Dailyhunt Logo
  • Light mode
    Follow system
    Dark mode
    • Play Story
    • App Story
ಸುರಂಗ ರಸ್ತೆ ಯೋಜನೆ ಬೇಡ: ಲಾಲ್‌ಬಾಗ್‌ ನಾಶಗೊಳಿಸಲು ಬಿಡೆವು, ಮಾನವ ಸರಪಳಿ

ಸುರಂಗ ರಸ್ತೆ ಯೋಜನೆ ಬೇಡ: ಲಾಲ್‌ಬಾಗ್‌ ನಾಶಗೊಳಿಸಲು ಬಿಡೆವು, ಮಾನವ ಸರಪಳಿ

ಯೋಜನೆಯಿಂದ ಶಿಲಾಪದರ ನಾಶ ಲಾಲ್‌ಬಾಗ್ ಕೆರೆ ಬತ್ತುವ ಆತಂಕ ಸಸ್ಯ ಸಂಪತ್ತು, ಜೀವ ವೈವಿಧ್ಯಕ್ಕೆ ಕುತ್ತು

ಬೆಂಗಳೂರು: 'ಹೆಬ್ಬಾಳ- ಸಿಲ್ಕ್‌ಬೋರ್ಡ್ ಸುರಂಗ ರಸ್ತೆ ಯೋಜನೆ ಬೇಡ, ಲಾಲ್‌ಬಾಗ್ ನಾಶಗೊಳಿಸಲು ನಾವು ಬಿಡೆವು' ಎಂದು ಲಾಲ್‌ಬಾಗ್ ಬಂಡೆಯ ಮೇಲೆ ಮಾನವ ಸರಪಳಿ ರಚಿಸಿ ನೂರಾರು ನಾಗರಿಕರು ಪ್ರತಿಭಟಿಸಿದರು.

'ಲಾಲ್‌ಬಾಗ್‌ ವಾಕರ್ಸ್‌ ಅಸೋಸಿಯೇಷನ್‌' ನೇತೃತ್ವದಲ್ಲಿ ಭಾನುವಾರ ನಡೆದ ಪ್ರತಿರೋಧದಲ್ಲಿ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದವರೂ ಜೊತೆಯಾದರು. ಮಾನವ ಸರಪಳಿ ರಚಿಸಿದ್ದಲ್ಲದೇ 'ಬೆಂಗಳೂರು ಸುರಂಗ ರಸ್ತೆ ಯೋಜನೆ ತಿರಸ್ಕರಿಸಿ', 'ಪರಿಸರ ಉಳಿಸಿ ಲಾಲ್‌ಬಾಗ್ ರಕ್ಷಿಸಿ', 'ಪರಂಪರೆ ಉಳಿಸಿ ಜೀವವೈವಿಧ್ಯ ಕಾಪಾಡಿ' ಎಂಬ ಹತ್ತಾರು ಭಿತ್ತಿಪತ್ರ ಹಿಡಿದು ಮೌನವಾಗಿ ‍ಪ್ರತಿಭಟಿಸಿದರು.

ಮಕ್ಕಳೊಂದಿಗೆ ಬಂದಿದ್ದ ಪೋಷಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, 'ಬಂಡೆಯನ್ನು ಒಡೆಯುವ, ಶಿಲಾಪದರ ಹಾಳು ಮಾಡುವ, ಲಾಲ್‌ಬಾಗ್‌ ಕೆರೆಯನ್ನು ಬತ್ತಿಸುವ ಸರ್ಕಾರದ ಯೋಜನೆ ಬೇಕಾಗಿಲ್ಲ' ಎಂದು ಹೇಳಿದರು.

ನಿರಂತರ ಜಾಗೃತಿ: 'ಉದ್ಯಾನ ನಗರಿಯ ಪ್ರತೀಕವಾದ ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನಗಳು ಉಸಿರು ನೀಡುವ ಶ್ವಾಸಕೋಶಗಳು. ಸುರಂಗ ರಸ್ತೆ ಯೋಜನೆಯು ಲಾಲ್‌ಬಾಗ್‌ನ ಸೌಂದರ್ಯವನ್ನೇ ಕಸಿಯಲಿದೆ. ಯೋಜನೆ ಬೇಡವೆಂದು ಒತ್ತಾಯಿಸಿ ನಡೆಸುತ್ತಿರುವ ನಿರಂತರ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ' ಎಂದು 'ಲಾಲ್‌ಬಾಗ್‌ ವಾಕರ್ಸ್‌ ಅಸೋಸಿಯೇಷನ್‌' ಅಧ್ಯಕ್ಷ ಎಸ್.ಉಮೇಶ್ ಹೇಳಿದರು.

ಅಸೋಸಿಯೇಷನ್‌ನ ಜೇಕಬ್‌ ಮಾತನಾಡಿ, '₹17,700 ಕೋಟಿ ವೆಚ್ಚದ ಯೋಜನೆಯು ಉತ್ತರ ಮತ್ತು ದಕ್ಷಿಣ ಬೆಂಗಳೂರನ್ನು ಬೆಸೆಯಲಿದ್ದು, ಲಾಲ್‌ಬಾಗ್‌ಗೆ ಹೊಂದಿಕೊಂಡಂತೆ ಸಾಗಲಿದೆ. ಪ್ರಾಚೀನ ಶಿಲಾಪದರವು ಲಾಲ್‌ಬಾಗ್‌ ಸುತ್ತಲಿನ ಮಾವಳ್ಳಿ, ಸಿದ್ಧಾಪುರ, ಜಯನಗರದಲ್ಲಿ ಚಾಚಿದೆ. ಸುರಂಗ ಕೊರೆದರೆ ಲಾಲ್‌ಬಾಗ್‌ ಕೆರೆ ಬತ್ತಿಹೋಗಲಿದೆ. ನೀರು ತುಂಬಿಸಲು ಮತ್ತೊಂದು ಯೋಜನೆ ಮಾಡಬೇಕಾಗುತ್ತದೆ. ಪರಿಸರ ನಾಶಗೊಳಿಸುವ ಯೋಜನೆಗಳು ಬೇಡ' ಎಂದರು.

ಸುಮಾ ರೆಡ್ಡಿ ಮಾತನಾಡಿ, 'ಲಾಲ್‌ಬಾಗ್‌ನ ಐದು ಎಕರೆಗೂ ಹೆಚ್ಚು ಜಮೀನನ್ನು ಯೋಜನೆಗಾಗಿ ಸರ್ಕಾರವು ವಶಕ್ಕೆ ಪಡೆಯಲಿದ್ದು, 400 ವರ್ಷಕ್ಕೂ ಹಳೆಯ ಮರಗಳು, ಅಪರೂಪದ ಸಸ್ಯ ಸಂಪತ್ತು ನಾಶವಾಗಲಿದೆ. ಹಸಿರು ಹೊದಿಕೆ ನಷ್ಟವಾಗಲಿದೆ. ಲಾಲ್‌ಬಾಗ್‌ ಬಂಡೆಯನ್ನು ಪಾರಂಪರಿಕ ತಾಣವೆಂದು ಜಿಎಸ್‌ಐ ಅಧಿಸೂಚನೆ ಹೊರಡಿಸಿದೆ. ಪಾರಂಪರಿಕ ತಾಣಗಳ ಕಾಯ್ದೆ ಪ್ರಕಾರ ಇದನ್ನು ರಕ್ಷಿಸಬೇಕು' ಎಂದು ಆಗ್ರಹಿಸಿದರು.

ವಾಯುವಿಹಾರಿಗಳಾದ ಸುರೇಶ್, ಲತಾ, ಉಷಾ, ಮನೋಜ್, ಅರುಣ್, ಇಂದ್ರಾಣಿ, ಆನಂದ್‌, ರಮೇಶ್, ಪ್ರವೀಣ್, ಮಹೇಂದ್ರ, ಕೈಲಾಶ್, ವಿಕ್ರಮ್, ಅಶೋಕ್‌, ಸಂಜಯ್, ಸುರೇಂದ್ರ ಪಾಲ್ಗೊಂಡಿದ್ದರು.

'ಯುನೆಸ್ಕೊ ಪಟ್ಟಿಗೆ ಸೇರಿಸಲು ಶ್ರಮಿಸಿ'

'ಉದ್ಯಾನದ ಜಾಗವನ್ನು ಸುರಂಗ ರಸ್ತೆ ಯೋಜನೆಗೆ ನೀಡುವುದರಿಂದ ನೂರಾರು ವರ್ಷದ ಸಾವಿರಾರು ಮರಗಳು ಉರುಳಲಿವೆ. ಜೀವವೈವಿಧ್ಯ ನಾಶವಾಗಲಿದೆ. ಹಂಪಿಯಂತೆ ಯುನೆಸ್ಕೊ ಪಾರಂಪರಿಕ ತಾಣವಾಗಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು' ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ನಾಗರಿಕರು ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani