Dailyhunt Logo
  • Light mode
    Follow system
    Dark mode
    • Play Story
    • App Story
'ಟಾಕ್ಸಿಕ್‌' ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

'ಟಾಕ್ಸಿಕ್‌' ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

ಸಿ.ಜೋಸೆಫ್‌ ವಿಜಯ್‌ ನಟನೆಯ 'GOAT-ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌' ತಮಿಳು ಸಿನಿಮಾದೊಳಗೆ ಅಪ್ಪನಿಗೆ ತನ್ನದೇ ರೂಪದಲ್ಲಿರುವ ಮಗ ಖಳನಾಗಿ ಕಾಡುತ್ತಾನೆ. 'ಟಾಕ್ಸಿಕ್‌'ನ ಕಥೆಯೂ ಹೀಗೇ ಇದೆ. ಆದರೆ ಇಲ್ಲಿನ ಕಾಡುವಿಕೆಗೆ ಭಾವನಾತ್ಮಕ ಸ್ಪರ್ಶ ನೀಡಿ, ಮೇಕಿಂಗ್‌ನ ಘಮ ಹರಡಿ ಸೈಕಲಾಜಿಕಲ್‌ ಥ್ರಿಲ್ಲರ್‌ ರೂಪದಲ್ಲಿ ಹೆಣೆದಿದ್ದಾರೆ ನಿರ್ದೇಶಕಿ.

'ನೀ ದೇಹದೊಳಗೋ ನಿನ್ನೊಳು ದೇಹವೋ' ಎನ್ನುವಂತಹ ಅನ್ವೇಷಣೆಯೇ 'ಟಾಕ್ಸಿಕ್‌'.

'ಇದು ಚಂದಮಾಮ ಕಥೆ ಅಲ್ಲ. ಇದು ವಯಸ್ಕರಿಗಿರುವ ಕಥೆ' ಎನ್ನುತ್ತಾ 'ಟಿಕೆಟ್‌'(ಯಶ್‌) ತನ್ನ ಹಾಗೂ ತನ್ನ ಅಪ್ಪನ ಕಥೆ ಹೇಳಲಾರಂಭಿಸುತ್ತಾನೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ(1947) ಕಥೆ ತೆರೆದಿಕೊಳ್ಳುತ್ತದೆ. ಸ್ವಾತಂತ್ರ್ಯ ಸಿಕ್ಕರೂ ಗೋವಾ ಇನ್ನೂ ಪೋರ್ಚುಗೀಸ್‌ ಆಡಳಿತದಲ್ಲಿದೆ. ಈ ಪ್ರದೇಶವು 'ಸಾಲ್ವಡಾರ್‌'(ಡ್ಯಾರೆಲ್‌ ಡಿ'ಸಿಲ್ವ) ನಿಯಂತ್ರಣದಲ್ಲಿದೆ. ಡ್ರಗ್ಸ್‌ ಇವರ ಉದ್ಯಮ. ರಾಯ(ಯಶ್‌) ಮತ್ತು ಗಂಗಾ (ನಯನ್‌ತಾರಾ) ಮುಧೋಳದ ದಳವಾಯಿಯ ಮಕ್ಕಳು. ಅಪ್ಪನನ್ನು ಕೊಂದವರ ವಿರುದ್ಧದ ಸೇಡು ಅವರಲ್ಲಿದೆ. 'ಸಾಲ್ವಡಾರ್‌' ಜೊತೆ ಪಾಲುದಾರರಾಗಿ ಸೇರಿಕೊಳ್ಳುವ ಅವರು ತಮ್ಮ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಾರೆ. 'ಸಾಲ್ವಡಾರ್‌' ಮಗಳಾದ 'ರೆಬೆಕಾ'ಳನ್ನು(ತಾರಾ ಸುತಾರಿಯಾ) ಮದುವೆಯಾಗುವ 'ರಾಯ', ನಗರಕ್ಕೆ ಬಂದ ಸರ್ಕಸ್‌ ಕಂಪನಿಯ ಮುಖ್ಯಸ್ಥೆ 'ನಾದಿಯಾ'(ಕಿಯಾರಾ ಅಡ್ವಾಣಿ) ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಇಲ್ಲಿಂದ ಕಥೆ ಮುಂದುವರಿಯುತ್ತದೆ.

