ಕೋಲ್ಕತ್ತ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣದಲ್ಲಿ ವೃತ್ತಿಪರ ಶೂಟರ್‌ಗಳ ಕೈವಾಡ ಇರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹತ್ಯೆಯು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಜೆಪಿ ಹಾಗೂ ಟಿಎಂಸಿ ನಡುವೆ ವಾಗ್ದಾಳಿ ಮುಂದುವರಿದಿದೆ.
ಆರೋಪಿಗಳ ಪತ್ತೆಗಾಗಿ ತನಿಖಾಧಿಕಾರಿಗಳು ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸಹ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಡಿಜಿಪಿ ಸಿದ್ಧನಾಥ್ ಗುಪ್ತಾ ಮತ್ತು ಸಿಆರ್‌ಪಿಎಫ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರಥ್ ಅವರು ಕೋಲ್ಕತ್ತದಿಂದ ತಮ್ಮ ಫ್ಲ್ಯಾಟ್‌ಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮ್‌ಗ್ರಾಮ್ ಪ್ರದೇಶದ ಜೆಸ್ಸೋರ್ ರಸ್ತೆಯ ದೊಹರಿಯಾ ಬಳಿ ಬುಧವಾರ ರಾತ್ರಿ 10.30ರ ಸುಮಾರಿಗೆ ಸಣ್ಣ ಕಾರು ಅಡ್ಡ ಬಂದಿದೆ. ಈ ವೇಳೆ, ರಥ್ ಅವರ ಕಾರಿನ ವೇಗವನ್ನು ಕಡಿಮೆ ಮಾಡಲಾಯಿತು. ಮೋಟರ್ ಸೈಕಲ್‌ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಬಿಟ್ಟು ಹೋಗಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಗೂ ಮುನ್ನ ಮಧ್ಯಮ್‌ಗ್ರಾಮ್ ಕಡೆಗೆ ಕಾರೊಂದು ಅನುಮಾನಾಸ್ಪದವಾಗಿ ಹೋಗುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
'ಕಾರಿಗೆ ಅಳವಡಿಸಿದ್ದ ನಂಬರ್ ಪ್ಲೇಟ್ ನಕಲಿಯಾಗಿದೆ. ಅದರ ಚಾಸಿಸ್ ಹಾಗೂ ಎಂಜಿನ್ ನಂಬರ್‌ಗಳನ್ನು ಅಳಿಸಿ ಹಾಕಲಾಗಿದೆ. ಆ ಕಾರು ಸಿಲಿಗುರಿಯ ವ್ಯಕ್ತಿಗೆ ಸೇರಿದ್ದು, ಅವರು ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿಚಾರಣೆ ನಡೆಸಲಾಗಿದೆ. ಕಾರನ್ನು ಮಾರಾಟ ಮಾಡಲು ಆನ್‌ಲೈನ್ ಫ್ಲಾಟ್‌ಫಾರ್ಮ್‌ನಲ್ಲಿ ಅದರ ಚಿತ್ರವನ್ನು ಅಪ್‌ಲೋಡ್ ಮಾಡಿರುವುದಾಗಿ ಮಾಲೀಕರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
'ಘಟನಾ ಸ್ಥಳದಿಂದ ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಅತ್ಯಾಧುನಿಕ ಪಿಸ್ತೂಲ್ ಬಳಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ಮಾಹಿತಿ ಪ್ರಕಾರ ಹಂತಕರು ಗ್ಲಾಕ್ 47ಎಕ್ಸ್ ಪಿಸ್ತೂಲ್‌ಗಳನ್ನು ಬಳಸಿರುವ ಸಾಧ್ಯತೆ ಇದೆ. ಸಾಮಾನ್ಯ ಹಂತಕರು ಈ ರೀತಿಯ ಪಿಸ್ತೂಲ್ ಬಳಸುವುದಿಲ್ಲ. ಇದರಲ್ಲಿ ವೃತ್ತಿಪರ ಶೂಟರ್‌ಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
'ಕೃತ್ಯ ನಡೆದ ಸ್ಥಳದಿಂದ 4 ಕಿ.ಮೀ ದೂರದಲ್ಲಿರುವ ಚಹಾ ಅಂಗಡಿ ಬಳಿ ದಾಳಿಗೆ ಬಳಸಲಾಗಿದೆ ಎನ್ನಲಾದ ಮೋಟಾರ್ ಸೈಕಲ್‌ವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಕೂಡ ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದು, ಅದರ ಚಾಸಿಸ್ ಸಂಖ್ಯೆಯನ್ನು ಅಳಿಸಿಹಾಕಲಾಗಿದೆ. ಹೀಗಾಗಿ, ಈ ಕೊಲೆಯು ಪೂರ್ವಯೋಜಿತ ಕೃತ್ಯವಾಗಿದೆ' ಎಂದು ಹೇಳಿದ್ದಾರೆ.
ಚಾಲಕನ ಸ್ಥಿತಿ ಗಂಭೀರ:
ಈ ಘಟನೆಯಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಚಾಲಕ ಬುದ್ಧದೇವ್ ಬೇರಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಮಧ್ಯಮ್‌ಗ್ರಾಮ್, ದೊಹರಿಯಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಚಂದ್ರನಾಥ್ ರಥ್ ಅವರ ಮರಣೋತ್ತರ ಪರೀಕ್ಷೆ ನಡೆದ ಬಾರಾಸತ್ ವೈದ್ಯಕೀಯ ಕಾಲೇಜಿಗೆ ಸುವೇಂದು ಅಧಿಕಾರಿ ಹಾಗೂ ಸಮಿಕ್ ಭಷ್ಟಾಚಾರ್ಯ ಭೇಟಿ ನೀಡಿದರು -ಪಿಟಿಐ ಚಿತ್ರ
ಉತ್ತರ 24 ಪರಗಣ ಜಿಲ್ಲೆಯ ಬಾರಾಸತ್ ವೈದ್ಯಕೀಯ ಕಾಲೇಜಿನಿಂದ ಚಂದ್ರನಾಥ್ ರಥ್ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು -ಪಿಟಿಐ ಚಿತ್ರಧರ್ಮೇಂದ್ರ ಪ್ರಧಾನ್ ಕೇಂದ್ರ ಸಚಿವಈ ಘಟನೆಯು ಪಶ್ಚಿಮ ಬಂಗಾಳದ ರಕ್ತದಿಂದ ತೊಯ್ದ ರಾಜಕೀಯ ಸಂಸ್ಕೃತಿಯ ಪ್ರತಿಬಿಂಬ ಚಿರಾಗ್ ಪಾಸ್ವಾನ್ ಎಲ್‌ಜೆಪಿ (ಆರ್‌ವಿ) ಮುಖ್ಯಸ್ಥಇಂತಹ ಹಿಂಸಾಚಾರದ ರಾಜಕೀಯದ ವಿರುದ್ಧವೇ ಜನರು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆಚುನಾವಣೋತ್ತರ ಹಿಂಸಾಚಾರದ ಭೀತಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಆಡಳಿತ ಬದಲಾವಣೆಗೆ ತೀರ್ಪು ನೀಡಿದ ಕೇವಲ 48 ಗಂಟೆಗಳ ನಂತರ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನ ಹತ್ಯೆ ನಡೆದಿರುವುದು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದ ಸಣ್ಣಪುಟ್ಟ ಘರ್ಷಣೆಗಳು ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.
'ಆಪ್ತ ಸಹಾಯಕ ಆಗಿರದಿದ್ದರೆ ರಥ್ ಸಾಯುತ್ತಿರಲಿಲ್ಲ'
ರಥ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಪೂರ್ವ ಮೇದಿನಿಪುರ ಜಿಲ್ಲೆಯ ಚಂಡೀಪುರಕ್ಕೆ ಕೊಂಡೊಯ್ಯುವ ಮೊದಲು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಾತನಾಡಿ 'ಭಾರತೀಯ ವಾಯುಪಡೆಯ ಮಾಜಿ ಯೋಧ ರಥ್ ನನ್ನ ಆಪ್ತ ಸಹಾಯಕನಾಗಿ (ಪಿ.ಎ) ಇರದಿದ್ದರೆ ಹಾಗೂ ನಾನು ಭವಾನಿಪುರದಲ್ಲಿ ಗೆಲ್ಲದಿದ್ದರೆ ಹತ್ಯೆಗೀಡಾಗುತ್ತಿರಲಿಲ್ಲ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ನಾನು ಜಯಗಳಿಸಿದ್ದ ಕಾರಣಕ್ಕಾಗಿ ಹತ್ಯೆ ನಡೆದಿದೆ' ಎಂದು ಆರೋಪಿಸಿದ್ದಾರೆ.
'ಈ ಕೊಲೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿರುವುದನ್ನು ಪ್ರತಿಬಿಂಬಿಸುತ್ತದೆ. ಚುನಾವಣಾ ಗೆಲುವಿನ ಹೊರತಾಗಿಯೂ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಗೆದ್ದವರು ನಾವು. ಹಾಗೆಯೇ ಸಾಯುತ್ತಿರುವವರೂ ನಾವು' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. 'ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರ ಸೋಲಿಗೂ ಈ ಹತ್ಯೆಗೂ ಸಂಬಂಧವಿದೆ. ನನ್ನ ಮಗ ಅಪಘಾತದಲ್ಲಿ ಸತ್ತಿದ್ದರೆ ನಾನು ಇಷ್ಟೊಂದು ನೋವು ಪಡುತ್ತಿರಲಿಲ್ಲ. ಸುವೇಂದು ಅಧಿಕಾರಿ ಪರ ಕೆಲಸ ಮಾಡುತ್ತಿದ್ದರಿಂದಲೇ ಮಗನನ್ನು ಹತ್ಯೆ ಮಾಡಲಾಗಿದೆ' ಎಂದು ರಥ್ ಅವರ ತಾಯಿ ಆರೋಪಿಸಿದ್ದಾರೆ.
ಪಕ್ಷದ ಪಾತ್ರವಿಲ್ಲ: ಟಿಎಂಸಿ
ಬಿಜೆಪಿ ನಾಯಕರ ಆರೋಪಗಳನ್ನು ತಿರಸ್ಕರಿಸಿರುವ ಟಿಎಂಸಿ 'ಈ ಕೊಲೆ ಪ್ರಕರಣದಲ್ಲಿ ಪಕ್ಷದ ಪಾತ್ರವಿಲ್ಲ. ತನಿಖೆ ಪೂರ್ಣಗೊಳ್ಳುವ ಮೊದಲೇ ಬಿಜೆಪಿಯು ಈ ಘಟನೆಯನ್ನು ರಾಜಕೀಯಗೊಳಿಸುತ್ತಿದೆ' ಎಂದು ಆರೋಪಿಸಿದೆ. ಈ ಹತ್ಯೆಯನ್ನು ಖಂಡಿಸಿರುವ ಕಾಂಗ್ರೆಸ್ ಮತ್ತು ಸಿಪಿಎಂ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿವೆ. ಟಿಎಂಸಿ ವರ್ಚಸ್ಸಿಗೆ ಪೆಟ್ಟು ಚುನಾವಣಾ ಸೋಲಿನ ಆಘಾತದಲ್ಲಿರುವ ಟಿಎಂಸಿಯ ವರ್ಚಸ್ಸಿಗೆ ಈ ಕೊಲೆಯು ಭಾರಿ ಪೆಟ್ಟು ನೀಡಿದೆ. ಈ ಕೃತ್ಯಕ್ಕೂ ತನಗೂ ಸಂಬಂಧವಿಲ್ಲ; ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅದು ಆಗ್ರಹಿಸುತ್ತಿದ್ದರೂ ಈ ಘಟನೆಯು ಪಕ್ಷಕ್ಕೆ ಸಾಕಷ್ಟು ಹಾನಿ ಉಂಟುಮಾಡುತ್ತಿದೆ. ಅಲ್ಲದೆ ಸುವೇಂದು ಅಧಿಕಾರಿ ಮತ್ತು ಟಿಎಂಸಿ ನಾಯಕರ ನಡುವಿನ ವೈಯಕ್ತಿಕ ರಾಜಕೀಯ ಪೈಪೋಟಿಯು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರದ ಭೀಕರತೆಯು ಈಗ ಇನ್ನಷ್ಟು ಅಪಾಯಕಾರಿ ಹಂತಕ್ಕೆ ತಲುಪುವ ಸಾಧ್ಯತೆಯನ್ನು ತೋರಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

