ಟ್ರೇಲರ್ ಮೂಲಕವೇ ನಿರೀಕ್ಷೆಯನ್ನು ಇಮ್ಮಡಿಗೊಳಿಸಿರುವ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಸಿನಿಮಾ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಶುಕ್ರವಾರ ಬಿಕರಿಯಾದ ಟಿಕೆಟ್‌ಗಳ ಸಂಖ್ಯೆ ಇದಕ್ಕೆ ಸಾಕ್ಷಿ.
ಸಿನಿಮಾ ಆ.26ರಂದು ತೆರೆಕಾಣುತ್ತಿದ್ದು, ಸಿನಿಮಾದ ಮುಂಗಡ ಟಿಕೆಟ್ ಖರೀದಿ ಶುಕ್ರವಾರ (ಆ.21) ಬೆಳಗ್ಗೆ 8ರಿಂದ ತೆರೆಯಲಾಗಿತ್ತು.
ಆರಂಭದಲ್ಲಿ ಗಂಟೆಗೆ 19-20 ಸಾವಿರ ಟಿಕೆಟ್‌ಗಳು ಕೇವಲ ಬುಕ್‌ಮೈಶೋ ಮೂಲಕ ಮಾರಾಟವಾಗಿದೆ. ಇದು ಕ್ರಮೇಣ ಗಂಟೆಗೆ 25-30 ಸಾವಿರಕ್ಕೆ ಏರಿಕೆಯಾಗಿತ್ತು. ಮೊದಲ ದಿನವೇ ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಈ ಸಂಖ್ಯೆಯು ಮೊದಲ ದಿನವೇ ಸಿನಿಮಾ ₹100 ಕೋಟಿ ಗಳಿಕೆಯ ಕ್ಲಬ್ ಸೇರಿ ಮುನ್ನುಗ್ಗುವ ಮುನ್ಸೂಚನೆಯನ್ನು ನೀಡಿದೆ.
ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಟಾಕ್ಸಿಕ್' ಟಿಕೆಟ್ ಕನಿಷ್ಠ ₹400ರಿಂದ ಗರಿಷ್ಠ ₹2000ರವರೆಗೂ ಬಿಕರಿಯಾಗಿವೆ. ಇಲ್ಲಿ 15-20 ಶೋಗಳನ್ನು 'ಟಾಕ್ಸಿಕ್'ಗೆ ನೀಡಲಾಗಿದೆ. ಬೆಂಗಳೂರಿನ ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್‌ನಲ್ಲಿ 9 ಪರದೆಗಳಿದ್ದು, ಮೊದಲ ದಿನ 23 ಶೋಗಳನ್ನು ಮೀಸಲಿಡಲಾಗಿದೆ. ಏಕಪರದೆ ಚಿತ್ರಮಂದಿರಗಳೂ ಟಿಕೆಟ್ ದರವನ್ನೂ ಏರಿಸಿವೆ. ಇಲ್ಲಿ ಕನಿಷ್ಠ ₹400ರಿಂದ ಗರಿಷ್ಠ ₹500ರವರೆಗೆ ನಿಗದಿಪಡಿಸಲಾಗಿದೆ. ಟಿಕೆಟ್ ದರ ಇಷ್ಟಿದ್ದರೂ ಬಹುತೇಕ ಎಲ್ಲಾ ಚಿತ್ರಮಂದಿರಗಳ ಮೊದಲ ದಿನದ ಟಿಕೆಟ್ ಬಹುತೇಕ ಖರೀದಿಯಾಗಿವೆ. ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಟಿಕೆಟ್ ದರ ಹೆಚ್ಚು ಇದೆ.
ಸಿನಿಮಾ ತಂಡವು ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಹೀಗಾಗಿಯೇ ನಮ್ಮ ಮೆಟ್ರೊ ಮಾತ್ರವಲ್ಲದೆ ಕೋಲ್ಕತ್ತ ಮೆಟ್ರೊದಲ್ಲಿ ಹಾಗೂ ಮುಂಬೈ, ಅಹಮದಾಬಾದ್, ಸೂರತ್, ಚೆನ್ನೈ, ಪುಣೆ, ಲಖನೌ, ಜೈಪುರ, ಬರೋಡ, ದೆಹಲಿ, ಚೆನ್ನೈ ನಗರದಾದ್ಯಂತ 'ಟಾಕ್ಸಿಕ್' ಪೋಸ್ಟರ್‌ಗಳು ರಾರಾಜಿಸುತ್ತಿವೆ. ಹೀಗಿದ್ದರೂ ಟಿಕೆಟ್ ಖರೀದಿ ವಿಚಾರದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ರಾಜ್ಯದಷ್ಟು ಕ್ರೇಜ್ ಕಂಡುಬಂದಿಲ್ಲ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಶುಕ್ರವಾರ ಮುಂಗಡ ಬುಕ್ಕಿಂಗ್ ಆರಂಭಿಸಿಲ್ಲ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದ ಕಥೆ ಸಿನಿಮಾದಲ್ಲಿದೆ. 'ಸ್ವಾತಂತ್ರ್ಯ ಸಿಕ್ಕರೂ ಗೋವಾ ಇನ್ನೂ ಪೋರ್ಚುಗೀಸ್ ನಿಯಂತ್ರಣದಲ್ಲಿತ್ತು. ಈ ಸಂದರ್ಭದಲ್ಲಿ ಅಲ್ಲಿ ಅಧಿಕಾರ, ದ್ರೋಹ ಮತ್ತು ಹಿಂಸೆ ಪರಸ್ಪರ ಎದುರುಗೊಂಡಾಗ ಕಥೆ ತೆರೆದುಕೊಳ್ಳುತ್ತದೆ' ಎಂಬ ಸಾರಾಂಶವನ್ನು ಚಿತ್ರತಂಡ ಬುಕ್‌ಮೈಶೋನಲ್ಲಿ ಹಂಚಿಕೊಂಡಿದೆ. ಸಿನಿಮಾಗೆ ಸೆನ್ಸಾರ್ ಮಂಡಳಿಯು 'ಎ' ಪ್ರಮಾಣ ಪತ್ರ ನೀಡಿದ್ದು, ಚಿತ್ರದ ಅವಧಿಯು 3 ಗಂಟೆ 14 ನಿಮಿಷವಿದೆ.
ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡ ಈ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ 'ರಾಯ' ಹಾಗೂ 'ಟಿಕೆಟ್' ಎಂಬ ದ್ವಿಪಾತ್ರದಲ್ಲಿ ಹಾಗೂ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಬಾಲಾಜಿ ಮನೋಹರ್, ಸುದೇವ್ ನಾಯರ್, ಅಕ್ಷಯ್ ಒಬೆರಾಯ್, ಡ್ಯಾರೆಲ್ ಡಿ'ಸಿಲ್ವ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾ ನಿರ್ಮಾಣ ಮಾಡಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-51-599829338