'ಸಿನಿಮಾವೊಂದನ್ನು ಮಾಡಲು ಹೆಣ್ಣು ಹಾಗೂ ಗನ್‌ ಇದ್ದರೆ ಸಾಕು' ಎಂಬ ಮಾತನ್ನು ಚಿತ್ರತಂಡ ಗಂಭೀರವಾಗಿ ತೆಗೆದುಕೊಂಡಂತಿದೆ. ಮೊದಲಾರ್ಧದಲ್ಲಿ ರಕ್ತದೋಕುಳಿಯೇ ಹರಿಯುತ್ತದೆ. ಏಕೆ ಎಂಬುವುದಕ್ಕೆ ಉತ್ತರ ಸಿಗುವುದು ಕಷ್ಟ. 'ರಾಯ'ನನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದಲೇ ಇಲ್ಲಿನ ಚಿತ್ರಕಥೆಯನ್ನು ಬರೆಯಲಾಗಿದೆ. ಅದಕ್ಕೆ ತಕ್ಕಂತೆ ಯಶ್‌ ಅವರ ನಟನೆಯೂ ಇದೆ. ಆದರೂ ಹಲವು ಪ್ರಶ್ನೆಗಳನ್ನು ಉಳಿಸಿಕೊಳ್ಳುತ್ತಾ ಕಥೆ ಸಾಗುತ್ತದೆ. ಇಡೀ ಸಿನಿಮಾ ಬಿಡಿ ಬಿಡಿಯಾಗಿ ಕಾಣುತ್ತದೆ. ಗಟ್ಟಿಯಾದ ಚಿತ್ರಕಥೆ ಮಾಡಿಕೊಳ್ಳದೇ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಅಕ್ಕ-ತಮ್ಮ, ತಾಯಿ-ಮಗ ಹಾಗೂ ಅಪ್ಪ-ಮಗನ ನಡುವಿನ ಭಾವನಾತ್ಮಕ ದೃಶ್ಯಗಳಿಗೆ ಜಾಗ ಮಾಡಿಕೊಡಲಾಗಿದೆ. ಇದರಲ್ಲಿ ಅಪ್ಪ-ಮಗನಾದ 'ರಾಯ' ಹಾಗೂ 'ಟಿಕೆಟ್‌' ನಡುವೆ ನಡೆಯುವ ದೃಶ್ಯಗಳು-ಸಂಭಾಷಣೆ ಹರಿತವಾಗಿದ್ದು, ಬಹಳ ಆಳವಾಗಿದೆ. ಇದು ಸಿನಿಮಾದ ಸಾರಾಂಶವೂ ಆಗಿದೆ. ಕಥೆ ಹಾಗೂ ನಟನೆಯ ದೃಷ್ಟಿಯಿಂದ ಕ್ಲೈಮ್ಯಾಕ್ಸ್‌ ಕೊಂಚ ಸಮಾಧಾನ ನೀಡುತ್ತದೆ. ಸಿನಿಮಾದುದ್ದಕ್ಕೂ ಸಂಭಾಷಣೆಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇವುಗಳಲ್ಲಿ ಕೆಲವು ಬಹಳ ಸೂಕ್ತವಾಗಿ ಜೋಡಿಸಲ್ಪಟ್ಟಿವೆ. ಮದ್ಯಪಾನ, ಸರಸ, ಧೂಮಪಾನ, ಅದ್ದೂರಿತನ, ಆಯಕ್ಷನ್‌ ದೃಶ್ಯಗಳು, ಬುಲೆಟ್‌ಗಳು ಹಾಗೂ ರಕ್ತದೋಕುಳಿಗೆ ಇಲ್ಲಿ ಬರವಿಲ್ಲ.

ಒಂದಷ್ಟು ವಿಷಯಗಳಿಗೆ ವಿವರಣೆ ಇಲ್ಲದೇ ಇರುವುದು ಕಥೆಯನ್ನು ಅಪೂರ್ಣಗೊಳಿಸಿದೆ. ಮಕಾವ್‌ ದೇಶದಲ್ಲಿನ ದೃಶ್ಯಗಳಿಗೂ ಸಿನಿಮಾಗೂ ಸಂಬಂಧವೇ ಇಲ್ಲವೆಂಬಂತಿದೆ. 'ಸ್ಪ್ಲಿಟ್‌ ಪರ್ಸನಾಲಿಟಿ ಡಿಸಾರ್ಡರ್‌' ವಿಷಯವನ್ನು ಚಿತ್ರಕಥೆಯೊಳಗೆ ಅಳವಡಿಸುವ ಸಂದರ್ಭದಲ್ಲಿ ಹಲವು ಅಂಶಗಳನ್ನು ನಿರ್ದೇಶಕಿ ಮರೆತಂತಿದೆ. ಸಿನಿಮಾದುದ್ದಕ್ಕೂ ತರ್ಕಕ್ಕೆ ಸಿಗದ ಹಲವು ದೃಶ್ಯಗಳು ಇವೆ.

ಭಿನ್ನವಾದ ಯಶ್‌ ಅವರ ದರ್ಶನ ಇಲ್ಲಿ ಆಗುತ್ತದೆ. ನಟನೆ, ಭಾವನೆಗಳ ಹೊರಹಾಕುವಿಕೆಯಲ್ಲಿ ಅವರಲ್ಲಾದ ಬದಲಾವಣೆ ಅನುಭವಕ್ಕೆ ಬರುತ್ತದೆ. ಮೂರು ಶೇಡ್‌ಗಳಲ್ಲಿ ಅವರು ಪಾತ್ರದೊಳಗೆ ಜೀವಿಸಿದ್ದಾರೆ. 'ರಾಯ'ನ ಎರಡು ಶೇಡ್‌ ಹಾಗೂ ಭಿನ್ನವಾದ ವ್ಯಕ್ತಿತ್ವವುಳ್ಳ 'ಟಿಕೆಟ್‌' ಅನ್ನು ಯಶ್‌ ನಿಭಾಯಿಸಿದ ರೀತಿ ಪ್ರಶಂಸನೀಯ. ನಯನ್‌ತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ನಟನೆ ಚೆನ್ನಾಗಿದೆ. ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್‌ ನಾಯರ್‌ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ, ಹಾಡುಗಳು ಅಷ್ಟಕ್ಕಷ್ಟೇ. ಮೋಹನ್‌ ಬಿ.ಕೆರೆ ಹಾಗೂ ಟಿ.ಪಿ.ಅಬಿದ್‌ ಅವರ ಸೆಟ್‌ಗಳು ಅದ್ಭುತವಾಗಿದ್ದು, ರಾಜೀವ್‌ ರವಿ ಛಾಯಾಚಿತ್ರಗ್ರಹಣ ಹೊಸತನದಿಂದ ಕೂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani