿದ್ದಳು. ಯಾವ ಕಟ್ಟೆ ಯಾವ ಕಲ್ಲು ಅಂತ ಅರ್ಥವಾಗಿರಲಿಲ್ಲ… ಹೆಣಗೆ ಬಯ್ಯುವುದೂ ಅಸಹ್ಯವೆನಿಸಿತು ಪೂರ್ಣಮ್ಮಗೆ. ಎಲ್ಲ ಗುಳಿಗೆ ಒಂದಿಷ್ಟು ದುಡ್ಡನ್ನು ಟೇಬಲ್ಮೇಲಿಟ್ಟು ಹೊರಹೊರಟಳು….
ಊರಿಗೆ ಬಂದವಳೆ ರಂಗಕ್ಕನಮನೆಯಿಂದ ಮಗಳನ್ನು ಕರೆದುಕೊಂಡುಬಂದು ಬೀಗತೆಗೆದು ಬಾಗಿಲು ದಬ್ಬಿದಳು. ಅತ್ತೆ ಫೊಟೊ ದಬಕ್ಕನೆಬಿದ್ದಿತು. ಯಾಕೋ ಮನೆ ತನ್ನದ್ದಲ್ಲ ಅನಿಸಿತು. ಎಲ್ಲೆಲ್ಲೂ ಹೆಣದ ವಾಸನೆ… ಅದು ತನ್ನನ್ನು ಕುತ್ತಿಗೆ ಹಿಡಿದು ದೂಕಿದಂತೆ. ಅತ್ತೆಯ ಫೊಟೊ ಎತ್ತಿಕೊಂಡಳು… ಅವಳ ಊದುಗಲ್ಲದ ಮುಖ 'ಕಟ್ಟೆಕಲ್ಲು ತನ್ಕಟ್ಟೇನ ಹುಡ್ಕಬೇಕು ಪೂರ್ಣೀʼ ಅಂದಂಗಾತು… ತಕ್ಷಣ ಮನಸ್ಸು ನಿರುಮ್ಮಳವಾಯಿತು. ಬುದಗ್ಗನೆದ್ದು ಅತ್ತೆ ಪೋಟೊವಿಡಿದು ನಿದ್ದೆಗಣ್ಣಲ್ಲಿದ್ದ ಮಗಳನೆತ್ತಿಕೊಂಡು ಬಾಗಲಿಗೆ ಬಂದಳು… ಬೀಗ… ಛೇ.. ಯಾವಮನೆಗೆ ಬೀಗ… ನನ್ನದಲ್ಲದ ಕಟ್ಟೆಗೆ ಬೀಗವೆ…..?
ಹೊರಗೆ ಕತ್ತಲಿತ್ತು… ಆದರೆ…

