Dailyhunt Logo
  • Light mode
    Follow system
    Dark mode
    • Play Story
    • App Story
ಟಾಕ್ಸಿಕ್ ಸಿನಿಮಾ ಹೃದಯದಿಂದ ಕಟ್ಟಿದ ಜಗತ್ತು: ಬಿಡುಗಡೆಗೂ ಮುನ್ನ ಯಶ್ ಸಂದೇಶ

ಟಾಕ್ಸಿಕ್ ಸಿನಿಮಾ ಹೃದಯದಿಂದ ಕಟ್ಟಿದ ಜಗತ್ತು: ಬಿಡುಗಡೆಗೂ ಮುನ್ನ ಯಶ್ ಸಂದೇಶ

ವರ್ಷದ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ ಅಪ್ಸ್‌' ಇಂದು (ಆಗಸ್ಟ್‌ 26, ಗುರುವಾರ) ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

ಈ ಚಿತ್ರದಲ್ಲಿ ರಾಯ, ಟಿಕೆಟ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಾಕಿಂಗ್‌ ಸ್ಟಾರ್‌ ಯಶ್‌, ಬುಧವಾರ ರಾತ್ರಿ ಅಭಿಮಾನಿಗಳನ್ನುದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

'ಟಾಕ್ಸಿಕ್‌ ಸಿನಿಮಾ ಹೃದಯದಿಂದ ಕಟ್ಟಿದ ಜಗತ್ತು. ಚಿತ್ರಮಂದಿರದಲ್ಲಿ ಅದರ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ' ಎಂದು ಮನವಿ ಮಾಡಿದ್ದಾರೆ.

ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾದಲ್ಲಿ 'ಲೇಡಿ ಸೂಪರ್‌ಸ್ಟಾರ್‌' ನಯನತಾರಾ, ಚೆಂದುಳ್ಳಿ ಚೆಲುವೆಯರಾದ ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್‌, ಹುಮಾ ಖುರೇಷಿ, ತಾರಾ ಸುತಾರಿಯಾ ಅವರು ಯಶ್‌ಗೆ ಸಾಥ್‌ ನೀಡಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್‌ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಚಿತ್ರಕ್ಕೆ ಬಂಡವಾಳ ಹೂಡಿದೆ.

ಯಶ್‌ ಪೋಸ್ಟ್‌ನಲ್ಲಿ ಏನಿದೆ?

'ಟಾಕ್ಸಿಕ್‌ ಚಿತ್ರ ತಂಡದ ಕಡೆಯಿಂದ ಒಂದು ಸಂದೇಶ' ಎನ್ನುತ್ತಾ ಮಾತು ಶುರು ಮಾಡಿರುವ ಯಶ್‌, 'ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ ಅಪ್ಸ್‌ ನಮ್ಮ ಪಾಲಿಗೆ ಒಂದು ಸಿನಿಮಾ ಮಾತ್ರವಲ್ಲ. ಒಂದೊಂದೇ ದೃಶ್ಯವಾಗಿ, ಒಂದೊಂದೇ ಫ್ರೇಮ್‌ ಆಗಿ, ಒಂದೊಂದೇ ಆಯ್ಕೆಯಾಗಿ ನಾವು ಹೃದಯದಿಂದ ಕಟ್ಟಿದ ಜಗತ್ತು' ಎಂದಿದ್ದಾರೆ.

'ನೀವು (ವೀಕ್ಷಕರು) ಕೂಡ ಅದೇ ಅನುಭವವನ್ನು ಪಡೆಯಬೇಕು ಎಂಬುದು ಈ ಸಿನಿಮಾದ ನಿರ್ಮಾಣ ಹಾಗೂ ಬಿಡುಗಡೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿಯ ಬಯಕೆಯಾಗಿದೆ' ಎಂದು ತಿಳಿಸಿದ್ದಾರೆ.

'ಬೆಳ್ಳೆ ತೆರೆ ಮೇಲೆ ಇಡೀ ಸಮುದಾಯವಾಗಿ ನೀವೆಲ್ಲರೂ ಆನಂದಿಸಲೆಂದೇ ಸೃಷ್ಟಿಸಿದ ಲೋಕವಿದು. ನೀವು ಈ ಸಿನಿಮಾ ಮೇಲೆ ಈಗಾಗಲೇ ತೋರಿಸಿರುವ ಅಪಾರವಾದ ಪ್ರೀತಿ, ವ್ಯಕ್ತಪಡಿಸಿರುವ ಸಂಭ್ರಮ, ಭರ್ಜರಿಯಾಗಿ ನಡೆಯುತ್ತಿರುವ ಮುಂಗಡ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆಯು ನಮಗೆ ವಿವರಿಸಲಾಗದಷ್ಟು ಖುಷಿ ಕೊಟ್ಟಿದೆ' ಎಂದು ಸ್ಮರಿಸಿದ್ದಾರೆ.

'ನಮ್ಮ ಪಯಣದುದ್ದಕ್ಕೂ ನೀವು ಕೊಟ್ಟಿರುವ ಪ್ರೀತಿಗೆ ಧನ್ಯವಾದಗಳು. ನಿಮ್ಮಲ್ಲಿ ನಮ್ಮದೊಂದು ಪ್ರಾಮಾಣಿಕ ವಿನಂತಿ ಇದೆ. ಸಿನಿಮಾದ ಅನುಭವವು ಅದರ ಮೂಲ ಉದ್ದೇಶಕ್ಕೆ ಅನುಗುಣವಾಗಿ ಅನಾವರಣಗೊಳ್ಳಲಿ. ಚಿತ್ರಮಂದಿರಗಳಲ್ಲಿ ಸಿನಿಮಾದ ದೃಶ್ಯಗಳನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ. ಕಥೆಯ ತಿರುವುಗಳನ್ನು ಬಹಿರಂಗಪಡಿಸಿ, ಮತ್ತೊಬ್ಬರ ಅನುಭವವನ್ನು ಹಾಳುಮಾಡಬೇಡಿ. ನೀವು ಟಾಕ್ಸಿಕ್‌ ಲೋಕಕ್ಕೆ ಹೇಗೆ ಪ್ರವೇಶಿಸುವಿರೋ.. ಮತ್ತೊಬ್ಬರೂ ಹಾಗೆಯೇ ಹೋಗಲಿ' ಎಂದು ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani