ಬೆಂಗಳೂರು: ಹೆಬ್ಬಾಳ- ಸಿಲ್ಕ್‌ಬೋರ್ಡ್ ಸುರಂಗ ರಸ್ತೆ ಯೋಜನೆ ವಿರೋಧಿಸಿ 'ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್' ಆಯೋಜಿಸಿದ್ದ 'ಮಾನವ ಸರಪಳಿ'ಗೆ ಚಿಣ್ಣರೂ ಕೈ ಜೋಡಿಸಿದರು.
ಲಾಲ್‌ಬಾಗ್ ಕೆರೆ ಅಂಗಳದಲ್ಲಿ ಭಾನುವಾರ ಮುಂಜಾನೆಯೇ ಜಮಾಯಿಸಿದ ಪರಿಸರವಾದಿಗಳು, ವಾಯುವಿಹಾರಿಗಳೊಂದಿಗೆ ರಾಜಾಜಿನಗರದಿಂದ ಬಂದಿದ್ದ ಚಿಣ್ಣರು ಸಾಥ್ ನೀಡಿ, 'ಲಾಲ್‌ಬಾಗ್ ನಾಶಗೊಳಿಸಲು ನಾವು ಬಿಡೆವು' ಎಂದರು.
'ಪ್ರತಿವಾರವೂ ಸೈಕಲ್‌ನಲ್ಲಿ ಸ್ನೇಹಿತರೊಂದಿಗೆ ಇಲ್ಲಿಗೆ ಬರುತ್ತೇವೆ. ಉದ್ಯಾನದಲ್ಲಿ ದೊಡ್ಡದಾದ ಬಂಡೆಗಳು, ಮರಗಳಿವೆ. ಪಕ್ಷಿಗಳು ನೋಡುವ ಅಭ್ಯಾಸವನ್ನೂ ಬೆಳೆಸಿಕೊಂಡಿದ್ದೇವೆ. ಯೋಜನೆಗಾಗಿ ಉದ್ಯಾನದ 5 ಎಕರೆಗೂ ಹೆಚ್ಚು ಭೂಮಿಯನ್ನು ವಶಕ್ಕೆ ಪಡೆಯುತ್ತಾರೆಂದು ದಿನಪತ್ರಿಕೆಗಳಲ್ಲಿ ಓದಿದ್ದೇವೆ. ಇದು ತಪ್ಪಲ್ಲವೇ' ಎಂದು ಯುರೇನ್, ಮಲ್ಲಿಕಾರ್ಜುನ್ ಪ್ರಶ್ನಿಸಿದರು.
ದೈವಿಕ್, ಭದ್ರಪ್ಪ, ಸಂಕಲ್ಪ್ ಮಾತನಾಡಿ,'ಶಾಲೆಯಲ್ಲಿ ಪರಿಸರವಿಜ್ಞಾನ ಪಾಠ ಕೇಳುವಾಗ ನಮ್ಮ ಕಲ್ಪನೆಯಲ್ಲಿ ಮೂಡುವುದೇ ಲಾಲ್‌ಬಾಗ್. ಇದನ್ನು ಉಳಿಸಿಕೊಳ್ಳಬೇಕು' ಎಂದರು. ಚಿಣ್ಣರ ನುಡಿಮುತ್ತುಗಳನ್ನು ಕೇಳಿದ ಹಿರಿಯರೂ ಅಚ್ಚರಿಗೊಳಗಾದರು. ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಹಕ್ಕೊತ್ತಾಯದಲ್ಲಿ ಈ ಬಾರಿ ಮಕ್ಕಳು ಪಾಲ್ಗೊಂಡಿದ್ದು ಹುರುಪು ನೀಡಿತು.
ಲಾಲ್‌ಬಾಗ್ ಬಂಡೆ ಬಳಿ ಜಾಗೃತಿಗೆ ಪೊಲೀಸರು ಅವಕಾಶ ನೀಡದ ಕಾರಣ ಅಸೋಸಿಯೇಷನ್ ಸದಸ್ಯರು ಲಾಲ್‌ಬಾಗ್ ಕೆರೆ ಆವರಣಕ್ಕೆ ಬೆಳಿಗ್ಗೆ 6.30ಕ್ಕೆ ಆಗಮಿಸಿದ್ದರು. ಗಂಟೆಗೂ ಹೆಚ್ಚು ಕಾಲ ಜಾಗೃತಿ ಮೂಡಿಸಿದರು.
ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್' ಅಧ್ಯಕ್ಷ ಎಸ್.ಉಮೇಶ್ ಮಾತನಾಡಿ, 'ಆ.2ರಿಂದ ಪ್ರತಿ ಭಾನುವಾರಗಳಂದು ಮಾನವ ಸರಪಳಿ ರಚಿಸಿ, ಭಿತ್ತಿಪತ್ರ ಪ್ರದರ್ಶಿಸಿ, ಬಂಡೆಯನ್ನು ಅಪ್ಪಿಕೊಂಡು ಜಾಗೃತಿ ಮೂಡಿಸಿದ್ದೇವೆ. ನಾಗರಿಕರು ಯೋಜನೆ ವಿರುದ್ಧದ ಅಭಿಯಾನಕ್ಕೆ ನಿರಂತರವಾಗಿ ಬರುತ್ತಿದ್ದಾರೆ. ಇದೀಗ ಮಕ್ಕಳು ಬಂದಿದ್ದಾರೆ. ಅವರ ವಿವೇಕ ಆಳುವವರಿಗೂ ಬರಬೇಕಿದೆ' ಎಂದರು.
'ನಗರಕ್ಕೆ ಉಸಿರು ನೀಡುವ ಶ್ವಾಸಕೋಶವಾದ ಲಾಲ್‌ಬಾಗ್ ಹಾಳು ಮಾಡದೇ ಪರ್ಯಾಯ ಮಾರ್ಗ ಹುಡುಕಲಿ. ಸುರಂಗ ರಸ್ತೆ, ಎತ್ತರಿಸಿದ ಒಂಬತ್ತು ರಸ್ತೆ ಕಾರಿಡಾರ್, ಮೆಟ್ರೊ ಡಬಲ್ ಡೆಕರ್ ಯೋಜನೆಗಳು ಹಾನಿ ಮಾಡಲಿವೆ. ಹಸಿರನ್ನು ಕಳೆದುಕೊಳ್ಳುವ ಅಭಿವೃದ್ಧಿ ಬೇಡ' ಎಂದು ಹೇಳಿದರು.
'ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್‌ನಲ್ಲಿ ಸೆ.3ರಂದು ನಡೆಯಲಿದೆ. ಯೋಜನೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಯೋಜಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಜನರು ಬರಲಿದ್ದಾರೆ. ವಾಯುವಿಹಾರಿಗಳು, ಸಂಘ- ಸಂಸ್ಥೆಗಳು ಜೊತೆಯಾಗುವ ನಿರೀಕ್ಷೆಯಿದೆ' ಎಂದರು.
ಪ್ರೊ.ಸುಮಾ ರೆಡ್ಡಿ ಮಾತನಾಡಿ, 'ಯೋಜನೆಯಿಂದ ಲಾಲ್‌ಬಾಗ್ ಬಂಡೆಯ ಶಿಲಾಪದರ ನಾಶವಾಗಲಿದೆ. ಲಾಲ್‌ಬಾಗ್ ಕೆರೆ ಬತ್ತಲಿದೆ. ಇದೀಗ ಉದ್ಯಾನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾಯ್ದೆ ತರಲು ಸರ್ಕಾರ ಮುಂದಾಗಿರುವುದು ವಿನಾಶದತ್ತ ಕೊಂಡೊಯ್ಯುವ ಯತ್ನವಾಗಿದೆ' ಎಂದು ಕಳವಳ ವ್ಯಕ್ತಪಡಿಸಿದರು.
ನಾಗರಿಕರಾದ ಕಾಂತಿಲಾಲ್, ಮಹೇಂದ್ರ, ಮನೋಜ್ ಕುಮಾರ್ ನಾಯರ್, ಉಷಾ, ಇಂದ್ರಾಣಿ ಪಾಲ್ಗೊಂಡಿದ್ದರು.

