ಹಿರಿಯೂರು: 'ಮಕ್ಕಳು ಭಕ್ತಿ- ಶ್ರದ್ಧೆಯಿಂದ ಕಲಿಕೆ ಆರಂಭಿಸಲಿ ಎಂಬ ಉದ್ದೇಶದಿಂದ ದೇವರ ಎದುರಲ್ಲಿ ಅಕ್ಷರಾಭ್ಯಾಸ ಮಾಡುವ ಪದ್ಧತಿ ಜಾರಿಗೆ ಬಂದಿದೆ' ಎಂದು ಜೋಯಿಸರಾದ ಆರ್. ನಾಗಭೂಷಣ್ ತಿಳಿಸಿದರು.
ತಾಲ್ಲೂಕಿನ ತಾಳವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
'ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವಿದ್ಯಾವಂತರಾಗಬೇಕು' ಎಂದು ಅಧ್ಯಕ್ಷತೆ ವಹಿಸಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳ ಟ್ರಸ್ಟ್ ಅಧ್ಯಕ್ಷ ಎಚ್. ಜಲೀಲ್ ಸಾಬ್ ಸಲಹೆ ನೀಡಿದರು.
ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಟ್ರಸ್ಟ್‌ನವರು ಒಂದು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಶಿಥಿಲವಾಗಿದ್ದ ಕಟ್ಟಡದ ಜಾಗದಲ್ಲಿ 10 ನೂತನ ಕೊಠಡಿಗಳನ್ನು ನಿರ್ಮಿಸಿ, ಪೀಠೋಪಕರಣ, ಪಾಠೋಪಕರಣ, ಸ್ಮಾರ್ಟ್ ಟಿವಿ ಹಾಗೂ 5 ಕಂಪ್ಯೂಟರ್‌ಗಳನ್ನು ಒದಗಿಸಿದ್ದಾರೆ. ಪಕ್ಕದ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆ ತರಲು ವಾಹನದ ಸೌಲಭ್ಯ ಮಾಡಿದ್ದಾರೆ. ಕೊರತೆ ಇದ್ದ ಇಬ್ಬರು ಶಿಕ್ಷಕರನ್ನು ನೇಮಿಸಿ ಅವರೇ ವೇತನ ನೀಡುತ್ತಿದ್ದಾರೆ. ಎಲ್ಲ ಹಳ್ಳಿಗಳಲ್ಲೂ ಹಳೆಯ ವಿದ್ಯಾರ್ಥಿಗಳು ಮುಂದೆ ಬಂದಲ್ಲಿ ಸರ್ಕಾರಿ ಶಾಲೆಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಬಹುದು' ಎಂದು ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಹೇಳಿದರು.
ಶಾಲೆಗೆ ಸ್ವಂತ ವಾಹನ ಖರೀದಿಸಲು ಬೆಂಗಳೂರು ವಿವಿ ನಿವೃತ್ತ ಕೃಷಿ ವಿಸ್ತರಣಾಧಿಕಾರಿ ಪ್ರೊ.ವಿ. ವೀರಭದ್ರಯ್ಯ, ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಎಚ್. ಜಲೀಲ್ ಸಾಬ್, ಪ್ರೌಢ ಶಾಲಾ ನಿವೃತ್ತ ಮುಖ್ಯಶಿಕ್ಷಕ ಎ. ಅನಂತರೆಡ್ಡಿ ತಲಾ ₹1 ಲಕ್ಷ ದೇಣಿಗೆ ನೀಡಿದರು.
ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯ ಕೊಠಡಿಗಳಲ್ಲಿ ಕಲಿಕೆಗೆ ಪೂರಕವಾಗುವಂತಹ ಚಿತ್ರಗಳು, ಅಕ್ಷರಗಳು, ಸಂಖ್ಯೆಗಳನ್ನು ಉಚಿತವಾಗಿ ಬಿಡಿಸಿಕೊಟ್ಟ ಅಮೃತವಿಜಯ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಟ್ರಸ್ಟ್‌ನ ಉಪಾಧ್ಯಕ್ಷ ಸಿ. ಪ್ರವೀಣ್, ಕಾರ್ಯದರ್ಶಿ ಪುನೀತ್, ನಿರ್ದೇಶಕರಾದ ಮಾರುತಿ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಮೂರ್ಕಣ್ಣಪ್ಪ, ಮುಖ್ಯಶಿಕ್ಷಕಿ ಎಂ. ಶೃತಿ, ಸಮೂಹ ಸಂಪನ್ಮೂಲ ವ್ಯಕ್ತಿ ಉಷಾಕರಣಂ, ಶಿಕ್ಷಕರಾದ ಟಿ.ವಿ. ಸುನಿತಾ, ಕೆಂಚಪ್ಪ, ಲಾವಣ್ಯ, ಅನುರಾಧಾ, ಶ್ರೀದೇವಿ, ಸಿದ್ದಗಂಗಮ್ಮ ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-44-1247581679

