ಕನ್ನಡ ಸೇರಿದಂತೆ ಭಾರತ ಚಿತ್ರರಂಗದ ಮಟ್ಟಿಗೆ ಸದ್ಯಕ್ಕೆ ಬಹುಚರ್ಚಿತ ಚಿತ್ರ 'ಟಾಕ್ಸಿಕ್'. 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಎಂಬುದು ಈ ಚಿತ್ರದ ಅಡಿಸಾಲು. ಬಿಡುಗಡೆಗೆ (ಆ.26) ಎರಡು ದಿನವಷ್ಟೇ ಉಳಿದಿದೆ.
ಭಿನ್ನ ಪ್ರಚಾರ ವೈಖರಿ, ಟ್ರೇಲರ್, ಪ್ರೊಮೊಗಳಿಂದ ಗಮನಸೆಳೆದಿರುವ ಈ ಚಿತ್ರದ ಟಿಕೆಟ್‌ಗಳ ಬುಕಿಂಗ್‌ಗೆ ಏಳು ದಿನ ಮೊದಲೇ ಚಾಲನೆ ನೀಡಿದ್ದು, ಹೊಸ ದಾಖಲೆ ಬರೆಯುವ ಇಂಗಿತ ವ್ಯಕ್ತವಾಗಿದೆ.
ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ, ಟಿಕೆಟ್ ಬಿಕರಿಯ ವೇಗ ಒಳಗೊಂಡು ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿರುವ ಇತರೆ ಚಿತ್ರಗಳ ಜೊತೆಗೆ ಹೋಲಿಕೆ ಮಾಡಿ ಜಾಲತಾಣದಲ್ಲಿ ದೊಡ್ಡ ಚರ್ಚೆಯೂ ನಡೆದಿದೆ.
ಆದರೆ, 'ದೊಡ್ಡವರಿಗಾಗಿ' ಚಿತ್ರ ನಿರ್ಮಿಸಿರುವ ಚಿತ್ರತಂಡ ಮೊದಲ ದಿನದ ಗಳಿಕೆ, ಟಿಕೆಟ್ ಮಾರಾಟ, ಈವರೆಗಿನ ಕಲೆಕ್ಷನ್ ಕುರಿತ ದೊಡ್ಡ ಚರ್ಚೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದೆ.
ಬಹುತೇಕ ಟಿಕೆಟ್‌ಗಳು ಬಿಕರಿಯಾಗಿವೆ. ವೆಬ್‌ವೊಂದರ ಮಾಹಿತಿ ಪ್ರಕಾರ, ದೇಶದಾದ್ಯಂತ 12,652 ಪರದೆಗಳಲ್ಲಿ ಬಿಡುಗಡೆ ಆಗಲಿದ್ದು, 4,75,273 ಟಿಕೆಟ್‌ಗಳು ಈವರೆಗೆ ಮಾರಾಟವಾಗಿವೆ.
ಈ ಮಧ್ಯೆ, ಶನಿವಾರ ಹೈದರಾಬಾದ್‌ನಲ್ಲಿ ಚಿತ್ರತಂಡ 'ಟಾಕ್ಸಿಕ್' ಬಿಡುಗಡೆ ಪೂರ್ವ ಕಾರ್ಯಕ್ರಮ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲಿ, ನಮಸ್ಕಾರದಿಂದ ಮಾತು ಆರಂಭಿಸಿದ ಯಶ್, 'ಅಂದರಿಕಿ' ತೆಲುಗಿನಲ್ಲೇ ಮಾತನಾಡಿ 'ರಾಕಿಂಗ್'ಆಗಿದ್ದಾರೆ. ತೆಲುಗಿನ ಪ್ರಮುಖ ನಟರ ಚಿತ್ರಗಳ ಉಲ್ಲೇಖಿಸಿ ಚಪ್ಪಾಳೆ ಗಿಟ್ಟಿಸಿದ್ದಾರೆ.
'ಎಲ್ಲ, ಮಿತಿ ಮೀರಿ ಹೋಗೋಣ ಬಾ, ಎಲ್ಲ ಗಡಿ ದಾಟಿ ನೋಡೋಣ ಬಾ...' ಎಂಬುದು ಚಿತ್ರದ 'ತಬಾಹಿ' ಹಾಡಿಗೆ ಯೋಗರಾಜ್ ಭಟ್ ಬರೆದಿರುವ ಸಾಲುಗಳು. 'ಟಾಕ್ಸಿಕ್'ನ ಆರಂಭದ ಅಬ್ಬರ ಈ ಸಾಲುಗಳನ್ನೇ ನಿಜವಾಗಿಸುವಂತಿವೆ. v
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-51-1179906144

